’ದೇವರಿದ್ದಾನೊ ಇಲ್ಲವೋ’..ಈ ವಿಷಯದ ಮೇಲೆ ಚರ್ಚೆ-ವಾದಗಳು ದೇವರು ಹುಟ್ಟಿದಾಗಿನಿಂದ(!!) ನಡೆಯುತ್ತಲೇ ಇದೆ. ಇದಕ್ಕೆ ಆದಿ-ಅಂತ್ಯವೆಂಬುದು ಇರುವುದಿಲ್ಲ. ಇದಮಿತ್ತಂ ಎಂದು ಹೇಳಲು ಆಗುವುದಿಲ್ಲ, ಹಾಗೆ ಹೇಳಲು ಜನರು ಸಹ ಬಿಡುವುದಿಲ್ಲ!!.. ಎಳೆದಾಡುತ್ತಲೇ ಇರುತ್ತಾರೆ.. ಚರ್ಚೆಗೂ ವಾದಕ್ಕೊ ಬಹಳ ವ್ಯತ್ಯಾಸವಿದೆ, ವಾದಗಳಲ್ಲಿ ನನಗೆ ಆಸಕ್ತಿಯಿಲ್ಲ..
ಮನುಷ್ಯನಿಗೆ ಕಾಣದುದರ ಬಗ್ಗೆ ಯಾವಾಗಲೂ ಹೆಚ್ಚಿನ ಆಸಕ್ತಿ, ಕುತೂಹಲ ಇದ್ದೇ ಇರುತ್ತದೆ, ಅದು ಮಾನವ ಸ್ವಭಾವ, ಹೊಸದನ್ನು ಅನ್ವೇಷಿಸಲು, ಹುಡುಕಲು, ಪಡೆಯಲು ಅನವರತ ಕಾಲ ಶ್ರಮಿಸುತ್ತಲೇ ಇರುತ್ತಾನೆ, ಹಾಗಿರದಿದ್ದರೆ ಇಷ್ಟೆಲ್ಲ ಸಂಶೋಧನೆಗಳು, ಆವಿಷ್ಕಾರಗಳು ಆಗುತ್ತಿರಲಿಲ್ಲ, ಹಾಗಾಗಿ ಈ ವಿಷಯದ ಬಗ್ಗೆ ಚರ್ಚೆ-ವಾದಗಳು ನಡೆಯುತ್ತಲೇ ಇರುತ್ತದೆ....
’ಮರಳಿ ಬಂದವರಿಲ್ಲ, ವರದಿ ತಂದವರಿಲ್ಲ...’
ನೆನ್ನೆ ಶ್ರೀಕಾಂತ ಕೇಳಿದ, ನೀನು ಹುಟ್ಟುವುದಕ್ಕೆ ಮುಂಚೆ ಎಲ್ಲಿದ್ದೆ, ಸತ್ತ ನಂತರ ಎಲ್ಲಿಗೆ ಹೋಗುತ್ತೀಯ...ಎರಡಕ್ಕೂ ನನ್ನ ಉತ್ತರ "ಗೊತ್ತಿಲ್ಲ". ನನಗೆ ತಿಳಿದುಕೊಳ್ಳುವ ಅವಶ್ಯಕತೆಯೂ ಕಾಣಲಿಲ್ಲ.. ಇರುವಷ್ಟು ದಿನ ಹೇಗೆ ಜೀವಿಸಿದೆ ಅನ್ನುವುದಕ್ಕೆ ಮಾತ್ರ ನನ್ನ ಬದುಕು ಸೀಮಿತ, ಆತ್ಮ, ಪ್ರೇತಾತ್ಮ, ಭೂತಾತ್ಮ ಇದಾವುದು ನನಗೆ ಗೊತ್ತಿಲ್ಲ. ಇರುವಷ್ಟು ದಿನ ಹೇಗಿದ್ದೆ, ನನ್ನಿಂದ ಯಾರಿಗೂ ಸಹಾಯ ಆಗದಿದ್ದರೆ ಪರವಾಯಿಲ್ಲ ತೊಂದರೆ ಆಗದಿದ್ದರೆ ಸಾಕು. ಬದುಕು ಬಹಳ ಚಿಕ್ಕದು ಇಂತಹ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳಲು, Live the Life to the fullest... ಅದರ ಪ್ರಯತ್ನದಲ್ಲಿರುವೆ, ಕಾಯ-ವಾಚಾ-ಮನಸಾ....
ಹಾಗೆಂದ ಮಾತ್ರಕ್ಕೆ "ದೇವರ" ಬಗ್ಗೆ ತಿರಸ್ಕಾರ ಭಾವ ಇದೆ ಎಂಬುದಲ್ಲ. ನನ್ನ ಗ್ರಹಿಕೆಗೆ, ಬುದ್ದಿಮತ್ತೆಗೆ, ಅನುಭವಕ್ಕೆ ಬಂದುದಷ್ಟು ತಿಳಿದುಕೊಂಡಿದ್ದೇನೆ. ಆ ವಿಷಯದ ಬಗ್ಗೆ ಸದ್ಯಕ್ಕೆ ಅಷ್ಟು ಸಾಕು ಎಂದು full stop(.) ಹಾಕಿ ಸುಮ್ಮನಾಗಿದ್ದೇನೆ, ಅದಕ್ಕೆ ನನಗೆ ಬೇಕೆನಿಸಿದಾಗ comma(,) ಹಾಕಿ ಮುಂದುವರೆಸಿಕೊಳ್ಳುವೆ.
"ದೇವರು" ಎನ್ನುವುದು ಬಹಳ ಸುಂದರವಾದ concept, ಆ concept ನಿಂದ ಮನುಷ್ಯದ ತನ್ನ ದಿನನಿತ್ಯದ ಜಂಜಡಗಳಿಂದ,ಕಷ್ಟಗಳಿಂದ, ತನ್ನ ಗೋಳು ಪರದಾಟಗಳಿಂದ ಸ್ವಲ್ಪ ಮಟ್ಟಿಗಾದರೂ ನೆಮ್ಮದಿಯನ್ನು ಪಡೆಯುತ್ತಾನೆ, ನನ್ನ ಮಟ್ಟಿಗೆ ಅದರ ಸಲುವಾಗೆ "ದೇವರು" ಇರುವುದು. ಕೆಲವು ಸಮಯಗಳಲ್ಲಿ ಮನುಷ್ಯ ತನ್ನ ಕೈಲಾದ ಕೆಲಸವನ್ನು ಮಾಡಿ ಬಸವಳಿದಾಗ ಮುಂದೆ ದಾರಿ ಕಾಣದಾದಾಗ, ತೋಚದಾದಾಗ ಕೈಚೆಲ್ಲಿ ಕೂರುವಾಗ ದೇವರು ನೆರವಿಗೆ ಬರುತ್ತಾನೆ, "ಭಗವಂತಾ ನನ್ನ ರಕ್ಷಿಸಪ್ಪಾ" ಎಂದು ಉದ್ಗರಿಸಿ ಸುಮ್ಮನಾಗುತ್ತಾರೆ, ಹಾಗೆ ದೇವರ ಮೇಲೆ ಭಾರ ಹಾಕಿ ತಮ್ಮ ಕೆಲಸವನ್ನ ಮುಂದುವರೆಸುತ್ತಾರೆ. ಆ ಕ್ಷಣಕ್ಕೆ "ದೇವರು" ಎನ್ನುವ concept ಆತನಿಗೆ releif ಕೊಡುತ್ತದೆ, ಆತನ ಮನಸ್ಸು ಎಷ್ಟೋ ನಿರಾಳವಾಗುತ್ತದೆ. ಕಾರಿನಲ್ಲಿ ಕುಳಿತ ಚಾಲಕ ಬ್ರೇಕ್ brake fail ಆಗಿ control ತಪ್ಪಿದಾಗ ತನ್ನ ಕೈಲಾದುದನ್ನು ಮಾಡಿ "ಭಗವಂತಾ ಕಾಪಾಡಪ್ಪಾ" ಎಂದು ಉದ್ಗರಿಸುತ್ತಾನೆ, ಬದುಕುಳಿದರೆ "ದೇವರು" ರಕ್ಷಿಸಿದ ಎಂದು ಸಂತಸ ಪಡುವನು, ಇಲ್ಲದಿದ್ದರೆ "ಗೊತ್ತಿಲ್ಲ". ಅವನ ಆಯುಷ್ಯ ಮುಗಿದಿತ್ತು ಎಂದಲೋ ಅಥವಾ ಆತನ time ಸರಿಯಾಗಿರಲಿಲ್ಲ ಎಂದಲೋ ಸುಮ್ಮನಾಗುವರು, ಈ ರೀತಿಯ ಮಾತುಗಳೆಲ್ಲ ಅವರವರ ಮನಗಳಿಗೆ ಗೊತ್ತಗದೆ ಇರುವ ಪ್ರಶ್ನೆಗಳಿಗೆ ಕೊಟ್ಟುಕೊಳ್ಳುವ releif ಗಳು, ಸಮಾಧಾನಕರ ಮಾತುಗಳು..ನನ್ನ ಮಟ್ಟಿಗೆ ದೇವರು ಅಷ್ಟೆ, ನನಗೆ ದೇವರು "ಸಕಲ"ನೂ ಅಲ್ಲ "ಕೇವಲ"ನೂ ಅಲ್ಲ...
ಕೆಲವರಿಗೆ "ದೇವರು" ಎಂಬುದು ತಮ್ಮನ್ನು ನಿಯಂತ್ರಿಸಿಕೊಳ್ಳುವುದಕ್ಕೆ ಉಪಯೋಗಿಸಿಕೊಳ್ಳುತ್ತಾರೆ, ಆ ಕೆಟ್ಟ ಕೆಲಸವನ್ನು ಮಾಡಿದರೆ ದೇವರು ನನಗೆ ಶಿಕ್ಷೆ ನೀಡುತ್ತಾನೆಂದು ನೆನೆದು ಸುಮ್ಮನಾಗುತ್ತರೆ, ಅಥವಾ ತಾವು ಮಾಡಿದ ಕೆಲಸಗಳಿಗೆ ಕಷ್ಟ ಅನುಭವಿಸುತ್ತಿದ್ದರೆ "ನಾನು ಮಾಡಿದ ಪಾಪ ಕಾರ್ಯಗಳಿಗೆ ಹೀಗೆ ಆಗಿದೆ" ಎಂದು ಪಶ್ಚಾತಾಪ ಅನುಭವಿಸಿ ಮುಂದೆ ಆ ರೀತಿಯ ಕೆಲಸಗಳಿಗೆ ಕೈಹಾಕದೆ ಸುಮ್ಮನಾಗುತ್ತಾರೆ ...ದೇವಸ್ಥಾನಗಳಿಗೆ ಅಲೆದು ನೆಮ್ಮದಿ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿರುತ್ತಾರೆ.
ದೇವಸ್ಥಾನಗಳಿಗೆ ಕಾಲಿಟ್ಟರೆ ಮನಸ್ಸು ಪ್ರಫುಲ್ಲವಾಗುವುದು, ವೇದಘೋಷಗಳು, ಹಿತವಾಗಿ ಬೀಸುವ ಗಾಳಿ, ಧೂಪದಾರತಿಗಳು, ಘಂಟಾನಾದಗಳು ಇವೆಲ್ಲ ಒಂದು ರೀತಿಯ ನೆಮ್ಮದಿ ಕೊಡುತ್ತದೆ, relax ಆಗುತ್ತಾರೆ. ಎಲ್ಲಾ ದೇವಸ್ಥಾನಗಳು ಈ ರೀತಿಯಿರುವುದಿಲ್ಲ ಬಿಡಿ..ಅದು ಬೇರೆಯ ಸಂಗತಿ..ಅದಕ್ಕೆ ಜನ ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಗಳಿಗೆ ಹೋಗುತ್ತಾರೆ..
ನಮಗೆ ಕಾಣದ ಶಕ್ತಿಯೊಂದು ನಮ್ಮ ಮೇಲೆ ಸದಾ ಇದೆ, ನಮ್ಮನ್ನು ನಿಯಂತ್ರಿಸುತ್ತದೆ, ಆ ಶಕ್ತಿಗೆ ನಾನು "ದೇವರು" ಎನ್ನುತ್ತೇನೆ, ಅದಕ್ಕೆ ಜನರು ಅವರಿಗೆ ಬೇಕಾದ ರೀತಿಯಲ್ಲಿ ಆ ಶಕ್ತಿಯನ್ನು ಆರಾಧಿಸುತ್ತಾರೆ, ಅದಕ್ಕೆಂದೇ ಹಲವು ಮತಗಳು, ಕುಲಗಳು, ಹಲವು ವೇಷಗಳು, ಇದಕ್ಕೆ ಪುಷ್ಟಿ ಕೊಡುವ ಉಕ್ತಿ.."ದೇವನೊಬ್ಬ ನಾಮ ಹಲವು..."
ಮನುಷ್ಯ ಸಮಾಜದಲ್ಲಿ ಬಾಳಿ-ಬದುಕಲು ಹಲವು ರೀತಿಯ protocol ಗಳನ್ನು ಅಳವಡಿಸಿಕೊಂಡಿದ್ದಾನೆ... ನಗರಗಳಲ್ಲಿ ಒಡಾಡಲು ಗಾಡಿಗಳು ಹೇಗೆ ಎಡಬದಿಯಲ್ಲಿ ಮಾತ್ರ ಚಲಿಸಬೇಕು, ಸಿಗ್ನಲ್ ಪಾಲನೆ ಮಾಡಬೇಕು ಅಂತಿದೆಯೋ , ಇವೆಲ್ಲದುದರ ಉದ್ದೇಶ ಇಷ್ಟೆ, ಆರಮಾದಾಯಕ ಸಂಚಾರ. ಹಾಗೆ "ದೇವರು" ಸಹ ಹೀಗೆ ಒಂದು ರೀತಿಯ protocol.. ನಮಗೆ ತೊಂದರೆಯಾದಾಗ, ಸಂಕಟಗಳ ಸುಳಿಯಲ್ಲಿ ಸಿಲುಕಿದಾಗ, ಹತಾಶರಾದಾಗ "ದೇವರು" ಎಂದು ಬೊಬ್ಬೆ ಹೊಡೆಯುತ್ತೇವೆ, ಸಂತಸದ ಸಮಯದಲ್ಲಿ ದೇವರ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ.. ಸಾಮನ್ಯ ಮನುಷ್ಯರು ಮಾಡುವುದು ಇಷ್ಟೆ..."ಸಂಕಟ ಬಂದಾಗ ವೆಂಕಟರಮಣ...". ದಿನ ನಿತ್ಯ ಜೀವನದಲ್ಲಿ ಹಲವಾರು ಆಚರಣೆಗಳನ್ನು ಅಳವಡಿಸಿಕೊಂಡಿರುತ್ತಾರೆ ಜನರು, ಅವೆಲ್ಲಾ ಕೇವಲ ಅವರವರ ನೆಮ್ಮದಿಗೆ ಅಷ್ಟೆ. ದಿನ ನಿತ್ಯ ಪ್ರಾರ್ಥನೆ ಮಾಡುವುದು, ದೇವರಿಗೆ ಕೈಮುಗಿಯುವುದು, ದಂಡ ಬೀಳುವುದು ಹೀಗೆ. ಕೆಲವರು ಚಿಕ್ಕಂದಿನಿಂದ ರೂಡಿಸಿಕೊಂಡು ಬಂದಿರುತ್ತಾರೆ ಹಾಗೆ ಮುಂದುವರೆಸಿಕೊಂಡು ಹೋಗುತ್ತಾರೆ. ಆರಾಮದಾಯಕ ಜೀವನ.
ಹಾಗೆ ಇದರಂತೆಯೇ ಜ್ಯೋತಿಷ್ಯದ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತದೆ. ನಾನು ಹುಟ್ಟಿದಾಗಲೇ ನಾನು ಎಂದು ಸಾಯುವುದು, ನಾನು ಹೇಗೆ ಇರುವುದು, ಯಾವಾಗ ತೊಂದರೆಯಾಗುವುದು ಎಂದೆಲ್ಲ ಗೊತ್ತಾಗಿಬಿಟ್ಟರೆ, ನನ್ನ ಹಣೆಬರಹವನ್ನು ಬರೆದು ಕಳಿಸಿದರೆ "ನನ್ನದು" ಅಂತ ಏನಿರುತ್ತದೆ ಈ ಪ್ರಪಂಚದಲ್ಲಿ. ನನ್ನ ಅಸ್ಥಿತ್ವಕ್ಕೆ ಬೆಲೆಯೇ ಇರುವುದಿಲ್ಲ...ಯಾರೋ ಬರೆದಂತೆ ನಡೆವುದಾದರೆ ನಾ ಮಾಡುವುದೇನಿದೆ ಇಲ್ಲಿ??? ಹಾಗೆ ನಾ ಅಂದುಕೊಳ್ಳುವಂತೆ ಎಲ್ಲವೂ ಎಲ್ಲ ಕಾಲದಲ್ಲಿಯೂ ಆಗುವುದಿಲ್ಲ, ಆಗ ಇದ್ದೆ ಇದ್ದಾನಲ್ಲ ನನ್ನ ನೆಮ್ಮದಿಯ ದೇವರು... ನನ್ನ ಕೈಲಾದುದನ್ನು ಮಾಡಿದ್ದೇನೆ, ಇನ್ನು ನಿನಗೆ ಬಿಟ್ಟದ್ದು ಎಂದು ನಿರಾಳನಾಗುತ್ತೇನೆ.
ಎಲ್ಲವನ್ನು ನಾನೇ ಮಾಡುತ್ತೇನೆ, ಎಲ್ಲವೂ ನನ್ನ ಮೇಲೆ ನಿಂತಿದೆ, ನಾನು ನಡೆದಂತೆ ಆಗುತ್ತದೆ ಎಂದರೆ ಜೀವನವನ್ನು ನಿಭಾಯಿಸುವುದು ಕಷ್ಟ, ಬಹಳ ಹೊರೆ ಬೀಳುತ್ತದೆ. ಎಲ್ಲದಕ್ಕೂ ನನ್ನಲ್ಲೇ ಉತ್ತರ ಕಂಡುಕೊಳ್ಳಬೇಕಾಗುತ್ತದೆ..ಒಳ್ಳೆಯವನಾಗಿ ಇರುವುದು ಮತ್ತು ಒಳ್ಳೆಯದನ್ನು ಮಾಡುವುದು ಇಷ್ಟೆ ನನ್ನ ಕೆಲಸ..ಅದಕ್ಕಾಗಿ ನನ್ನ ದೇವರು...
ನನಗೆ ತಿಳಿದಿರುವಷ್ಟು ದೇವರನ್ನು ಅರ್ಥೈಸಿಕೊಂಡಿದ್ದೇನೆ, ನನಗಿಷ್ಟು ಸಾಕು. ಸದ್ಯಕ್ಕೆ ಇಷ್ಟು ಸಾಕು....
ನಿಮಗೆ ದೇವರು ಒಳ್ಳೇದು ಮಾಡಲಿ.... :-)
(ವಿ.ಸೂ : ಈ ನನ್ನ ದೇವರ ನಿಲುವಿನ ಬಗ್ಗೆ ವಾದಗಳು-ಚರ್ಚೆಗಳು ಅನಾವಶ್ಯಕ...not interested)