ಒಂದು ಮಧ್ಯಾನ್ಹ ಹೀಗೆ ಅವಳೊಡನೆ ಚರ್ಚಿಸುತ್ತಿದ್ದೆ, ಕನ್ನಡ ಬರಹಗಾರರ ಬಗ್ಗೆ, ತೇಜಸ್ವಿ ಬಹಳ ಚೆನ್ನಾಗಿ ಬರೀತಾರೆ, ಎಷ್ಟು ಸರಳವಾಗಿ ವಿಷಯ ಮುಟ್ಟಿಸುತ್ತಾರೆ, ಭೈರಪ್ಪನೋರು ಒಂಥರಾ ಸ್ತ್ಯಾಂಡರ್ಡ್, ಸಿಕ್ಕಾಪಟ್ಟೆ ಫಿಲಾಸಪಿ ಓದಿಕೊಂಡಿದ್ದಾರೆ, ಅವರ ಕಾದಂಬರಿಗಳು ಓದಿ ಮುಗಿಸಿದರೆ ಅದೇ ಗುಂಗಿನಲ್ಲಿ ಇರಬೇಕಾಗುತ್ತದೆ ಹಾಗೆ ಹೀಗೆ ಅಂತೆಲ್ಲ.
ತಟ್ಟನೆ ಹೇಳಿದಳು "ನೋಡಣ್ಣ ಈ ಕತೆಗಳು ಕಾದಂಬರಿಗಳು ಬರೆಯುವ ಮಂದಿಯನ್ನು ನೋಡಿದ್ದೇನೆ, ಅವರ್ಯಾರು ಮೂಲತ: ಬೆಂಗಳೂರಿನವರಲ್ಲ, ಅವರಿಗೊಂದು ಮೂಲವೆಂಬುದು ಇರುತ್ತದೆ ಅದು ಹಳ್ಳಿಗಳು. ಬೆಂಗಳೂರಿನ ಮೂಲದವರಿಗೆ ಒಳ್ಳೆ ಕತೆ ಹೆಣೆಯಲು ಆಗುವುದಿಲ್ಲವೆನಿಸುತ್ತದೆ" ಎಂದಳು.ನಾನು ಆದಾದ ಬಳಿಕ ಯೋಚಿಸತೊಡಗಿದೆ, ಬೆಳಗೆರೆ ಬಳ್ಳಾರಿಯವರು, ಭೈರಪ್ಪ ಚನ್ನಪಟ್ಟಣದ ಕಡೆಯವರು, ತೇಜಸ್ವಿ ಮೂಡಿಗೆರೆಯವರು, ಕಾಯ್ಕಿಣಿ ಗೋಕರ್ಣದವರು. ಅರೆರೆ ನನಗೆ ತಿಳಿದವರು ಬೆಂಗಳೂರಿನವರು ಯಾರು ಇಲ್ಲ!! ತಕ್ಷಣ soft soft software ಕತೆಗಳನ್ನು ಬರೆಯುವ ವಸುಧೇಂದ್ರರಿದ್ದಾರಲ್ಲ ಎಂದು ನಿರಾಳವಾಯಿತು. ನಾನು ಅದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕಾರಣ ಅವರ ಕತೆಗಳು ಹೆಚ್ಚು ಇಷ್ಟವಾಗುತ್ತದೆ, ಕಾರಣ ಅದು ನಮಗೆ ಹತ್ತಿರವಾಗಿರುತ್ತದೆ. ಅವರ "ಎಲ್ಲರ ಮನೆ ಕಾರಿಗೂ ನೆಗ್ಗು" ಎಂಬ ಲೇಖನವನ್ನ ಪತ್ರಿಕೆಯಲ್ಲಿ ಓದಿದ್ದೆ. ಇಡೀ ಪತ್ರಿಕೆಯನ್ನ ಜತನವಾಗಿ ಇಂದಿಗೂ ಕಾಪಿಟ್ಟುಕೊಂಡಿದ್ದೇನೆ, ಅಷ್ಟು ನಕ್ಕಿದ್ದೇನೆ. ಒಬ್ಬರಾದರೂ ಸಿಕ್ಕರಲ್ಲ ಎಂದು ಅವರ ಪುಸ್ತಕ ತೆರೆದು ನೋಡಿದರೆ "ಬಳ್ಳಾರಿಯ ಸಂಡೂರಿನಲ್ಲಿ ಜನನ" ನೋಡಿ ನಿರಾಶನಾದೆ. ಉಹೂ ಬೆಂಗಳೂರಿನವರು ಸಿಗಲೇ ಇಲ್ಲ.
ಮತ್ತೆ ಹುಡುಕಿ ಹುಡುಕಿ ಸಾಕಾಯಿತು. ನಿಮಗಾರಾದರು ಗೊತ್ತಿದ್ದರೆ ತಿಳಿಸಿ.
ಪಟ್ಟಣಗಳಲ್ಲಿ ದೊಡ್ಡ ದೊಡ್ಡ ಶಹರಗಳಲ್ಲಿ ಹುಟ್ಟಿ ಬೆಳೆದವರಿಗೆ ಕತೆಗಳು ಏಕೆ ಹುಟ್ಟುವುದಿಲ್ಲವೋ ನಾ ಕಾಣೆ. ನಾನು ಹಲವಾರು ಪ್ರಯತ್ನಿಸಿದ್ದೇನೆ, ಸಣ್ಣ ಕತೆಗಳು ಬರೆಯಲು. ರಭಸವಾಗಿ ಬೈಕ್ ಓಡಿಸುವಾಗ ಯಾವುದೋ ತಿರುವಿನಲ್ಲೋ ಸಿಗ್ನಲಿನಲ್ಲೋ ಕತೆ ಹುಟ್ಟಿಕೊಂಡಿರುತ್ತದೆ. ಲೋಕದ ಚಿಂತೆ ಮರೆತು ಕತೆಗೆ ರೆಕ್ಕೆ ಪುಕ್ಕ ಕಟ್ಟಲು ಕೂತಿದ್ದೇನೆ. ಬೈಕ್ ಪಾಡಿಗೆ ರಭಸವಾಗಿ ಹೋಗುತ್ತಿರುತ್ತದೆ ಕತೆಯ ಓಘ ಕೂಡ ಅದೇ ರಭಸದಲ್ಲಿ ಬೆಳೆಯುತ್ತಿರುತ್ತದೆ. "ಒಂದು ಮುಂಜಾವಿನಲ್ಲಿ ಆತ ಹಳ್ಳಿಯಿಂದ ಹೊರಟ, ಮನೆಯಲ್ಲಿ ಇನ್ನು ಇರಲಾಗುವುದಿಲ್ಲವೆಂದು ನಿರ್ಧರಿಸಿದ, ಮನೆಯ ಕಿರುಕುಳ ಸಾಕೆಂದು .........." ಹೀಗೆ ಹಲವು ಸಾಲುಗಳು. ಮತ್ತೆ ಕತೆ ಆರಂಭಿಸಲು ಯಾವುದೋ ಹಳ್ಳಿ ಹೆಸರನ್ನು ತಡಕಾಡುತ್ತಿರುತ್ತೇನೆ. ಜೀವಮಾನದಲ್ಲೇ ಒಂದು ಹಳ್ಳಿಯನ್ನೂ ಸರಿಯಾಗಿ ನೋಡದ, ಅಲ್ಲಿನ ಪರಿಸರ ತಿಳಿಯದ ನಾನು ಕತೆ ಹೇಗೆ ಬರೆಯಲು ಸಾಧ್ಯ?M G road ಶುರುವಾಗುವ ಹೊತ್ತಿಗೆ ಶುರುವಾಗುವ ಕತೆ Corporation ಬಳಿ ಬರುವುದರೊಳಗಾಗಿ ರೆಕ್ಕೆ ಪುಕ್ಕ ಸರಿಯಾಗಿ ಅಂಟಿಕೊಳ್ಳದೆ ಕತೆ ಸತ್ತಿರುತ್ತದೆ, ಬೈಕ್ ನ ವೇಗವೂ ಕಮ್ಮಿಯಾಗಿರುತ್ತದೆ. ಕತೆ ಬರೆಯಲು ಮನಸಿನ್ನೂ ಮಾಗಿಲ್ಲವೆಂದು ಸುಮ್ಮನಾಗುತ್ತೇನೆ. ತೇಜಸ್ವಿಯವರ "ಚಿದಂಬರ ರಹಸ್ಯ" ಓದಿ ಅದರಲ್ಲಿ ಬರುವ ಲಂಟಾನದ ಜಿಗ್ಗು ತಿಳಿಯಲು ನಾನು ಪಟ್ಟ ಹರಸಾಹಸ ಅರುಣನಿಗೆ ಮಾತ್ರ ಗೊತ್ತು. ರಂಗಶಂಕರದಲ್ಲಿ ನಾಟಕವನ್ನು ಏರ್ಪಡಿಸಿದಾಗ ನಾನು ಕಾಯುತ್ತಲಿದ್ದು ಲಂಟಾನದ ಜಿಗ್ಗು ನೋಡಲೆಂದೆ. ಮುಳ್ಳಯ್ಯನಗಿರಿ ಚಾರಣದಲ್ಲಿ ಅರುಣ ತೋರಿಸಿದ್ದ "ಇದೇ ಕಣೊ ಲಂಟಾನದ ಜಿಗ್ಗು" ಎಂದು..ಇನ್ನು ಸಮಾಧಾನವಾಗಿಲ್ಲ. ತೇಜಸ್ವಿಯರ ಕತೆಗಳ ಪಾತ್ರಗಳೇ ತಿಳಿಯಲು ಇಷ್ಟು ಒದ್ದಾಡಿದರೆ ನಾನು ಹೇಗೆ ತಾನೆ ಕತೆ ಬರೆಯಬಲ್ಲೆನು?
ಕನ್ನಡದಲ್ಲಿ ಆರುನೂರಕ್ಕೂ ಹೆಚ್ಚು ಬ್ಲಾಗುಗಳಿದೆ. ಅದರಲ್ಲಿ ಬೆಂಗಳೂರಿನವರೆಂದರೆ ಎಂದರೆ ಒಂದಂಕಿಯಲ್ಲಿ ಎಣಿಸಿಬಿಡಬಹುದು. ಎಲ್ಲರಿಗೂ ಬೇರೆಯ ಮೂಲವೊಂದಿರುತ್ತದೆ. ಅದಕ್ಕಾಗಿ ಕತೆಗಳು ಹುಟ್ಟುತ್ತವೆ ಎನಿಸುತ್ತಿದೆ ನನಗೆ. ಒಂದಷ್ಟು ಹಳ್ಳಿಗಳು, ಬೆಟ್ಟಗಳು, ಊರು ಕೇರಿ ಸುತ್ತಿ ಬಂದರೆ ಕತೆಗಳನ್ನ ಬರೆಯಬಹುದೇನೊ? ಬರೆದರೆ ಖಂಡಿತಾ ನಿಮ್ಮ ಮುಂದಿಡುತ್ತೇನೆ.
ವಿ.ಸೂ : ಇಲ್ಲಿ ಬೆಂಗಳೂರಿನವರು ಏಕೆ ಕತೆ ಬರೆಯಲಾಗುತ್ತಿಲ್ಲ ಎಂಬುದನ್ನ ತಿಳಿಯಲು ಯತ್ನಿಸಿರುವದರ ಬಗ್ಗೆ ಬರೆದಿದ್ದೇನಷ್ಟೆ, ಬೇರೆ ಊರಿನವರ ಬಗ್ಗೆ ಜೆಲಸಿ ಇದೆಯೆಂದು ಅಪ್ಪಿ ತಪ್ಪಿಯೂ ಕೂಡ ಭಾವಿಸಬೇಡಿ. ಜೈ ಕರ್ನಾಟಕ.