’ಚಿತ್ರಚಾಪ’ದ ಬಿಡುಗಡೆ ಸಮಾರಂಭಕ್ಕೆ ನೀವೆಲ್ಲರೂ ಬಂದು ಕಾರ್ಯಕ್ರಮ ಯಶಸ್ವಿಗೊಳಿಸಿದುದಕ್ಕೆ ನಿಮಗೆಲ್ಲರಿಗೂ ನನ್ನ ಹೃತ್ಪೂರ್ವಕವಾದ ನಮನಗಳು. ನಾನು ತೆಗೆದಿರಿಸಿದ ಪ್ರತಿಯನ್ನು ಮನೆಗೆ ಕೊಂಡು ಹೋಗಿ ಇದಾಗಲೇ ಓದಲು ಶುರುವಿಕ್ಕಿರುತ್ತೀರಿ ಎಂಬುದು ಸಹ ತಿಳಿದ ವಿಷಯವೇ.
Proffessor ಜಿ.ವೆಂಕಟಸುಬ್ಬಯ್ಯನವರು ’ನಾನು ಕಳೆದ 20ವರ್ಷಗಳಲ್ಲಿ ಈ ರೀತಿಯ ಸಮಾರಂಭವನ್ನು ನೋಡಿರಲಿಲ್ಲ’ ಎಂದಾಗ ಪುಸ್ತಕದ ಬಗ್ಗೆ ಅಪಾರ ಮೆಚ್ಚುಗೆಯನ್ನು ಸಭಿಕರ ಮುಂದೆ ವ್ಯಕ್ತಪಡಿಸಿದಾಗ ಉಂಟಾದ ಕರಾಡತನದ ಶಬ್ಧ ಇನ್ನೂ ಕಿವಿಯಲ್ಲಿ ಗುಯ್ ಗುಡುತ್ತಿರುವಾಗಲೇ ಪುಸ್ತಕವನ್ನು ಓದಿ ಮುಗಿಸಿದೆ.
ಪುಸ್ತಕ ಬಿಡುಗಡೆಯ ಹಿಂದಿನ ದಿವಸ ರಾತ್ರಿ 1ಗಂಟೆಯಲ್ಲಿ ಅರುಣ ಕೇಳಿದ ’ಮುನ್ನುಡಿ’ ಓದುವೆಯಾ ಎಂದು, ಅದು ಪುಸ್ತಕದ ಮೊದಲ ಪ್ರತಿ. ಇಲ್ಲ ನಾಳೆ ಬಿಡುಗಡೆಯಾದಮೇಲೆ ಕೊಂಡೇ ಓದುವೆ ಎಂದು ಸುಮ್ಮನಾದೆ.
’ಚಿತ್ರಚಾಪ’ದ ಉದ್ದಿಶ್ಯ ಒಂದೇ ವಾಕ್ಯದಲ್ಲಿ ಸವಿಸ್ತಾರವಾಗಿ ವರ್ಣಿಸಿದ್ದಾರೆ.."ಮೊದಲ ಪ್ರಯತ್ನವಿದು ಚಿತ್ರಚಾಪ. ಪ್ರಕೃತಿಗಾಗಿ, ಕನ್ನಡಕ್ಕಾಗಿ, ನಮಗಾಗಿ, ನಿಮಗಾಗಿ, ಎಲ್ಲರಿಗಾಗಿ". ವಸುಧೇಂದ್ರರ ಮುನ್ನುಡಿಯು ಪುಸ್ತಕಕ್ಕೆ ಕಳಶವಿಟ್ಟಂತಿದೆ.
ಒಟ್ಟಾರೆಯಾಗಿ ಪುಸ್ತಕದಲ್ಲಿ 3 ಕವನಗಳು 5 ಪ್ರಭಂದಗಳು ಇವೆ, ಯಾವುದೇ ಕವನಗಳು ನನಗೆ ಏಕೆ ಅರ್ಥವಾಗುವುದಿಲ್ಲ ಎಂದು ನನಗೇ ಅರ್ಥವಾಗಿಲ್ಲ!!, ಅದರ ಬಗ್ಗೆ No Comments!!!
ಶ್ರೀನಿಧಿಯವರ ಪರಿಸರದ ನಾಲ್ಕು ಚಿತ್ರಗಳಾದ ಕೆರೆ,ಕೃಷಿ,ನೆಲೆ, ಅಲೆ ಇವುಗಳ ಬಗ್ಗೆ ಸವಿಸ್ತಾರವಾಗಿಯೇ ಬರೆದಿದ್ದಾರೆ. ಇವುಗಳ ಮೇಲೆ ಮಾನವರ ಅವಲಂಬಿತನದ ಚಿತ್ರಣ ಸಿಗುತ್ತದೆ, ಇದರಲ್ಲಿ ಯಾವುದಕ್ಕೊ ಅಂತ್ಯವಿಲ್ಲ, ಓದುಗರನ್ನು ಅದರ ಬಗ್ಗೆ ಚಿಂತಿಸುವಂತೆಯೇ ಮಾಡಿ ಅದರ ಬಗ್ಗೆ ಯೋಚಿಸುತ್ತಿರುವಾಗಲೇ ಮುಂದಿನ ಚಿತ್ರದ ಬಗ್ಗೆ ಚಿತ್ರಣ ಶುರುವಾಗಿರುತ್ತದೆ. ಅರೆರೆ ಮುಗಿದೇ ಹೋಯಿತೇ ಎಂದೆನಿಸುತ್ತದೆ ಮತ್ತೊಮ್ಮೆ ಮಗದೊಮ್ಮೆ ಓದುವಂತೆ ಪ್ರೇಪಿಸುತ್ತದೆ. ಪಾತ್ರಗಳ ಕಟ್ಟುವಿಕೆ ಅದ್ಭುತವಾಗಿದೆ, ಅರ್ಥವಾದರೂ ಅರ್ಥವಾಗದ ಒಂದು ಗುಂಗಿನಲ್ಲಿ ಇದ್ದೇ ’ಪರಿಸರದ ನಾಲ್ಕು ಚಿತ್ರಗಳು’ ಓದಿದ ಮೇಲೆ, ಮತ್ತೊಮ್ಮೆ ಓದುತ್ತೇನೆ...ರಾಹೆಯವರ ರೇಖಾಚಿತ್ರಗಳು ಇಲ್ಲದಿದ್ದರೆ ಮತ್ತಷ್ಟು ತಿಣುಕಾಡುತ್ತಿದ್ದನೇನೋ...
ಶ್ರೀನಿವಾಸನ ’ಇದು ಎಂಥಾ ಲೋಕವಯ್ಯ!’ ಆತ ಮಾಡಿದ ಬೆಳಗಾವಿಯ ಪ್ರವಾಸಕಥನ. ಸಂಪೂರ್ಣ ಪ್ರವಾಸ ಕಥನ ಕಣ್ಣಿಗೆ ಕಟ್ಟಿದಂತಿದೆ, ಅಲ್ಲಲ್ಲಿ ಕಂಡು ಬರುವ ಉಪಮೆಗಳು, ಕಂಡ ದೃಶ್ಯಗಳನ್ನು ವರ್ಣಿಸುವ ರೀತಿ, ಪದಬಳಕೆ ನಿರ್ಜೀವ ವಸ್ತುಗಳಲ್ಲಿ ಜೀವಂತಿಕೆ ತುಂಬಿ ಓದುಗರ ಮುಂದೆ ಸಾದ್ಯಂತ ಪಡಿಸುವ ರೀತಿ ಬಹಳ ಸೊಗಸಾಗಿದೆ.
ಸುಶ್ರುತರ ’ಹಳ್ಳಿ ಪರಿಸರದಲ್ಲೊಂದು ಸುತ್ತು’ ತೇಜಸ್ವಿಯವರ 'ಪರಿಸರದ ಕತೆ' ನೆನಪಿಸಿತು ನನಗೆ, ಹಳ್ಳಿ ವಾತವರಣದಲ್ಲಿ ನಡೆಯುವ ಘಟನಾವಳಿಗಳು, ಅಲ್ಲಿನ ಜನಜೀವನವನ್ನ ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ. ’ಅಡಿಕೆ’ ಬೆಳೆಯ ಸಂಪೂರ್ಣ ಮಾಹಿತಿ ದೊರೆಯುತ್ತದೆ, ಆರಂಭದಿಂದ ಹಿಡಿದು ಕೊನೆಯವರೆಗೆ ನಾವೇ ಆ ಸಕಲ ಕಾರ್ಯಗಳು ನಮ್ಮ ಕಣ್ಣ ಮುಂದೇನೇ ನಡೆಯುತ್ತಿದ್ದೇನೋ ಎಂಬಂತೆ ಭಾಸವಾಗುತ್ತಿತ್ತು.
ಅರುಣನ ’ಅರಿವೆಷ್ಟಿದೆ ನಮಗೆ’ ಲೇಖನವನ್ನು ಒಂದು ಪಠ್ಯಪುಸ್ತಕದ ಪಾಠವನ್ನಗಿಸುವ ಸಕಲ ಲಕ್ಷಣಗಳೂ ಇವೆ. Trekking ಏಕೆ ಮಾಡುತ್ತೇವೆ? ಪರಿಸರದ ಸಂರಕ್ಷಣೆಯಲ್ಲಿ ನಮ್ಮ ಪಾತ್ರವೆಷ್ಟು, ಪ್ರಾಣಿ ಪಕ್ಷಿ ಸಂಕುಲಗಳ ಜಾಗವನ್ನು ನಾವೆಷ್ಟು ಆಕ್ರಮಿಸಿದ್ದೇವೆ, ಎಷ್ಟೋ ಮಂದಿಗೆ ಇದಾವುದರ ಅರಿವಿಲ್ಲದೆಯೇ ಪರಿಸರವನ್ನು ಹಾಳುಗೆಡವುತ್ತಿರುತ್ತಾರೆ ತಿಳಿದೆಯೋ ತಿಳಿಯದೆಯೋ... ವಯೋಮಾನದ ಮಿತಿಯಿಲ್ಲದೆ ಎಲ್ಲರೂ ಓದಲೇಬೇಕಾದ ಲೇಖನ ’ಅರಿವೆಷ್ಟಿದೆ ನಮಗೆ’? ಓದಿದ ಮೇಲೆ ಪರಿಸರದ ಬಗ್ಗೆ ನಿಮ್ಮ ದೃಷ್ಟಿಕೋನ ಸ್ವಲ್ಪ ಮಟ್ಟಿಗಾದರೂ ಬದಲಾಗುತ್ತದೆ ಎಂಬುದರ ಅರಿವು ನನಗಿದೆ..!!
ಕೊನೆಯದಾಗಿ ಅನ್ನಪೂರ್ಣರ ’ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ, ಸಾಯೊದ್ರೊಳಗೆ ಒಮ್ಮೆ ನೋಡು ಕೆಮ್ಮಣ್ ಗುಂಡಿ ’ ಓದಿದ ಮೇಲೆ ಕೆಮ್ಮಣ್ಣುಗುಂಡಿಗೇ ಹೋಗಿ ಬಂದಂತಾಯಿತು. ನಾನೂ ಒಮ್ಮೆ ಇವರೊಡನೆ ಹೋಗಬೇಕು. ’ರಾಣಿ’ ಮತ್ತೆ ’ವಾಣಿ’ ಯನ್ನು ನೋಡಬೇಕು. !!
ಪುಸ್ತಕ ರೂಪದ ಮೊದಲ ಪ್ರಯತ್ನದಲ್ಲೇ ಎಲ್ಲರಿಗೂ full ಮಾರ್ಕ್ಸ್ ಬಂದಿದೆ, ಸಂಪೂರ್ಣ ಪುಸ್ತಕ ಓದಿದ ಮೇಲೆ ಪುಸ್ತಕ ಮುಗಿದೇ ಹೋಯಿತೇ ಎಂಬ ಭಾವ ನಿಮ್ಮನ್ನು ಕಾಡೇ ಕಾಡುತ್ತದೆ. ಹೀಗೆ ಮುಂಬರುವ ಎಲ್ಲಾ ಪ್ರಯತ್ನಗಳಿಗೂ ನಿಮಗೆ ಯಶ ಸಿಗಲಿ. ’ಪ್ರಣತಿ’ ಸಂಸ್ಥೆಯಿಂದ ಸಾಕಷ್ಟು ಪುಸ್ತಕಗಳು ಹೊರಬರಲಿ...