ಒಂದು ಪೇಜಿನ ಕತೆಗಳು....

Sunday, May 24, 2009

ಪೇಜ್ - 1
ನನ್ನ ಮೊಟ್ಟ ಮೊದಲ ಸಣ್ಣ ಕತೆ ಇದು, ಅದರಲ್ಲೂ ಒಂದೇ ಪೇಜಿರಬೇಕೆಂದು ನಿರ್ಭಂದ ಹಾಕಿಕೊಂಡಿದ್ದೇನೆ. ಇದು ನನ್ನ ಬಾಳಗೆಳತಿ ದಿವ್ಯಾಳಿಗೆ ಅರ್ಪಿತ.

ಮುರಳಿ ರಾತ್ರಿ ಬಹಳ ಹೊತ್ತು ಬಿಕ್ಕಿ ಬಿಕ್ಕಿ ಅತ್ತು ಹಾಗೆ ಮಲಗಿದ್ದ. ಅವನ ಕಣ್ಣೀರಿಗೆ ದಿಂಬು ತೋಯ್ದುಹೋಗಿದ್ದವು. ಕಣ್ಣೆಲ್ಲಾ ಕೆಂಪು. ಮುಂಜಾನೆ ಎದ್ದೊಡನೆಯೇ ಅಮ್ಮನಿಗೆ ಸ್ಪೆಶಲ್ ಕ್ಲಾಸ್ ಇದೆ ಎಂದು ೮ಗಂಟೆಗೆ ಹೊತ್ತಿಗೆ ರೆಡಿ ಆಗಿ ಮನೆ ಇಂದ ಹೊರಬಂದ. ಅಪ್ಪನಿಗೆ ಹೇಳಬೇಕೂ ಅನಿಸಲಿಲ್ಲ. ನೆನ್ನೆ ರಾತ್ರಿ ಆದದ್ದಾದರೂ ಏನು ?

ಮುಂದಿನ ವಾರವೇ ಅವನ ಹುಟ್ಟುಹಬ್ಬವಿತ್ತು, ಅದಕ್ಕಾಗಿ ಬಟ್ಟೆ ಕೊಳ್ಳಲು ಅಕ್ಕನ ಜೊತೆಗೂಡಿದ್ದ, ಅಮ್ಮ ಅಕ್ಕನ ಕೈಗೆ ದುಡ್ಡು ಕೊಟ್ಟು ಸರಿಯಾಗಿ ಖರ್ಚು ಮಾಡಿ, ಒಂದು ಪ್ಯಾಂಟು, ಶರ್ಟು ಅಷ್ಟೇ ಎಂದು ಹೇಳಿ ಕಳುಹಿಸಿದ್ದರು. ಜಯನಗರದ ಅಂಗಡಿಗಳಲ್ಲಿ ಸಾಕಷ್ಟು ಎಡತಾಕಿದರೂ ಮುರಳಿಗೆ ಒಪ್ಪಿಗೆಯಾಗುವಂತಹ ಬಟ್ಟೆಗಳು ಸಿಗಲೇ ಇಲ್ಲ, ನಡೆದು ನಡೆದು ಸುಸ್ತಾಗಿ ಗಣೇಶ ಫ್ರೂಟ್ ಜೂಸ್ ಸೆಂಟರಿಗೆ ಬಂದಾಗ, ಅದರ ಪಕ್ಕದಲ್ಲಿದ್ದ Wrangler ಮಳಿಗೆ ಮೇಲೆ ಕಣ್ಣು ಬಿತ್ತು. ಅಕ್ಕ ಎಷ್ಟೇ ಬೇಡವೆಂದರೂ ಅಕ್ಕನನ್ನೂ ಪೀಡಿಸಿ ಒಂಡು ಕಡು ನೀಲಿ ಬಣ್ಣದ ಜೀನ್ಸ್ ಒಂದನ್ನು ಕೊಂಡೇ ಬಿಟ್ಟ ಮುರಳಿ ಸಾವಿರದೈನೂರು ತೆತ್ತು. ಕೊಂಡದ್ದೇನೋ ಕೊಂಡಾಯಿತು, ಮನೆಯಲ್ಲಿ ಏನೆನ್ನುವರೋ ಎನ್ನುವ ಭಯದಲ್ಲೇ ಮನೆಗೆ ಬಂದರು ಅಕ್ಕ ತಮ್ಮ. "ಅಮ್ಮ Wrangler ಒಳ್ಳೇ ಬ್ರಾಂಡ್ ಅಮ್ಮ,ಈ ಜೀನ್ಸ್ ಇದ್ಯಲ್ಲ, ಇನ್ನು ಮೂರು ವರ್ಷ ಬಾಳಿಕೆ ಬರುತ್ತೆ, ನೋಡು ನಂದು ಬೇರೆ ಪ್ಯಾಂಟ್ಸ್ ಎಲ್ಲಾ ಆಗ್ಲೆ ಹರ್ದೋಗ್ಬಿಟ್ಟಿದೆ" ಎಂದ. ಆದರೂ ಅಮ್ಮ "ನಿನಗೆ ದುಡ್ಡಿನ ಬೆಲೆ ಗೊತ್ತಿಲ್ಲವೋ, ಏನೋ ಕೊಂಡು ತಂದಿದೀಯ, ನಿಮ್ಮಪ್ಪ ಬೈದರೆ ನಂಗೊತ್ತಿಲ್ಲ, ಬರೀ ಪ್ಯಾಂಟ್ ಮಾತ್ರ ತಂದಿದೀಯ, ಶರ್ಟ್ ಕೂಡ ಇಲ್ಲ" ಎಂದು ಸುಮ್ಮನಾದರು. ಮಗಳನ್ನೂ ಸರಿಯಾಗಿ ಮಾತನಾಡಿಸಲಿಲ್ಲ. ಆಮೇಲೆ ಅಡಿಗೆ ಮನೆಗೆ ಬಂದಾಗ.."ನೀನಾದ್ರು ಹೇಳ್ಬಾರ್ದೇನೆ" ಎಂದರು.

ಅಪ್ಪ ಬಂದ ಕೂಡಲೇ ಟೀಪಾಯಿಯ ಮೇಲೆ ಇದ್ದ ಕವರ್ ಕಣ್ಣಿಗೆ ಬಿತ್ತು. ಏನಿದು ಎಂದು ನೋಡಿದಾಗ ಪ್ಯಾಂಟು. ಅಷ್ಟರಲ್ಲಾಗಲೇ ಮುರಳಿಯ ಎದೆ ಹೊಡೆದುಕೊಳ್ಳುತ್ತಿತ್ತು. ರೂಮಿನ ಬಾಗಿಲ ಬಳಿ ಬಂದು ನಿಂತ, ಏಷ್ಟು ಕೊಟ್ಟೆಯೋ ಎಂದರು, ಐನೂರಕ್ಕಿಂತ ಜಾಸ್ತಿ ಕೊಟ್ಟಿಲ್ಲ ತಾನೇ ಎಂದು ಮರುಪ್ರಶ್ನೆ ಎಸೆದರು. "ಇಲ್ಲಪ್ಪ ಇದು ಬ್ರಾಂಡೆಡ್ ಪ್ಯಾಂಟು, ಮೂರು ವರ್ಷ ಬಾಳಿಕೆ ಬರುತ್ತೆ, ಸಾವಿರ ಕೊಟ್ಟೆ" ಎಂದು ಉಗುಳು ನುಂಗುತ್ತಲೇ ಹೇಳಿದ. ಹೊರಗಿಂದ ಆಗ ತಾನೆ ದಣಿದು ಬಂದಿದ್ದ ಅವರಪ್ಪ ಯಾವ ಮುನ್ಸೂಚನೆಯೂ ಇಲ್ಲದೆಯೇ ಬಯ್ಯಲು ಶುರು ಮಾಡಿದರು. "ಜವಾಬ್ದಾರಿ ಅನ್ನೋದು ನಿಂಗೆ ಸ್ವಲ್ಪಾನಾದ್ರು ಇದ್ಯಾ?? ಏನೋ ಗೊತ್ತು ನಿಂಗೆ ದುಡ್ಡಿನ ಬೆಲೆ? ಲಫಂಗ. ಅಷ್ಟೋಂದ್ ದುಡ್ಡು ಕೊಟ್ಟು ಪ್ಯಾಂಟ್ ಹಾಕ್ಕೊಳ್ಳೊ ಶೋಕಿ ಏನೋ ನಿಂಗೆ? ಹೊರಗಡೆ ಹೋಗಿ ನಾಲ್ಕಾಣೆ ಸಂಪಾದಿಸ್ಕೊಂಡು ಬಾ ನೋಡೋಣ, ಆಗ ಗೊತ್ತಾಗುತ್ತೆ ನಿನ್ ಯೋಗ್ಯತೆ......................"
ಹಾಗೆ ಸುಮಾರು ಅರ್ಧ ತಾಸಿಗಿಂತಲೂ ಹೆಚ್ಚಿಗೆ ಸಾಗಿತು ಬಯ್ಗುಳ, ಅಕ್ಕನಿಗೂ, ಅಮ್ಮನಿಗೂ ಬಯ್ಗುಳದ ಪಾಲಿತ್ತು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಕಣ್ಣಲ್ಲಿ ನೀರು ತುಂಬಿಕೊಂಡು ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡು ಬಿಟ್ಟ. ರಾತ್ರಿ ಊಟ ಕೂಡ ಮಾಡಲು ಬರಲಿಲ್ಲ ಮುರಳಿ, ಹಸಿವಾಗಿರಲಿಲ್ಲವೆಂದಲ್ಲ, ಕರೆಯಲು, ಒಲೈಸಲು ಮನೆಯಲ್ಲಿ ಯಾರೊಬ್ಬರು ಬರದಿದ್ದು ಅವನಿಗೆ ಮತ್ತಷ್ಟು ನೋವುಂಟು ಮಾಡಿತ್ತು.

ಜೇಬಿನಲ್ಲಿದ್ದು ಬರೀ ನೂರು ರುಪಾಯಿ. ಪಾಸ್ ಇದ್ದುದರಿಂದ ಕಾಲೇಜಿನ ಬಸ್ ಬಿಟ್ಟು ಮೆಜೆಸ್ಟಿಕ್ ಬಸ್ ಹತ್ತಿಬಿಟ್ಟ. ಮನೆ ಬಿಟ್ಟು ಹೋಗಬೇಕೆಂದು ರಾತ್ರಿಯೇ ನಿರ್ಧರಿಸಿದ್ದ. ನಾನು ದುಡ್ಡು ದುಡಿದೇ ಮನೆಗೆ ಬರುವೆನೆಂದು ಹೊರಟಿದ್ದ. ಅಂತಹ ನೂರಾರು ಪ್ಯಾಂಟುಗಳು ಕೊಳ್ಳಬೇಕು ನಾನು. ಯಾವನೊಬ್ಬನ ಹಂಗು ನನಗೆ ಬೇಡವೆಂಬ ನಿರ್ಧಾರಕ್ಕೆ ಬಂದಿದ್ದ. ಮಧ್ಯ ಸಿರ್ಸಿ ಸರ್ಕಲಿನಲ್ಲಿ ಇಳಿದು ಅಲ್ಲೆ ಗೂಡಂಗಡಿಯಲ್ಲಿ ಕಾಫಿ-ಬನ್ನು ತಿಂದ. ಮನಸಿಗೇನೋ ಉಲ್ಲಾಸ. ಕೈಕಾಲುಗಳಿಗೆಂತಹುದೋ ಉತ್ಸಾಹ. ನಾನಿನ್ನು ಸ್ವತಂತ್ರನಾಗಿಬಿಟ್ಟೆ ಎಂದು. ಎದೆಯುಬ್ಬಿಸಿ ನಡೆಡಾಡಿದ. ನಡೆದೇ ಮಜೆಸ್ಟಿಕ್ ತಲುಪುತ್ತೇನೆಂದು ಅದರೆಡೆಗೆ ದಾಪುಗಾಲು ಹಾಕತೊಡಗಿದ. ಇನ್ನು ಮುಂದೆ ಕಾಲೇಜಿಲ್ಲ, ಮನೆಯಲ್ಲಿ ಓದು ಓದು ಎನ್ನುವ ಕಿರಿ ಇಲ್ಲ, ಅಪ್ಪನ ಗಲಾಟೆ ಇಲ್ಲ. ಸರಿ ಎಲ್ಲಿಗೆ ಹೋಗುವುದು, ಹೆಚ್ಚು ತಡ ಮಾಡದೆ, ಯೋಚಿಸದೆ ಒಂದೇ ಉತ್ತರ ಕೊಟ್ಟಿತು ಮನಸು "ಮುಂಬಯಿ" ಎಂದು. ಅಲ್ಲಿಗೆ ಹೋಗಿ ಎಂತೆಂತಹವರೋ ಏನೇನೇನೋ ಆಗೋಗಿದ್ದಾರೆ, ಶಾರುಕ್ ಖಾನ್ ದಿಲ್ಲಿಯಿಂದ ಬಂದವ, ಈಗ ಹೇಗಾಗಿದ್ದಾನೆ? ಸಮುದ್ರದ ಮುಂದೆ ನಿಂತು ಇಡೀ ಮುಂಬಯಿಯನ್ನು ಆಳುತ್ತೇನೆಂದು ಹೇಳಿದನಂತೆ, ನಾನು ಹಾಗೆಯೇ ಹೇಳಬೇಕು, ಆದಷ್ಟು ಬೇಗ ಮುಂಬಯಿ ಸೇರಬೇಕು. ಅವನಿಗಾಗಿ ಸಮುದ್ರ ಕಾದಿದೆಯೇನೊ ಎಂದು ಚಡಪಡಿಸತೊಡಗಿದ. ನಾನು ಅಲ್ಲಿಗೇ ಹೋಗುತ್ತೇನೆ, ದೊಡ್ಡ ವ್ಯಕ್ತಿಯಾಗಿ ಮತ್ತೆ ಈ ಊರಿಗೆ ಕಾಲಿಡುತ್ತೇನೆ ಎಂದು ಮತ್ತೊಮ್ಮೆ ಧೃಡವಾಗಿ ನಿರ್ಧರಿಸಿದ.

ಮನೆ ಬಿಟ್ಟವರೆಲ್ಲರ ಇತಿಹಾಸ ಜೀಕುತ್ತಾ ನಡೆಯುತ್ತಿದ್ದ. ನಮ್ಮ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಜಿ.ಕೆ.ವೆಂಕಟೇಶ್ ಕೂಡ ಮನೆ ಬಿಟ್ಟವರ್‍ಏ. ಭಾರತ ರತ್ನ ಭೀಮ್ ಸೇನ್ ಜೋಶಿಯವರೂ ಕೂಡ ಸಂಗೀತ ಕಲಿಯಲೆಂದು ಹದಿನಾಲ್ಕನೆಯ ವಯಸ್ಸಿನಲ್ಲಿ ಮನೆ ಬಿಟ್ಟರಂತೆ, ಹಾಗೆ ನೋಡಿದರೆ ನನಗೆ ಆಗಲೇ ಇಪ್ಪತ್ತು ವರ್ಷವಾಗಿದೆ, ಬಹಳ ಲೇಟ್ ಮಾಡಿದೆ ಎಂದು ಅನಿಸಿತು ಮುರಳಿಗೆ. ಅವರೆಲ್ಲರಂತೆ ದೊಡ್ಡ ವ್ಯಕ್ತಿಯಾಗಬೇಕೆಂದು ದಾರಿಯುದ್ದಕ್ಕೊ ಹಗಲುಗನಸು ಕಾಣುತ್ತ ಬಂದ. ಇರುವುದು ನೂರೇ ರುಪಾಯಿ ಹೇಗೆ ತಲುಪುವುದು ಮುಂಬಯಿಯನ್ನು. ರೈಲು ಹತ್ತಿ ಟಿ.ಟಿ. ಬರುವ ವೇಳೆಗೆ ಟಾಯ್ಲೆಟ್ಟಿನಲ್ಲಿ ಕೂತು ಬಿಡುವ ತಂತ್ರ ಹೂಡಿದ. ರಾತ್ರಿ ಸರಿಯಾಗಿ ನಿದ್ದೆ ಇಲ್ಲದುದರ ಕಾರಣ ನಡೆದು ನಡೆದು ಸುಸ್ತಾದ. ಅಷ್ಟರಲ್ಲಿ ಕಾರ್ಪೊರೇಶನ್ ಬಳಿ ಒಂದು ಪಾರ್ಕು ಕಂಡ. ಒಳಗೆ ಹೋಗಿ ಒಂದು ಮರದ ನೆರಳಿನಲ್ಲಿ ಹಾಗೆ ನೆಲಕ್ಕೆ ಒರಗಿಕೊಂಡ. ಸೊಂಪಾದ ನಿದ್ರೆಗೆ ಜಾರಿದ. ಕೆಂಪೇಗೌಡ ರಸ್ತೆಯಲ್ಲಿ ಕೆಟ್ಟದಾಗಿ ಹಾರ್ನ್ ಮಾಡುತ್ತ ಮೆಲ್ಲಗೆ ತೆವಳುತ್ತಿದ್ದ ವಾಹನಗಳು ಮುರಳಿಯ ನಿದ್ರೆಗೆ ಭಂಗ ತರಲಿಲ್ಲ.

ಅಮ್ಮ ಭೋರಿಟ್ಟು ಅಳುತ್ತಿದ್ದಳು ,ಮಾತು ಮಾತಿಗೂ ಎದೆಯೊಡೆದುಕೊಳ್ಳುತ್ತಿದ್ದಳು. ಸರಿಯಾಗಿ ಮನೆಯವರೆಲ್ಲ ಊಟ, ನಿದ್ರೆ ಮಾಡಿ ಒಂದು ವಾರದ ಮೇಲಾಗಿತ್ತು. ಮುರಳಿಯ ಪತ್ತೆಯೇ ಆಗಿರಲಿಲ್ಲ. ಎಲ್ಲಿ ಹೋದ ?, ಏನಾದ ? ಯಾರೊಬ್ಬರಿಗೂ ಸುಳಿವಿರಲಿಲ್ಲ. ಅವರ ಸ್ನೇಹಿತರನ್ನು ಸಂಪರ್ಕಿಸಿದರೂ ಏನೂ ಪ್ರಯೋಜನವಾಗಲಿಲ್ಲ. ಅದಾಗಲೇ ದಿನಪತ್ರಿಕೆಗಳಲ್ಲಿ , ನ್ಯೂಸ್ ನಲ್ಲಿ ಕಾಣೆಯಾಗಿದ್ದನೆಂದು ಪ್ರಕಟಣೆ ಕೊಟ್ಟಿದ್ದರೂ ಸಹ..ಉಹೂ ಏನೂ ಪ್ರಯೋಜನವಾಗಿರಲಿಲ್ಲ. ಅವರಪ್ಪನಿಗೆ ದಿಕ್ಕೇ ತೋಚದಂತಾಗಿತ್ತು. ಕೊನೆಯ ಪ್ರಯತ್ನವೆಂಬಂತೆ ದೇಶದ ಪ್ರಮುಖ ನಗರಗಳಲ್ಲಿ ಪ್ರಕಟಣೆ ಹೊರಡಿಸಿದ್ದರು, ಅದೂ ದಿನಪತ್ರಿಕೆಯ ಫ್ರಂಟ್ ಪೇಜಿನಲ್ಲಿ. ಮುಂಬೈ ಪೋಲಿಸರು ಒಂದು ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾಡುತ್ತಿದ ಮುರಳಿಯನ್ನು ಹಿಡಿದು ಬೆಂಗಳೂರಿಗೆ ಕರೆತಂದರು. ಮನೆಗೆ ಕಾಲಿರಿಸಿದ ಕೂಡಲೆ ಅಮ್ಮ ಒಡಿಬಂದು ಅವನನ್ನು ತಬ್ಬಿಕೊಂಡು "ಎಲ್ಲಿ ಹೋಗ್ಬಿಟ್ಟಿದ್ದೆ ಕಂದಾ, ಯಾಕ್ ಹಿಂಗ್ ಮಾಡ್ದೆ? ಏನ್ ಕಮ್ಮಿ ಮಾಡಿದ್ವಿ ನಿಂಗಿಲ್ಲಿ, ನಿನ್ ಬಿಟ್ಟು ನಾನ್ ಬದುಕಿರ್ತೀನೇನೊ? ಒಂದಾದಮೇಲೊಂದು ಪ್ರಶ್ನೆ ಕೇಳುತ್ತಲೇ ಅವನನ್ನು ಜಗ್ಗಾಡುತ್ತಿದ್ದರು.

ಧಿಗ್ಗನೆ ಎದ್ದು ಕುಳಿತ ಮುರಳಿ. ಕಣ್ಣೆಲ್ಲಾ ಮಂಜು ಮಂಜು. ಸೂರ್ಯ ಅದಾಗಲೇ ತನ್ನ ದಿನಗೆಲಸವನ್ನು ಮುಗಿಸಿ ಮನೆ ಸೇರಿದ್ದ. ಕೆಂಪೇಗೌಡ ರಸ್ತೆಯಲ್ಲಿ ವಾಹನಗಳು ಗಿಜುಗುಡುತ್ತಲೇ ಇದ್ದವು. ಅಲ್ಲೇ ಎದುರಿಗೆ ಇದ್ದ ಹೋಟೆಲಿನಲ್ಲಿ ಇಡ್ಲಿ, ವಡೆ ತಿಂದು ಕಾಫಿ ಕುಡಿಯಲು ಶುರು ಮಾಡಿದ. ಬಿದ್ದ ಕನಸಿನಿಂದ ಇನ್ನೂ ಚೇತರಿಸಿಕೊಂಡಿರಲಿಲ್ಲ, ಸಮಯ ನೋಡಿಕೊಂಡ, ಆಗಲೇ ರಾತ್ರಿ ಎಂಟು ಗಂಟೆಯಾಗಿದೆ. ಅಮ್ಮ ಗಾಭರಿ ಆಗಿರುತ್ತಾಳೆ, ಇಷ್ಟೊತ್ತಿಗೆ ಎಷ್ಟು ಬಾರಿ ಅತ್ತಳೊ? ಅಕ್ಕ ಪಾಪ ಅವಳು ತಾನೆ ಏನು ಮಾಡಿಯಾಳು, ಅಮ್ಮನನ್ನು ಸಂತೈಸುತ್ತಿರಬಹುದು , ಅಪ್ಪ ಆಗಲೇ 'ಸಂಜೆವಾಣಿ' ಪತ್ರಿಕೆಗೆ ಹೊರಟಿರಬಹುದು ನನ್ನದೊಂದು ಫೋಟೊ ತೆಗೆದುಕೊಂಡು. ದೂರದರ್ಶನದಲ್ಲೊಮ್ಮೆ " ಹೆಸರು ಮುರಳಿ ,ಗೋದಿ ಬಣ್ಣ, ಕೋಲು ಮುಖ, ವಯಸ್ಸು ಇಪ್ಪತ್ತು, ಜಯನಗರದ ನಿವಾಸಿಯಾದ ಇವನು ಇಂದು ಸಂಜೆಯಿಂದ ಕಾಣುತ್ತಿಲ್ಲ" ಎಂಬ ಪ್ರಕಟಣೆ ಹೊರಬಿದ್ದಿರಬಹುದು. ಯಾಕೋ ಹೋಟೆಲಿನಲ್ಲಿದ್ದ ಜನರೆಲ್ಲ ತನ್ನನ್ನೇ ನೋಡುತ್ತಿದ್ದಾರೆನಿಸಿತು.

ಅಲ್ಲಿಂದ ನೇರವಾಗಿ ಮನೆಗೆ ಹೋಗುವ ಬಸ್ಸನ್ನೇರಿದ. ದಾರಿಯುದ್ದಕ್ಕೊ ತಾನು ಕೆಟ್ಟ ನಿರ್ಧಾರ ಮಾಡಿದೆ. ಇಲ್ಲೇ ಈಸಬೇಕು, ಇಲ್ಲೇ ಜಯಿಸಬೇಕು ಎಂದು ದಾಸರನ್ನು ನೆನೆದ. ಮನೆಗೆ ತಾನೊಬ್ಬನೇ ಗಂಡು ಹುಡುಗ, ನಾನು ಹೀಗ ಬೇಜವಾಬ್ದಾರಿಯಿಂದ ಹೊರಟು ಬಿಟ್ಟರೆ ನಾಳೆ ಅಕ್ಕನಿಗೆ ಮದುವೆ ಮಾಡಿಸುವವರು ಯಾರು? ಜನರೆಲ್ಲ ಅಪ್ಪ ಅಮ್ಮ ನ ಬಗ್ಗೆ ಏನೆಲ್ಲಾ ಮಾತನಾಡುತ್ತಾರೆ? ಅವನ ಮನಸಿಗೆ ಬಂದ ಪ್ರಶ್ನೆಗಳಿಗೆ ಅವನೇ ಉತ್ತರ ಕಂಡುಕೊಳ್ಳಲು ವಿಫಲನಾದ.

ಬಸ್ ಇಳಿದು ಮನೆ ಗಲ್ಲಿಗೆ ಕಾಲಿಡುತ್ತಲೇ ಬೆವರಲಾರಂಭಿಸಿದ, ಎಲ್ಲರೂ ಇವನನ್ನೇ ನೋಡುತ್ತಿದ್ದಾರೆನಿಸಿತು. ಯಾರೋ ಇವನೆಡೆಗೆ ಕೈತೋರಿಸಿದ ಹಾಗಾಯಿತು, ತಿರುಗಿ ನೋಡುವ ಧೈರ್ಯ ಆಗಲಿಲ್ಲ. ಮನೆಯ ಮೆಟ್ಟಿಲೇರತೊಡಗಿದ, ಅಮ್ಮ ನನ್ನನ್ನು ನೋಡಿದ ಕೂಡಲೇ ಅಪ್ಪಿಕೊಂಡು ಅಳುತ್ತಾಳೆ, ಅವಳನ್ನು ಸಮಾಧಾನ ಪಡಿಸುವುದು ಹೇಗೆ ?, ಅಪ್ಪ ಇನ್ನು ಮೇಲೆ ನಿನಗೆ ಬಯ್ಯುವುದಿಲ್ಲವೋ ಎಂದು ಹೇಳುತ್ತಾರೆ ಎನ್ನುವ ಹೊತ್ತಿಗೆ ಮನೆ ಬಾಗಿಲ ಬಳಿ ಬಂದ. ಕರೆಗಂಟೆ ಒತ್ತುವ ಒಳಗಾಗಿ ಬಾಗಿಲು ತೆರೆದುಕೊಂಡಿತು, ಅಪ್ಪ ಎದುರಿಗೆ ಬಂದು "ಲಫಂಗ, ಮನೆಗೆ ಎಷ್ಟೊತ್ ಗೆ ಬರೋದು, ಎಲ್ಲಿ ತಿರುಗಾಡೋಕೆ ಹೋಗಿದ್ದೆ ?, ಸ್ವಲ್ಪ ಕೂಡ ಜವಾಬ್ದಾರಿ ಇಲ್ಲ ನಿಂಗೆ, ನಿಂಗ್ಯಾವತ್ತಿಗೆ ಬುದ್ದಿ ಬರತ್ತೋ ನಾ ಬೇರೆ ಕಾಣೆ..." ಎನ್ನುತ್ತಲೇ ಅವರು ಎಂದಿನ ಪ್ರವರ ಮುಂದುವರೆಸಿದರು. ಹಾಲಿನವರೆಗೂ ಬಂದು ಅಮ್ಮನಿಗಾಗಿ ಅಡುಗೆ ಮನೆಯೆಡೆಗೆ ಬಗ್ಗಿ ನೋಡಿದ, ಅಮ್ಮ ಚಪಾತಿ ಲಟ್ಟಿಸುತ್ತಿದ್ದಳು.

ದಿಂಬು ತನಗಾಗಿ ಕಾದಿದೆ ಎಂದು ರೂಮಿನೆಡೆಗೆ ನಡೆದ.

ಒಂದೇ ಪೇಜೆಂದು ನಿರ್ಭಂದ ಹಾಕಿಕೊಂಡಿದ್ದರೂ ಹೇಗೊ ನನ್ನ ಅಂಕೆ ಮೀರಿ ಕತೆ ಬೆಳೆದು ಬಿಡ್ತು. ಆದ್ರೂ "ಒಂದು ಪೇಜಿನ ಕತೆಗಳು" ಟೈಟಲು ಇಷ್ಟ ಆಗಿರುವುದರಿಂದ ಇದನ್ನ ಹಾಗೆ ಉಳಿಸಿಕೊಳ್ಳುತ್ತೇನೆ, ಮುಂದಿನ ಸಾರಿ ಒಂದೇ ಪೇಜು ಬರೆಯುವುನೆಂಬ ಆಶಯದೊಂದಿಗೆ..

ಕುಪ್ಪಳಿ ಪ್ರವಾಸ ...

Wednesday, May 20, 2009

ಸುಮಾರು ಎರಡೂವರೆ ವರ್ಷಗಳ ಹಿಂದಿನ ಒಂದು ಪ್ರವಾಸ ಕಥನವಿದು. 2006ರಲ್ಲಿ "ಕುಪ್ಪಳಿ"ಗೆ RHM ವತಿಯಿಂದ ಹೋಗಿದ್ದೆ. ಅಂದಿನಿಂದ ಇಂದಿನವರೆಗೂ ಅರುಣ ಕೇಳುತ್ತಲೇ ಇದ್ದ. "ಕುಪ್ಪಳಿ ಆರ್ಟಿಕಲ್ ಎಲ್ಲೋ ?" ಎಂದು... ಸರಿ ಸುಮಾರು ಒಂದೂವರೆ ವರ್ಷದಿಂದ ಶ್ರೀಕಾಂತನೂ ಕೂಡ ಅರುಣನ ರಾಗಕ್ಕೆ ತಾಳ ಹಾಕಲನುವಾದ. "ಕುಪ್ಪಳಿ ಆರ್ಟಿಕಲ್ ಬರ್ದಿಲ್ಲಾ ಅಂದ್ರೆ ಕಾಫಿಯಲ್ಲಿ ವಿಷ ಬೆರ್ಸ್ಕೊಟ್ಬಿಡ್ತೀನಿ" ಎಂದು. ಹೆದರಿಸಿ, ಗದರಿಸಿ, ಗಡುವುಗಳನ್ನು ವಿಧಿಸಿ, ಕೊನೆಗೆ ನನ್ನಿಂದಲೇ ಗಡುವುಗಳನ್ನು ಪಡೆದುಕೊಂಡು ಕೊನೆಗೆ ನನ್ನನ್ನು ತದಕುವ ಮಟ್ಟಿಗೆ ಬಂದಿದ್ದರು. ಇವರಿಬ್ಬರ ಗೊಡ್ಡು ಬೆದರಿಕೆಗೆ ಸೆಡ್ಡು ಹೊಡೆದು ನನ್ನ ಪಾಡಿಗೆ ಆರಮಾಗಿ ಇದ್ದುಬಿಟ್ಟೆ, ಅನೇಕ ಬಾರಿ ಪ್ರಯತ್ನ ಪಟ್ಟಿದ್ದೆನಾದರೂ ಏಕೋ ಏನೋ ಕುಪ್ಪಳಿ ಲೇಖನವನ್ನು ಬರೆಯಲು ಸಾಧ್ಯವಾಗಲೇ ಇಲ್ಲ. ಇಂದು ಬರೆಯಲು ಕೂತಿದ್ದೇನೆ, ಬರೆದು ಮುಗಿಸುತ್ತೇನೆಂಬ ಆಶಯದೊಂದಿಗೆ.

ಹಾಗಾಗಿ ಈ ಲೇಖನವನ್ನು ಅರುಣ ಮತ್ತು ಶ್ರೀಕಾಂತನಿಗೆ ಅರ್ಪಿಸುತ್ತಿದ್ದೇನೆ. ಇಂದಿಗೆ ನಾನು "ಕುಪ್ಪಳಿ ಆರ್ಟಿಕಲ್" ಮುಕ್ತ.

ಬ್ಯಾಕ್ ಡ್ರಾಪ್ : ಇಸವಿ 2006ರ ಅಕ್ಟೋಬರ್ ತಿಂಗಳಲ್ಲಿ ಅರುಣ ನ ಜೊತೆ RHM ವತಿಯಿಂದ "ಕುಪ್ಪಳಿ" ಪ್ರವಾಸ ಕೈಗೊಂಡಿದ್ದೆ. ಅದರ ಪ್ರವಾಸ ಲೇಖನವಿದು.

ಶುಕ್ರವಾರ ರಾತ್ರಿ 9:30ಹೊತ್ತಿಗೆ ಕೇಯೆಸ್ಸಾರ್ಟೀಸಿ ಬಸ್ ನಿಲ್ದಾಣದಲ್ಲಿರಲು ಅರುಣ ಹೇಳಿದ್ದ. ಸಮಯಕ್ಕೆ ಸರಿಯಾಗಿ ನಿಲ್ದಾಣದಲ್ಲಿದ್ದೆ. ತದನಂತರ ಒಬ್ಬೊಬ್ಬರಾಗಿ ನಿಲ್ದಾಣಕ್ಕೆ ಬಂದರು. ನಾವೆಲ್ಲ ಒಟ್ಟಿಗೆ 10 ಜನರಿದ್ದೆವು.(ಅರುಣ, ನಾನು, ವಿಜಯಾ ಅಕ್ಕ, ಅನ್ನಪೂರ್ಣ, ಡೀನ್, ಗೋವಿಂದರಾಜ್, ಮಿಥುನ್, ಮತ್ತೆ ನಾಲ್ವರು ನಾರ್ತಿಗಳು). ಅರುಣನ ಹೊರತಾಗಿ ಬೇರೆಯವರು ಯಾರೆಂದರೆ ಯಾರ ಪರಿಚಯವೂ ಇರಲಿಲ್ಲ.

ಮುಂಜಾವು 6ರ ಹೊತ್ತಿಗೆ ತೀರ್ಥಹಳ್ಳಿಯಲ್ಲಿ ಕಾಫಿ ಗೆ ಇಳಿಸಿದ್ದಿರ ನೆನಪು. ಅಲ್ಲಿ ಕಾಫಿ ಕುಡಿದು ಸುಮಾರು ಏಳರ ಹೊತ್ತಿಗೆ ಕುಪ್ಪಳಿ ತಲುಪಿದೆವು. ಮೊಟ್ಟ ಮೊದಲ ಬಾರಿಗೆ ಅಂತಹ ಸ್ಥಳವೊಂದನ್ನು ನೋಡಿದ್ದೆ. ಸುತ್ತೆಲ್ಲಾ ಬೆಟ್ಟಗಳು, ಅದರ ಮಧ್ಯೆ ಪುಟ್ಟ ಊರು. ಕುಪ್ಪಳಿಗೆ ಬಸ್ ನಿಲ್ದಾಣವೆಂಬುದೇ ಇಲ್ಲ !! ಬಸ್ ಸೀದಾ ನಿಮ್ಮನ್ನು "ಕುವೆಂಪು" ಮನೆವರೆಗೂ ಕರೆದು ಕೊಂಡು ಹೋಗಿ ಬಿಡುತ್ತದೆ. ಇತರೆ ಊರುಗಳಲ್ಲಿರುವಂತೆ ಜನಜಂಗುಳಿ ಇಲ್ಲ, ಆಮೇಲೆ ತಿಳಿಯಿತು, ಹಿಂದೆ ಇಡೀ ಊರಿಗೆ ಕುವೆಂಪು ಅವರದೊಬ್ಬರದೇ ಮನೆ ಇತ್ತು.ಅವರ ಆಸ್ಥಿ, ಜಮೀನು, ವಾಟ್ ಎವೆರ್ ಇಡೀ ಊರಾಗಿತ್ತು. ಇಂದಿಗೆ ಇಡೀ ಹಳ್ಳಿಯ ಒಡೆಯರಾಗಿರುವ ಪರಂಪರೆ ಮುಗಿದಿದೆ ಎನಿಸುತ್ತದೆ. ಬಸ್ ನಿಲ್ಲಿಸಿದ ಜಾಗದಲ್ಲಿ ಒಂದು ಹೋಟೆಲು, ಇಡೀ ಊರಿಗೆ (ಊರು ಅನ್ನುವ ಬದಲು ಹಳ್ಳಿ ಪದವೇ ಸೂಕ್ತವೆನಿಸುತ್ತೆ) ಅಲ್ಲ ಹಳ್ಳಿಗೆ ಅದೊಂದೇ ಹೋಟೆಲು. ಅದರ ಪಕ್ಕಕ್ಕೆ ಹೊರಳಿದರೆ ಕುವೆಂಪು ರವರ ಭವ್ಯ ದಿವ್ಯವಾದ ಮನೆ.

ಕುವೆಂಪು ರವ ಮನೆಯ ಬಗ್ಗೆ ಹೇಳಲೇಬೇಕು. ಸುತ್ತಲೂ ಹಸಿರು ತುಂಬಿದ ಪರ್ವತಗಳ ನಡುವೆ ಇರುವ ಈ ಮನೆಗೆ ಅದ್ಭುತವಾಗಿ ಕಾಣುತ್ತದೆ. ಕುಪ್ಪಳಿಯಿಂದ ಮರಳಿ ಬೆಂಗಳೂರಿಗೆ ಬಂದಾಗಲೂ ಅದೇ ಮನೆ ನನ್ನ ನೆನಪಿನಲ್ಲಿ ಬಳ ಕಾಲ ಉಳಿದಿತ್ತು. ಬಹಳ ದಿನಗಳ ಕಾಲ ಅದು ನನ್ನ ಕಂಪ್ಯೂಟರಿನ ಡೆಸ್ಕ್ ಟಾಪ್ ವಾಲ್ ಪೇಪರ್ ಆಗಿತ್ತು. ಅದರ ನಂತರ ಸಾಕಷ್ಟು ವೈಭವೋಪೇತ ಮನೆಗಳನ್ನು ನೋಡಿದ್ದೀನಾದಾರೂ ಕುವೆಂಪು ಮನೆಗೆ ಕುವೆಂಪು ಮನೆಯೇ ಸಾಟಿ. ಇಂದ್ರನ ಅಮರಾವತಿ ನಗರದಲ್ಲೂ ಇಂತಹ ಮನೆ ಸಿಗಲಾರದು ಎಂದರೆ ಉತ್ಪ್ರೇಕ್ಷೆ ಆಗಲಾರದು. ಒಮ್ಮೆ ನೋಡಿ ಬನ್ನಿ.
ಕುವೆಂಪು ಮನೆಯಿಂದ ಅನತಿ ದೂರದಲ್ಲಿದ್ದ ನಾವು ತಂಗಿದ್ದೆವು. ಸ್ನಾನಾದಿ ಕಾರ್ಯಾಗಳನ್ನು ಮುಗಿಸಿ ತಿಂಡಿ ತಿಂದು ಅಂದಿಗೆ ನನ್ನ ಎರಡನೇ ಟ್ರೆಕ್ಕಿಗೆ ಹೊರಟೆ. ನಮಗೊಬ್ಬ ಗೈಡ್ ಸಿಕ್ಕಿದ್ದರು. ಅವರ ಹಿಂದೆ ಹೊರಟೆವು. ಮತ್ತೆ ಕುವೆಂಪು ಮನೆ ಮುಂದೆ ಬಂದು ಅಲ್ಲಿಂದ ಹೊರಟೆವು. ಅಲ್ಲಿಂದ ಸುಮಾರು 3-4ಗಂಟೆಗಳ ಕಾಲ ಟ್ರೆಕ್ ಮಾಡಿದುದರ ನೆನಪು. ಅಲ್ಲೇ ಸುತ್ತಲಿದ್ದ ಬೆಟ್ಟವನು ಹತ್ತಿದೆವು. ಮೊಟ್ಟ ಮೊದಲ ಬಾರಿಗೆ 'ಜಿಗಣೆ' ಯಿಂದ ಕಚ್ಚಿಸಿಕೊಂಡಿದ್ದೆ. ಅಲ್ಲಲ್ಲಿ ಮಧ್ಯ ಕೂತು ಅದನ್ನು ತೆಗೆಯುವುದೇ ಕೆಲಸವಾಗಿತ್ತು. ಕಚ್ಚಿದಾಗ ಏನೂ ಅನ್ನಿಸದಿದ್ದು ಅದನ್ನು ಕಿತ್ತೊಗೆದ ಮೇಲೆ ಅದರ ಇಫೆಕ್ಟ್ ಇರುತ್ತಿತ್ತು. ಶೂ ಸಾಕ್ಸ್ ಎಲ್ಲ ರಕ್ತ ಮಯ.

ಚಾರಣ ಮುಗಿಸಿ ಬರುವ ವೇಳೆಗೆ ಸಂಜೆಯಾಗಿತ್ತು. ಮುಂದಿನ ಕಾರ್ಯಕ್ರಮವೇ ಕುವೆಂಪು ಮನೆ ದರುಶನ. ಮನೆ ಹೊರಗಡೆಯಿಂದ ನೋಡಿದಮೇಲಂತೂ ಆಗಲೇ ಒಳಗೆ ನೋಡಬೇಕೇಂಬ ಉತ್ಸಾಹ ನೂರ್ಮಡಿಗೊಂಡಿತ್ತು. ಹೆಚ್ಚು ಹೆಚ್ಚು ಪದಗಳು ನನಗೆ ಸಿಗುತ್ತಿಲ್ಲ ಮನೆಯನ್ನು ಬಣ್ಣಿಸಲು, ಇಲ್ಲವಾದರೆ ಆ ಮನೆಗೆ ನನ್ನ ಪದಗಳದ್ದೇ ಅಭಿಷೇಕ. ಕುವೆಂಪು ಉಪಯೋಗಿಸುತ್ತಿದ್ದ ವಸ್ತುಗಳನ್ನು ಎಲ್ಲ ಜೋಪಾನವಾಗಿ ಇಟ್ಟಿದ್ದಾರೆ, ಮನೆಯಾ ತುಂಬಾ ಮರಗೆಲಸ. ಇಂತಹ ಮನೆಗಳಿಗೆ "ಚೌಕಿ" ಮನೆಯೆಂದು ಕರೆಯುತ್ತಾರೇನೋ. ಜೋರಾಗಿ ಮಳೆ ಬರುತ್ತಿದ್ದರೆ ಅಲ್ಲಿ ಕೂತು ಮನೆಯವರೆಲ್ಲ ಅಥವಾ ಗೆಳೆಯರೊಡನೆ ಮಾತನಾಡುವ ಮಜವೇ ಬೇರೆ. ಅಡುಗೆ ಮನೆಯಲ್ಲಿ ಕುವೆಂಪುರವ 'ಮಲೆಗಳಲ್ಲಿ ಮದುಮಗಳು' ಕಾದಂಬರಿಯ ಸಾಲುಗಳನ್ನು ಅಂಟಿಸಿದುದ್ದು ಆಕರ್ಶಿಸಿತು. ಮನೆ ಎರಡು ಅಂತಸ್ತಿನಾಗಿದ್ದು ಮೊದಲನೇ ಮಹಡಿಯಲ್ಲಿ ಸ್ಟಡೀ ರೂಮಿತ್ತು. ಎಲ್ಲಕ್ಕಿಂತ ಇದು ನನಗೆ ಹೆಚ್ಚು ಇಷ್ಟವಾಯಿತು. ಕುವೆಂಪು ಅಲ್ಲಿ ಕೂತು ಎಷ್ಟು ಬರೆದರೋ?? ಎಷ್ಟು ಓದಿದರೊ?? ಅವೆಲ್ಲಕ್ಕೊ ಅಲ್ಲಿನ ಗೋಡೆಗಳೇ ಸಾಕ್ಷಿ. ಎರಡನೆ ಮಹಡಿಯಲ್ಲಿ ಕುವೆಂಪುರವರ ಹಸ್ತಪ್ರತಿಗಳನ್ನೊಳಗೊಂಡ ಪುಸ್ತಕಗಳನ್ನು ಇಟ್ಟಿದ್ದಾರೆ, ಮತ್ತೆ ಮನೆಯುದ್ದಕ್ಕೂ ಅನೇಕಾನೇಕ ಫೋಟೋಗಳಿಟ್ಟಿದ್ದರೆ. ಅಂದಿಗೆ ನಾನು ಇನ್ನೂ ತೇಜಸ್ವಿಯವರ ಯಾವುದೇ ಬರಹಗಳನ್ನು ಓದಿರಲಿಲ್ಲ !!

ಅದೇ ಗುಂಗಿನಿಂದ ಹೊರಬಂದು ಮನಸೋಯಿಚ್ಚೆ ಅನೇಕ ಫೋಟೋಗಳನ್ನು ಕ್ಲಿಕ್ಕಿಸಿದೆ. ತದನಂತರ ಕವಿಶೈಲದೆಡೆಗೆ ನಡೆದೆವು. ಕುವೆಂಪು ಮನೆಯಿಂದ ಮೇಲೆ ಹೊರಟು ಒಂದು ಕಿ.ಮೀ ಹಾದಿ ಸವೆಸಿದರೆ ಕವಿಶೈಲ ಸಿಗುತ್ತದೆ. ಕುವೆಂಪು ತೀರಿಕೊಂಡ ನಂತರ ತೇಜಸ್ವಿಯವರು ಇಟಾಲಿಯನ್ ವಾಸ್ತುವಿನಲ್ಲಿ ಅಲ್ಲಿ ಕೆಲಸ ಮಾಡಿಸಿದ್ದಂತೆ. ದೊಡ್ಡ ದೊಡ್ಡ ಕಲ್ಲುಗಳನ್ನು ನಿಲ್ಲಿಸಿದ್ದಾರೆ. ಅಲ್ಲೇ ಕುವೆಂಪು ರವರ ಸಮಾಧಿಯಿದೆ. ಅದರ ಸುತ್ತಮುತ್ತಲ್ಲೂ ನಿತ್ಯ ಹರಿದ್ವರ್ಣ ಕಾಡುಗಳು. ಎತ್ತಲಿಂದ ಎತ್ತ ನೋಡಿದರೂ ಹಸಿರೋ ಹಸಿರು.ಕುವೆಂಪೂರವರಿಗೆ ತುಂಬಾ ಇಷ್ಟವಾದ ಜಾಗವಂತೆ ಕವಿಶೈಲ. ಅವರ ಎಷ್ಟು ಬರಗಳಿಗೆ ಸ್ಪೂರ್ತಿಯೋ??
ಸೂರ್ಯನಿಗೆ ಬೀಳ್ಕೊಡುವುದಕ್ಕಾಗಿ ಅಲ್ಲೇ ಕವಿಶೈಲದ ಕಲ್ಲು ಬಂಡೆಗಳ ಮೇಲೆ ಮಲಗಿದೆವು. ಕತ್ತಲು ಕವಿಯುವುದರ ಒಳಗೆ ಗೂಡು ಸೇರಿಕೊಂಡೆವು.
ಮತ್ತೆ ಬೆಳಿಗ್ಗೆ ಸೂರ್ಯೋದಯಕ್ಕೆ ಹೋಗೋಣವೆಂದು ಅರುಣ ಹೇಳಿದ್ದ. ಅದಕ್ಕಾಗಿ ಬೇಗ ಎದ್ದು ಕವಿಶೈಲದ ಕಡೆಗೆ ಹೊರಟೆವು. ನಾವು ಸ್ವಲ್ಪ ಬೇಗ ಬಂದೆವು ಅನಿಸುತ್ತದೆ. ಸುತ್ತಲಿನ ಪರಿಸರ ನನಗೆ ನಿದ್ದೆಗೆ ಪ್ರ್‍ಏರೇಪಿಸಿತು. ನಿಸರ್ಗದ ತೆಕ್ಕೆಯಲ್ಲಿ ಸೊಂಪಾದ ನಿದ್ದೆ ತೆಗೆದೆ. ಇದರಿಂದ ಸೂರ್ಯನಿಗೆ ವೆಲ್ ಕಮ್ ಮಾಡಲಾಗಲಿಲ್ಲ. ಮತ್ತೆ ಕೆಳಗಿಳಿದು ಬಂದು ಮುಂದಿನ ಕಾರ್ಯಕ್ರಮಕ್ಕೆ ಅಣಿಯಾದೆ. ಅಂದು ಅರುಣ ನಮ್ಮೆಲ್ಲರನ್ನೂ 'ಹಿರೆಕೊಡುಗೆ' ಗೆ ಕರೆದೊಯ್ದ. ಕುಪ್ಪಳಿಯಿಂದ ಹೊರಬಂದು ಮೈನ್ ರೋಡಿನಲ್ಲಿ ಸ್ವಲ್ಪ ದೂರ ನಡೆದು 'ಹಿರೆಕೊಡುಗೆ' ಎಂದು ಫಲಕ ಹಾಕಿದ ದಿಕ್ಕಿನೆಡೆಗೆ ಸಾಗಿದೆವು. ಹಿಂದಿನ ದಿನ ಮಾಡಿದ್ದ ಚಾರಣಕ್ಕಿಂತ ಈ ಪ್ರದೇಶ ಕಡಿದಾಗಿತ್ತು, ಇಷ್ಟವಾಯಿತು ಕೂಡ. ಮಿತಭಾಷಿಯಾಗಿದ್ದರಿಂದ ಯಾರೊಡನೆಯೂ ಹೆಚ್ಚು ಬೆರೆಯದೆ ಸುತ್ತಲಿನ ನಿಸರ್ಗವನ್ನು ಸವಿಯುತ್ತಾ ನಡೆದೆ. ಊಟವನ್ನು ಒಂದು ಪಾಳು ಬಿದ್ದ ದೇವಸ್ಥಾನದಲ್ಲಿ ಮಾಡಿದ ನೆನಪು. ಊಟ ಮುಗಿಸಿ ಎಲ್ಲರೂ ನಮ್ಮ ನಮ್ಮ ಫೀಡ್ ಬ್ಯಾಕನ್ನು ಕೊಟ್ಟೆವು ಚಾರಣದ ಬಗ್ಗೆ. ಅದೊಂದೇ ಬಾರಿ ಅನಿಸುತ್ತೆ ಎಲ್ಲರೊಡನೆ ನಾನು ಮಾತನಾಡಿದ್ದು.

ಮರಳಿ ಬಂದು ಮತ್ತೆ ಕುವೆಂಪು ಮನೆಗೆ ಹೋಗಿ 'ಕಾನೂರು ಸುಬ್ಬಮ್ಮ ಹೆಗ್ಗಡತಿ' ಕಾದಂಬರಿಯನ್ನು ಕೊಂಡೆ. ಕುಪ್ಪಳಿ ನೆನಪಿಗೆ. ಮತ್ತೆ ಕುಪ್ಪಳಿಗೆ ಒಂದೂವರೆವರ್ಷ ಹಿಂದೆ ನಮ್ಮ 'ಹರಟೆ-ಕಟ್ಟೆ' ಗುಂಪಿನೊಡನೆ ಹೋಗಿದ್ದೆ. ವಿಕಾಸದ ಹಾದಿಯಲ್ಲಿದ್ದ ನಾನು ಎರಡನೆ ಬಾರಿ ಹೋದಾಗ ಗೆಳೆಯರೊಡನೆ ಹೆಚ್ಚು ನಲಿದೆ. ಎರಡನೆ ಬಾರಿ ನಾವು ತೀರ್ಥಹಳ್ಳಿಯ ಶ್ರೇಯಸ್ ಮನೆಯಿಂದ ಹೊರಟಿದ್ದಿದ್ದು. ಕವಿಶೈಲವನ್ನೂ, ಕುವೆಂಪು ಮನೆಯನ್ನು ನೋಡಿ ಮರಳಿ ತೀರ್ಥಹಳ್ಳಿಗೆ ಹೋಗುವಾಗ ಬಸ್ ಗೆ ಕಾಯುತ್ತ ರೋಡಿನಲ್ಲಿ ಓಡಾಡುತ್ತಿದ ವಾಹನಗಳನ್ನು ದೂರದಿಂದ ಗುರುತಿಸುವ ಆಟವನ್ನು ನೆನೆಸಿಕೊಂಡರೆ ಖುಶಿ ಆಗುತ್ತದೆ. ಆ ಕತ್ತಲಿನ ರಸ್ತೆಯಲ್ಲಿ ಆಕಾಶ ನೋಡಿದರೆ ನಕ್ಷತ್ರಗಳ ಚಿತ್ತಾರ. ಕಾಣದ ಕೈಗಳಿಂದ ಮಾಡಿದ ಕುಸುರಿ ಕೆಲಸ. ಎಂಥಾ ದಿನಗಳವು?? ಇದನ್ನು ನೋಡಿಯೇ ಶ್ರೀನಿವಾಸ 'ಚಿತ್ರಚಾಪ'ದ ಕವನ ಬರೆದನೆನಿಸುತ್ತದೆ. 'ಅಣ್ಣನ ನೆನಪು' ಮತ್ತೊಮ್ಮೆ ಓದಿಕೊಂಡು ತೇಜಸ್ವಿಯವರ ನೆನಪುಗಳನ್ನು ಜೀಕಿಕೊಂಡು ಮತ್ತೊಮ್ಮೆ ಕುಪ್ಪಳಿಗೆ ಹೋಗಬೇಕೆನಿಸುತ್ತದೆ.

ರಿಸೆಷನ್ ಜಾರಿಯಲ್ಲಿದೆ...

Tuesday, May 19, 2009


ಹೌದು ಸದ್ಯಕ್ಕೆ ರಿಸೆಷನ್ ಜಾರಿಯಲ್ಲಿದೆ, ಅಮೇರಿಕಾದ 'ಅಣ್ಣ' ಸೀನಿದರೆ ಇಲ್ಲಿನವರಿಗೆಲ್ಲಾ ಚಳಿ ಜ್ವರ. ಇಡೀ ವಿಶ್ವವೇ ಆರ್ಥಿಕ ಹಿಂಜರಿತದ 'ಜರ್ಕ್' ನಲ್ಲಿರುವಾಗ ನಮ್ಮ ನಿಮ್ಮಂತಹ ಶ್ರೀಸಾಮನ್ಯರು ಏನು ತಾನೆ ಮಾಡಿಯಾರು? ಒಂದಾನೊಂದು ಕಾಲದಲ್ಲಿ software ಉದ್ಯೋಗಿಗಳು ಯಾವಾಗೆಂದರೆ ಆಗ ವಿಮಾನ ಹತ್ತಿ ಪರದೇಶಕ್ಕೆ ಹೋಗಿ ಬರುತ್ತಿದ್ದರು, ಈಗ ಯಾವಾಗ ಬೇಕಾದರೂ 'ಪಿಂಕ್ ಸ್ಲಿಪ್' ಪಡೆದು ಮನೆಗೆ ಬರುವಂತಾಗಿದೆ. 'ಬಯಸದೇ ಬರುವ ಭಾಗ್ಯ' ವನ್ನು ತಪ್ಪಿಸಿಕೊಳ್ಳಲು ಆದಷ್ಟು ಹೆಣಗುತ್ತಾರೆ. ಇನ್ನು ಹೆಚ್ಚಾಗಿ ರಿಸೆಷನ್ ಬಗ್ಗೆ ಮಾತನಾಡಿ ನಿಮ್ಮ ಬ್ಲಡ್ ಪ್ರೆಶರ್ ಏರಿಸುವುದಿಲ್ಲ, ನನಗೆ ಗೊತ್ತು ದಿನಾ ಆಫೀಸಿನಲ್ಲಿ ಇದರ ಬಗ್ಗೆ ಚರ್ಚೆ ಅಲ್ಲಲ್ಲಿ ಸಮಯ ಸಿಕ್ಕಾಗ ನಡೆಸುತ್ತಿರುತ್ತೀರಿ, ಮಿನಿ ಮೀಲ್ಸ್ ತಿನ್ನುವಾಗ, ಕೆಪಚ್ಚಿನೋ ಹೀರುವಾಗ, ಪಕ್ಕದ ಕ್ಯೂಬಿಕಲ್ ನಲ್ಲಿ ಗುಂಪು ಸೇರಿದಾಗ ಇವೇ ಮಾತುಗಳು ಎಂದು ನನಗೆ ಗೊತ್ತು, ಎಷ್ಟೇ ಆದರೂ ನಾವು 'ಮಧ್ಯಮ' ವರ್ಗದವರು, ಇದೆಲ್ಲವನ್ನು ಎದುರಿಸುವ ಛಾತಿಯನ್ನು ಆ ಬ್ರಹ್ಮ ಹುಟ್ಟುವಾಗಲೇ ನಮ್ಮ ರಕ್ತದಲ್ಲಿ ಮಿಕ್ಸ್ ಮಾಡಿ ಕಳುಹಿಸಿದ್ದಾನೆ ಎಂದು. ಆದರೂ ಇಂತಹ ಕಾಲದಲ್ಲಿ ನನ್ನದೊಂದಿಷ್ಟು ರಿಸೆಷನ್ ಟಿಪ್ಸ್. ನೋಡಿ ನಿಮ್ಮ ಅನುಕೂಲ ಹೇಗಿದೆಯೋ??


1)ನೀವು ಅತಿಯಾಗಿ ಫೋನಿನಲ್ಲಿ ಮಾತನಾಡುವುದಾದರೆ ಅದಕ್ಕಾಗಿ ನಾಲ್ಕಂಕಿಯ ಮೊತ್ತವನ್ನು ಪಾವತಿಸುವವರಾದರೆ ಮೊದಲು ಆ ಹುಚ್ಚಾಟವನ್ನು ಬಿಡಿ, ಗೂಗಲ್ ಟಾಕ್ ಎಂದು ಪುಟಾಣಿ ಅದ್ಭುತವಾದ software ವೇರ್ ಇದೆ, ಅದನ್ನು ಯಥೇಚ್ಚವಾಗಿ ಬಳಸಿ ನಿಮ್ಮ ಗೆಳೆಯರೊಡನೆ ಹರಟೆ ಹೊಡೆಯಲು, ಅದು ಬೋರಾದರೆ ಯಾಹೂ ಮೆಸ್ಸೆಂಜರ್ ಗೆ ಲಾಗಿನ್ ಆಗಿ ಸ್ಮೈಲೀ ಗಳನ್ನು ಹಾಕಿಕೊಂಡು ನಲಿಯಿರಿ.

2)ಫೋನ್ ಮಾಡಲೇ ಬೇಕೆನಿಸಿದರೆ ಆಫೀಸಿನ ನಂಬರಿನಿಂದ ಕರೆ ಮಾಡಿ.

3)ಟ್ರೆಕ್ಕು , ಟ್ರಿಪ್ಪು ಗಳನ್ನು ಪ್ರತೀ ವಾರಂತ್ಯ ಮಾಡುವವರಂತಾಗಿದ್ದರೆ ಮೊದಲು ಇರುವ ರಕ್ ಸ್ಯಾಕನ್ನು ಅಟ್ಟದ ಮೇಲಿಡಿ. 4೦೦ ಮರಗಳನ್ನು ಕಡಿಯಲು ಹೊರಟ್ಟಿದ್ದಾರೆ ಲಾಲ್ ಬಾಗಿನಲ್ಲಿ , ಹೋಗಿ ಮೊದಲು ನೋಡಿ, ಎಷ್ಟು ಬೇಗ ಆದರೆ ಅಷ್ಟು ಬೇಗ. ಯಾವತ್ತು ಧರಾಶಾಯಿಯಾಗುವವೊ?? ಅಂದಹಾಗೆ ಹಲಸೂರು ಕೆರೆಯನ್ನು ನೋಡಿದ್ದೀರ?? ವಾಟ್ ಅಬೌಟ್ ಬೆಳ್ಳಂದೂರ್ ಲೇಕ್? ಯಾವುದೋ ಊರಿನ ಯಾವುದೋ ಕಾಡನ್ನು ದುಡ್ಡು ತೆತ್ತು ದಡ್ಡರಾಗುವ ಮೊದಲು ಇವನ್ನು ನೋಡಿ.

4)'ಪ್ರೀತಿ' ಯಲ್ಲಿ ಬಿದ್ದಿದ್ದರೆ ಇಂದಿನಿಂದ 'ಏಳುವ' ಪ್ರಯತ್ನ ಮಾಡಿ. ಗರ್ಲ್ ಫ್ರೆಂಡ್ ಬಾಯ್ ಫ್ರೆಂಡ್ ಗಳಿಗೆ ದುಬಾರಿ ಗಿಫ್ಟ್ ಕೊಟ್ಟು ಕಂಡ ಕಂಡ ಕಡೆ ಸುತ್ತಿ ದುಡ್ಡು ಪೋಲು ಮಾಡಬೇಡಿ, ಗಿಫ್ಟಾಗಿ ಕತೆ, ಕವನಗಳನ್ನು ಬರೆದು ಕೊಡಿ, ಇಷ್ಟ ಪಟ್ಟಾರು. "ಯಾಕೆ ಜುಗ್ಗ ಆಗಿದ್ಯಾ" ಎಂದರೆ ಮುಂದೆ ನಮ್ಮ ಭವಿಷ್ಯಕ್ಕಾಗಿ ಹಣ ಕೂಡಿಡುತ್ತಿದ್ದೇನೆಂದು ಹೇಳಿ. 'ಕಾರ್ನರ್ ಹೌಸ್' ನಲ್ಲಿ ಐಸ್ ಕ್ರೀಮ್ ನೆಕ್ಕುವ ಬದಲು 'ಅರುಣ್' ಕಪ್ ಐಸ್ ಕ್ರೀಮ್ ತಿನ್ನುವುದು ಉತ್ತಮ. ವಿದ್ಯಾಬಾಲನ್ ಮತ್ತು ಮಾಧವನ್ ನಟಿಸಿರುವ 'ಏರ್ ಟೆಲ್' ನ ಹೊಸ ಜಾಹೀರಾತಿಗೆ ಮಾರುಹೋಗಿದ್ದರೆ ಈ ಪಾಯಿಂಟನ್ನು ಬಿಟ್ಟುಬಿಡಿ.

5)ವಾರಕ್ಕೊಮ್ಮೆ 'ಮದ್ಯ' ಪಾನ ಮಾಡಿ ತೂರಾಡುವವರು ತಿಂಗಳಿಗೊಮ್ಮೆ ತೂರಾಡಿದರೆ ಅವರಿಗೇ ಉತ್ತಮ. ಸೀಸೈಡ್, ಲೇಕ್ ಸೈಡ್ ಹೋಟೆಲುಗಳನ್ನು ಬಿಟ್ಟು ರೂಮುಗಳಲ್ಲಿ ಕುಡಿದು,ಉಪ್ಪಿನಕಾಯಿ ನೆಕ್ಕುವುದು ಲೇಸು.

6)ಆಫೀಸಿನಲ್ಲಿ ನೀವು ಮಾಡುವ ಪ್ರತಿಯೊಂದು ಕೆಲಸವೂ ನಿಮ್ಮ ಮ್ಯಾನೇಜರರ ದೃಷ್ಟಿಗೆ ಬೀಳಲಿ. ಪರ್ವಾಗಿಲ್ಲ ಹುಡುಗ ಕೆಲಸ ಮಾಡುತ್ತಿದ್ದಾನೆ ಎಂದು ಅನಿಸಿಕೊಂಡರೆ ನೀವು ಸೇಫ್ , ಅಪ್ಪಿ ತಪ್ಪಿಯೂ ಕೂಡ ಅವರ ಬಳಿ 'ಪಂಗಾ' ತೆಗೆದುಕೊಳ್ಳಬೇಡಿ.

7)ಮಲ್ಟೀಪ್ಲೆಕ್ಸ್ ಗಳಲ್ಲಿ ಸಿನೆಮಾ ನೋಡುವ ಅಭ್ಯಾಸವನ್ನು ಬಿಡಿ, ಬೆಂಗಳೂರಿನಲ್ಲಿ ಇನ್ನೂ ನಲವತ್ತು ರೂಪಾಯಿಗೆ(!!) ಸಿನೆಮಾ ತೋರಿಸುತ್ತಾರೆ, ಅಂತಹ ಥಿಯೇಟರ್ ಗಳನ್ನ ಹುಡುಕಿ. ಒಟ್ಟಿಗೆ ಮುಂದಿನ ವಾರವೇ ಹೋಗೋಣ.

8)ದುಡ್ಡು ಕೊಟ್ಟು ಪುಸ್ತಕ ಕೊಳ್ಳುವ ಅಭ್ಯಾಸವಿದ್ದರೆ , ಸದ್ಯಕ್ಕೆ ಮುಂದೂಡಿ. ಇದನ್ನು ನೀವು 'ಕನ್ನಡ' ಪುಸ್ತಕಗಳಿಗೆ ಅನ್ವಯಿಸದಿದ್ದರೆ ನಿಮಗೊಂದು ಸಲಾಂ. ನಮ್ಮ ಹಿಂದಿನವರ ಸಾಹಿತ್ಯ ನಿಮಗೇನು ಗೊತ್ತು ?, Old is gold -ಉ ತತ್ವಕ್ಕೆ ಬೆಲೆ ಕೊಟ್ಟು ಅವೆನ್ಯೂ ರಸ್ತೆಗೆ ಕಾಲಿಡಿ. ಅಲ್ಲಿ ಸೆಕೆಂಡ್ ಹ್ಯಾಂಡ್ ಪುಸ್ತಕಗಳು ದೊರೆಯುತ್ತವೆ, ಅವನ್ನೆಲ್ಲಾ ಓದಿ ಮುಗಿಸಿ. ಇಲ್ಲವಾದರೆ ನಗರ ಫುಟ್ ಪಾತ್ ನಲ್ಲೂ ನಡೆದಾಡಿದರೆ ನಿಮಗೆ ಸಾಕಷ್ಟು ಪುಸ್ತಕಗಳು ದೊರಕೀತು.

9)ಸಾಲ ಮಾಡಬೇಡಿ ಎಂದು ಹೇಳಬೇಕಾಗಿಲ್ಲ ಎಂದು ಭಾವಿಸುತ್ತೇನೆ.

10)ಕಾರು ಕೊಳ್ಳಲೇಬೇಕೆಂದು ಹಟ ಹಿಡಿದಿದ್ದರೆ 'ನ್ಯಾನೊ' ಕಡೆಗೆ ಗಮನ ನೀಡಿ.

ನನಗೆ ತೋಚಿದ್ದು ಇಷ್ಟು. ಇಷ್ಟನ್ನೂ ನೀವು ಯಥಾಪ್ರಕಾರವಾಗಿ ಪಾಲಿಸ ಹೊರಟರೆ ಅದು ನಿಮ್ಮ ಕರ್ಮ.

ಎಲ್ಲಾ ಟೈಮೂ...

Sunday, May 17, 2009

ಈ ಲೇಖನವನ್ನ ಪೂರಾ ಓದಿದ ಮೇಲೆ ಬಹಳಷ್ಟು ಜನರಿಗೆ ಅನ್ನಿಸುವುದಿಷ್ಟೆ "ಎಲ್ಲಾ ಟೈಮು....." , ಅದಕ್ಕೆಂದೇ ಇದೇ ಹೆಸರನ್ನು ಟೈಟಲಾಗಿಟ್ಟುಬಿಟ್ಟೆ. ಬಹಳ ಸಲ ನಾವೊಂದು ಅಂದುಕೊಂಡರೆ ಅದಿನ್ನೊಂದಾಗಿರುತ್ತದೆ, ಇಂತಹವುದೆಲ್ಲವನ್ನು ನೋಡಿದರೆ "ಎಲ್ಲಾ ಟೈಮೂ...." ಎಂದು ಸುಮ್ಮನಾಗಬೇಕಷ್ಟೆ


ಅರುಣನ ಮದುವೆ ಏಪ್ರಿಲ್ 16ರಂದು "ಹೊಳೆನರಸೀಪುರ"ದಲ್ಲಿದ್ದುದರಿಂದ ಶ್ರೀಕಾಂತ ಅದಕ್ಕೆ ಸರಿಯಾಗಿ ಒಂದು ತಿಂಗಳ ಮುಂಚೆಯೇ ಸಿದ್ಧತೆ ನಡೆಸಿದ್ದ !! "ನಾವೆಲ್ಲರೂ" ಅಲ್ಲಿಗೆ ಹೇಗೆ ತಲುಪುವುದು ಮತ್ತದರ ಟೈಮಿಂಗ್ಸ್ ವಿಷಯವಾಗಿ. "ಹಚ್ ಅಲಿಯಾಸ್ Vodafone ಪ್ರಕಾಶಿಸುತ್ತಲೇ ಇರುತ್ತದೆ" :-)


ಎಲ್ಲಾ ಜನರ ಲಿಸ್ಟ್ ರೆಡಿಯಾದಮೇಲೆ ಮೊದಲಿಗೆ "ಟಾಟಾ ಇಂಡಿಕಾ" ಬುಕ್ ಮಾಡಿದ್ದೆವು. ಲಿಸ್ಟ್ ಹಿಗ್ಗಿದುದರ ಪರಿಣಾಮವಾಗಿ "ಟವೇರಾ"ದಲ್ಲಿ "ಸವಾರಿ" ಮಾಡಬೇಕಾಯಿತು. ಶುಭಾಳನ್ನು ಬಸವೇಶ್ವರ ನಗರದಿಂದ ಹತ್ತಿಸಿಕೊಂಡು ಬೆಂಗಳೂರು ಮಹಾನಗರದಿಂದ ಹೊರಬರುವ ಹೊತ್ತಿಗೆ ಸಂಜೆ ಏಳಾಗಿತ್ತು. ಶ್ರೀಕಾಂತನ ಲೆಕ್ಕಾಚಾರ ಅದಾಗಲೇ ಲೆಕ್ಕ ತಪ್ಪಿತ್ತು. "ಟವೇರಾ" ದಲ್ಲಿದ್ದಿದ್ದು ನಾವು ಒಟ್ಟು ಏಳು ಜನ. ನಾನು, ಶ್ರೀಕಾಂತ, ಶುಭಾ, ಶ್ರುತಿ ಶರ್ಮಾ, ಅರ್ಜುನ್, ಹರೀಶ್ ಮತ್ತೆ ಗೋವಿಂದರಾಜ್. ಡ್ರೈವರ್ ಸೇರಿಸಿ ಒಟ್ಟು ಎಂಟು. ಎಲ್ಲರ ಪರಿಚಯ ಮಾಡಿಕೊಂಡು ಹೋಗುತ್ತಾ ಶ್ರುತಿ "ಮೂಕಾಭಿನಯ" ಆಡುವುದೋ ಅಥವಾ "ಅಂತ್ಯಾಕ್ಷರಿ" ಆಡುವುದೋ ಎಂಬುದರ ಸಲುವಾಗಿ ಎಲ್ಲರನ್ನು ಕೇಳುತ್ತಿದ್ದಳು. ಡ್ರೈವರ್ ಮಹಾಶಯ ತನ್ನ ಕಿರಿಕಿರಿಯನ್ನು ಆರಂಭಿಸಿದ್ದ. ಗಾಡಿಯ ಸೌಂಡ್ ಸಿಸ್ಟಮ್ ಸರಿ ಇರಲಿಲ್ಲವೆಂದು ತೊರುತ್ತದೆ, ಮುಂದೆ ಕೂತವರಿಗೆ ಯಾವ ಹಾಡು ಬರುತ್ತಿದೆ ಎನ್ನುವುದು ಕೂಡ ಗೊತ್ತಾಗುತ್ತಿರಲಿಲ್ಲ. ಈ ಮಹಾಶಯ ಇದ್ದಕ್ಕಿದ್ದ ಹಾಗೆ ಸೌಂಡ್ ಜಾಸ್ತಿ ಮಾಡಿಬಿಡುತ್ತಿದ್ದ, ಹಿಂದಿನಿಂದ ಶರ್ಮಾ ನನ್ನನ್ನು ತಿವಿಯುತ್ತಿದ್ದಳು, "ಸೌಂಡ್" ಸಲ್ಪ ಕಮ್ಮಿ ಮಾಡು ಎಂದು. ಇಲ್ಲಿ ಸೌಂಡ್ ಜಾಸ್ತಿ ಮಾಡಿದರೆ ಹಿಂದೆ ಕೂತವರಿಗೆ "ಧೋಮ್ ಧೋಮ್" ಸದ್ದು. ಸೌಂಡ್ ಕಮ್ಮಿ ಮಾಡಿದ ಸಲ್ಪ ಹೊತ್ತಿನಲ್ಲೇ ಮತ್ತೆ ಏರಿಸಿಬಿಡುತ್ತಿದ್ದ. "ನೈಸ್" ರೋಡಿನಲ್ಲಿ ನೈಸಾಗಿ ಜಾರಿ, ನೆಲಮಂಗಲದ ಟ್ರಾಫಿಕ್ ಕಿರಿಕಿರಿ ಅನುಭವಿಸಿ ಊರು ಬಿಡುವ ಹೊತ್ತಿಗೆ ಕತ್ತಲಾಗಿತ್ತು. "ಮೂಕಾಭಿನಯ" ದ ಆಟ ಸಾಗುತ್ತಲೇ ಇತ್ತು. ಆದರೆ ತೊಂದರೆಗಿಟ್ಟುಕೊಂಡ ವಿಷಯವೆಂದರೆ ಡ್ರೈವರನೂ ಕೂಡ ನಮ್ಮ ಆಟದಲ್ಲಿ ಭಾಗವಹಿಸಿದ್ದು!!. ನಾನು ಡ್ರೈವರ್ ಪಕ್ಕದಲ್ಲಿ ಕೂತಿದ್ದೆ, ನಾನು ಮಾಡುವ "ಮೂಕಾಭಿನಯ" ವನ್ನು ನೋಡುತ್ತ ಆತನೂ ಕೂಡ ಅದರಲ್ಲಿ ಭಾಗವಹಿಸುತ್ತಿದ್ದ!!. ಇದು ಒಳ್ಳೆ ಡ್ರೈವರನ ಲಕ್ಷಣವಂತೂ ಖಂಡಿತಾ ಅಲ್ಲ.



ಹೀಗೆ ಸಾಗುತ್ತಲೇ ಸುಮಾರು ಏಳೂ ಮುಕ್ಕಾಲಿರಬಹುದು, ಇದ್ದಕ್ಕಿಂದಂತೆ ಗಾಡಿಯ ವೇಗವನ್ನು ಕಮ್ಮಿ ಮಾಡಿ ಪಕ್ಕದಲ್ಲಿ ನಿಲ್ಲಿಸಿದ, ಮತ್ತೆ ಮತ್ತೆ ಶುರು ಮಾಡಲು ಯತ್ನಿಸಿದನಾದರೂ ಆಗಲಿಲ್ಲ. ಎಲ್ಲರ ಮುಖದಲ್ಲೂ ಆತಂಕದ ಗೆರೆಗಳು ಹೆದ್ದಾರಿಯಲ್ಲಿ ಒಡಾಡುತ್ತಿದ್ದ ಗಾಡಿಗಳ ಬೆಳಕಿನಿಂದ ಕಾಣುತ್ತಿತ್ತು. ಪ್ರಾಮಾಣಿಕವಾಗಿ ನನಗನ್ನಿಸಿದ್ದು ಯಾವುದೋ ಇದು ಡಬ್ಬಾ ಗಾಡಿ ಮತ್ತು ಬೇಜವಾಬ್ದಾರಿ ಡ್ರೈವರ್ ಎಂದು. ಯಾರ್ಯಾರಿಗೋ ಫೋನ್ ಮಾಡಿ ಆಯಿಲ್ ಲೀಕ್ ಆಗಿದೆ, ನೋಡಿಲ್ಲವಾ? ಚೆಕ್ ಮಾಡಿಲ್ಲವಾ? ಎಂದು ಜೋರಾಗಿ ಕೇಳುತ್ತಿದ್ದ . ಫೋನಿನ ಆಬದಿಯವರು ಎಲ್ಲಾ ಸರಿಯಾಗಿದೆ ಎಂದು ಹೇಳಲಿ ಎನ್ನುವದೇ ನನ್ನ ಆಶಯವಾಗಿತ್ತು, ಆದರೆ ಹಾಗಾಗಲಿಲ್ಲ. ಕಡೆಗೆ ನಮ್ಮೆಡೆಗೆ ತಿರುಗಿ "ಏನು ಆಗಿಲ್ಲ ಸಾರ್, ಟೆನ್ಷನ್ ಆಗ್ಬೇಡಿ" ಎಂದು ಹೇಳಿ ಕಿಸಕ್ಕನೆ ನಕ್ಕಿದ.



ಹಾಗೂ ಹೀಗೂ ಸ್ಟಾರ್ಟ್ ಮಾಡಿ ಗಾಡಿ ಮುಂದಕ್ಕೆ ಚಲಿಸತೊಡಗಿತು, ಅನತಿ ದೂರದಲ್ಲಿದ್ದ ಪೆಟ್ರೋಲ್ ಬಂಕಿನಲ್ಲಿ ಸಲ್ಪ ಆಯಿಲ್ ಕೊಂಡು ಮುಂದೆ ಹೊರಟೆವು. ಮತ್ತೆ ಎಲ್ಲೂ ಗಾಡಿ ನಿಲ್ಲದಿರಲಿ ಎಂದು ಎಲ್ಲರೂ ಒಕ್ಕೊರಲಿನಿಂದ ಪ್ರಾರ್ಥಿಸಿದ್ದರೋ ಏನೋ?? ಮತ್ತೆ ಗಾಡಿ ಕೆಡಲಿಲ್ಲ.. ಹೊಳೆನರಸೀಪುರದ ದಾರಿಯಲ್ಲಿ "ಮಂಗಳೂರು ಟೀಸ್ಟಾಲ್" ನಲ್ಲಿ ಟೀ ಕುಡಿದು ಸುಮಾರು 9 ರ ಹೊತ್ತಿಗೆ ಊಟಕ್ಕೆ ಗಾಡಿ ನಿಲ್ಲಿಸಿದೆವು(ಸ್ಥಳ ಮರೆತುಹೋಗಿರುವೆ). ಗಾಡಿ ಕೆಟ್ಟು ನಿಂತಾಗಲೇ ಶ್ರುತಿ ಶರ್ಮಾ ನನ್ನ ಬಳಿ ಬಂದು "ಈ ಡ್ರೈವರ್ ಸರಿ ಇಲ್ಲ, ಎಲ್ಲಾ ಮುಂಚೆಯೇ ಚೆಕ್ ಮಾಡ್ಕೋಬೇಕಿತ್ತು, ಈಗ ನೋಡಿದ್ರೆ ಹೀಗಾಗಿದೆ" ಎಂದು ಪೇಚಾಡುತ್ತಿದ್ದಳು, ಹಾಗೆ ಅದನ್ನು ಮುಂದುವರೆಸಿ "ನೀನು ಆಡುವುದನ್ನೇ ಈ ಡ್ರೈವರ್ ನೋಡ್ತಾನೆ ಇರ್ತಾನೆ, ಮುಂದೆ ನೋಡ್ಕೊಂಡ್ ಗಾಡಿ ಒಡ್ಸಲ್ಲ ಸರ್ಯಾಗಿ, ಆದ್ರಿಂದ ನೀನು ಆಟಗಳಿಂದ "ಔಟ್" ಎಂದಳು. ನನಗೂ ಸರಿಯೆನ್ನಿಸಿತು, ತೆಪ್ಪಗೆ ತಲೆಯಾಡಿಸಿದೆ.

ಕತ್ತಲು ಕವಿದುದ್ದರಿಂದ "ಮೂಕಾಭಿನಯ" ದಿಂದ "ಅಂತ್ಯಾಕ್ಶರಿ"ಗೆ ಶಿಫ್ಟ್ ಆಗಿದ್ದರು. ಹೆದ್ದಾರಿಯಲ್ಲಿ ಹರಿದಾಡುತ್ತಿದ್ದ ವಾಹನಗಳ ಬೆಳಕಿನಿಂದ ಇಕ್ಕೆಲಗಳಲ್ಲಿ ಕಾಣುತ್ತಿದುದ್ದನ್ನು ನನ್ನ ಕಣ್ಣು ಸುಮ್ಮನೆ ನೋಡುತ್ತಲಿತ್ತು. ಎಲ್ಲಾ ದೃಶ್ಯಗಳು ಒಂದೇ ತರವೇ ಆಗಿದ್ದರೂ ಕೂಡ ಮನಸ್ಸು ಹುಚ್ಚು ಕುದುರೆಯಂತೆ ಸಾವಿರ ದಿಕ್ಕಿನಲ್ಲಿ ಯೋಚಿಸುತ್ತಿತ್ತು. ಕೆಲವು ಕಡೆ ಹೆದ್ದಾರಿ ಬಹಳ ಅಚ್ಚುಕಟ್ಟಾಗಿತ್ತು, ಮತ್ತೆ ಕೆಲವು ಕಡೆ ವಿವರಿಸಲು ಆಗದಷ್ಟು ಹದೆಗೆಟ್ಟಿತ್ತು. ಅದ್ಯಾಕೆ ಹೀಗೆ ಮಾಡಿದಾರೋ ಎಂದು ಅರಿಯದಾದೆ.



ಹೊಳೆನರಸೀಪುರ ತಲುಪುವ ಹೊತ್ತಿಗೆ ರಾತ್ರಿ 11 ಗಂಟೆ ಆಗಿತ್ತು. ಅರುಣ ಮತ್ತೆ ಶ್ರೀನಿವಾಸ ಪಂಚೆಧಾರಿಗಳಾಗಿ ನಮ್ಮೆಲ್ಲರನ್ನು ಎದುರುಗೊಂಡರು . ಅರುಣ ಅಲಿಯಾಸ್ "ಮದುವೆ ಗಂಡು" ಕ್ಲೀನಾಗಿ ಕ್ರಾಪ್ ಕಟ್ ಮಾಡಿಸಿಕೊಂಡು ಮಂದಸ್ಮಿತನಾಗಿ ಚೈನು, ಉಂಗುರ ಧರಿಸಿ ಕೊಂಚ "ಭಿನ್ನ"ವಾಗಿ ನನಗೆ ತೋರಿದ. ರೇಖಾ ಮತ್ತೆ ಅರುಣ ಇಬ್ಬರು ಬಂದು ನಾವು ಉಳಿದುಕೊಳ್ಳಬೇಕಾದ ಜಾಗವನ್ನು ತೋರಿಸಿದರು. ಬರೀ ಸಿನೆಮಾಗಳಲ್ಲಿ ಈ ರೀತಿಯ ಮನೆಗಳನ್ನು ನೋಡಿದ ನಾನು ಅಲ್ಲಿ ಮಲಗುವುದಕ್ಕೆ ನಿಜಕ್ಕೂ ಉತ್ಸುಕನಾಗಿದ್ದೆ. ಹೆಚ್ಚಾಗಿ ನನ್ನನ್ನು ಆಕರ್ಷಿಸಿದ್ದು ಮನೆ ಜಗುಲಿ. ಶೌಚಕಾರ್ಯಗಳನ್ನು ಮುಗಿಸಿ ಬರುವ ಹೊತ್ತಿಗೆ ನಮಗೆ ಮಲಗಲು ನೀಡಿದ್ದ ಜಾಗ ಸಾಕಗುವುದಿಲ್ಲವೆನಿಸಿತು. ಗೋವಿಂದರಾಜ್, ಹರೀಶ್, ಅರ್ಜುನ್ ಒಂದು ಕಡೆ ಮತ್ತೆ ಶ್ರುತಿ, ಶುಭಾ ಇನ್ನೊಂದೆಡೆ ಮಲಗಲು ಅಣಿಯಾಗುತ್ತಿದ್ದರು. ಶರ್ಮಾ ತಂದಿದ್ದ ಒಂದು ಎಕ್ಸ್ಟ್ರಾ ಹೊದಿಕೆಯನ್ನು ಇಸಿದುಕೊಂಡು ನಾನು, ಶ್ರೀನಿವಾಸ ಮತ್ತೆ ಶ್ರೀಕಾಂತ ಅಲ್ಲಿಂದ ಕಾಲ್ತೆಗೆದವು. ಸಮಯ 11:30 ಆಗಿತ್ತೇನೋ. ಅಲ್ಲೇ ಮೂವರು ಮಲಗಿದೆವು, ಒಂದು ಹೊದಿಕೆ ಮೂವರಿಗೆ ಹೇಗೆ ತಾನೇ ಸಾಕಾದೀತು?
ನಾನೊಬ್ಬನೇ ಹೊದ್ದುಕೊಂಡು ಅಲ್ಲೇ ಮಲಗಿದೆ, ಪಾಪ ಶ್ರೀನಿವಾಸ ಕೇಳಲಿಲ್ಲ, ಅವನಿಗೆ ನಿದ್ದೆ ಬಂದರೆ ಅದು ಬೇಕಾಗುವುದಿಲ್ಲವೆಂದು ನನಗಿಂತ ಅವನಿಗೇ ಚೆನ್ನಾಗಿ ಗೊತ್ತಿತ್ತು. ಶ್ರೀಕಾಂತ ಕೇಳಿದನಾದರೂ "ತ್ಯಾಗ" ಮನೋಭಾವ ಅವನನ್ನು ಸುಮ್ಮನಿರಿಸಿತು ಎಂದು ನಾನೆಂದುಕೊಂಡೆ ;-) ನನ್ನ ಎತ್ತರದ ಬಗ್ಗೆ ನನಗೆ ಬಹಳಷ್ಟು ಬಾರಿ ಕಿರಿ ಕಿರಿ ಆಗಿದೆ, ಈ ದಿನವೂ ಅದೇ ಆಯಿತು. ಆ ಹೊದಿಕೆಯಿಂದ ಕಾಲು ಮುಚ್ಚಿದರೆ ಮುಖ ಮುಚ್ಚುತ್ತಿರಲಿಲ್ಲ, ಮುಖ ಮುಚ್ಚಿದರೆ ಕಾಲು ಮುಚ್ಚುತ್ತಿರಲಿಲ್ಲ. ಆ ಮನೆಯವರೆಲ್ಲರೂ ಸೊಳ್ಳೆ ಪರದೆಯಲ್ಲಿ ಮಲಗಿದುದ್ದನ್ನು ನೋಡಿದಾಗಲೇ ತಿಳಿದು ಹೋಯಿತು, ಸೊಳ್ಳೆ ಕಾಟವಿದೆಯೆಂದು. ಹೊರಗಡೆ ಮಲಗಿದ ಕೂಡಲೆ ಸೊಳ್ಳೆಗಳ ತಮ್ಮ ನಿತ್ಯ ವ್ಯವಹಾರ ಶುರು ಮಾಡಿದ್ದವು. ತಣ್ಣಗೇನೋ ಗಾಳಿಯಿತ್ತು, ಆದರೆ ಕಾಲಿಗೆ, ಕೈಗೆ, ಮುಖಕ್ಕೆ ಎಲ್ಲೆಂದರಲ್ಲಿ ಕಚ್ಚುತ್ತಿದ್ದ ಸೊಳ್ಳೆಗಳಿಂದ ನಿದ್ದೆ ಬರುವುದಾದರೂ ಹೇಗೆ ಸಾಧ್ಯ??



ಸುಮ್ಮನೆ ಹೊದಿಕೆಯನ್ನು ಸರಿ ಮಾಡಿಕೊಂಡು ಹೊರಳಾಡುತ್ತಿದ್ದೆ. ಇತ್ತ ಶ್ರೀಕಾಂತ, ಶ್ರೀನಿವಾಸನ ಸ್ಥಿತಿಯೂ ಅದೇ ಆಗಿತ್ತು. ಅದಾಗ್ಯೂ ನಾನು ಏನೋ ಒಂದು ಹೇಳಿದ್ದಕ್ಕೆ ಇಬ್ಬರೂ ಮಲಗಿದ್ದಲ್ಲೇ ಹೊರಳಾಡಿಕೊಂಡು ನಗಲು ಶುರು ಮಾಡಿದರು. ಸೊಳ್ಳೆಗಳ ಕಾಟ ಶ್ರುತಿ ಶರ್ಮಾ ಮತ್ತೆ ಅರ್ಜುನ್ ಗೂ ತಟ್ಟಿತ್ತು. ಅವರೂ ಸಹ ನಿದ್ದೆ ಬಾರದೆ ಹೊರಗಡೆ ಬಂದು ಜಗುಲಿಯಲ್ಲಿ ಕುಳಿತರು. ಹೊದಿಕೆಯನ್ನು ಮೈಯೆಲ್ಲ ಹೊದ್ದುಕೊಂಡು ಕೂತಿದ್ದೆ, ಆದರೂ ಅಲ್ಲಿ ಇಲ್ಲಿ ಕಚ್ಚುತ್ತಿದ್ದವು. ಐವರೂ ಅದೂ ಇದೂ ಅಂತ ಮಾತನಾಡುತ್ತಿದ್ದೆವು. ನಾವು ಕುಳಿತಿದ್ದ ಜಗುಲಿಯ ಎದುರುಗಡೆಯೇ ನಮ್ಮೊಡನೆ ಬಂದಿದ್ದ ಡ್ರೈವರ್ ತನ್ನ "ಟವೇರಾ" ದಲ್ಲಿ ಸುಖವಾಗಿ ನಿದ್ದೆ ಮಾಡುತ್ತಿದ್ದ. ಬಹಳ ಅಸೂಯೆಯಾಯಿತು. ಎದುರು ಮನೆಯವರೆಲ್ಲಾ "ಬೆಡ್ ಲೈಟ್" ಹೊತ್ತಿಸಿಕೊಂಡು ಮಲಗಿದ್ದು ಕಣ್ಣಿಗೆ ಬಿದ್ದು ಮತ್ತಷ್ಟು ಸಂಕಟವಾಗುತ್ತಿತ್ತು. ಮತ್ತೆ ಸುಮಾರು ಒಂದು ಗಂಟೆಗೆ ಎಲ್ಲರೂ ಮಲಗಲು ನಿರ್ಧರಿಸಿದೆವು. ಎಲ್ಲಿಯ ನಿದ್ದೆ?? ಹಾಗೂ ಹೀಗೂ ಆ ಹೊದಿಕೆಯಲ್ಲೇ ತೂರಿಕೊಂಡು ಒಂದು ಗುಬ್ಬಿ ನಿದ್ದೆ ತೆಗೆಯುವಲ್ಲಿ ಯಶಸ್ವಿಯಾಗಿದ್ದೆ. ಮಧ್ಯ ಇವರೀರ್ವರಿಗೂ ನಿದ್ದೆ ಬರದೆ "ಹೊಳೆನರಸೀಪುರ"ದ ರಸ್ತೆಗಳಲ್ಲಿ ಬೀಟ್ ಹಾಕಿಕೊಂಡು ಬಂದರಂತೆ. ನನಗೆ ಗೊತ್ತಾಗಲಿಲ್ಲ. ಮತ್ತೆ ಬಂದು ನಿದ್ದೆ ಮಾಡಲು ಯತ್ನಿಸಿದರಾದರೂ ಆಗಲಿಲ್ಲ.



ಬೀಟ್ ಮುಗಿಸಿಕೊಂಡು ಬಂದ ಶ್ರೀಕಾಂತನಿಗೆ "ತ್ಯಾಗ" ಭಾವ ಕಳಚಿ ಹೋಗಿತ್ತೆಂದೆನಿಸುತ್ತದೆ. ನನ್ನ ಹೊದಿಕೆಯನ್ನು ಕಿತ್ತುಕೊಂಡ. ಮತ್ತೆಲ್ಲಿಯ ನಿದ್ದೆ?? ಅವನಿಗೂ ನಿದ್ದೆ ಬರಲಿಲ್ಲ. ಸಮಯ ೪ಗಂಟೆ ಎಂದು ತೋರಿಸುತಿತ್ತು. ಒಳಗೆ ಮಲಗಿರುವವರೆಲ್ಲರೂ "ದಿವ್ಯ ಭವ್ಯ" ನಿದ್ದೆಯಲ್ಲಿರುವವರೆಂದು ನಾವೆಂದುಕೊಳ್ಳುವ ಹೊತ್ತಿಗೆ ಅರ್ಜುನ "ದರಿದ್ರ ಸೊಳ್ಳೆಗಳು" ಎನ್ನುತ್ತಾ ಹೊರಬಂದ. ರಾತ್ರಿ ಪೂರ ನಿದ್ದೆ ಆಗಲಿಲ್ಲವೆಂದು ತನ್ನ ಅಳಲು ತೋಡಿಕೊಂಡ. ಮತ್ತೆ ಎಲ್ಲರೂ ಬೀಟ್ ಹಾಕಲು ನಿರ್ಧರಿಸಿದೆವು. ಅಷ್ಟರಲ್ಲಿ ಕಾಫಿಗಾಗಿ ನನ್ನ ನಾಲಗೆ ಚಡಪಡಿಸುತಿತ್ತು. ಅರುಣನಿಗೆ ಮೆಸೆಜ್ ಕಳಿಸಿದೆ. ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. "ಸಿಗುತ್ತೆ" ಅಂದಿದ್ದ. ದೇವೇಗೌಡರ ಪ್ರಭಾವೋ ಏನೋ ಅರುಣನ ಮೇಲೆ, ಅದು ಹುಸಿ ಆಶ್ವಾಸನೆ ಎಂದು ತಿಳಿಯಲು ಬಹಳ ಸಮಯ ಹಿಡಿಯಲಿಲ್ಲ.



ಮತ್ತೊಂದು ಸುತ್ತು ಮುಗಿಸಿ ಮತ್ತೆ ನಾವು ಉಳಿದು ಕೊಂಡಿದ್ದ ಜಾಗಕ್ಕೆ ಬಂದಾಗ ಐದು ಗಂಟೆ. ಸ್ನಾನಕ್ಕೆ ಹೊಳೆಗೆ ಹೋಗಲನುವಾದೆವು. ದಾರಿ ಕೇಳಿಕೊಂಡು ಹೋಗುವಾಗ ಅಲ್ಲೇ ಒಂದು ಸರ್ಕಲ್ಲಿನಲ್ಲಿ "ಮದುವೆ ಆಗ್ಬೇಡಿ ಸಾರ್" ಎಂದು ಆಣಿಮುತ್ತನ್ನುದುರಿಸುತ್ತಿದ್ದ. ಕುಡಿದಿದ್ದ ಎಂದು ಅವನ ಹಾವ-ಭಾವದಲ್ಲೇ ತಿಳಿಯಿತು. ಸ್ನಾನಕ್ಕೆಂದು ಹೊಳೆ ಬಳಿ ಬಂದಾಗ ಭಯಂಕರವಾದ ಸಹಿಸಲಸಾಧ್ಯವಾದ ಘಾಟು ಆ ಘಾಟಿನಲ್ಲಿ ಆವರಿಸಿಕೊಂಡಿತು. ಗಾಳಿ ಬೀಸಿದರೆ ದುರ್ನಾತ. ಅಲ್ಲೆ ಪಕ್ಕದಲ್ಲಿ 'ದಾನಿ'ಗಳು ಅಪಾರಪ್ರಮಾಣದಲ್ಲಿ ದಾನ ಮಾಡಿದ್ದುದರ ಪರಿಣಾಮ ಇದು(ಈ 'ದಾನಿ' ಪದಪ್ರಯೋಗ ಅರ್ಜುನನ ಅನ್ವೇಷಣೆ). ಆಗಸದಲ್ಲಿ ಇನ್ನು ಸೂರ್ಯ ಮೂಡಿರಲಿಲ್ಲ. 'ಹೇಮಾವತಿ' ಯಲ್ಲಿ ಮಿಂದಲು ಹೆದರಿಕೆಯಾಯಿತು. ಗೋವಿಂದರಾಜ್ ಮತ್ತು ಹರೀಶ್ ಸ್ನಾನ ಮಾಡುವ ನಿರ್ಧಾರವನ್ನು ಕೈಬಿಟ್ಟರು, ಹೊಳೆಯಲ್ಲಿ. ನಾನು ಮತ್ತೆ ಅರ್ಜುನ್ ಸೂರ್ಯನ ಆಗಮನಕ್ಕಾಗಿ ಎದುರು ನೋಡುತ್ತಿದೆವು. ಶ್ರೀನಿವಾಸ ಮತ್ತು ಶ್ರೀಕಾಂತ ಕತ್ತಲೆಯಲ್ಲಿ ದಾರಿ ಮಾಡಿಕೊಂಡು ನೀರಿಗಿಳಿದು 'ಸಾಹಸಿ'ಗಳಾದರು. ಬೆಳಕು ಮೂಡಿ ನೀರಿಗಿಳಿಯುವ ಹೊತ್ತಿಗೆ 'ದಾನಿ'ಗಳ ಆಗಮನ ಶುರುವಾಯಿತು. ಅವರ 'ದಾನ' ಯಾವ ಕಡೆಗೆ ಸಾಗುತ್ತಿದೆ ಎಂದು ನೋಡಿಕೊಂಡು ನೀರಿಗೆ ಇಳಿದೆವು. 'ದಾನಿ'ಗಳ ಬಗೆಗಿನ ಎಚ್ಚರಿಕೆಯಿಂದ ಬೇಗ ಸ್ನಾನ ಮುಗಿಸಿ ಹೊರಬಂದೆವು, ಶ್ರೀನಿವಾಸ ಮತ್ತು ಶ್ರೀಕಾಂತ ಸಂಧ್ಯಾವಂದನೆ ಮುಗಿಸಿ ಹೊರಬಂದರು. ಹರೀಶ್ ಮತ್ತು ಗೋವಿಂದರಾಜ್ ಅವರು ಸ್ನಾನಕ್ಕೆ ಬೇರೆ ಕಡೆ ಹೋಗಿದ್ದರು.



ಎಲ್ಲಾ ಮುಗಿಸಿ ಚತ್ರಕ್ಕೆ ಮತ್ತೆ ಬಂದಾಗ ಸಮಯ ಎಂಟಾಗಿತ್ತು. ಅರುಣನನ್ನು 'ಮದುವೆ ಗಂಡಿನ' ಅವತಾರದಲ್ಲಿ ನೋಡುವ ತವಕ ನನ್ನಲ್ಲಿ ಹೆಚ್ಚಿತ್ತು. ರಾತ್ರಿಯೆಲ್ಲ ನಿದ್ದೆಯಿಲ್ಲವಾದ್ದರಿಂದ ಶ್ರೀನಿವಾಸ, ಶ್ರೀಕಾಂತ ಕೂತಲ್ಲಿಯೇ ನಿದ್ರಿಸಲು ಶುರು ಮಾಡಿದರು. ಅಷ್ಟರಲ್ಲಿ 'ಮೈಸೂರು ಪೇಟ' ಧರಿಸಿ ಹಸೆಮಣೆಗೆ ಬಂದೇ ಬಿಟ್ಟ ಅರುಣ. ಕಿವಿಯಲ್ಲಿ ಅರಿಶಿಣದಿಂದ ಮಾಡಿದ ಕೋಡುಬಳೆಯನ್ನು ಸಿಕ್ಕಿಸಿಕೊಂಡಿದ್ದ. ಬಹಳ ವಿನೋದಮಯವಾಗಿತ್ತು. ಒಂದಷ್ಟು ಫೋಟೋಗಳು ಶ್ರೀನಿವಾಸ ಮತ್ತು ಶ್ರೀಕಾಂತನ ಕ್ಯಾಮೆರಾಗಳಿಂದ ಕ್ಲಿಕ್ಕಿಸಲ್ಪಟ್ಟವು.

'ಕಾಶೀಯಾತ್ರೆ' ಯ ನಾಟಕದ ತೆರೆ ಸರಿದು ಮಾಂಗಲ್ಯಧಾರಣೆ ವಿಧ್ಯುಕ್ತವಾಗಿ ನಡೆಯಿತು. ಅರುಣ್ ಮತ್ತು ರೇಖಾ ದಂಪತಿಗಳಾದರು :-) ಅರುಣನ ಲಕ ಲಕ ಹಲ್ಲಿನ ಹೊಳಪು ಹೈಲೈಟು. ಅವನ ನಗು ಕ್ಯಾಮೆರಾ ಫ್ಲಾಶ್ ಗಳಿಗೇ ಸ್ಪರ್ಧೆಯೊಡ್ಡುವಂತಿದ್ದವು. ಅರುಣ್ ಮತ್ತು ರೇಖಾ ನೂರ್ಕಾಲ ಚೆನ್ನಾಗಿ ಬಾಳಿ ಬದುಕಲಿ :-) ನಮ್ಮೊಂದಿಗೆ ಒಡಾಡಿಕೊಂಡಿದ್ದ ಗೆಳೆಯ, ಕಾಫಿ ಗೆಳೆಯ ಸಂಸಾರಸ್ಥನಾಗಿದ್ದ. ಅದರ ಭಾವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಾಗುತ್ತಿಲ್ಲ ನನಗೆ. ತುಂಬಾ ಖುಶಿಯಾಯಿತು.

ಮದುವೆ ಕಲಾಪಗಳೆಲ್ಲ ಮುಗಿದು ನಾವು ತಂದಿದ್ದ "ಗಿಫ್ಟ್" ಕೊಟ್ಟು ಊಟಕ್ಕೆ ಹೊರಟೆವು. ಊಟ ಮುಗಿಸಿ ಬಂದಾಗ ಡ್ರೈವರ್ ಶಾಕ್ ನೀಡಿದ್ದ, "ಗಾಡಿ ಸ್ವಲ್ಪ ಪ್ರಾಬ್ಲಮ್ ಇದೆ ಸಾರ್, ಇಲ್ಲೆ ಪಕ್ಕದ ಊರಿಗೆ ಹೋಗಿ ರಿಪೇರಿ ಮಾಡಿಸಿಕೊಂಡು ಬರ್ತೀನಿ" ಅಂದ. ಮೈಉರಿದುಹೋಯಿತು ,ಆದರೂ ಉಗುಳು ನುಂಗಿಕೊಂಡು "ಎಷ್ಟೊತ್ತಾಗುತ್ತೆ" ಎಂದೆ .
"ಒನ್ ಅವರ್ ಸಾರ್, ಬೇಗ ಸರಿ ಮಾಡ್ಸ್ಕೊಂಡ್ ಬರ್ತೀನಿ" ಎಂದು ಹಲ್ಕಿರಿದ .
ನಾವೆಲ್ಲ ಊಟ ಮುಗಿಸಿ ಹೊರಡಬೇಕೆಂದಿದ್ದರೆ ಈ ಡಬ್ಬಾ ಗಾಡಿ ರಿಪೇರಿ ಅನ್ನುತ್ತಿದ್ದಾನಲ್ಲ ಎಂದು. ಶುಭಾ ಒಂದಷ್ಟು ಆಂಗ್ಲಭಾಷೆಯಲ್ಲಿ ಬೈದಳು. ಬೆಂಗಳೂರಿಗೆ ಎಷ್ಟೊತ್ತಿಗೆ ತಲುಪುವೆವೋ ಎನ್ನುವ ಆತಂಕದಿಂದ ಊಟ ಮುಗಿಸಿದೆವು.

ಗಾಡಿ ಹೊರಡುವುದು ತಡವಾಗುತ್ತದೆಂದು ತಿಳಿದ ಅರ್ಜುನ್ ಮತ್ತು ಹರೀಶ್ ಹೊರಡಲು ಸಿದ್ದವಾದರು. ಅವರಾಗಲೇ ಊಟ ಮುಗಿಸಿದ್ದುದರ ಕಾರಣ ಮತ್ತು ಅವರಿಗೆ ಬೆಂಗಳೂರಿನಲ್ಲಿ ಮುಖ್ಯವಾದ ಕೆಲಸವಿದ್ದುದ್ದರಿಂದ ಅವರು ಹೊರಟರು.

ನಾನು, ಶ್ರೀಕಾಂತ ಊಟ ಮುಗಿಸಿ ಬರುವ ಹೊತ್ತಿಗೆ ಅದೇನಾಯಿತೋ ಏನೋ ಡ್ರೈವರ್ "ಗಾಡಿ ಓಕೆ ಸಾರ್, ಬೆಂಗಳೂರಿಗೆ ಹೋಗಿ ರಿಪೇರಿ ಮಾಡಿಸ್ಕೋಬೋದು, ಏನು ತೊಂದ್ರೆ ಇಲ್ಲ" ಎಂದ. ಎಲ್ಲರೂ ನಿರಾಳರಾದೆವು, ಬೇಗ ರೆಡಿ ಆಗಿ ಹೊರಡಲು ನಿರ್ಧರಿಸಿದೆವು. ಅರ್ಜುನ್ ಮತ್ತು ಹರೀಶರ ಜಾಗವನ್ನು 'ಮದುವೆ ಗಂಡಿನ' ಎರಡು ಭಾರವಾದ ಸೂಟುಕೇಸುಗಳು ತುಂಬಿದವು, ಫಿಸಿಕಲಿ. ಅರುಣ ಮತ್ತು ರೇಖಾಗೆ ವಿದಾಯ ಹೇಳಿ ಹೊರಡುವ ಹೊತ್ತಿಗೆ ಸಮಯ ಮಧ್ಯಾಹ್ನ ಮೂರು ಗಂಟೆ. ಶ್ರೀನಿವಾಸ ಕೂಡ ನಾವು ಹೊರಡುವ ಹೊತ್ತಿಗೆ ಹೊರಟು ನಿಂತಿದ್ದ. ಅವನು ಮೈಸೂರಿನಿಂದ ಹೊಳೆನರಸೀಪುರಕ್ಕೆ ಬೈಕಿನಲ್ಲಿ ಬಂದಿದ್ದ. ಶ್ರೀಕಾಂತ ಡ್ರೈವರನ ಹತ್ತಿರ ಮಾತನಾಡಿ ಮೈಸೂರಿನ ಮಾರ್ಗವಾಗಿ ಬೆಂಗಳೂರನ್ನು ಸೇರುವ ಬಗ್ಗೆ ಅವನನ್ನು ಒಪ್ಪಿಸಿದ್ದ. 'ಟವೇರಾ' ವೇಗಕ್ಕೆ ಬೈಕಿನ ಸ್ಪೀಡು ಹೊಂದುವುದೇ?? ಶ್ರೀನಿವಾಸ ನಮ್ಮನ್ನು ಹಿಂದಿಕ್ಕಿ ಮೈಸೂರಿನೆಡೆಗೆ ಶರವೇಗದಲ್ಲಿ ಧಾವಿಸಿದ್ದ.

ಹಿಂದಿನ ರಾತ್ರಿ ಯಾರೊಬ್ಬರಿಗೂ ಸರಿಯಾದ ನಿದ್ದೆ ಆಗಿರಲಿಲ್ಲ. ಗಾಡಿ ಹೊರಟ ಹದಿನೈದು ಇಪ್ಪತ್ತು ನಿಮಿಷದೊಳಗೆ ಎಲ್ಲರಿಗೂ ನಿದ್ದೆ ಹತ್ತಿಬಿಟ್ಟಿತ್ತು ಶ್ರೀಕಾಂತನ ಹೊರತಾಗಿ. ಡ್ರೈವರ ಪಕ್ಕ ಕೂತಿದ್ದ ಅವನು ರಸ್ತೆಯ ಇಕ್ಕೆಲಗಳನ್ನು ನೋಡುತ್ತಿದ್ದ, ಅವನನ್ನೇ ನೋಡುತ್ತಾ ನಾನು ನಿದ್ದೆಗೆ ಜಾರಿದ್ದೆ. ಸುಮಾರು ಅರ್ಧ ಗಂಟೆ ಆಗಿರಬಹುದು.

ಇದ್ದಕ್ಕಿದ್ದ ಹಾಗೆ ಶ್ರೀಕಾಂತ "ಗಾಡಿ ನಿಲ್ಸಿ ಗಾಡಿ ನಿಲ್ಸಿ " ಎಂದು ಕೂಗಿದ.

ಏನಾಯಿತು ಎಂದು ಕೇಳಿದಾಗ "ಅಲ್ಲಿ ಹಿಂದಗಡೆ ಶ್ರೀನಿವಾಸ ನಿಂತಿದ್ದಾನೆ, ಅವನ ಗಾಡಿ ಇದೆ" ಎಂದ.

ನಿದ್ದೆಯಿಂದ ಎದ್ದ ನಾನು ಕಣ್ಣುಜ್ಜಿಕೊಳ್ಳುತ್ತ ಗಾಡಿ ಇಳಿದು ಹಿಂದಕ್ಕೆ ಓಡಿದೆ, ಒಂದಷ್ಟು ಜನ ನಿಂತಿದ್ದರು, ಅವರನ್ನು ಸರಿಸಿ ನೊಡಿದರೆ ಶ್ರೀನಿವಾಸ ನಿಂತಿದ್ದಾನೆ, ಬಲ ಮೊಣಕೈಯೆಲ್ಲವೂ ರಕ್ತ ಸಿಕ್ತ. ಮುಖದ ಬಲಭಾಗದಲ್ಲಿ ತರಚಿದ ಗಾಯಗಳು, ಮುಖ ಸ್ವಲ್ಪ ಊದಿಕೊಂಡಿತ್ತು. ಹಾಕಿಕೊಂಡಿದ್ದ ಶರ್ಟ್ ಹರಿದಿತ್ತು. ಕತ್ತು ತಿರುಗಿಸಲಾಗದೆ ನರಳುತ್ತಿದ್ದ. ನನಗೆ ಬಹಳ ಗಾಬರಿಯಾಯಿತು, ನೀರು ಬೇಕಾ ಎಂದು ಕೇಳಿದ್ದಕ್ಕೆ ಸರಿಯಾಗಿ ನಮ್ಮೊಡನೆ ಮಾತನಾಡುತ್ತಿರಲಿಲ್ಲ, ಮಾತನಾಡಲು ಆಗುತ್ತಿರಲಿಲ್ಲ. ಅಪಘಾತದ 'ಶಾಕ್' ನಲ್ಲಿದ್ದ. ಅವನು ಉತ್ತರಿಸದೇ ಇರುವುದನ್ನು ನೋಡಿ ಇನ್ನಷ್ಟು ಭಯವಾಯಿತು.

ಅಲ್ಲೇ ಅಕ್ಕಪಕ್ಕದ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ಜನಗಳು ಹೇಳಿದ್ದಿಷ್ಟು. "ನಾವು ನೋಡ ನೋಡುತ್ತಿದ್ದಂತೆ ಗಾಡಿ ಸ್ಕಿಡ್ ಆಗಿ ಗಾಡಿ ಸಮೇತ ಮೂರು ಪಲ್ಟಿ ಹೊಡೆದು ಇಲ್ಲಿ ಕಾಣುತ್ತಿದೆಯಲ್ಲ ಈ ಪೊದೆ ಇಲ್ಲಿ ಬಂದು ಬಿದ್ಬಿಟ್ರು, ಸಾರ್ ಹೆಲ್ಮೆಟ್ ಇಲ್ದಿದ್ರೆ ಇವ್ರು ಇಲ್ಲೇ ಔಟ್ ಆಗ್ಬಿಡ್ತಿದ್ರು" ಎಂದರು.

ಎಲ್ಲರಿಗೂ ವಂದಿಸಿ ಅವನನ್ನು ಅಲ್ಲಿಂದ 'ಟವೇರ' ಬಳಿ ಕರೆತಂದೆವು. ಕುಡಿಯಲು ನೀರು ಕೊಟ್ಟು, ಏನಾಯಿತೋ ಎಂದು ಕೇಳಿದಾಗ, "ದಾರಿ ಮಧ್ಯ ಒಂದು ಕಲ್ಲು ಸಿಕ್ಕಿ, ಮುಂದಿನ ಟಯರ್ ಪಂಚರ್ ಆಗಿ ಪಲ್ಟಿ ಹೊಡೆದು ಬಿದ್ದುಬಿಟ್ಟೆ, ಅಲ್ಲೊಂದು ಕಲ್ಲಿತ್ತು ಅದಕ್ಕೆ ಸರಿಯಾಗಿ ಕುತ್ತಿಗೆಗೆ ಬಿತ್ತು" ಎಂದು ಕತ್ತು ಅಲುಗಿಸಲಾಗದೆ ಚೀರಿದ.

ಸ್ಥಳಕ್ಕೆ ಹೋಗಿ ನೋಡಿದಾಗ ಅಪಘಾತ ಎಷ್ಟು ಭೀಕರವಾಗಿತ್ತೆಂದರೆ ಬೈಕಿನ ರುಂಡವೇ ಕಳಚಿ ಬಿದ್ದಿತ್ತು!! ಕ್ರಾಶ್ ಗಾರ್ಡ್ ಬೆಂಡಾಗಿತ್ತು, ಹ್ಯಾಂಡಲ್ ಬೇರೆ ದಿಕ್ಕಿನೆಡೆಗೆ ತಿರುಗಿತ್ತು, ಎಲ್ಲಕ್ಕಿಂತ ಹೆಚ್ಚಾಗಿ ಶ್ರೀನಿವಾಸ ನ ಹೆಲ್ಮೆಟ್ ದವಡೆಯ ಬಳಿ ಬಿರುಕು ಬಿಟ್ಟಿತ್ತು. ನಮಗೂ ಪ್ರಾಮಾಣಿಕವಾಗಿ ಅನ್ನಿಸಿತ್ತು ಹೆಲ್ಮೆಟ್ ಇಲ್ಲದಿದ್ದರೆ ತಲೆಗೆ ಬಲವಾದ ಪೆಟ್ಟು ಬೀಳುತ್ತಿತ್ತು ಎಂದು, ಜೀವ ಹೋಗುವ ಸಾಧ್ಯತೆಯಂತೂ ಇತ್ತು ಹೆಲ್ಮೆಟ್ ಇಲ್ಲದಿದ್ದರೆ.

ಅಲ್ಲಿದ್ದ ಹಳ್ಳಿಗರು ಹೇಳಿದರು ಮುಂದೆ ಸಲ್ಪ ದೂರದಲ್ಲಿ ಆಸ್ಪತ್ರೆಯಿದೆ ಕರೆದುಕೊಂಡು ಹೋಗಿ ಎಂದು, ಅಲ್ಲಿಗೆ ಕರೆದುಕೊಂಡು ಹೋಗಿ ಪ್ರಥಮಚಿತ್ಸೆಯನ್ನು ಕೊಡಿಸಿದೆವು. ಅಲ್ಲಿದ್ದ ಡಾಕ್ಟರ್ ಸಲಹೆಯ ಮೇರೆಗೆ ಮೈಸೂರಿಗೆ ಕರೆದುಕೊಂಡು ಹೋಗಿ X-ray ತೆಗೆಸಿ ಎಂದು. ನಮಗಿದ್ದಿದ್ದ ಮುಖ್ಯ ಆತಂಕವೇ ಅದಾಗಿತ್ತು, ಕತ್ತಿನ ಮೂಳೆಯೇನಾದರೂ ಮುರಿದಿದ್ದರೆ ಎಂದು. ಆದಷ್ಟು ಮೈಸೂರಿಗೆ ಹೊರಡಬೇಕೆಂದು ನಿರ್ಧರಿಸಿದೆವು.

ಸಂಜೆ ಏಳರ ಹೊತ್ತಿಗೆ ಬೆಂಗಳೂರನ್ನು ತಲುಪುವ ಎಲ್ಲರ ಆನಿಕೆ ದಿಕ್ಕು ತಪ್ಪಿತ್ತು. ಮುಂದೆ ಹೇಗೆ ನಡೆಸುವುದು ?, ಏನು ಮಾಡುವುದು ? ನೂರು ಪ್ರಶ್ನೆಗಳನ್ನು ಪರಿಸ್ಥಿತಿ ನಮ್ಮೆದುರು ಇರಿಸಿ "ಈಗೇನ್ಮಾಡ್ತೀ" ಎಂಬಂತಿತ್ತು. ಸ್ವಲ್ಪ ಚೇತರಿಸಿಕೊಂಡು ಶ್ರೀನಿವಾಸನೇ ಅವರ ತಂದೆ ತಾಯಿಗೆ ವಿಷಯ ತಿಳಿಸಿದ, ಆದಷ್ಟು ಬೇಗ ಊರಿಗೆ ಬರುತ್ತೇನೆಂದ. ಇಲ್ಲಿ ಇದೆಲ್ಲ ನಡೆಯುತ್ತಿದ್ದರೆ ಅಲ್ಲಿ ಗೋವಿಂದರಾಜ್ ಮತ್ತು ಡ್ರೈವರ್ ಬೈಕನ್ನು ರಿಪೇರಿ ಮಾಡಿಸುತ್ತಿದ್ದರು. ಹೀಗೆಲ್ಲಾ ಆದರೂ ಶ್ರೀನಿವಾಸ "ನೀವೆಲ್ಲಾ ಹೊರ್ಡಿ, ನಾನು ಮೈಸೂರಿಗೆ ಹೋಗ್ತೀನಿ" ಎಂದಿದ್ದು ನನಗೆ ಬಹಳ ವಿಚಿತ್ರವಾಗಿ ತೋರಿತು.

ಅಮೇಲೆ ಶ್ರೀಕಾಂತ ಬಂದು "ಸರಿ ಈಗ ನೀನು ಮತ್ತು ಗೋವಿಂದರಾಜ್ ಗಾಡಿಯನ್ನು ಮೈಸೂರಿಗೆ ಲಗ್ಗೇಜ್ ಆಟೋ ದಲ್ಲಿ ಹಾಕ್ಕೊಂಡ್ ಬನ್ನಿ, ನಾನು ಇವನನ್ನ ಉಳಿದವರೊಡನೆ ಮೈಸೂರಿನ ಅಪೊಲೊ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆ, ಅಲ್ಲಿ ಚೆಕ್ ಮಾಡಿಸಿ ಅವನ ಗಾಡಿಯನ್ನ ಬಜಾಜ್ ಸರ್ವೀಸ್ ಸೆಂಟರಿಗೆ ಕೊಟ್ಟು ಶ್ರೀನಿವಾಸನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗೋಣ" ಎಂದ. ಯಾಕೋ ಗಾಡಿಯನ್ನು ಸರ್ವೀಸ್ ಸೆಂಟರಿಗೆ ಕೊಟ್ಟು ಬರುವುದು ಯಾರಿಗೂ ಸರಿ ಬರಲಿಲ್ಲ. ಅದೊಂದು ಮಾತನ್ನು ಧಿಕ್ಕರಿಸಿ ಉಳಿದಕ್ಕೆ ಅನುಮೋದಿಸಿ ಮೈಸೂರಿಗೆ ಹೊರಡಲು ನಿರ್ಧರಿಸಿದೆವು.

ಶ್ರೀಕಾಂತ, ಶ್ರೀನಿವಾಸ, ಶ್ರುತಿ, ಶುಭಾ ಇಷ್ಟು ಜನ ಗಾಡಿಯಲ್ಲಿ ಮೈಸೂರಿಗೆ ಹೊರಟರು. ನಾನು ಮತ್ತೆ ಗೋವಿಂದರಾಜ್ ಬೈಕನ್ನು ಬೈಕನ್ನು ಮೈಸೂರಿನ ಅಪೋಲೊ ಆಸ್ಪತ್ರೆ ಬಳಿ ತಂದೆವು. ಸಮಯ ಸುಮಾರು 7 ಗಂಟೆ ಆಗಿತ್ತೆನಿಸುತ್ತದೆ. ನಾನು ಮತ್ತೆ ಗೋವಿಂದರಾಜ್ ಬರುವ ಹೊತ್ತಿಗೆ ಚೆಕಪ್ ಮುಗಿದಿತ್ತು. ಕತ್ತಿಗೇನೂ ಆಗಿಲ್ಲವೆಂದು ಕೇಳಿ ಸಮಾಧಾನವಾಯಿತು. ಉಳಿದ ಫಾರ್ಮಾಲಿಟಿಗಳನ್ನ ಮುಗಿಸಿ ಬರುವುದಕ್ಕಾಗಿ ಅಪೊಲೊ ಆಸ್ಪತ್ರೆ ಹೊರಾಂಗಣದಲ್ಲಿ ಕಾಯುತ್ತಿದ್ದೆವು, ಎಲ್ಲರೂ ಅದೇ ಮಾತು, ಏನೋ ಅನ್ಕೋತಿದ್ವಿ, ಏನೋ ಆಗ್ಬಿಡ್ತು, ನಾವು ಆ ಹಾದಿಯಲ್ಲಿ ಹೋಗದಿದ್ದರೆ ? ಶ್ರೀಕಾಂತ ನಡೆದ ಅಪಘಾತವನ್ನು ಗಮನಿಸದಿದ್ದರೆ? ಅವನೂ ಕೂಡ ನಿದ್ರಿಸಿದ್ದರೆ?? ಹೀಗೆ ನಮಗೆ ಕೇಳಿಕೊಂಡ ಪ್ರಶ್ನೆಗಳಿಗೆ ಯಾರೊಬ್ಬರಲ್ಲೂ ಉತ್ತರವಿರಲಿಲ್ಲ, ಶ್ರೀನಿವಾಸ ಹೊರಗಡೆ ಬರುವುದಕ್ಕೇ ಕಾಯುತ್ತಿದ್ದೆವು. ಅಷ್ಟೊತ್ತಿಗೆ ಶುಭಾ ಅವರ ದೊಡ್ಡಪ್ಪನ ಮನೆ ಇಲ್ಲೇ ಹತ್ತಿರವಿದೆಯೆಂದೂ ಬೈಕನ್ನು ಇಲ್ಲೇ ಬಿಡೋಣ ಎಂದು ಹೇಳುತ್ತಿದ್ದಳು. ಶ್ರೀನಿವಾಸ ಹೊರಗಡೆ ಬಂದಾಗ ಮುಖ ಸಲ್ಪ ಮಟ್ಟಿಗೆ ಗೆಲುವಾಗಿತ್ತು. ಮತ್ತೆ ಅವನ್ನು ವಿಚಾರಿಸಿಕೊಂದು ಗಾಡಿಯಲ್ಲಿ ಕೂತು ಶುಭಾಳ ದೊಡ್ಡಪ್ಪನ ಮನೆ ಕಡೆಗೆ ಹೊರಟೆವು. ಮನೆ ಬಹಳ ಸೊಗಸಾಗಿತ್ತು, ಮನೆಯ ಮುಂದೆ ಒಂದಷ್ಟು ಗಿಡಗಳನ್ನು ಬೆಳೆಸಿದ್ದರು, ಬಾಗಿಲ ಎದುರಿಗೆ ತುಳಸೀಕಟ್ಟೆ, ತಂಪಿನ ಹವೆ ಬಹಳ ಹಿತವನ್ನು ನೀಡಿತು. ಮನೆಯಲ್ಲಿದ್ದ ಶುಭಾಳ ದೊಡ್ಡಪ್ಪ ಶ್ರೀನಿವಾಸನ್ನು ವಿಚಾರಿಸಿ ಎಲ್ಲಾ ಸರಿ ಹೋದ ಮೇಲೆ ಬಂದು ಗಾಡಿ ತೆಗೆದುಕೊಂಡು ಹೋಗು, ಏನೂ ಯೋಚನೆ ಮಾಡಬೇಡ ಎಂದು ಹೇಳಿ ನಮ್ಮೆಲ್ಲರನ್ನು ಬೀಳ್ಕೊಟ್ಟರು.

ಸಮಯ ಎಂಟಾಗಿದ್ದಿರಬಹುದು. ಆಗ ಬೆಂಗಳೂರಿನೆಡೆಗೆ ಹೊರಟೆವು. ದೇಹಕ್ಕೆ ಅಷ್ಟಾಗಿ ದಣಿವಾಗಿಲ್ಲದಿದ್ದರೂ ಮನಸಿಗೆ ಏನೇನೇನೋ ನಡೆದು ಹೋಯಿತೆಂಬ ಭಾವನೆ. ಯಾರ ಪ್ರಶ್ನೆಗಳಿಗೂ ಯಾರ ಬಳಿಯೂ ಉತ್ತರವಿರಲಿಲ್ಲ. ಮತ್ತೆ ಎಲ್ಲರೂ ನಿದ್ದೆಗೆ ಜಾರಿದೆವು, ಮಾರ್ಗ ಮಧ್ಯ ಊಟ ಮುಗಿಸಿ ಕೆಂಗೇರಿಯ ಬಳಿ ಬಂದಾಗ ಗೋವಿಂದರಾಜ್ ನಾನು ಇಲ್ಲೇ ಇಳಿದುಕೊಳ್ಳುತ್ತೇನೆಂದರು. ಅವರ ವಯಸ್ಸಿನವರು ಬೇರೆಯಾರಾಗಿದ್ದರೂ "ಮನೆವರೆಗೂ ಬಿಟ್ಬಿಡೀ ಪಾ" ಎನ್ನುತ್ತಿದ್ದರೇನೋ ?? ಎಲ್ಲರಿಗೂ ಬೈ ಬೈ ಹೇಳಿ ಅಲ್ಲೆ ಕಣ್ಮರೆಯಾಗಿಬಿಟ್ಟರು.ಶ್ರೀನಿವಾಸನನ್ನು ಜಾಲಹಳ್ಳಿಯ ಅವರ ಮನೆ ಬಳಿ ಬಂದೆವು. ಶ್ರೀಕಾಂತ ಅವನನ್ನ ಕರೆದು ಕೊಂಡು ಅವರ ಮನೆ ಬಾಗಿಲ ವರೆಗೂ ಬಿಟ್ಟು ಬಂದ, ನಂತರ ಶುಭಾಳ ಮನೆಗೆ ಹೋಗಿ ಅಲ್ಲಿಂದ ಶರ್ಮಾಳನ್ನು ಚಾಮರಾಜಪೇಟೆ ಬಳಿ ಇಳಿಸಿ ನಾನು ಮತ್ತೆ ಶ್ರೀಕಾಂತ ನ.ರಾ. ಕಾಲೋನಿ ಬಳಿ ಬರುವ ಹೊತ್ತಿಗೆ ರಾತ್ರಿ ಹನ್ನೊಂದೂವರೆಯಾಗಿತ್ತು. ಡ್ರೈವರನ ದುಡ್ಡು ಸೆಟಲ್ ಮಾಡಿ ನಾನು ಮನೆ ದಾರಿ ಹಿಡಿದೆನು. ಹೋಗಿದ್ದು ಎರಡೇ ದಿನವಾದರೂ ಏನೆಲ್ಲ ನಡೆದು ಹೋಯಿತೆಂಬ ಅಚ್ಚರಿ, ಒಂದು ತೆರನಾದ ಭಾರ ಮನಸಿಗೆ.

ನಾಗಸಂದ್ರ ಸರ್ಕಲ್ಲಿನ ಇಳಿರೋಡಿನಲ್ಲಿ ನಡೆದು ಬರುತ್ತಿದ್ದ ನನ್ನನ್ನು ನೋಡಿ ಬೀದಿ ನಾಯಿಯೊಂದು ನನ್ನ ನೋಡುತ್ತಲೇ ತಾನಿದ್ದ ಜಾಗದಿಂದ ವಿಕಾರವಾಗಿ ಬೊಗಳುತ್ತಾ ನನ್ನೆಡೆಗೆ ಓಡಿ ಬಂತು. "ಭಗವಂತಾ" ಎಂದು ಉದ್ಗರಿಸಿದ್ದಷ್ಟೆ ನೆನಪು.