ಶೋ.....ಗಳು

Tuesday, June 10, 2008

ಟೀವಿ ವಾಹಿನಿಗಳಲ್ಲಿ ಒಂದು ಕಾರ್ಯಕ್ರಮ ಸ್ವಲ್ಪ ಯಶಸ್ಸು ಗಳಿಸಿದರೆ ಅದನ್ನೇ ಅನುಸರಿಸಿ ಬೇರೆ ವಾಹಿನಿಗಳಲ್ಲಿ ಶುರುವಿಕ್ಕುತ್ತಾರೆ. ಅದಕ್ಕೆ ಉತ್ತಮ ನಿದರ್ಶನ ಈ ಟೀವಿಯಲ್ಲಿ ಪ್ರಸಾರವಾಗುವ "ಎದೆ ತುಂಬಿ ಹಾಡುವೆನು" ಕಾರ್ಯಕ್ರಮ. ಎಂದು ಈ ಕಾರ್ಯಕ್ರಮದಲ್ಲಿ ಚಿಕ್ಕ ಮಕ್ಕಳಿಂದ ಹಾಡಿಸಲು ಶುರು ಮಾಡಿದರೋ ಬೇರೆ ವಾಹಿನಿಗಳಲ್ಲೂ ಸಹ ಇದೇ ರೀತಿಯ ಕಾರ್ಯಕ್ರಮಗಳನ್ನು ಶುರು ಮಾಡಿದರು. ಈಗ ಯಾವ ಚಾನೆಲ್ ನೋಡಿದರೂ ಇದೇ ಕಾರ್ಯಕ್ರಮಗಳು. ತೀರ್ಪುಗಾರ ವೈವಿಧ್ಯಮಯ ತೀರ್ಪು, ಮಕ್ಕಳ ಕಾಂಪಿಟೇಶನ್, ಹೆತ್ತವರ ಉದ್ವೇಗ, ಚಪ್ಪಾಳೆ. ಎಲ್ಲವೂ ವಾರಕ್ಕೆ ಒಮ್ಮೆ ಬಂದರೆ ಚೆನ್ನ, ದಿನಾ ಅದೇ ಆಗಿಹೋದರೆ ಬೋರ್ ಹೊಡೆಸುತ್ತದೆ.

ಕಾರ್ಯಕ್ರಮದ ಉದ್ದೇಶ ಒಳ್ಳೆಯದೇ ಇರಬಹುದು, ಬಾಲ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವುದು ನಿಜಕ್ಕೊ ಶ್ಲಾಘನೀಯ. ಎಲ್ಲವೂ ಹಾಡು ಹಾಡುವುದಕ್ಕೆ ಏಕೆ ಕೇಂದ್ರೀಕೃತವಾಗಿದೆ? ಏಕೆ ಇದೇ ವಾಹಿನಿಗಳು ಚಿತ್ರ ಬರೆಯುವುದಕ್ಕೆ, ಕತೆ, ಕವನ ಹೇಳುವುದಕ್ಕೆ, ವೀಣೆ, ತಬಲ, ಕೊಳಲು ಇನ್ನು ಅನೇಕ ಸಂಗೀತ ಸಾಧನಗಳನ್ನು ನುಡಿಸುವುದಕ್ಕೆ, ಏಕಪಾತ್ರಾಭಿನಯ ಮಾಡುವುದಕ್ಕೆ ದೊಡ್ಡ ಮಟ್ಟದಲ್ಲಿ ವೇದಿಕೆ ಏಕೆ ಎರ್ಪಡಿಸಬಾರದು? ಟೀವಿ ವಾಹಿನಿಗಳನ್ನ ನಡೆಸುವವರಿಗೆ ಇದೂ ಕೂಡ ಹೊಳೆಯುವುದಿಲ್ಲವೆ?

ಎಲ್ಲರೂ ಒಂದಕ್ಕೆ ಏಕೆ ಗಂಟು ಬೀಳುತ್ತಾರೆ?

ಇವರುಗಳು ಕಾರ್ಯಕ್ರಮಗಳನ್ನು ನಡೆಸುವ ಉದ್ದೇಶ ಜನರನ್ನು ತಮ್ಮ ವಾಹಿನಿಯೆಡೆಗೆ ಸೆಳೆಯುವುದೇ ಆಗಿದೆ. ಅದಕ್ಕೆ ಯಶಸ್ಸಿನ ಜಾಡನ್ನೇ ಹಿಡಿಯುತ್ತಾರೆ. ಇನ್ನೂ ಪ್ರವರ್ಧಮಾನಕ್ಕೆ ಬರದ ಹಾಡುಗಾರರೆಲ್ಲರೂ ಆಗಲೇ ಈ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿಬಿಟ್ಟಿದ್ದಾರೆ, ಅವರಿಗೆ ಸಂಗೀತವಾದರೂ ಎಷ್ಟರ ಮಟ್ಟಿಗಿದೆ? ಹಾಡುವ ಮಕ್ಕಳನ್ನು ಅಳೆಯಲು ನಿಜವಾಗಲು ಅವರಿಗೆ ಅರ್ಹತೆ ಇದೆಯೆ? ಸುಮ್ಮನೆ ಸ್ಟಾರ್ ಗಳನ್ನು ತಂದು ಕೂರಿಸಿರುತ್ತಾರೆ. ಈ ಕಾರ್ಯಕ್ರಮಗಳಿಗೆ ಬರುವವರೆಲ್ಲರೂ Celebrityಗಳೇ ಆಗಿರುತ್ತಾರೆ. ಇನ್ನು ತೀರ್ಪು ನೀಡುವ ಸಂಧರ್ಭಗಳಲ್ಲಿ ಎಲ್ಲ ವಾಹಿನಿಗಳಲ್ಲೂ ಒಂದೇ ರೀತಿಯ ಸಂಭಾಷಣೆಗಳು. "ಇಲ್ಲಿ ಯಾರೂ ಸೋತಿಲ್ಲ, ಯಾರೂ ಗೆದ್ದಿಲ್ಲ, ಎಲ್ಲರೂ ಚೆನ್ನಾಗಿಯೇ ಹಾಡಿದ್ದಾರೆ, ನನಗೆ ತೀರ್ಪು ನೀಡುವುದಕ್ಕೆ ನಿಜವಾಗಲೂ ಕಷ್ಟವಾಗುತ್ತಿದೆ" ಎಂದು ಹೇಳುತ್ತಲೆ ಒಬ್ಬರಿಗೆ ಪ್ರಶಸ್ತಿ ನೀಡುತ್ತಾರೆ.

ಇನ್ನು ಕೊನೆ ಸುತ್ತಿನಲ್ಲಿ ಪ್ರಶಸ್ತಿ ಕಳಕೊಂಡ ಮಕ್ಕಳು ಅಳುವುದು ಸಹಜ. ಆದರ ಅವರ ಪೋಷಕರೂ ಸಹ ಅಳುತ್ತಿರುತ್ತಾರೆ. feelings ಅರ್ಥ ವಾಗುತ್ತದೆ ನನಗೆ ಆದರೂ ಹೀಗೆ ಅಳುವ ಮಕ್ಕಳ ಜೊತೆ ಅಳುವುದು ಉಚಿತವೆ? ಬಂದು ಮಕ್ಕಳ ಮೈದಡವಿ ಸಮಾಧಾನ ಮಾಡುವುದು ಬಿಟ್ಟು. ಒಮ್ಮೊಮ್ಮೆ ರೇಗಿ ಹೋಗುತ್ತದೆ ಇವೆಲ್ಲವನ್ನು ನೋಡಿದರೆ. ಚಾನೆಲ್ ಬದಲಾಯಿಸಿಬಿಡುತ್ತೇನೆ.

ಬರೀ ಇಂತಹ ಕಾರ್ಯಕ್ರಮಗಳನ್ನೇ ಮಾಡುವ ಬದಲು Discovery, National Geographic, Animal Planet, History ಚಾನೆಲ್ ನಲ್ಲಿ ಬರುವ ಕೆಲವು ಒಳ್ಳೆಯ ಕಾರ್ಯಕ್ರಮಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಪ್ರಸಾರ ಮಾಡಬಾರದೇಕೆ?? ಇನ್ನಾದರೂ ಪ್ರಮುಖ ವಾಹಿನಿಗಳು ಒಂದೇ ತೆರನಾದ ಕಾರ್ಯಕ್ರಮಗಳಿಗೆ ಜೋತು ಬೀಳದೆ ಬೇರೆಡೆಗೆ ಗಮನ ನೀಡಿದರೆ ಒಳಿತು.

"ಪಾಡವಾ ತೀಯಗಾ ಕಮ್ಮನಿ ಒಕ ಪಾಟ..."

ಮುಳ್ಳಯ್ಯನಗಿರಿ

ಕಡೇ ಘಳಿಗೆಯ ನನ್ನ ನಿರ್ಧಾರ ಒಂದು ಸುಂದರ ಚಾರಣ ಮಾಡಲು ಅನುವುಮಾಡಿಕೊಟ್ಟಿತು. ಹೋಗದೆ ಬರೀ ಚಿತ್ರಗಳನ್ನು ನೋಡಿದ್ದರೆ ಖಂಡಿತವಾಗಿ ಪರಿತಪಿಸುತ್ತಿದ್ದೆ, ಹೋಗಲಾಗಲಿಲ್ಲವೆಂದು. ಇಂತಹ ಒಂದು ಸುಂದರವಾದ ಸ್ಥಳಕ್ಕೆ ಕರೆದುಕೊಂಡು ಹೋದ ಅರುಣನಿಗೆ Thanks -u... ಇದುವರೆಗೂ ನಾನು ಮಾಡಿದ best trek ಇದು.


ಈ ಬಾರಿ ನಾವು ಹೋಗುತ್ತಿದ್ದ ಸ್ಥಳ "ಮುಳ್ಳಯ್ಯನಗಿರಿ", ಒಟ್ಟೂ ಐದು ಜನ, ನಾನು, ಅರುಣ್, ಶ್ರೀನಿವಾಸ್, ವಿವೇಕ್ ಮತ್ತು ನಾರಾಯಣ್. ನಾನು, ಅರುಣ್,ವಿವೇಕ್ ಬೆಂಗಳೂರಿನಿಂದ ಹೊರಟೆವು, ಶ್ರೀನಿವಾಸ್ ಮಂಗಳೂರಿನಿಂದ ಹೊರಟಿದ್ದ, ನಾರಯಣ್ ಮೈಸೂರಿನಿಂದ. ಎಲ್ಲರೂ "ಚಿಕ್ಕಮಗಳೂರು" ನಲ್ಲಿ ಭೇಟಿಯಾಗುವುದೆಂದು ನಿರ್ಧರಿಸಿದ್ದೆವು. ಶ್ರೀನಿವಾಸನು ಬೆಳಗಿನ ಜಾವ ಒಂದೂವರೆಗೆಲ್ಲ ಚಿಕ್ಕಮಗಳೂರು ಬಸ್ ನಿಲ್ದಾಣ ತಲುಪಿದ್ದುದ್ದರ ಕಾರಣ ಬಸ್ ನಿಲ್ದಾಣದ ವಲಯನ್ನು ಚೆನ್ನಾಗಿ "ಬೀಟ್" ಹಾಕಿದ್ದ, ಒಂದಷ್ಟು ಫೋಟೋಗಳೂ ಸಹ ಕ್ಲಿಕ್ಕಿಸಿದ್ದ. ಬೆಂಗಳೂರಿನಿಂದ ಹೊರಟ ನಾವು ಮೂವರೂ ಅವನನ್ನು ಮತ್ತು ನಾರಯಣನನ್ನು ಬೆಳಿಗ್ಗೆ 5:30ಗೆ ಅಲ್ಲೇ ಇದ್ದ ಹೋಟೆಲಿನಲ್ಲಿ ಉಪ್ಪಿಟ್ಟು ಸಮೇತರಾಗಿ ಎದುರುಗೊಂಡೆವು. ಶ್ರೀನಿವಾಸ ಬಂದ ಕೂಡಲೇ "ನಮ್ಮಗೆ ಕಾಯದೆ ತಿನ್ನಕ್ಕೆ ಕೂತಿದ್ದೀರೇನೋ" ಎಂದು ಹುಸಿ ಕೋಪವನ್ನು ಹೊರಸೂಸಿದ.
ಅಲ್ಲಿಂದ ಹೊರಬಂದು "ಬಾಬಾಬುಡನ್ ಗಿರಿ" ಬಸ್ ಗಾಗಿ ಬಂದು ನಿಂತೆವು. ಅಲ್ಲೇ ಒಂದು ಬಸ್ ಇನ್ನು 15-20ನಿಮಿಷದೊಳಗೆ ಹೊರಡಲು ಸಜ್ಜಾಗಿ ನಿಂತಿತ್ತು. ನಾವು ನಮ್ಮ ಟ್ರೆಕ್ ಬ್ಯಾಗುಗಳ ಸಮೇತ ಒಳ ಹೊಕ್ಕೆವು. ಕಂಡಕ್ಟರ್ ಮಹಾಶಯ ಬಂದು ನಿಮ್ಮ ಬ್ಯಾಗುಗಳನ್ನು ಟಾಪ್ ನಲ್ಲಿ ಹಾಕಿ ಎಂದ. ಒಬ್ಬರನ್ನೊಬ್ಬರು ಮುಖ ನೋಡಿ, ಬ್ಯಾಗ್ ಬಿದ್ದು ಗಿದ್ದು ಹೋದರೆ ಏನು ಗತಿ ಮತ್ತೆ ಮೇಲೆ ಬಹಳ ಒದ್ದೆ ಇದ್ದುದರ ಕಾರಣ ಈ ಬಸ್ ಮಿಸ್ ಮಾಡಲು ನಿರ್ಧರಿಸಿದೆವು. ಆದರೂ ಮನಸು ಒಪ್ಪದೆ ಅವರನ್ನು ಮುಂದಿನ ಬಸ್ ಬಗ್ಗೆ ವಿಚಾರಿಸಿದಾಗ 8:30ಗೆ ಎಂದ. ಲೇಟ್ ಆಗುತ್ತದೆಂದು ಮತ್ತೊಮ್ಮೆ ಬಸ್ ಬಳಿ ಬಂದು ನಿಂತೆವು, ಮತ್ತೊಮ್ಮೆ ಕಂಡಕ್ಟರ್ ಮಹಾಶಯ ಬಂದು ಬಸ್ ಟಾಪ್ ನಲ್ಲಿ ಕುಳಿತುಕೊಳ್ಳಿ ಎಂದ. ಬಸ್ ಟಾಪ್ ನಲ್ಲಿ ಪಯಣ ಎಂದು ತಿಳಿದ ಕೂಡಲೇ ಮಜವಾಗಿರುತ್ತದೆಂದು ಎಲ್ಲರೂ ಈ ಬಸ್ ಅನ್ನು ಮಿಸ್ ಮಾಡದಿರಲು ನಿರ್ಧರಿಸಿ ಮೇಲೆ ಹತ್ತಿ ಕುಳಿತೆವು. ಬಸ್ ಟಾಪ್ ಮೇಲೆ ಇದೇ ನನ್ನ ಮೊದಲ ಪಯಣ. ಬೆಳಗಿನ ಜಾವ ಆರುಗಂಟೆ ಹೊತ್ತಿನಲ್ಲಿ ಘಾಟ್ section ನಲ್ಲಿ ಒಂದೂವರೆಗಂಟೆ ಪಯಣ, ಯಾರಿಗುಂಟು ಯಾರಿಗಿಲ್ಲ. ಶ್ರೀನಿವಾಸನು ಬಸ್ ದಿಕ್ಕಿಗೆ ಮುಖ ಮಾಡಿದ್ದರೆ ನಾವೆಲ್ಲ ವಿರುದ್ದ ದಿಕ್ಕಿಗೆ ಮುಖ ಮಾಡಿ ಕುಳಿತಿದ್ದೆವು!!..ಅರುಣ ಬಿದ್ದುಕೊಂಡಿದ್ದ. ಶ್ರೀನಿವಾಸ ಬಸ್ ಹೋಗುತ್ತಿದುರ ದಿಕ್ಕಿಗೆ ಮುಖ ಮಾಡಿದ್ದಿದುರರಿಂದ ಯಾವುದಾದರು ಮರದ ಟೊಂಗೆಗಳು ನಮ್ಮ ತಲೆಗಳಿಗೆ ತಾಗುವಂತಿದ್ದರೆ ಎಚ್ಚರಿಸುತ್ತಿದ್ದ. ಆತ ಹೇಳಿದ ಕೂಡಲೇ ಶಿರಬಾಗಿಸಿಬಿಡುತ್ತಿದ್ದೆವು. ಹಿತವಾದ ಚಳಿಯಿತ್ತು. ಸುತ್ತಲೂ ಪರ್ವತ ತಪ್ಪಲು, ಪಯಣ ಅತ್ಯದ್ಭುತವಾಗಿತ್ತು, ಅನೇಕ ಫೋಟೊಗಳನ್ನು ಶ್ರೀನಿವಾಸನ ಮೊಬೈಲು ಮತ್ತು ವಿವೇಕನ ಕ್ಯಾಮೆರಾ ಸೆರೆ ಹಿಡಿದವು. ಮುಂಜಾವಿನ ಆಹ್ಲಾದಕರ ಪಯಣ ಮುಗಿಸಿ "ಬಾಬಾಬುಡನ್ ಗಿರಿ" ತಲುಪಿದೆವು. ಅಲ್ಲೇ "ದತ್ತ ಪೀಠ" ಇರುವುದೆಂದು ತಿಳಿಯಿತು, ಹೋಗಲಿಲ್ಲ. ಈ ದತ್ತ ಪೀಠದ ವಿಶೇಷತೆ ಎಂದರೆ ಹಿಂದೂಗಳು ಮತ್ತೆ ಮುಸ್ಲಿಮರು ಒಟ್ಟಿಗೆ ಭೇಟಿಕೊಡುವ ಸ್ಥಳ ಎಂದು ಅರುಣ ವಿವರಿಸಿದ.
ಅಲ್ಲಿಂದ "ಮಾಣಿಕ್ಯಧಾರ" ವನ್ನು ನೋಡಲು ಹೊರಟೆವು. ಸುಮಾರು 20ನಿಮಿಷಗಳ ನಡಿಗೆ. ಅಲ್ಲಿ ನೀರು ಬೀಳುವುದು ನೋಡಲು ಚೆನ್ನಾಗಿಯೇನೊ ಇದೆ, ಸಣ್ಣದಾಗಿ ಝರಿಯಂತೆ ಒಂದು ಬಂಡೆ ಮೇಲಿನಿಂದ ಬೀಳುತ್ತಿರುತ್ತದೆ. ಆದರೆ ಅದಕ್ಕೆ ಭೇಟಿ ನೀಡುವ ಜನಗಳು ಮಾತ್ರ ಆ ಜಾಗವನ್ನು ಗಬ್ಬೆಬ್ಬಿಸಿಬಿಟ್ಟಿದ್ದಾರೆ. ಸ್ನಾನ ಮಾಡಿದ ಮೇಲೆ ಅಲ್ಲೆ ಬಟ್ಟೆ ಬಿಸಾಕಬೇಕಂತೆ, ಒಳ್ಳೆ ತಿಪ್ಪೆಯಂತಿತ್ತು, ಒಂದಷ್ಟು ದುರ್ನಾತ ಬೆರೆ ಸೂಸುತ್ತಿತ್ತು, ಬೇಗ ಅದನ್ನು ವೀಕ್ಷಿಸಿ ಅಲ್ಲಿಂದ ಆದಷ್ಟು ಬೇಗ ಹೊರಡಲನುವಾದೆವು. ನಮ್ಮ ಪ್ಲಾನ್ ಇದ್ದದ್ದು ಮಾಣಿಕ್ಯಧಾರದಿಂದ ಬಾಬಾಬುಡನ್ ಗಿರಿ ಗೆ ವಾಪಸ್ ಬಂದು ಅಲ್ಲಿಂದ ಬಸ್ ಹಿಡಿದು ಸ್ವಲ್ಪ ದೂರ ಕ್ರಮಿಸಿ ಅಲ್ಲಿಂದ ಮುಳ್ಳಯ್ಯನಗಿರಿಗೆ ಚಾರಣ ಮಾಡುವೆದೆಂದಿದ್ದೆವು. ಮಾಣಿಕ್ಯಧಾರಾದ ಹೋಟೆಲೊಂದರಲ್ಲಿ ವೆಜಿಟಬಲ್ ಪಲಾವ್ ತಿಂದ ಮೇಲೆ ಮುಂಚೆ ಮಾಡಿದ್ದ ಪ್ಲಾನ್ ಅನ್ನು ಅಲ್ಲಿಗೆ ಡ್ರಾಪ್ ಮಾಡಲು ನಿರ್ಧರಿಸಿದೆವು. ಹೋಟೆಲಿನಲ್ಲಿ ಮನಸೋಇಚ್ಚೆ ತಿಂದ ಮೇಲೆ ಮಾಣಿಕ್ಯಧಾರದಿಂದಲೇ ಮುಳ್ಳಯ್ಯನಗಿರಿ ಗೆ ಚಾರಣಗೈಯ್ಯಲ್ಲು ನಿರ್ಧರಿಸಿದೆವು. ವೆಜಿಟಬಲ್ ಪಲಾವ್ ಬುತ್ತಿ ಕಟ್ಟಿಸಿಕೊಂಡು ಮುಳ್ಳಯ್ಯನಗಿರಿ ಕಡೆಗೆ ಹೊರಟೆವು.
ಅಲ್ಲಿಂದ ಸುಮಾರು 5-6 ಗಂಟೆಗಳ ಚಾರಣ ಮಾಡಿದೆವು, ಅದರ ವಿವರಣೆ ಕೊಡಲು ಪದಗಳಿಗೆ ತಡಕಾಡುತ್ತಿದ್ದೇನೆ, ಅಷ್ಟು ಸೊಗಸು, ಅಷ್ಟು ಸುಂದರ, ಅಷ್ಟು ರಮಣೀಯ, ಅಷ್ಟು ರುದ್ರ. ಸುತ್ತಮುತ್ತಲೆಲ್ಲವೂ ಹಸಿರುಮಯ. ನಮ್ಮ ಸದ್ದು ಬಿಟ್ಟು ಮಿಕ್ಕೆಲ್ಲವೂ ಶಾಂತ. ಬಹಳ ಆಹ್ಲಾದಕರವಾಗಿತ್ತು, ಬಿಸಿಲೂ ಕೂಡ ಅಷ್ಟಾಗಿರಲಿಲ್ಲ, ಮೋಡಗಳ ಮೇಲಿದ್ದೆವು. ಅಲ್ಲೆ ಪಕ್ಕದ ಬೆಟ್ಟದಲ್ಲಿ ಮಳೆಯಾಗುತ್ತಿತ್ತು, ಅತ್ತ ಕಡೆಯಿಂದ ಬೀಸುವ ಗಾಳಿ ಆ ಮಳೆಯ ಹನಿಗಳನ್ನು ನಮ್ಮ ಮೇಲೆ ಸಿಂಪಡಿಸುತ್ತಿದ್ದವು. ಸ್ವರ್ಗಸದೃಶವೇ ಸರಿ. ಒಂದಾದ ಮೇಲೊಂದು ಬೆಟ್ಟಗಳನ್ನು ಹತ್ತುತ್ತಿದ್ದೆವು, ಹಾಗೆ ಇಳಿಯುತ್ತಿದ್ದೆವು. ದೂರದಲ್ಲಿ ನಮ್ಮ ಗಮ್ಯ ಮುಳ್ಳಯ್ಯನಗಿರಿ ಕಾಣುತ್ತಲಿತ್ತು. ಹಿತವಾದ ತಂಗಾಳಿಯಲ್ಲಿ ನಿಧಾನವಾಗಿ ಸಾಗುತ್ತಿದ್ದೆವು. ಮಧ್ಯ ಒಂದು ಬೆಟ್ಟ ಬಹಳ ಕಡಿದಾಗಿತ್ತು, ಸ್ವಲ್ಪ ಆಯ ತಪ್ಪಿದರೂ ಪ್ರಪಾತಕ್ಕೆ ಬೀಳುವ ಸಂಭವ. ಹಿಂದೆಂದೂ ಈ ರೀತಿಯ ಸಾಹಸಗಳನ್ನು ಮಾಡಿರಲಿಲ್ಲ, ನಾವೆಲ್ಲರೂ ಆ ಕಡಿದಾದ ಜಾಗಗಳಲ್ಲಿ ಹತ್ತಿ ಇಳಿಯುತ್ತಿದ್ದು ನಮ್ಮ ಮನೆಯವರು ನೋಡಿದ್ದರೆ ನನ್ನ ಮುಖಸ್ತುತಿ ಮಾಡುತ್ತಿದ್ದರು. ಬಹಳ ರೋಮಾಂಚಕಾರಿಯಾಗಿತ್ತು, ಸಿಕ್ಕಾಪಟ್ಟೆ "ಎಂಜಾಯ್" ಮಾಡಿದೆ. ಎಲ್ಲ ಚಾರಣಗಳಲ್ಲೂ ಈ ರೀತಿಯ ಕಡಿದಾದ ಪ್ರದೇಶಗಳಿರಬೇಕು, ಮೈಯೆಲ್ಲ ಕಣ್ಣಾಗಿ ಬಹಳ ಎಚ್ಚರ ವಹಿಸಿ ಹತ್ತಿ ಇಳಿಯುವುದರಲ್ಲಿ ಬಹಳ ಥ್ರಿಲ್ಲ್ ಇರುತ್ತದೆ. ಶ್ರೀನಿವಾಸನ ಮೊಬೈಲು ಮತ್ತೆ ವಿವೇಕನ ಕ್ಯಾಮೆರ ಎಡೆಬಿಡದೆ ಅಲ್ಲಿ ಇದ್ದುದುವೆಲ್ಲದನ್ನು ದಾಖಲಿಸುವ ಯತ್ನದಲ್ಲಿದ್ದವು. ಅರುಣ ಮತ್ತೆ ಶ್ರೀನಿವಾಸ ಕನ್ನಡ ಹಾಡುಗಳನ್ನು ಆಂಗ್ಲೀಕರಿಸುವ ಯತ್ನದಲ್ಲಿದ್ದರು, ವಿವೇಕ್ ಹೇಳುವಂತೆ ಈ ಹಾಡುಗಳನ್ನೆಲ್ಲ ಬರೆದ ಸಾಹಿತಿಗಳು ಇವರೀರ್ವರ ಆಂಗ್ಲೀಕರಣ ಕೇಳಿದ್ದರೆ ಅಲ್ಲಿದ್ದ ಪರ್ವತವೊಂದರಿಂದ ಸಾಲು ಸಾಲಾಗಿ ಧುಮುಕುತ್ತಿದ್ದರು. ದಾರಿ ಉದ್ದಕ್ಕೂ ಎಡೆಬಿಡದೆ ಇವರೀರ್ವರ ಆಂಗ್ಲೀಕರಣ ಸಾಗುತ್ತಲೇ ಇತ್ತು. ಇನ್ನೇನು ಮುಳ್ಳಯ್ಯನಗಿರಿ ತಲುಪುವುದಕ್ಕೆ 10-15ನಿಮಿಷಗಳು ಇರುವಾಗ ಮಳೆ ಶುರುವಾಯಿತು. ಹಿಂದೆಂದೂ ಮಳೆಯಲ್ಲಿ ಚಾರಣ ಮಾಡಿರಲಿಲ್ಲ, ದಣಿದ ದೇಹಕ್ಕೆ ಮಳೆ ನೀರು ಬಿದ್ದಾಗ ಆಗುವ ಆನಂದ ವರ್ಣನಾತೀತ. ಬಾಟಲಿಗಳಲ್ಲಿ ತಂದ ಕುಡಿಯುವ ನೀರು ಖಾಲಿಯಾಗಿತ್ತು, ಮಳೆ ನೀರಿಗೆ ಬಾಯ್ತೆರೆದು ದಾಹ ನೀಗಿಸಿಕೊಳ್ಳುವ ಯತ್ನ ಮಾಡಿದೆ. ನಾನು , ವಿವೇಕ್ ಮತ್ತು ನಾರಯಣ್ ಮುಳ್ಳಯ್ಯನಗಿರಿ ತುದಿಯನ್ನು ಮೊದಲು ಮುಟ್ಟಿದೆವು, ಅಲ್ಲಿ ಯಾರೋ ನಿಂತಿದ್ದವರು ನಾವು ಬೆಟ್ಟ ಹತ್ತಿ ಬಂದಿದ್ದು ನೋಡಿ "ಎಲ್ಲಿಂದ ಬರುತ್ತಿದ್ದೀರಿ" ಎಂದರು..
ನಾನು "ಬಾಬಾ ಬುಡನ್ ಗಿರಿಯಿಂದ" ಎಂದೆ..
"ಹೇಗೆ" ಎಂದರು..
"ನಡಕೊಂಡು" ಎಂದೆ..

ಇಬ್ಬರೂ ಕಣ್ಣಗಲಿಸುತ್ತ ನಿಂತಿದ್ದರು.....ಅಷ್ಟರಲ್ಲಿ ಅರುಣ ಮತ್ತೆ ಶ್ರೀನಿವಾಸ ಒಡಗೂಡಿದರು...ಮುಂದೆ ಸಾಗಿದೆವು..
ಬೆಟ್ಟದ ಮೇಲೆ ಸಣ್ಣ ದೇವಸ್ಥಾನ ವಿದೆ, ಅದರ ಅರ್ಚಕರು ಅರುಣನಿಗೆ ಪರಿಚಯ, ಅವರ ಮನೆಯಲ್ಲೇ ಉಳಿದುಕೊಳ್ಳಲು ಅವಕಾಶವಿತ್ತರು. ಸಮಯ ಸುಮಾರು ಐದಿರಬಹುದು, ಮುಖ ತೊಳೆದು ಅವರು ಮಾಡಿಕೊಟ್ಟ ಅತ್ಯದ್ಭುತವಾದ ಕಾಫಿ ಕುಡಿದೆವು.. ಅಹಾ ಸೂಪರ್ ಕಾಪಿ...

ಸೂರ್ಯಾಸ್ತವನ್ನು ವೀಕ್ಷಿಸಿ ಮತ್ತೆ ಒಳಗೆ ಬಂದು ಕುಳಿತಿದ್ದೆವು, ಏನು ಮಾಡಬೇಕೆಂದು ತೋಚಲಿಲ್ಲ, ಮತ್ತೊಂದು ಸುತ್ತು ಕಾಪಿ ಕೇಳಲಾ ಎಂದು ಅರುಣನಿಗೆ ಕೇಳಿದೆ..

"ಹೋಗೊ ನಾಚಿಕೆ ಎಲ್ಲಾ ಬಿಟ್ಟು ಕೇಳು, ಏನು ಅನ್ಕೊಳಲ್ಲ ಮಾಡ್ಕೊಡ್ತಾರೆ" ಅಂದ...

ಹಾಗೆ ಅಳುಕುತ್ತಲೇ ಕೇಳಿದೆ.."ಆಂಟೀ ಇನ್ನು ಸ್ವಲ್ಪ ಕಾಫಿ ಬೇಕಿತ್ತು" ಎಂದು..

ಪಾಪ ಮಾಡಿಕೊಟ್ಟರು ಬೇಸರ ಪಟ್ಟಿಕೊಳ್ಳದೆ...ಮತ್ತೊಂದು ಸುತ್ತು ಕಾಫಿ ಸಮಾರಾಧನೆ ಸಾಗಿತು.

ಎಂಟೂವರೆಗೆಲ್ಲ ಊಟ ಮಾಡಿ ಮತ್ತೊಂದು ಸುತ್ತು ಹಾಕಲು ಹೊರ ಬಂದೆವು.

ಹೊರಗಡೆ ತುಂಬಾ ಚಳಿಯಿತ್ತು. ಆ ದೇವಸ್ಥಾನದ ದ್ವಾರದಲ್ಲಿ ಸ್ವಲ್ಪ ಜಾಗವಿತ್ತು, ಅಲ್ಲೆ ಟೆಂಟ್ ಹಾಕೋಣವೆಂದುಕೊಂಡೆವು, ಆದರೆ ರಾತ್ರಿ ಮಳೆ ಶುರುವಾದರೆ ತೊಂದರೆಯಾಗುವುದೆಂದು ಯೋಚಿಸಿ ಒಳಗಡೆಯೆ ಮಲಗಲು ಹೊರಟೆವು.
ರಾತ್ರಿ ಹೊತ್ತು ಆಕಾಶದ ತುಂಬಾ ಚುಕ್ಕಿಗಳ ಚಿತ್ತಾರ, ಎಲ್ಲೆಲ್ಲೂ ನಕ್ಷತ್ರಗಳು, ಹಿತವಾದ ಗಾಳಿ, ಆಗಾಗ್ಗೆ ಮಂಜು ಮುಸುಕುತ್ತಿತ್ತು, ನಗರ ಜೀವನ ಜಂಜಡಗಳಿಂದ ತಪ್ಪಿಸಿಕೊಂಡು ತಿಂಗಳಿಗೆ ಒಮ್ಮೆಯಾದರೂ ಇಲ್ಲಿಗೆ ಬರಬೇಕೇನಿಸುತ್ತಿತ್ತು. ಬೆಟ್ಟದ ಮೇಳಿಂದ ನೋಡಿದರೆ ಚಿಕ್ಕಮಗಳೂರು ಕಾಣಿಸುತ್ತಿತ್ತು, ಝಗಮಗಿಸುವ ದೀಪಗಳು, ಇಡೀ ಊರಿಗೆ ಕರೆಂಟ್ ಹೋದರೆ ನೋಡಲು ಹೇಗಿರುತ್ತದೆ ಎಂದು ಆಲೋಚಿಸುತ್ತ ಬಂದು ಮಲಗಿದೆ.

ಬೆಳಿಗ್ಗೆ ಅರುಣ ಎಬ್ಬಿಸಿದ್ದು ನೆನಪಿದೆ, "ಎಳೊ ಟೈಮ್ ಆಯ್ತು" ಎಂದು..ಆತನ ಮಾತಿಗೆ ಕಿವಿಗೊಡದೆ ಮತ್ತೆ ತಿರುಗಿ ಮಲಗಿಬಿಟ್ಟೆ.
ಆಮೇಲೆ ತಿಳಿಯಿತು ಸೂರ್ಯೋದಯಕ್ಕೆ ಎಬ್ಬಿಸಿದರು ಎಂದು..ಎಬ್ಬಿಸುವಾಗ ಒಬ್ಬರೂ ಹೇಳಲಿಲ್ಲ ಸೂರ್ಯೋದಯಕ್ಕೆ ಹೋಗುತ್ತಿದ್ದೆವೆಂದು, Hopeless fellows..
ನಾನು ಮತ್ತೆ ನಾರಾಯಣ್ ಸೂರ್ಯೋದಯವನ್ನು ಮಿಸ್ ಮಾಡಿದೆವು..

ಮುಂಜಾವಿನ ಕಾರ್ಯಗಳನ್ನು ಮುಗಿಸಿ ತಿಂದು ತಿಂದು ಮತ್ತೆ ಚಿಕ್ಕಮಗಳೂರಿಗೆ ಹೊರಟೆವು, downhill trek. ಯಾಕೋ ಕಾಲು ಹಿಡಿದುಕೊಂಡಿತ್ತು, ಇಳಿಯಲು ತುಸು ಕಷ್ಟವಾಗುತ್ತಿತ್ತು. ಬಹಳ ಸುಸ್ತಾಗುತ್ತಿತ್ತು ಕೂಡ.. ಕಾಫಿ ಏಸ್ಟೇಟ್ ನಡುವೆಯೆಲ್ಲ ಹಾದು ಹೋದೆವು. ಮಧ್ಯ ಮಧ್ಯ ಸಿಕ್ಕ ಸಣ್ಣ ಝರಿಗಳಿಂದ ನೀರು ಕುಡಿಯುತ್ತಾ, ದಾರಿ ಹುಡುಕುತ್ತ ಸಾಗುತ್ತಿದ್ದೆವು. ಮತ್ತೆ ಶ್ರೀನಿವಾಸ ಮತ್ತೆ ಅರುಣ ಆಂಗ್ಲೀಕರಣ ಶುರು ಹಚ್ಚಿಕೊಂಡಿದ್ದರು. ಸ್ವಲ್ಪ ದೂರ ನಡೆದು ಮುಖ್ಯರಸ್ತೆಗೆ ಬಂದು ಒಬ್ಬೊಬ್ಬರು ರಸ್ತೆಯ ಇಕ್ಕೆಲಗಳಲ್ಲಿ ಕುಳಿತುಬಿಟ್ಟೆವು, ಯಾವುದಾದರೂ ಗಾಡಿ ಬಂದರೆ ಹೋಗೋಣವೆಂದು. ಐದು ನಿಮಿಷ ಕಳೆಯುವುದರೊಳಗೆ ಲಗ್ಗೇಜ್ ಆಟೋ ನಮ್ಮನ್ನು ಹತ್ತಿಸಿಕೊಂಡಿತು, ಅದರಲ್ಲೆ ಮತ್ತೊಂದು ಫೋಟೋ ಸೆಷನ್ ಮುಗಿಸಿ ಚಿಕ್ಕಮಗಳೂರಿಗೆ ಬಂದೆವು...ಸಮಯ 12ಗಂಟೆ.

ಮಧ್ಯಾನ್ಹದ ಊಟ ಮುಗಿಸಿ ಎಲ್ಲರೂ ಬೀಳ್ಕೊಂಡೆವು. ಶ್ರೀನಿವಾಸ ಮಂಗಳೂರಿನ ಬಸ್, ನಾರಯಣ್ ಮೈಸೂರಿನ ಬಸ್ ಹತ್ತಿದರು. ನಾವು ಬೆಂಗಳೂರಿನ ಬಸ್ ಹತ್ತಿ ಕುಳಿತೆವು. ಸಂಜೆ 7ಕ್ಕೆ ಬೃಹತ್ ಬೆಂಗಳೂರಿಗೆ ಯಾವುದೇ ತೊಂದರೆಯಿಲ್ಲದೆ ತಂದು ಹಾಕಿತು ರಾಜಹಂಸ.

ನಮ್ಮ ನಮ್ಮ ಮನೆಗಳಿಗೆ ಬಂದು ಬೀಳಲು BMTC ಸಹಾಯ ಮಾಡಿತು. ಹೀಗೆ ಮುಗಿದಿತ್ತು "ಮುಳ್ಳಯ್ಯನಗಿರಿ" ಚಾರಣ.

ಸರಿಯಾಗಿ ಒಂದು ವರ್ಷವಾಗಿತ್ತು ನಾನು ಎರಡು ದಿನದ ಚಾರಣ ಮಾಡಿ, ಅದು ಮುಳ್ಳಯ್ಯನಗಿರಿ ಚಾರಣದೊಂದಿಗೆ ಮುಗಿಯಿತು. ಅದೇ ಬೆಂಗಳೂರು, ಅದೇ ಕಟ್ಟಡಗಳು, ಅದೇ traffic ಕಿರಿಕಿರಿ ಅದೇ ಆಫೀಸಿನ ಕೆಲಸದಿಂದ ಬೇಸೆತ್ತುಹೋಗಿದ್ದ ನನಗೆ ಸಿಕ್ಕಾಪಟ್ಟೆ relief ;-) ಕೊಟ್ಟ ಟ್ರೆಕ್ ಇದು. ಇದುವರೆಗೂ ಮಾಡಿದ best trek. ನನ್ನ ಜೊತೆಗೂಡಿದ ಎಲ್ಲರಿಗೂ ವಂದನೆಗಳು. ಈ ಚಾರಣದ ಹೆಚ್ಚಿನ ಫೋಟೊಗಳಿಗಾಗಿ ಕೆಳಕೊಟ್ಟಿರುವ ಮೈಲ್ ಗೆ ಮೈಲ್ ರವಾನಿಸುವುದು.