ಅಭಿಮಾನಿ...

Tuesday, January 29, 2008ನಾನು ಭೈರಪ್ಪನವರ ಎರಡು ಕಾದಂಬರಿಗಳನ್ನು ಮಾತ್ರ ಓದಿದ್ದೇನೆ...’ಆವರಣ’ ಮತ್ತು ’ಸಾಕ್ಷಿ’, ಎರಡೂ ಸಹ ಅನನ್ಯ ಕೃತಿಗಳು. ಅವರು ಇದುವರೆಗೂ ಬರೆದ ಅಷ್ಟೂ ಕಾದಂಬರಿಗಳನ್ನು ಕೊಂಡು ಯಾವುದಾದರೂ ಬೆಟ್ಟದ(ಕೊಡಚಾದ್ರಿ) ತುದಿಯಲ್ಲಿ ಒಂದು ಸಣ್ಣ ಗೂಡು ಮಾಡಿಕೊಂಡು ಓದಬೇಕೆಂದೆನಿಸುತ್ತಿದೆ, ಒಬ್ಬನೇ.

ಅವರ ಕಾದಂಬರಿಗಳ ವಿಮರ್ಶೆಮಾಡಲು ನಾನು ಯೋಗ್ಯನಲ್ಲ, ಅದರ ಯೋಚನೆ ಸಹ ಮಾಡುವುದಿಲ್ಲ(ಶಾಂತಂ ಪಾಪಂ), ಅವರೇ ಹೇಳುವಂತೆ ಅವರ ಪ್ರತಿ ಕಾದಂಬರಿಯಲ್ಲೂ ಯಾವುದಾದರೊಂದರ(ಸತ್ಯದ!!)(ಸತ್ಯದ ವಿವಿಧ ಮಜಲುಗಳು) ಅನ್ವೇಷಣೆ ಇದ್ದೇ ಇದೆ. ಅವರಂತೆಯೇ ನಾನು ಆಗಬೇಕು(ದಯಮಾಡಿ ನಗಬೇಡಿ...please... ನಂಗೊತ್ತು ನೀವು ನಗ್ತಾಇದ್ದೀರ ಅಂತ..hmmmm) ಅನ್ವೇಷಣೆ ನಡೆಸಬೇಕು, ಆ ಅನ್ವೇಷಣೆಯಲ್ಲಿ ಹಲವಾರು ವರ್ಷಗಳನ್ನು ಕಳೆದು, ನಿಂತಲ್ಲಿ ಕುಂತಲ್ಲಿ ಚಿಂತನ ಮಂಥನ ನಡೆಸಿ ಕೂತು ಬರೆಯಬೇಕು, ನಿಂತು ಬರೆಯಬೇಕು. ನನೂ ಸಹ ಸತ್ಯವನ್ನು ತಿಳಿಯಬೇಕು, ಅರಿಯಬೇಕು. ಭೈರಪ್ಪನವರ ಕಾದಂಬರಿಗಳನ್ನು ಅಭ್ಯಸಿಸಬೇಕು. ಅವರನ್ನೊಮ್ಮೆ ನೇರವಾಗಿ ಕಾಣಬೇಕು. ಏನೇನೋ ಆಸೆಗಳು. hmmm
ಅವರ ಅಷ್ಟೂ ಕಾದಂಬರಿಗಳನ್ನು ಕೊಳ್ಳುತ್ತೇನೆ, ಆದಷ್ಟು ಬೇಗ. ಆದರೆ ಬೆಟ್ಟದ ತುದಿಯಲ್ಲಿ ಕುಳಿತು ಅವರ ಕಾದಂಬರಿಗಳನ್ನು ಅಭ್ಯಸಿಸುವ ಪುಣ್ಯ ನನ್ನದಾಗುತ್ತದೋ ಇಲ್ಲವೊ ತಿಳಿದಿಲ್ಲ, ನನ್ನೀ ಆಸೆಗೆ(ಹುಚ್ಚಿಗೆ!!) ನಿಮ್ಮ ಹಾರೈಕೆಯಿರಲಿ.
@ಭೈರಪ್ಪ : ಭೈರಪ್ಪನವರೇ ನಿಮಗೆ ನೀವೇ ಸಾಟಿ, ನಿಮ್ಮ ಸಾಹಿತ್ಯ ಕೃಷಿ ಹೀಗೆ ಸಾಗುತ್ತಿರಲಿ, ನಿರಂತರವಾಗಿ....... ಎಂದೆಂದಿಗೂ ನಂದದ ದೀಪವಾಗಿರಲಿ. ನಿಮಗೆ ನನ್ನ ಭಾವಪೂರ್ಣವಾದ ನಮಸ್ಕಾರ.

ನಿನದೇ ನೆನಪು...

Wednesday, January 2, 2008

ಕವಿರಾಜ್ ರ ಒಳ್ಳೆ ಸಾಹಿತ್ಯ..ಇಷ್ಟ ವಾಯಿತು..ಇದು ನನ್ನವಳಿಗೆ ;-) ಅರ್ಪಿತ....

ಹೀಗೀಕೆ ನಂಗೆ ನೆನಪಾಗುವೆ
ಈಗ ಎಲ್ಲೆಲ್ಲೂ ನಂಗೆ ನೀ ಕಾಣುವೆ...
ಸುಡುಸುಡುತಿದೆ ಎದೆಯೊಳಗೆ ನಿನದೇ ನೆನಪು
ಕಾಡಿಸುತಿದೆ ಪ್ರತಿಘಳಿಗೆ ನಿನದೇ ನೆನಪು ನನ್ನಾಣೆ..


ಅರೆಘಳಿಗೆಯು ಮರೆತಿರಲು ನಾನೂ ನಿನ್ನಾ
ಮರುಘಳಿಗೆಯೇ ಮರಣ ಕಣೇ ನಂಗೆ ಚಿನ್ನಾ
ಇನ್ನು ದೂರಾಗದೆ ಎಂದು ಕೈಜಾರದೆ ನನ್ನ ಸಂಗಾತಿ ನೀನಾಗು ಬಾ...

ನೀನಿಲ್ಲದ ಕನಸುಗಳೂ ನನಗೆ ಬೇಡ
ನಿನ್ನ ಕಾಣದೆ ನರಳುವುದು ನೆರಳೂ ಕೂಡ
ಮರೆತೂ ನಿನ್ನನೂ ಮರೆತೂ ಹೋಗೆನು, ಇನ್ನು ಎಂದೆಂದು ನಿನ್ನೋನು ನಾ...

ಹೀಗೀಕೆ ನಂಗೆ ನೆನಪಾಗುವೆ
ಈಗ ಎಲ್ಲೆಲ್ಲೂ ನಂಗೆ ನೀ ಕಾಣುವೆ...
ಸುಡುಸುಡುತಿದೆ ಎದೆಯೊಳಗೆ ನಿನದೇ ನೆನಪು
ಕಾಡಿಸುತಿದೆ ಪ್ರತಿಘಳಿಗೆ ನಿನದೇ ನೆನಪು ನನ್ನಾಣೆ..

Weekend Culture....

ಈ ಲೇಖನವನ್ನು ಎಂದೊ ಬರೆಯಬೇಕಿತ್ತು ಆಗಿರಲಿಲ್ಲ..ಇಂದು ಬರೆದೆ...ಸಮಾಧಾನವಾಯಿತು..
"ಏನ್ ಮಗಾ ಏನ್ ಪ್ರೋಗ್ರಾಮ್ ಈ ವೀಕೆಂಡ್ ಗೆ?"..

"Hey how was your weekend man ?"...

ಈ ರೀತಿಯ ತರೇವಾರಿ ಪ್ರಶ್ನೆಗಳು ಬೆಂಗಳೂರಿಗರ ನಾಲಿಗೆಯಲಿ ಹರಿದಾಡುತ್ತಲೇ ಇರುತ್ತದೆ..ಪ್ರತಿ ವೀಕೆಂಡ್ ಬಂದರೆ.. IT ಯ ಕೊಡುಗೆಯಲ್ಲಿ(!!) ವೀಕೆಂಡ್ ಕಲ್ಚರ್ ಕೂಡ ಒಂದು..

ಐದಾರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ವೀಕೆಂಡ್ ಗಳು ಬಂದು ಹೋಗುತ್ತಿದ್ದು ದಿಟವಾದರೂ ಅದರ ಅರಿವು(!!) ನಮಗೆ ಅಷ್ಟಾಗಿ ಇರಲಿಲ್ಲ..ಭಾನುವಾರ ಬಂತೆಂದರೆ ಖುಶಿ ಪಡುತ್ತಿದ್ದೆವು...ಬೆಳಿಗ್ಗೆ 10ರ ವರೆಗೂ ಮಲಗಿ, ಎಣ್ಣೆ ಸ್ನಾನ ಮಾಡಿ, ಚೆನ್ನಾಗಿ ಉಂಡು ಮತ್ತೆ ನಿದ್ರಿಸಿ ಟೀವಿಯಲ್ಲಿ ಬರುವ ಯಾವುದಾದರೂ ಪಿಚ್ಚರ್ ನೋಡಿ ಮಲಗುತ್ತಿದ್ದೆವು... ಈಗ ಪರಿಸ್ಥಿತಿ ಬದಲಾಗಿದೆ...IT ವರ್ಗದವರಿಗೆಲ್ಲ 5 ದಿನ ಸಜೆಯ ನಂತರ ಬರುವ ಎರಡು ದಿನದ ರಜಕ್ಕಾಗಿ ಕಾಯುತ್ತಿರುತ್ತಾರೆ...ಬಹಳ ಮಂದಿ ಶುಕ್ರವಾರ ಸಂಜೆಯಿಂದಲೆ ಪ್ರೋಗ್ರಾಮ್ fix ಮಾಡಿಕೊಂಡಿರುತ್ತಾರೆ... IT ಮಂದಿಗೆ ಹಣದ ಕೊರತೆಯು ಅಷ್ಟಾಗಿ ಇರುವುದಿಲ್ಲ... ಪ್ರತಿ ಶುಕ್ರವಾರವೂ ಯಾವುದಾದರೊಂದು ಚಲನ ಚಿತ್ರವು ಬಿಡುಗಡೆಯಾಗುವುದರಿಂದ ಅದಕ್ಕೆ ಪ್ಲಾನ್ ಮಾಡಿರುತ್ತಾರೆ..Internet ನಲ್ಲಿ ticket ಬುಕ್ ಮಾಡಿಸಿಯೂ ಇರುತ್ತಾರೆ ಕೂಡ.. ಬಹಳ ಮಂದಿಗೆ ಗೆಳೆಯರನ್ನು ಪ್ರತಿ ವಾರವೂ ಭೇಟಿಯಾಗುವ ಹಂಬಲದಿಂದ ಈ ರೀತಿಯ ನೆಪ ಮಾಡಿಕೊಂಡಿರುತ್ತಾರೆ...

ಗೆಳೆಯರ ಬಳಗವೂ ದೊಡ್ಡದಿರುತ್ತದೆ...ಆಫೀಸಿನ ಸಹೋದ್ಯೋಗಿಗಳ ಜೊತೆ, ಶಾಲಾ-ಕಾಲೇಜು ಗೆಳೆಯರ ಜೊತೆ, girl friend, boy friend ಗಳಿದ್ದರೆ ಮುಗಿದೇ ಹೋಯಿತು..ವೀಕೆಂಡ್ ಕ್ಷಣದಂತೆ ಉರುಳಿರುತ್ತದೆ....

PVR/Inox ನಲ್ಲಿ ಚಿತ್ರ ವೀಕ್ಷಿಸಿ , McDonalds ಅಥವ KFC ನಲ್ಲಿ ಬರ್ಗರ್ ಮೆಲ್ಲಿ, ಹಾಗೆ ಕಾಫಿ ಡೆ ನಲ್ಲೆ ಚಿತ್ರ ವಿಚಿತ್ರ ಕಾಫಿ ಕುಡಿದು ವೀಕೆಂಡ್ ಮುಗಿಸುವ ದೊಡ್ಡ ದಂಡೇ ಇದೆ..ಎಲ್ಲ ಮುಗಿದ ಮೇಲೆ Credit cardಗಳನ್ನು ಉಜ್ಜಿ ಹಣ ಪಾವತಿಸಿ ಮುನ್ನಡೆಯುತ್ತಾರೆ....ಇದಾವುದೂ ತಪ್ಪಲ್ಲ...ನಾವು ಬೆಳೆದಂತೆ ಬೆಂಗಳೂರು ಬೆಳೆದಂತೆ ನಾವು ನಮ್ಮವರನ್ನು ಭೇಟಿಮಾಡುವ ಕಾಲವನ್ನು ಕಳೆಯುವ ರೀತಿ-ರಿವಾಜುಗಳು ಹೇಗೆ ಬದಲಾಗುತ್ತಿವೆ ಎಂದು ಕೂತು ವೀಕ್ಷಿಸುತ್ತಿದ್ದೇನೆ...ಈ ಚಿತ್ರಣ ನಮಗೆ ಸಿಗುವುದು ಬೆಂಗಳೂರಿನಲ್ಲಿ ಮಾತ್ರ..ಕಾರಣ ದೇಶದ ಮೂಲೆ ಮೂಲೆಯಿಂದ ವಲಸೆ ಬಂದ ಜನರಿಗೆ ಅವರ ಅಭಿರುಚಿಗೆ ತಕ್ಕಂತೆ, ಅವರ ಕಾಸಿಗೆ ತಕ್ಕಂತೆ ಅವರನ್ನು ಸಂತಸ ಪಡಿಸುವ ವ್ಯವಸ್ಥೆ ಬೆಂಗಳೂರಿನಲ್ಲಿ ಚೆನ್ನಾಗೇ ಇದೆ.. ಪಕ್ಕದ ಮೈಸೂರಿನಲ್ಲಿ, ಮಂಗಳೂರಿನಲ್ಲಿ ಈ ಚಿತ್ರಣ ನಿಮಗೆ ಕಾಣ ಸಿಗುವುದಿಲ್ಲ... "ಜಾಗತೀಕರಣ" ದ special effect ಗಳಲ್ಲಿ ಇದೂ ಒಂದು ಎಂದು ನನ್ನ ಅಭಿಪ್ರಾಯ...ಬೆಂಗಳೂರು hmmm....

ಇನ್ನೊಂದು ಬಳಗ ಇದೆ..."Cool Dudes", ಪಡ್ಡೆ ಹುಡುಗರು ಇತ್ಯಾದಿ ಉಪಮೆಗಳಿಂದ ಕರೆಯಲ್ಪಡುವ ಹುಡುಗರು...ಇವರ್ಯಾರು girl friend ಕೆನ್ನೆ ಗಿಲ್ಲಲು ಹೋಗುವುದಿಲ್ಲ, ಮಾಲ್, show room ಗಳಲ್ಲಿ ಕಾಣಸಿಗುವುದಿಲ್ಲ.... ಬೈಕನ್ನೇರಿ ಯಾವುದಾದರೂ ಜಾಗ ಗೊತ್ತು ಮಾಡಿಕೊಂಡು ಹೊರಡುತ್ತಾರೆ....ಹೋದ ಜಾಗದಲ್ಲಿ ಸಿಗರೆಟ್ , ಎಣ್ಣೆ ಸಮಾರಾಧನೆ ನಡೆಸಿ, ಬಿಯರ್ ಬಾಟಲಿಗಳಿಂದ ನೊರೆ ಉಕ್ಕಿಸಿ, ಕೇಕೆ ಹಾಕಿ, ಕುಡಿದು ತೂರಾಡಿ "We had a great weekend dude" ಎಂದು ray-ban ಗ್ಲಾಸ್ ಧರಿಸಿ ಸಿಗರೆಟ್ ಹೊಗೆ ಬಿಡುತ್ತಾರೆ.... ಇದೂ ತಪ್ಪಲ್ಲ..ಯಾರಿಗೂ ತೊಂದರೆ ಕೊಡದಿದ್ದರೆ ಸಾಕು..

ಮತ್ತೊಂದಷ್ಟು ಮಂದಿ ಸ್ವಲ್ಪ ತಲೆ ಓಡಿಸಿ ಗಾಯನ ಕಛೇರಿಗೋ, ಪುಸ್ತಕ ಮೇಳಕ್ಕೋ, ಯಾವುದಾದರೂ ಗೋಷ್ಟಿಗೋ, ನಾಟಕಕ್ಕೋ, ಅಥವಾ ಕರ್ನಾಟಕದ ಯಾವುದಾದರೂ ಮೂಲೆಗೋ ಚಾರಣಕ್ಕೆ ಹೊರಡುತ್ತಾರೆ.... "ಚಾರಣ" ಮಾಡುವುದು ಸಹ ವೀಕೆಂಡ್ ಪ್ರೋಗ್ರಾಮ್ ಗಳಾಗಿ ಸೇರ್ಪಡೆಯಾಗಿದೆ... Weekdays ನಲ್ಲಿ ಮೈಮರೆತು ದುಡಿಯುವ ಜನರಿಗೆ ವೀಕೆಂಡ್ ಬಂತೆಂದರೆ ಏನು ಮಾಡಬೇಕೆಂದು ತಿಳಿದಿರುವುದಿಲ್ಲ... ಎಲ್ಲರಿಗೂ ಏನಾದರೂ ಮಾಡಬೇಕೆಂದಿರುತ್ತದೆ, ಆದರೆ ಅದೇನೆಂದು ತಿಳಿದಿರುವುದಿಲ್ಲ....


ಬೆಂಗಳೂರು ಬೆಳೆದಿದೆ, ಸಮಯ ಕಳೆಯಲು ಬೇಕಾದಷ್ಟು ಮಾರ್ಗಗಳಿವೆ , ಜನರು ಅವರಿಗೆ ಬೇಕಾದ ಮಾರ್ಗಗಳನ್ನು ಹುಡುಕಿಕೊಂಡಿದ್ದಾರೆ. ಮತ್ತಷ್ಟು ಪಟ್ಟಿಗೆ ಸೇರುತ್ತಲೇ ಇವೆ..."ಜಾಗತೀಕರಣ" ದಿಂದ ಮಧ್ಯಮ ವರ್ಗದವರು ಸದ್ದಿಲ್ಲದೆ ಮೇಲ್ಮಧ್ಯಮವರ್ಗಕ್ಕೆ ಸೇರ್ಪಡೆಯಾಗುತ್ತಾರೆ.. ಹಣ ಖರ್ಚು ಮಾಡಲು ಅಷ್ಟಾಗಿ ಯೋಚಿಸುವುದಿಲ್ಲ..
ವಸಾಹತುಶಾಹಿ ಜನಾಂಗದ ಪ್ರಭಾವ ಮಧ್ಯಮ ವರ್ಗ ಹಾಗೂ ಮೇಲ್ಮಧ್ಯಮವರ್ಗದವರ ಮೇಲೆ ಢಾಳಾಗಿಯೇ ಇದೆ..

ಕಾಫಿ ಡೆ ನಲ್ಲಿ ಗೆಳೆಯರ ಜೊತೆ ಮೈ ಮರೆತು ನಗುತ್ತಿರುವಾಗ, ಯಾವುದಾದರೂ ಚಾರಣದಲ್ಲಿದ್ದಾಗ, credit card ಉಜ್ಜುವಾಗ , ಬ್ರಾಂಡ್ ವಸ್ತುಗಳನ್ನು ಉಪಯೋಗಿಸುವಾಗ, Inbox ನಲ್ಲಿ ಸಂಬಳ ಜಮೆ ಆದ ಮೇಲ್ ನೋಡಿದಾಗ ಫಕ್ಕನೆ ಮನಸಿಗೆ ಬಂದು ಹೋಗುತ್ತದೆ...ಶಾಲಾ-ಕಾಲೇಜು ದಿನಗಳೇ ಚೆನ್ನಾಗಿದ್ದವೇನೊ ಎಂದು..ಉಹೂ comparisons ಸಲ್ಲ......

Three Stages -u

ಎಲ್ಲೋ ಕೇಳಿದ ನೆನಪು..

ಮನುಷ್ಯನಾಗಿ ಹುಟ್ಟಿದ ಮನುಷ್ಯ ಗುಣಗಳನ್ನು ರೂಢಿಸಿಕೊಂಡವನು ಜೀವನದ ಉದ್ದಗಲಕ್ಕೂ ಈ ಮೂರು ಹಂತಗಳಲ್ಲಿ ತೊಯ್ದಾಡುತ್ತಿರುತ್ತಾನೆ...ನನಗೆ ಹೌದೆನ್ನಿಸಿತು...ಓದಿಕೊಳ್ಳಿ..

೧) ನಾನು ಮಾಡುತ್ತಿರುವುದು ಸರಿ, ಪ್ರಪಂಚ ಸರಿಯಿಲ್ಲ..

೨) ನನ್ನಲ್ಲೇ ಏನೋ ತಪ್ಪಿದೆ, ಪ್ರಪಂಚ ಸರಿಯಾಗೆ ಇದೆ...

೩) ನಾನು ಸರಿಯಾಗಿದ್ದೀನಿ, ಪ್ರಪಂಚ ಕೂಡ ಸರಿಯಾಗೆ ಇದೆ...

ಓದಿ ನಿಮಗೆ ಏನೆನ್ನಿಸಿತು??

ನೂತನ ಸಂವತ್ಸರದ ಹಾರ್ದಿಕ ಶುಭಾಶಯಗಳು......

ನೆಮ್ಮದಿ....

Tuesday, January 1, 2008

ಇವತ್ತು ಎರಡನೆ ಬಾರಿ "ರಂಗಶಂಕರ" ದಲ್ಲಿ "ಮೈಸೂರ ಮಲ್ಲಿಗೆ" ನಾಟಕ ನೋಡಿದೆ.. ಬಹಳ ಬಹಳ ಹಿಡಿಸಿತು..ಬಹಳ ಸೊಗಸಾಗಿದೆ, ಅಚ್ಚುಕಟ್ಟಾಗಿದೆ...

ಅದರಲ್ಲಿ ಒಂದು ಕಡೆ ಕೆ.ಎಸ್.ನರಸಿಂಹಸ್ವಾಮಿಯವರ ಪತ್ನಿ ಹೀಗೆ ಕೇಳುತ್ತಾರೆ...."ನೀವು ಸಂತಸ ದಿಂದ ಬರೆದ್ರಿ, ನೋವಲ್ಲಿ ಬರೆದ್ರಿ, ನಲಿವಲ್ಲಿ ಬರೆದ್ರಿ, ಕಷ್ಟ ಇದ್ದಾಗ ಬರೆದ್ರಿ, ಸುಖ ಇದ್ದಾಗ ಬರೆದ್ರಿ, ಆದ್ರೆ ನೆಮ್ಮದಿಯಾಗಿ ಒಂದೂ ಪದ್ಯ ಬರೆದಿಲ್ಲವೆಂದೆನಿಸುತ್ತೆ ನಂಗೆ" ಎಂದು..

ಅದಕ್ಕೆ ಪ್ರತ್ಯುತ್ತರವಾಗಿ ನರಸಿಂಹಸ್ವಾಮಿಯವರು " ’ನೆಮ್ಮದಿ’ ಇದ್ದರೆ ಕವಿ ಯಾಗುವುದಕ್ಕೆ ಹೇಗೆ ಸಾಧ್ಯ..." ಎಂದರು..


ಯಾಕೋ ಏನೋ ಬಹಳ ಮನ ಮುಟ್ಟಿತು ಅವರ ಮಾತು...ಅದಕ್ಕಾಗಿ ಬ್ಲಾಗಿಸಿದೆ..

ಓದಿದುದಕ್ಕಾಗಿ ವಂದನೆಗಳು...

ಗೋವೆ ಪ್ರವಾಸ.. ಭಾಗ-1

ಮೊದಲ ಬಾರಿಗೆ ಅಂತರರಾಜ್ಯ ಪ್ರವಾಸಕ್ಕೆ ಅಣಿಯಾಗುತ್ತಲಿದ್ದೆ..ನಮ್ಮ ಗಮ್ಯ ಗೋವೆಯೆಂದು ನಿರ್ಧರಿಸಿದ್ದೆವು..ಪಶ್ಚಿಮ ಘಟ್ಟಗಳ ನಡುವೆ ಹಾದು ನುಸುಳುವ ರುದ್ರ ರಮಣೀಯ ಕೊಂಕಣ ರೈಲ್ವೆ ನಲ್ಲಿ ಪಯಣಿಸುವ ಬಯಕೆ ನಮ್ಮೆಲ್ಲರದಾಗಿತ್ತು...ರಂಜನ್ ಇದರ ರೂಪುರೇಶೆಯನ್ನು ಇತರರ ಮುಂದಿಟ್ಟಿದ್ದ...ಹಾ ಮರೆತಿದ್ದೆ ಈ ಪ್ರವಾಸದ ಪಾತ್ರಧಾರಿಗಳ ನಾಮಾಂಕಿತಗಳು ಹೀಗಿವೆ.. ಅಜಿತ್, ಶ್ರೀರಾಮ್, ಸಂದೀಪ್, ರಂಜನ್, ಉಜ್ವಲ್, ಸುನೀಲ್, ಶ್ರೀಧರ್..ಒಟ್ಟು ಏಳು ಜನ.. ಬೆಂಗಳೂರಿನಿಂದ ಮಂಗಳೂರಿಗೆ ಹೊರಟು ಅಲ್ಲಿಂದ ಕೊಂಕಣ ರೈಲ್ವೆ ನಲ್ಲಿ ಸಾಗಿ ಗೋವೆಯನ್ನು ತಲುಪಬೇಕೆಂದು ನಿರ್ಧರಿಸಿದ್ದೆವು.. ಸರಿ ಸುಮಾರು 15 ವರ್ಷಗಳ ತರುವಾಯ ಬೆಂಗಳೂರು-ಮಂಗಳೂರು ರೈಲ್ವೆ ಮಾರ್ಗ ಮತ್ತೆ ತನ್ನ ಸಂಚಾರ ಆರಂಭಿಸಿತ್ತು...ಅದನ್ನು ನೋಡುವ ಬಯಕೆ ಕೂಡ ನಮ್ಮೆಲ್ಲರದಾಗಿತ್ತು..ಅನೇಕ ರಾಜಕೀಯ ಕುಯುಕ್ತಿ ಹುನ್ನಾರ ಗಳಿಗೆ ಒಳಗಾಗಿ ಸುದೀರ್ಘ ೧೫ ವರ್ಷಗಳ ನಂತರ ರೈಲ್ವೆ ಮಾರ್ಗ ಏರ್ಪಟ್ಟಿತ್ತು ಬೆಂಗಳೂರು-ಮಂಗಳೂರು ರೈಲ್ವೆ ಮಾರ್ಗ...

19/12/2007 ರಾತ್ರಿ ಎಂಟೂವರೆಗೆ ಗಿಜಿಗುಡುತ್ತಿದ್ದ ಬೆಂಗಳೂರು ರೈಲ್ವೆ ನಿಲ್ದಾಣದ platform ಎಂಟರಲ್ಲಿ ನಮ್ಮ ಸಾಮಾನು ಸರಂಜಾಮುಗಳೊಂದಿಗೆ ರೈಲನ್ನು ಎದುರು ನೋಡುತ್ತಿದ್ದೆವು.....ಬಂದ ಕೂಡಲೇ ಹತ್ತಿ ನಮ್ಮ ನಮ್ಮ ಸ್ಥಾನಗಳಲ್ಲಿ ಕುಳ್ಳರಿಸಿದೆವು..ಆದಷ್ಟು ಬೇಗ ಹೊರಟರೆ ಸಾಕು ಎಂಬಂತಿದ್ದೆವು...ನಾನು ರೈಲಿನಲ್ಲಿ ಪ್ರಯಾಣ ಮಾಡಿ ಒಂದು ವರ್ಷದ ಮೇಲಾಗಿತ್ತು... ಶ್ರೀರಾಮ್, ಸಂದೀಪ್, ರಂಜನ್ ಇವರೆಲ್ಲ ನನ್ನ ಹೈಸ್ಕೂಲ್ ಗೆಳೆಯರು..ಸರಿ ಸುಮಾರು 12 ವರ್ಷಗಳ ಒಡನಾಟ ಇದೆ ಇವರೊಡನೆ..ಶ್ರೀರಾಮ್ ನೊಡನೆ 19ವರ್ಷಗಳ ಸಖ್ಯ...ನನ್ನ ಆಪ್ತವರ್ಗ ಇವರೆಲ್ಲಾ..ಸುನೀಲ್ PESIT ಗೆಳೆಯ. 4 ವರ್ಷದ ಒಡನಾಟ...ಮಿಕ್ಕಿಬ್ಬರಾದ ಉಜ್ವಲ್ ಮತ್ತು ಅಜಿತ್ ರಂಜನ್ ಗೆಳೆಯರು....ರಾಮ ಮಾತು ಮಾತಿಗೂ ದಬ್ಬಲ್ meaning ಮಾತುಗಳನ್ನು ತರುತ್ತಿದ್ದ...ಹೆಸರಿಗೆ ಮಾತ್ರ "ಶ್ರೀರಾಮ" ನಷ್ಟೆ ಆತ... ;-) ಉಜ್ವಲ್ ಮತ್ತು ಅಜಿತ್ ಅದನ್ನ ಅರ್ಥ ಮಾಡಿಕೊಳ್ಳುವುದರಲ್ಲಿ ಸಫಲರಾಗಿದ್ದರು..ಎಲ್ಲರೂ ಹಲ್ಕಾಗಳೆಂದೇ ಭಾವಿಸಿ filter ;-) ಇಲ್ಲದೆ ಮಾತನಾಡತೊಡಗಿದೆವು.. ತುಂಬಾ ಆಪ್ತರೊಡನೆ ರೈಲಿನಲ್ಲಿ ಪಯಣಿಸುವ ಅನುಭವವೇ ಬೇರೆ..ಅದನ್ನ ಪದಗಳಲ್ಲಿ ವ್ಯಕ್ತಪಡಿಸಲಾಗುವುದಿಲ್ಲ.. ಯಾವುದೇ ಪ್ರವಾಸವು ಎಲೆಗಳ ಆಟ ವಿಲ್ಲದೆ ಮುಕ್ತಿ ಹೊಂದುವುದಿಲ್ಲ....ನಮ್ಮಲ್ಲಿ ಕೆಲವರು ಊಟ ಮಾಡಿರಲಿಲ್ಲ...ಬ್ಯಾಗಿನಲ್ಲಿ ಇದ್ದ ಕುರು ಕುರು ತಿಂಡಿಗಳನ್ನೇ ಹೊಟ್ಟೆಗೆ ಆಧಾರಪಡಿಸಿಕೊಂಡರು...ನನಗೆ ಕಾಫಿ ಸಿಗಲಿಲ್ಲ..ರೈಲ್ವೆ ನಿಲ್ದಾಣದಲ್ಲಿ ಕುಡಿದದ್ದೇ ಕೊನೆ... ನಾನು ಸುನೀಲ್ ಈ ಎಲೆಗಳ ಆಟದಲ್ಲಿ ಹೆಬ್ಬೆಟ್ಟು... ರಾಮನು ತನಗೆ ಗೊತ್ತಿದ್ದ ಆಟವನ್ನು ಹೇಳಿಕೊಟ್ಟ...ರಂಜನ್ ಮತ್ತು ಸಂದೀಪ್ ಚದುರಂಗ ಆಡುತ್ತಿದ್ದರು..ಯಾರೊಬ್ಬರಿಗೂ ನಿದ್ದೆ ಬರುತ್ತಿರಲಿಲ್ಲ ಸುನೀಲನನ್ನು ಬಿಟ್ಟು...ಬಹಳ ಬೇಗ ನಿದ್ದೆಗೆ ಜಾರಿದ್ದ..ನಿದ್ರಲೋಲನೆ ಸರಿ....ಈ ಪ್ರವಾಸದುದ್ದಕ್ಕೂ ಎಲ್ಲರಿಗಿಂತ ಈತನೆ ಹೆಚ್ಚು ನಿದ್ದೆ ಮಾಡಿದ್ದು ಎಂದೆನಿಸುತ್ತೆ.....ಸುಮಾರು ಎರಡರ ಹೊತ್ತಿಗೆ ಎಲ್ಲರೂ ನಿದ್ರಿಸಲನುವಾದರು ರಾಮನನ್ನು ಹೊರತು ಪಡಿಸಿ..ಒಬ್ಬೊಬ್ಬರಾಗಿ ನಿದ್ದೆಗೆ ಜಾರುತ್ತಿದ್ದೆವು. ಈತ ಮಾತ್ರ ಕಿಟಕಿಯಾಚೆ ಏನೋ ನೋಡುತ್ತಿದ್ದ..ಘಾಟಿಗಳ ನಡುವೆ ನುಸುಳುವ ರೈಲು ನೊಡುವ ಭಾಗ್ಯ ನಮ್ಮದಾಗಲಿಲ್ಲ.. ಸಕಲೇಶಪುರ ಇತ್ಯಾದಿ ಊರುಗಳೆಲ್ಲವು ಮುಂಜಾನೆ 4ರ ಸಮಯದಲ್ಲಿ ಬಂದು ಹೋಗಿತ್ತು...ಒಟ್ಟಿನಲ್ಲಿ ರೈಲಿನ ಪ್ರಯಾಣ ಆರಾಮದಾಯಕವಾಗಿತ್ತು..ಮಂಗಳೂರು ಇಳಿದ ಕೂಡಲೇ ಎಲ್ಲರೂ ಬೆವರಲಾರಂಭಿಸಿದೆವು...ಬೆಂಗಳೂರಿನಿಂದ ಹೊರಟಾಗ ಚುಮು ಚುಮು ಚಳಿ...ಮಂಗಳೂರಿನಲ್ಲಿ ಇದಕ್ಕೆ ಸಂಪೂರ್ಣ ವ್ಯತಿರಿಕ್ತ ವಾತವರಣ...ಏರಿಸಿದ್ದ ಉಣ್ಣೆ ಬಟ್ಟೆಗಳನ್ನು ಕಳಚಿ ಬ್ಯಾಗಿನಲ್ಲಿ ತುರುಕಿ ಲಾಕರ್ ಗಳಲ್ಲಿ ತುಂಬಿದೆವು...ಗೋವೆಗೆ ರೈಲು ಮಧ್ಯಾನ್ಹ 2:4೦ಕ್ಕೆ ಇತ್ತು...ನಮಗೆ ಸುಮಾರು ಏನಿಲ್ಲವೆಂದರೂ 4-5 ಗಂಟೆಗಳ ಅವಕಾಶವಿತ್ತು...ಹಾಗಾಗಿ ರೈಲ್ವೆ ನಿಲ್ದಾಣದ ಮಂದಿಯಲ್ಲಿ ಕೇಳತೊಡಗಿದೆವು...ಇಲ್ಲೆಲ್ಲಾದರು ನೋಡುವಂತಹ ಸ್ಥಳಗಳಿವೆಯೇ ಎಂದು..ಯಾರೋ ಪುಣ್ಯಾತ್ಮ St.Mary's Island ಗೆ ಹೋಗಿ ಬನ್ನಿ ಅಂದ.. ರೈಲ್ವೆ ನಿಲ್ದಾಣದಿಂದ ಕೇವಲ ಅರ್ಧ ಗಂಟೆ ಪ್ರಯಾಣ ಎಂದು ಆಸೆ ಹುಟ್ಟಿಸಿದರು...ಲಗುಬಗೆಯಿಂದ ಎಷ್ಟು ಬೇಕೊ ಅಷ್ಟು ದಿರಿಸುಗಳನ್ನು ಸಣ್ಣ ಬ್ಯಾಗಿನಲ್ಲಿ ಇಟ್ಟುಕೊಂಡು ಆ ಪುಣ್ಯಾತ್ಮ ತೋರಿಸಿದ ಮಂಗಳೂರು ಬಸ್ ನಿಲ್ದಾಣದೆಡೆಗೆ ಹೆಜ್ಜೆಯಿಟ್ಟೆವು.... ದಾರಿಯುದ್ದಕ್ಕು ಸುಡು ಬಿಸಿಲು...ಇನಿಲ್ಲದಂತೆ ಬೆವರತೊಡಗಿದೆವು..ಬೆಂಗಳೂರಿನ ಚಳಿಯನ್ನು ನೆನೆಯುತ್ತಾ ಬಿಸಿಲಿಗೆ ಶಪಿಸುತ್ತಾ ನಡೆದೆವು... "ಹೋಟೆಲ್ ತಾಜ್ ಮಹಲ್" ನಲ್ಲಿ ಉಪಹಾರ ಸೇವಿಸಿ ಪಣಂಬೂರು ಬೀಚಿನೆಡೆಗೆ ಬಸ್ ಹಿಡಿದೆವು..ಕಾರಣ ಪಣಂಬೂರು ಬೀಚಿನಿಂದ St.Mary's Island ಪಯಣಿಸಬಹುದು ಎಂದು....ಮಂಗಳೂರಿಗೆ ಇದು ನನ್ನ ಮೊದಲ ಭೇಟಿ....traffic ಕಿರಿ ಕಿರಿ ಅಷ್ಟಾಗಿರಲಿಲ್ಲ..ಮಂಗಳೂರನ್ನು ನೋಡುವ ಆಸೆ ಬಹಳ ಹಿಂದಿನಿಂದ ಇತ್ತು..ಅದು ಅಂದು ಒಂದು ರೀತಿಯಲ್ಲಿ ಪೂರ್ಣಗೊಂಡಿತ್ತು..ಪಣಂಬೂರು ಬೀಚಿನಲ್ಲಿ ಇಳಿದ ಕೂಡಲೇ ಆಟೋದವರು ನಿಮಗೆ ತಪ್ಪು ಮಾಹಿತಿ ದೊರೆತಿದೆ..ಈ ಬೀಚಿನಿಂದ St.Mary's Island ಹೋಗಲಾಗುವುದಿಲ್ಲ...ಮಲ್ಪೆ ಬೀಚಿನಿಂದ ಹೋಗಿ ಎಂದುಬಿಟ್ಟರು..ಮಲ್ಪೆ ಬೀಚು ಅಲ್ಲಿಂದ ಸುಮಾರು 45ನಿಮಿಶಗಳ ಪ್ರಯಾಣ...ಸಮಯ ಮೀರುತ್ತಿದ್ದುದರಿಂದ ಪಣಂಬೂರು ಬೀಚಿಗೆ ಹೋಗಲು ನಿರ್ಧರಿಸಿದೆವು....ಬಸ್ ಸ್ಟಾಪಿನಿಂದ ಅಲ್ಲಿಗೆ ಹೋಗುವ ದಾರಿ ಯಲ್ಲಿ ಗಣಿಗಾರಿಕೆ ನಡೆಯುತ್ತದೆಂದು ತೋರುತ್ತದೆ..ಬಹಳ ಧೂಳಿತ್ತು..ಆಟೋದವರಿಗೆ ಕೆಳಿದ್ದಕ್ಕೆ "manganese" ಅದಿರನ್ನು ಬೇರೆ ದೇಶಗಳಿಗೆ ರಪ್ತು ಮಾಡುತ್ತರೆಂದು ಹೇಳಿದರು...ಬೀಚಿನ ಮರಳು ಕಾವೇರಿತ್ತು...ಬರಿಗಾಲಿಡಲು ಸಹ ಆಗುತ್ತಿರಲಿಲ್ಲ...ಕಾದ ಕಾವಲಿಯಾದಂತಿತ್ತು..ಸಮುದ್ರವನ್ನು ನೋಡ ನೋಡುತ್ತಿದ್ದಂತೆ ನಮ್ಮ ಹುಡುಗರು ಅದರೆಡೆಗೆ ಧಾವಿಸಿದರು...ನನಗೇನೊ ನೀರಿಗೆ ಇಳಿಯಲು ಮನಸಾಗಲಿಲ್ಲ...ಸಂದೀಪನು ಕೂಡ ನನ್ನೊಡನಿದ್ದ.... photo session ಅದಾಗಲೇ ಶುರು ಆಗಿತ್ತು...ವಿಧ ವಿಧ ಭಾವ ಭಂಗಿಗಳಲ್ಲಿ photo ಗಳು ಒಂದೆ ಸಮನೇ ಕ್ಲಿಕ್ಕಿಸಲ್ಪಡುತ್ತಿದವು... ಬಿಸಿಲಿನ ಝಳ ಹೆಚ್ಚಾಗುತ್ತಲೇ ಇತ್ತು.ಅಲ್ಲೆ ಬಾಕ್ಸ್ ಟೆನ್ನಿಸ್ ಮತ್ತು frisbee ಯಲ್ಲಿ ಆಡುತ್ತಿದ್ದೆವು.. ಅಷ್ಟರಲ್ಲಿ ರಂಜನ್ ಅದೆಲ್ಲಿಂದ ಹುಡುಕಿ ತಂದನೋ 4-5 ಸ್ಟಾರ್ ಮೀನುಗಳನ್ನು ಹಿಡಿದಿಟ್ಟಿದ್ದ...ಅದನ್ನ ಒಂದು ಕವರೊಳಗೆ ಹಾಕಿ ಅದಕ್ಕೆ ನೀರು ಸೇರಿಸಿ ಅದನ್ನ ಬೆಂಗಳೂರಿಗೆ ಹೊತ್ತೊಯ್ಯುವ್ವ ಮಹತ್ ಅಭಿಲಾಷೆಯನ್ನು ಹೊಂದಿದ್ದ!!... ಇನ್ನಿಲ್ಲದಂತೆ ಅದನ್ನು ಪ್ಲಾಸ್ಟಿಕ್ ಕವರೊಳಗೆ ಅಲ್ಲಾಡಿಸಿ ಕಾಟ ಕೊಟ್ಟು ಹಿಡಿದಿಟ್ಟಿದ್ದ....ಯಾರೆಷ್ಟು ಬೇಡವೆಂದರೂ ತನ್ನ ಹಟವನ್ನು ಸಾಧಿಸಿಯೇ ತೀರುತ್ತೇನೆಂದಿದ್ದ.... ಸಮುದ್ರಲ್ಲಿ ಈಜಾಡಿ ಆಟ ಮುಗಿಸಿ ಅಲ್ಲೆ ಹತ್ತಿರದಲ್ಲಿದ್ದ ಹೋಟೆಲಿನಲ್ಲಿ ಆಳು ಮೂಳು ತಿಂದು ಮತ್ತೆ ಮಂಗಳೂರು ರೈಲ್ವೆ ನಿಲ್ದಾಣದೆಡೆಗೆ ಧಾವಿಸಿದೆವು..ರಂಜನ್ ಸ್ಟಾರ್ ಮೀನುಗಳನ್ನು ಹಿಡಕೊಂಡೇ ಬಂದ...ನಮಗಾಗಲೇ ಅನ್ನಿಸಿತ್ತು ಅದರ ಪ್ರಾಣ ಪಕ್ಷಿ ಹಾರಿಹೋಗಿದೆಯೆಂದು....ವೃಥಾ ಅಲ್ಲಾಡಿಸಿ ನೋಡುತ್ತಿದ್ದ..ಬದುಕಿದೆಯೇನೊ ಎಂದು ನೋಡಿ "ಬದುಕಿದೆ ಕಣ್ರೊ" ಎಂದು ಸಂಭ್ರಮಿಸುತ್ತಿದ್ದ...ಮಂಗಳೂರು ರೈಲ್ವೆ ನಿಲ್ದಾಣದ ಸೆರುವ ಹೊತ್ತಿಗೆ "ಮಥ್ಸ್ಯಗಂಧ express" ನಮಗಾಗಿ ಕಾದು ನಿಂತಿತ್ತು ಗೋವೆಕಡೆಗೆ ಮುಖ ಮಾಡಿ..ಲಗುಬಗೆಯಿಂದ ಸಿಕ್ಕಿದ್ದು ತಿಂದು ನಮ್ಮ ಬ್ಯಾಗಳು ಹೊತ್ತು ನಮ್ಮ ಆಸನಗಳನ್ನು ಹಿಡಿದೆವು...ರಂಜನ್ ಒಂದು ಪ್ಲಾಸ್ಟಿಕ್ ಡಬ್ಬವನ್ನು ತಂದು ಕವರಿನಿಂದ ಆ ಮೀನುಗಳನ್ನು ಪ್ಲಾಸ್ಟಿಕ್ ಡಬ್ಬಕ್ಕೆ ಹಸ್ತಾಂತರಿಸಿದ್ದ....ಜೀವ ಹೋದ ಮೇಲೆ ಏನು ಮಾಡಿ ಏನು ಪ್ರಯೋಜನ..ಆದರೂ ಅದು ಹೋಗಿದೆ ಎಂದು ನಂಬುವುದಕ್ಕೆ ಆತನು ಸಿದ್ದನೇ ಇರಲಿಲ್ಲ.. ರಂಜನ್ ನಮ್ಮೆಲ್ಲರ ಘೋರವಾದ ಖಂಡನೆ ಇದೆ ಆ ಜೀವಿಗಳ ಪ್ರಾಣ ತೆಗೆದಿದುದಕ್ಕೆ...
ಮತ್ತೆ ರೈಲಿನ ಪ್ರಯಾಣ.... ಬೆವರು ಹನಿ ತನ್ನ ಪಾಡಿಗೆ ಎಲ್ಲರ ಮುಖದಲ್ಲೂ ಇಳಿಯುತ್ತಲೇ ಇತ್ತು...ಬಳಲಿಕೆ ಯಾರೊಬ್ಬರ ಮುಖದಲ್ಲೂ ಇರಲಿಲ್ಲ...ಕೊಂಕಣ ರೈಲ್ವೆ ..ಸಾಕಷ್ಟು ಸುರಂಗಗಳು, ಪಶ್ಚಿಮ ಘಟ್ಟಗಳ ಶ್ರೇಣಿ ಮಧ್ಯೆ ನುಸುಳುವ ರೈಲನ್ನು ನೆನೆನೆನು ಪುಳಕಿತರಾಗುತ್ತಿದ್ದೆವು...ಕಿಟಕಿ ಪಕ್ಕದ ಸೀಟಿಗಾಗಿ ಗುದ್ದಾಡುತ್ತಿದ್ದೆವು..ಸಂದೀಪ್, ರಂಜನ್ ಇನ್ನು ಮುಂದೆ ಹೋಗಿ ಬಾಗಿಲ ಬಳಿ ಕುಳಿತಿದ್ದರು...ನಾನು ಸುನೀಲ ಇನ್ನೊಂದು ಬಾಗಿಲ ಬಳಿ ಕುಳಿತಿದ್ದೆವು.. ಕಂಗಳಲ್ಲಿ ಪ್ರಕೃತಿಯ ರಮ್ಯ ನೋಟ ತುಂಬಿಕೊಳ್ಳುವ ತವಕ ಎಲ್ಲರಲ್ಲೂ ಇತ್ತು..ಆಗಾಗ ಕಾಪಿ-ಟೀ ಸಮಾರಾಧನೆ ಎಡೆಬಿಡದೆ ನಡೆಯುತ್ತಲೇ ಇತ್ತು... ಹಾಲಿಗಿಂತ ನೀರೇ ಹೆಚ್ಚಾಗಿತ್ತು..photo sessions ನಡೆಯುತ್ತಲೇ ಇತ್ತು..ಇದ್ದ ಬದ್ದ ಭಾವ ಭಂಗಿಗಳು ಎಲ್ಲರೂ ಮಾಡುತ್ತಿದ್ದೆವು...ಒಟ್ಟು ಮೂರು ಕ್ಯಾಮೆರಾ ಮನಸೋ ಇಛ್ಛೆ ಕ್ಲಿಕ್ಕಿಸುತ್ತಿದ್ದರು.. ರೈಲಿನ ಬಾಗಿಲ ಬಳಿ ಕುಳಿತು ಮೊಬೈಲ್ ನಲ್ಲಿದ್ದ ಹಾಡುಗಳನ್ನು ಕೇಳುತ್ತಿದ್ದೆ..ರೈಲಿನ ರಭಸಕ್ಕೆ ಮನಸೂ ಸಹ ಎಲ್ಲೆಲ್ಲೊ ಹಾರಡುತ್ತಿತ್ತು..ಸಾವಿರಾರು ಯೋಚನೆಗಳು...ಪ್ರತಿ ಕ್ಷಣಕ್ಕೂ ದೃಶ್ಯಗಳು ಬದಲಾಗುತ್ತಿರುವಂತೆ ಮನಸಿನ ಓಟ ನಡೆಯುತ್ತಲಿತ್ತು...ಸುರಂಗಗಳು ಬಂದಾಗ "ಹೋ" ಎಂದು ಕೂಗಲು ಶುರು ಮಾಡುತ್ತಿದ್ದೆವು...ಅಮೇಲೆ ಸುರಂಗಗಳ ಸರಮಾಲೆಯೇ ಇತ್ತು..ಬಂತೆಂದರೆ ಬಾಗಿಲ ಬಳಿ ಬಂದು ಬಗ್ಗಿ ನೋಡುತ್ತಿದ್ದೆವು..ಏನೋ ರೋಮಾಂಚನ...ನಮ್ಮಲ್ಲೆ ಮಾತಾಡಿಕೊಳ್ಳುತ್ತಿದ್ದೆವು.."ಏಷ್ಟ್ ಕಷ್ಟ ಆಗಿರುತ್ತೆ ಅಲ್ಲ್ವ...ಇಷ್ಟ್ ದೊಡ್ಡ tunnel ಮಾಡಕ್ಕೆ.ಏಷ್ಟ್ ಉದ್ದ ಇದೆ ನೋಡು...ಸೂಪರ್ ಕಣೋ...worth ಈ ರೈಲಿನಲ್ಲಿ travel ಮಾಡಿದ್ದಕ್ಕೊ worth it." ಕೊಂಕಣ ರೈಲ್ವೆ ಮಾರ್ಗ ನಿಜಕ್ಕೊ ಸುಂದರ..ಪಶ್ಚಿಮಘಟ್ಟಗಳನ್ನು ಬಳಸಿಕೊಂಡು ರೈಲಿನ ಹಾದಿ ನಿರ್ಮಿಸಿರುವುದು ಬೃಹತ್ ಸಾಹಸವೇ ಸರಿ...ಎಲ್ಲರೂ ಒಮ್ಮೆಯಾದರೂ ಪಯಣಿಸಬೇಕಾದ ದಾರಿ ಅದು....ಯಾವುದು ಅತ್ಯಂತ ಉದ್ದವಾದ ಸುರಂಗ ಎಂದು ಕಾತುರದಿಂದ ಲೆಕ್ಕವಿಡುತ್ತಿದ್ದೆವು..ಪ್ರತಿ ಸುರಂಗ ಬಂದಾಗಲೂ...ನಮಗೆ ತಿಳಿದ ರೀತಿಯಲ್ಲಿ ಬೈಂದೂರು ಬಳಿಯ ಸುರಂಗ ಅತ್ಯಂತ ಉದ್ದವೆಂದು ಮಾತಾಡಿಕೊಳ್ಳುತ್ತಿದ್ದೆವು...ಎನಿಲ್ಲವೆಂದರೂ ಸುಮಾರು 10ನಿಮಿಷಗಳು ಸುರಂಗದಲ್ಲಿ ಸಂಪೂರ್ಣ ಓಟ ನಡೆಸಿತ್ತು ರೈಲು ಬೈಂದೂರು ಸುರಂಗದಲ್ಲಿ... ಕತ್ತಲಾಗುತ್ತಿತ್ತು, ಆದಷ್ಟು ಕಣ್ಣಿಗೆ ಕಾಣುವಷ್ಟು ಕಣ್ಣಿಗೆ ತುಂಬಿಕೊಳ್ಳುವ ತವಕ.. ಆಗ ಕಂಡದ್ದು ದೊಡ್ಡ ಶಿವನ ವಿಗ್ರಹ...ಅದೇ ಮುರುಡೇಶ್ವರ, ರಾಮ ವಿವರಿಸುತ್ತಿದ್ದ...ಆತನಿಗೊಂದು ಆಸೆ ಇತ್ತು..ಈ ರೈಲಿನಲ್ಲಿ ಪಯಣಿಸುವಾಗ ಮುರುಡೇಶ್ವರ ಬೀಚು ಕಾಣಿಸುತ್ತದಂತೆ ನೋಡಬೇಕೆಂದು..ಎಲ್ಲರೂ ಇರುವ ಎರಡು ಕಂಗಳನ್ನು ಊರಗಳ ಅರಳಿಸಿ ಕಾಲಿನ ಬೆರಳ ಮೇಲೆ ನಿಂತು ನೋಡುತ್ತಿದ್ದೆವು..ಶರವೇಗದಲ್ಲಿ ಸಾಗುತ್ತಿತ್ತು ರೈಲು.ಶಿವನ ಶಿಲೆ ದೂರದಿಂದ ವಿರಾಜಮಾನವಾಗಿ ಕಾಣಿಸಿತು, ಅದರ ಬಗ್ಗೆ ತನಗೆ ತಿಳಿದಿದ್ದ ಮಾಹಿತಿಯನ್ನು ನೀಡುತ್ತಿದ್ದ ರಾಮ, ಬೀಚು ಮಾತ್ರ ಕಾಣಿಸಲಿಲ್ಲ.."ಲೊ ಅದರ ಪಕ್ಕಾನೇ ಕಣ್ರೋ ಬೀಚು, ಕಾಣಿಸ್ತಿಲ್ಲ..ಚೆ ಚೆ."ಎಂತು ಪರಿತಪಿಸುತ್ತಿದ್ದ..ಶಿವನ ವಿಗ್ರಹ ಕಣ್ಣಿಗೆ ಕಾಣುವಷ್ಟು ದೂರ ನೋಡುತ್ತಲೆ ಇದ್ದೆವು...ಇದು ಮುಗಿಯುವುದರೊಳಗೆ ಕತ್ತಲೂ ಸಂಪೂರ್ಣ ಆವರಿಸಿತ್ತು ನೀಲಿ ಆಗಸದಲ್ಲಿ, ಮತ್ತೆ ಹಿತವಾದ ಚಳಿ ಶುರು ಆಗಿತ್ತು..ಕಿಟಕಿಯಿಂದ ಎಷ್ಟೆ ಆಚೆ ನೋಡಿದರೂ ಕಣ್ಣಿಗೆ ಏನೊಂದೂ ರಾಚುತ್ತಿರಲಿಲ್ಲ...ಮತ್ತೆ ಆಡಲು ಶುರು ಮಾಡಿದೆವು...ಮತ್ತದೇ ಜೋಕುಗಳು, ಎಲ್ಲರೂ ಎಲ್ಲರನ್ನು ರೇಗಿಸುತ್ತ "ಮಡಗಾವ್" ರೈಲು ನಿಲ್ದಾಣದ ಎದುರು ನೋಡುತ್ತಿದ್ದೆವು...ಕಾರವಾರ ದಿಂದ ಕೇವಲ ಅರ್ಧ ಗಂಟೆ "ಮಡಗಾವ್" ಎಂಬ ವಿಷಯ ತಿಳಿಯಿತು..ನಮಗೆ "ಮಡಗಾವ್" ನಿಂದ ರೂಮಿನಲ್ಲಿ ಉಳಿಯುವ ವ್ಯವಸ್ಥೆ ಹೊಣೆಯೆಲ್ಲವನ್ನು ರಂಜನ್ ಹೊತ್ತಿದ್ದ, ಅವನ ಗೆಳೆಯ ಅದರ ತಯಾರಿ ಮಾಡಿದ್ದ.."ಮಡಗಾವ್" ನಿಲ್ದಾಣದಲ್ಲಿ driver ರಂಜಿತ್ ಬಂದು ನಮ್ಮನ್ನು ಎದುರು ಮಾಡಿಕೊಳ್ಳುವ ಹಾಗೆ ವ್ಯವಸ್ಥೆ ಯಾಗಿತ್ತು..ಸುಮಾರು ರಾತ್ರಿ 9ಗಂಟೆಗೆ "ಮಡಗಾವ್" ತಲುಪಿದೆವು...ರಂಜಿತ್ ನಮಗಾಗಿ ಕಾದಿದ್ದ.. ಬ್ಯಾಗುಗಳನ್ನು ಹೊತ್ತು ಅವನ ಹಿಂದೆ ಹೆಜ್ಜೆ ಹಾಕಿದೆವು.. ನಮಗಾಗಿ ಕಾದು ನಿಂತಿತ್ತು "ಟಾಟ ಸುಮೋ..."
(ಸಶೇಷ)...