ಎರಡು ಮುಖಗಳು..

Thursday, April 10, 2008


ಸನ್ನಿವೇಶ 1 : ಆಗ ತಾನೆ ಜೀತದಾಳು ತನ್ನ hectic ಕೆಲಸವನ್ನ ಮುಗಿಸಿ, ಕೈಕಾಲು ಮುಖ ತೊಳೆದು ಯಜಮಾನಿಯ ಊಟಕ್ಕಾಗಿ ಅಂಗಳದಲ್ಲಿ ಕಾದು ಕುಳಿತಿದ್ದ, ಯಜಮಾನಿ ತಂದ ಊಟವನ್ನು ಕಣ್ಣಿಗೊತ್ತಿಗೊಂದು ತಿನ್ನಲನುವಾದ, ಆಗ ತಾನೆ ಮನೆಗೆ ಪ್ರವೇಶಿಸಿದ ಯಜಮಾನ ಹಸುಗಳಿಗೆ ಹುಲ್ಲು ಹಾಕಿಲ್ಲವೆಂದು ಕೆಂಡಾಮಂಡಲನಾಗಿ ಆಳು ತಿನ್ನಲನುವಾಗಿದ್ದ ತಟ್ಟೆಯನ್ನು ಝಾಡಿಸಿ ವೊದ್ದುಬಿಟ್ಟ, ಅನ್ನ ಅಂಗಳದಲ್ಲಿ ಚೆಲ್ಲಾಪಿಲ್ಲಿಯಾಗಿಬಿಟ್ಟಿತು, ಆಳಿಗೆ ಹೊಟ್ಟೆ ಹಸಿವಿನೊಂದಿಗೆ ನಾಲ್ಕು ಬಿಗಿತಗಳು,ಬಯ್ಗುಳಗಳು ಬಿದ್ದವು...ಆಳಿನ ಕಂಗಳಲ್ಲಿ ನೀರು ಬತ್ತಿಹೋಗಿತ್ತು, ಚುರುಗುಡುತ್ತಿದ್ದ ಹೊಟ್ಟೆಯೊಂದಿಗೆ ಸುಡುಬಿಸಿಲಿನಲ್ಲಿ........ ಆ ಯಜಮಾನ ಏನಾಗಿರಬಹುದು??

ಸನ್ನಿವೇಶ 2: ಕಷ್ಟದಲ್ಲಿರುವ ವೃದ್ಧರು, ಹಸಿದಿರುವ ಮುಖಗಳು ಕಂಡರೆ ಕೈಲಿದ್ದ ಹಣವನ್ನು ಎಷ್ಟಿದೆಯೆಂದೂ ಸಹ ನೋಡದೆ ಅವರಿಗೆ ಕೊಟ್ಟುಬಿಡುತ್ತಿದ್ದ, ತನಗೆ ತಿನ್ನಲಿಕ್ಕೆ ಇಲ್ಲದಿದ್ದರೂ ಹಸಿದಿರುವವರಿಗೆ ತಿನ್ನಲು ಕೊಟ್ಟು ಅವರನ್ನೇ ದಿಟ್ಟಿಸುತ್ತಾ ಕಣ್ಣುತುಂಬಿಕೊಳ್ಳುತ್ತಿದ್ದ, ಅವರ ಕೈಮುಗಿತದಲ್ಲಿ ಕೊನೆಗಾಣುತ್ತಿತ್ತು..ಎಷ್ಟು ಜನರಿಗೆ ಅನ್ನ ನೀಡಿದನೋ ಗೊತ್ತಿಲ್ಲ .... ಈ ಯಜಮಾನ ಏನಾಗಿರಬಹುದು??

ಎರಡೂ ಸಹ ಸತ್ಯ, ಎರಡೂ ಸಹ ಶುದ್ಧ ಸುಳ್ಳು... ಯಾವುದನ್ನು ನಂಬುವುದು, ಯಾವುದನ್ನು ಬಿಡುವುದು....
ಬಹಳಷ್ಟು ಪ್ರಶ್ನೆಗಳು ಉಳಿದಿವೆ....!!!!

Race....

Wednesday, April 9, 2008


"Pehli nazar main kaisa jaadu kar diyaaaaaaaaa........."ಈ ಹಾಡಿಗೆ ಮನಸೋತು, ತಲೆದೂಗಿ(ಬಾಗಿ)!!, ಗುನುಗಿ ಗುನುಗಿ ಸಾಕಾಗಿ, FMನಲ್ಲಿ ಕೇಳಿ ಕೇಳಿ life -ಉ ನನ್ನದಾಗಿಸಿ ಕೊಂಡು ಭಾರಿ ನಿರೀಕ್ಷೆ ಹೊತ್ತು ಚಿತ್ರವನ್ನ ನೋಡಲು ಕುಳಿತೆ... Atif Aslam ಹಾಡುಗಾರಿಕೆ ಬಹಳವಾಗಿ ಮೆಚ್ಚಿದ್ದೆ.. ಚಿತ್ರನೋಡಿದ ಮೆಲೆ ನನಗನ್ನಿಸಿದ್ದು ಇಷ್ಟು...ನಿಮಗೆ ಬೇರೆ ಅನ್ನಿಸಬಹುದು, after all "ಅವರವರ ಭಾವಕ್ಕೆ ತಕ್ಕಂತೆ".....


Saif Ali Khan : ಹೊಸ ಗೆಟಪ್, ತುಂಬಾ ಖದರ್ ಇದೆ, ಒಳ್ಳೆ ಅಭಿನಯ..ChappaaLe...chappaaLe..
Askhaye Khanna : OK!!
Anil Kapoor : Timepass
Bipasha Basu : Censored!!!
Katrina Kaif : Cute..
Sameera Reddy : ಯಾಕಿದ್ದಳೊ ಕೊನೆವರೆಗೂ ಗೊತ್ತಾಗಲೇ ಇಲ್ಲ..


Locations : South Africa ಎಂದು ಚಿತ್ರದಲ್ಲಿ ತೋರಲ್ಪಡಿಸುತ್ತಾರೆ... ಕಣ್ಮನ ಸೆಳೆಯುತ್ತದೆ..
Cars -u : ಉನ್ನತ ದರ್ಜೆಯ ಮಸ್ತ್ ಮಸ್ತ್ ಕಾರುಗಳು...ಒಂದಕ್ಕಿಂತ ಒಂದು ಚೆನ್ನಾಗಿದೆ.
ಕತೆ : Full confuse -u...ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಬಿಡುವ ಯತ್ನದಲ್ಲಿ super ಆಗಿ ಎಡವಿದ್ದಾರೆ..ಆದರೆ ಒಂದಂತು ಖರೆ, ಒಂದು ದೃಶ್ಯವನ್ನು ನೀವು miss ಮಾಡಿದರೆ ತಲೆ ಕುಲಗೆಡುತ್ತದೆ...ಮೋಸ, ಧಗಾ, ವಂಚನೆ ಚಿತ್ರದ ಜೀವಾಳ....


ಎಲ್ಲದಕ್ಕಿಂತ ಹೆಚ್ಚಾಗಿ ನಾನು ಕಾಯುತ್ತಿದ್ದ "Pehli Nazar " ಹಾಡಿನ ಚಿತ್ರೀಕರಣ ನನ್ನ ನಿರೀಕ್ಷೆ ಹುಸಿ ಮಾಡಿತು...ಇನ್ನೂ ಚೆನ್ನಾಗಿ ಮಾಡಬಹುದಿತ್ತು..
ದುಡ್ಡು ಜಾಸ್ತಿ ಇದ್ದರೆ ಒಮ್ಮೆ ಚಿತ್ರವನ್ನ ವೀಕ್ಷಿಸಿ............

ಅರಮನೆ ...

Tuesday, March 25, 2008


ಪತ್ರ ಬರೆಯಲಾ ಇಲ್ಲ ಚಿತ್ರ ಬಿಡಿಸಲಾ
ಹೇಗೆ ಹೇಳಲಿ ನನ್ನ ಮನದ ಹಂಬಲ......

ಮಾತನಾಡಲಾ ಇಲ್ಲ ಹಾಡು ಹಾಡಲಾ
ಹೇಗೆ ತಿಳಿಸಲಿ ನನ್ನ ಎದೆಯ ತಳಮಳ.....


ಇದು "ಅರಮನೆ" ಚಿತ್ರದ ಒಂದು ಹಾಡಿನ ನಾಲ್ಕು ಸಾಲುಗಳು...ಬಹಳ ಬಹಳ ಬಹಳ ಹಿಡಿಸಿತು ಅದಕ್ಕಾಗಿ ಬ್ಲಾಗಿಸಿದೆ...ಬರೆದವರು "ಕವಿರಾಜ್" ....


ಚೆನ್ನಾಗಿದೆ ಅಲ್ಲ್ವಾ??

ನಾನು ಬ್ರಹ್ಮ ಮತ್ತು ಮುಖ್ಯಮಂತ್ರಿ - ಭಾಗ 5

Friday, March 7, 2008

Brahma is back... 5 ತಿಂಗಳ ಹಿಂದೆ ಬಂದಿದ್ದ ಬ್ರಹ್ಮನನ್ನು ದಸರೆಯ ರಜೆಗೆಂದು ಕಳಿಸಿದ್ದೆ, ಆಗಲೇ ಸಾಕಷ್ಟು ವರಗಳ ಪಟ್ಟಿ ಇಟ್ಟಿದ್ದೆ, ಇನ್ನಷ್ಟು ಹೇಳುವ ಹಂಬಲದಲ್ಲಿದ್ದೆ, ಸಮಯಾವಕಾಶ ಅಭಾವದಲ್ಲಿದ್ದ ಬ್ರಹ್ಮನನ್ನು ದಸರೆಯ ರಜೆಗಾಗಿ ಕಳುಹಿಸಿಕೊಟ್ಟಿದ್ದೆ, ಇದೀಗ ಮರಳಿ ಬಂದು ನಿನ್ನ ವರಪಟ್ಟಿಯನ್ನು ಮುಗಿಸು ಎಂದು ಕಾಡುತ್ತಿದ್ದಾನೆ, ಇನ್ನಿಲ್ಲದಂತೆ, ನಿನ್ನ ವರಪಟ್ಟಿಯನ್ನು ಮುಗಿಸಿದರೆ ನನಗೆ ವರಮುಕ್ತಿಯಾಗುವುದಯ್ಯ ಎಂದು ಹೇಳಿದುದಕ್ಕಾಗಿ ಮತ್ತೆ ಬ್ರಹ್ಮನ ಸರಣಿಯ ಕೊನೆಯ ಭಾಗವನ್ನು ನಿಮ್ಮ ಮುಂದಿಡುತ್ತಿದೇನೆ, ಓದಿಕೊಳ್ಳಿ...

ಈ ’ನಾನು, ಬ್ರಹ್ಮ ಮತ್ತು ಮುಖ್ಯಮಂತ್ರಿ’ ಸರಣಿಯನ್ನು ನಾಲ್ಕು ಭಾಗಗಳಲ್ಲಿ ಕುಯ್ದಿದ್ದೆ ;-), ಮಾನವರ ನೆನಪಿನ, ಮೆದುಳಿನ ಕಾರ್ಯಕ್ಷಮತೆಯ ಅರಿವು ನನಗಿರುವುದರಿಂದ, ಒಮ್ಮೆ ಆ ನಾಲ್ಕು ಭಾಗಗಳ ಮೇಲೆ ಒಂದು ಸಿಂಹಾವಲೋಕನ ಮಾಡಿಬಿಡಿ...ಪ್ಲೀಸ್, ಇಲ್ಲವೆಂದರೆ ನಿಮ್ಮ ಲಹರಿಗೆ ತೊಡಕುಂಟಾಗುತ್ತದೆ, ಅದರ ಕೊಂಡಿಗಳು ಹೀಗಿವೆ, ಒಂದು ಧೀರ್ಘವಾದ ನಿಟ್ಟಿಸಿರು ಬಿಟ್ಟು ಓದಲನುವಾಗಿ, ನಿಮಗೆ ಶುಭವಾಗಲಿ.....
ಭಾಗ 1
ಭಾಗ 2
ಭಾಗ 3
ಭಾಗ 4
----------------



ಬ್ರಹ್ಮನ ಮುಂದೆ ನಾನು ಮುಖ್ಯಮಂತ್ರಿಯಾಗುವ ಹಾಗೂ ಆ ಸ್ಥಾನದ ಅಧಿಕಾರದ ವ್ಯಾಪ್ತಿ ವಿಸ್ತರಿಸುವ ಬಗ್ಗೆ ನನಗಿದ್ದ ಕನಸುಗಳನ್ನ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದೆ..

ಬ್ರಹ್ಮ ಬಂದ ಕೂಡಲೆ ಕೈಕುಲುಕಿ "ಎಲ್ಲಾ ಕ್ಷೇಮವೋ?"

"Everything is fine Mr.Brahma"..ಎಂದು ಹೇಳಿ ಮುಗಿಸಿ ಮತ್ತೆ..

"I missed you a lotttttttt..." ಎಂದು ಭಾವಭರಿತವಾಗಿ ಉದ್ಗರಿಸಿದೆ..

ಅದಕ್ಕೆ ಆತ "OK" ಎಂದು "ಮುಂದುವರೆಸು ಇನ್ನ ಪ್ರಣಾಳಿಕೆಯನ್ನು" ಎಂದುಬಿಟ್ಟ..

Hmmm.. "OK" ಪದಬಳಕೆ ತಟ್ಟಬೇಕಾದ ಸ್ಥಳಗಳನ್ನೆಲ್ಲ ತಟ್ಟಿದೆ ಎಂದು ನನ್ನ ಆಶಯಗಳನ್ನ ಮುಂದುವರೆಸಲು ಸನ್ನದ್ಧನಾದೆ..

ಬ್ರಹ್ಮ ನನ್ನ ರಾಜಕೀಯ ಆಶಯಗಳನ್ನೆಲ್ಲ ಅದಾಗಲೇ ನಿನ್ನ ಮುಂದಿಟ್ಟಿಯಾಗಿದೆ, ಮತ್ತೊಮ್ಮೆ clear picture ಬೇಕಾದರೆ ಮತ್ತೊಮ್ಮೆ ಓದಿಕೊಂಡು ಬಿಡು..


"ಹಾಗದರೆ ನಿನ್ನ ವರಪಟ್ಟಿ ಮುಗಿಯಿತೋ" ಎಂದು ಕೇಳಿದ.

"ಇಲ್ಲ ಬ್ರಹ್ಮ ಇನ್ನೂ ಮುಗಿದಿಲ್ಲ, ನಾನು ಬೆಂಗಳೂರಿಗ ನಾದುದರಿಂದ "ನಮ್ಮ ಬೆಂಗಳೂರು" ಬಗ್ಗೆ ಒಂದಷ್ಟು ಬೇಡಿಕೆಗಳು, ಸುಧಾರಣೆಯ ಹಾದಿಯಲ್ಲಿ...


"ಸರಿ..."



"ಬೆಂಗಳೂರು ಎಗ್ಗಿಲ್ಲದೆ ಬೆಳೆದಿದೆ, ಬೆಳೆಯುತ್ತಲಿದೆ, ಇದಕ್ಕೆ ಕಡಿವಾಣ ಅಗತ್ಯ, ದೇಶದ ಮೂಲೆ ಮೂಲೆಗಳಿಂದ ಜನರು ಈ ಊರಿಗೆ ಧಾವಿಸಿ ಬರುತ್ತಿದ್ದಾರೆ, ಇದಕ್ಕೆಲ್ಲ ಕಾರಣ ಇಲ್ಲಿರುವ ಮಾನವ ಸಂಪನ್ಮೂಲ, ಇಷ್ಟೊಂದು ಸಂಪನ್ಮೂಲ ಇರುವುದಕ್ಕೆ ಕಾರಣ ನಗರದಲ್ಲಿ ಹೆಚ್ಚಿದ ಇಂಜಿನಿಯರಿಂಗ್ ಕಾಲೇಜುಗಳು, ರಾಜಕಾರಣಿಗಳು ತಮ್ಮ ಕಪ್ಪು ಹಣ ಹುದುಗಿಸಿಡಲು ಇಂಜಿನಿಯರಿಂಗ್ ಕಾಲೇಜುಗಳನ್ನು ನಾಯಿಕೊಡೆಗಳಂತೆ ತೆರೆಯುತ್ತ ಹೋದರು, ಇಂದು ನಾವು ಏನೆಲ್ಲಾ traffic ಕಿರಿಕಿರಿ, ಹೆಚ್ಚಿದ ಜನಸಂದಣಿ , ಗಗನ ಮುಟ್ಟಿರುವ ಸೈಟುಗಳ ರೇಟು ಇವೆಲ್ಲದಕ್ಕೂ ಹೊರ ರಾಜ್ಯಗಳಿಂದ ವಲಸೆ ಬಂದಿರುವುದರಿಂದಲೇ ಉಂಟಾಗಿರುವುದು, ಬಂದವರು ಬಂದು ವಿದ್ಯೆ ಕಲಿತು ಹೋಗಿದ್ದರೆ ಚೆನ್ನಾಗಿತ್ತೇನೋ, ಇಲ್ಲೆ ತಳವೂರಿದರು, ಆಸ್ತಿ ಮನೆ ಮಠ ಮಾಡಿಕೊಂಡರು, ಇಷ್ಟೆಲ್ಲ ಸಾಲದೆಂಬಂತೆ ಇಲ್ಲಿನ ಭಾಷೆ, ಜನರನ್ನ ಜರಿದರು, ಜರಿಯುತ್ತಲೇ ಇದ್ದಾರೆ( ಹಾ! ಬಂದವರೆಲ್ಲರೂ ಹೀಗೆ ಅಲ್ಲ, ಆದರ ಬಹಳ ಮಂದಿ ಇದೇ ನಿಲುವನ್ನು ಹೊಂದಿರುವವರು..hmmm) ಇರಬರುವ ಎಲ್ಲ ಇಂಜಿನಿಯರಿಂಗ್ ಕಾಲೇಜುಗಳಿಂದ ವಿಧ್ಯಾರ್ಥಿಗಳನ್ನು ಕೋಳಿ ಎಗರಿಸಿಕೊಂಡು ಹೋಗುವಂತೆ ಎಗರಿಸಿಕೊಂಡು ಕೆಲಸ ಕೊಟ್ಟವರು IT ಕಂಪೆನಿಗಳು, ಇದರಿಂದ ಆರ್ಥಿಕವಾಗಿ ಬೆಂಗಳೂರು ಸುಧಾರಿಸಿರಬಹುದು, ಅದರಿಂದ ಲಾಭವೂ ಇದೆ, ಆದರೆ ಅದಕ್ಕೆ ತೆರುತ್ತಿರುವ ಕಂದಾಯ ಬಹಳವೇ ಆಗಿದೆ. ಎಲ್ಲಾ ಈಟ್ ಕಂಪೆನಿಗಳು ಬೆಂಗಳೂರಿನಲ್ಲಿ ಟಿಕಾಣಿ ಹೂಡಿ, ಎಲ್ಲರಿಗೂ ಇಲ್ಲೇ ಕೆಲಸ ಕೊಟ್ಟರೆ ಜನರು ಹೆಚ್ಚಗುವುದಿಲ್ಲವೇ ?, ಕೆಲಸದ ನೆಪದಲ್ಲಿ ದೂರ ದೂರ ಊರುಗಳಿಂದ ಜನರು ಬಂದರು, ಬೆಂಗಳೂರು ಬೆಳೆಯಿತು, ಜೊತೆ ಜೊತೆಗೆ ಸಮಸ್ಯೆಗಳು ಕೂಡ.. IT ಕಂಪೆನಿಗಳಿಂದ ಲಾಭವಾಗಿರಬಹುದು, ಅದರ ಬಗ್ಗೆ ನಾನು ಚರ್ಚಿಸುವುದಿಲ್ಲ, ಅದರ ಬಗ್ಗೆ ಪುಂಖಾನುಪುಂಖವಾದ ವ್ಯಾಖ್ಯಾನಗಳು, ಊಹಪೋಹಗಳು ಚಾಲ್ತಿಯಲ್ಲಿ ಇದ್ದೇ ಇರುತ್ತವೆ...ಇರಲಿ ಜನರು ಭ್ರಮೆಯಲ್ಲೇ ಇರಲಿ..."


ಬ್ರಹ್ಮ ಕಣ್ಣರಳಿಸಿಕೊಂಡು ನನ್ನನ್ನೇ ನೋಡುತ್ತಲಿದ್ದ....

ನಾನು ಇನ್ನೂ ಮುಂದುವರೆದು..."ಬ್ರಹ್ಮ ಇದಕ್ಕೆಲ್ಲ ನನಗೆ ತೋಚಿದ ಪರಿಹಾರ ನೀಡುತ್ತೇನೆ, ಇದಕ್ಕೆ ಕೂದ ಅಧಿಕಾರ ಬೇಕು, ನಿನ್ನ ಆಶೀರ್ವಾದವೂ ಕೂಡ..."

"ಅದು ಯಾವಗಲೂ ಇರುತ್ತದೆ ಮಗೂ... ಮುಂದುವರೆಸು.."

ನನ್ನ ಪಟ್ಟಿ ಹೀಗಿದೆ...
1) ನಗರದಲ್ಲಿ ಇರುವ 120+ ಕಾಲೇಜುಗಳಲ್ಲಿ ಒಂದಷ್ಟಕ್ಕೆ ಬಾಗಿಲು ಜಡಿಯಬೇಕು, 40 ಕಾಲೇಜುಗಳಿಗೆ ಮಾತ್ರ ಅವಕಾಶ ನೀಡುತ್ತೇನೆ.
2) ಮಿಕ್ಕ ಕಾಲೇಜುಗಳನ್ನು ರಾಜ್ಯಾದ್ಯಂತ ಸರಿಯಾಗಿ ವಿಂಗಡನೆಯಾಗುವಂತೆ ನಾನು ನೋಡಿಕೊಳ್ಳುತ್ತೇನೆ.
3) ಇಂಜಿನಿಯರಿಂಗ್ ಒಂದೇ ಅಲ್ಲದೇ ಇತರೆ ಎಲ್ಲಾ ವಿಭಾಗಗಳಿಗೂ ಸಮಾನ ಪ್ರಾಮುಖ್ಯತೆ ಸಿಗುವಂತೆ ಮಾಡುತ್ತೇನೆ, ಅದಕ್ಕೆ ರೂಪುರೇಶೆಯನ್ನು ಸಿದ್ದಪಡಿಸುವೆ.
4) ನಗರದ ಒಳಗೆ ಇರುವ ಹಲವಾರು IT ಕಂಪೆನಿಗಳನ್ನು ನಗರದ ಆಚೆಗೆ ಉಚ್ಚಾಟಿಸುತ್ತೇನೆ, ಊರ ಸುತ್ತಲೂ IT park ಗಳನ್ನು ನಿರ್ಮಿಸಲನುವಾಗುವಂತೆ ನೋಡಿಕೊಳ್ಳುತ್ತೇನೆ.. ಇದರಿಂದ ನಗರದ ಒಳಗೆ traffic ಒತ್ತಡ ಸ್ವಲ್ಪ ಮಟ್ಟಿಗಾದರೂ ಕಮ್ಮಿಯಾಗುತ್ತದೆ
5) ಹೊರ ರಾಜ್ಯ ವಿದ್ಯಾರ್ಥಿಗಳಿಗೆ ಇನ್ನು ನಮ್ಮ ರಾಜ್ಯದಲ್ಲಿ ಇಂಜಿನಿಯರಿಂಗ್ ಸೀಟುಗಳು ದೊರೆಯದಂತೆ ಮಾಡುತ್ತೇನೆ..!!
6) "ಕನ್ನಡ" ಭಾಷೆಯನ್ನು ಹೆಚ್ಚು ವ್ಯಾಪಕವಾಗಿ ಉಪಯೋಗಿಸುವಂತೆ ಆದೇಶ ಹೊರಡಿಸುತ್ತೇನೆ, ಉಲ್ಲಂಘಿಸಿದರು ದಂಡನೆಗೆ ಅರ್ಹರು...!!


ಹೀಗೆ ಪಟ್ಟಿ ಸಾಗುತ್ತಲೇ ಇರುತ್ತದೆ ಬ್ರಹ್ಮ, ನನ್ನ ಕಳಕಳಿ ನಿನಗೆ ಅರ್ಥವಾಯಿತಲ್ಲವೆ?, ನನಗೆ ಇದನ್ನೆಲ್ಲವ ಮಾಡುವ ಅಧಿಕಾರ ಬೇಕು, ಹಣ ಬೇಕು, ನಾನು ಇದನೆಲ್ಲವನ್ನು ಹಣ, ಅಧಿಕಾರ, ಒಂದಷ್ಟು ಸಮಚಿತ್ತರೊಡನೊಡಗೂಡಿ ಸಾಧಿಸುವೆ..ಏನೆನ್ನುವಿ ಬ್ರಹ್ಮ??

ಬ್ರಹ್ಮ ನನ್ನನ್ನೇ ದಿಟ್ಟಿಸುತ್ತಿದ್ದ, ನನಗೂ ಒಂದೇ ಸಮನೇ ಭಾಷಣ ಬಿಗಿದು ದಣಿವಾಗಿತ್ತು.

ಮೌನ ಮುರಿದು ಬ್ರಹ್ಮ.."ನಿನ್ನ ಜನಪರ ಕಾಳಜಿ ನನಗೆ ಹಿಡಿಸಿತು, ಆದರೆ ಇದೆಲ್ಲವನ್ನು ನಿನ್ನೊಬ್ಬನಿಂದಲೆ ಸಾಧಿಸಲು ಸಾಧ್ಯವೇ??"

"ನನ್ನಿಂದಲಾದರೂ ಶುರುವಾಗಲಿ ಬ್ರಹ್ಮ, ಒಳ್ಳೇ ಕೆಲಸ ಎಂದಿಗೂ ಮುಂದುವರೆಯುತ್ತದೆ..."

"ಹಿಂದೆ ಯಾರೂ ಸಹ ಈ ಪರಿಯ ವರವನ್ನು ಕೇಳಿರಲಿಲ್ಲ, ಮುಂದೆಯು ಕೇಳುವುದಿಲ್ಲವೆಂದೆನಿಸುತ್ತೆ, ನ ಭೂತೋ ನ ಭವಿಷ್ಯತಿ, ಇದೋ ನಿನಗೆ ವರವೀಯುತ್ತಿದ್ದೇನೆ, ನೀನೆಂದುಕೊಂಡಿರುವ ಈ ಏಲ್ಲಾ ಕನಸುಗಳು ಕೈಗೂಡಲಿ, ಅದಕ್ಕೆ ಬೇಕಾದ ಹಣ, ಅಧಿಕಾರವನ್ನು ನಾನು ನಿನಗೆ ನೀಡುತ್ತಿದ್ದೇನೆ, ಇಂದಿನಿಂದ ನೀನು ಈ ರಾಜ್ಯದ ಮುಖ್ಯಮಂತ್ರಿ....ಮುಖ್ಯಮಂತ್ರಿ..." ಎಂದು ನನ್ನ ತಲೆ ಮೇಲೆ ತನ್ನ ಹಸ್ತವನ್ನಿಟ್ಟು ಉದ್ಗರಿಸಿದ...

ಮೈರೋಮಗಳೆಲ್ಲ ಸೆಟೆದು ನಿಂತು, ನರನಾಡಿಗಳಲ್ಲಿ ಮಿಂಚಿನ ಸಂಚಾರವುಂಟಾಗಿತ್ತು, ಒಂದು ತೆರನಾದ ಭಾವ ನನ್ನಲ್ಲಿ ಉಂಟಾಗಿತ್ತು, ಶಬ್ಧಾತೀತ ಭಾವ!! ಮಾಡಿಕೊಂಡ ರೂಪುರೇಷೆಗಳೆಲ್ಲ ಸಾಧಿಸುವಷ್ಟು ಶಕ್ತಿ ನನ್ನಲ್ಲಿ ಉಂಟಾಗಿತ್ತು ಬ್ರಹ್ಮನ ಸ್ಪರ್ಶಮಾತ್ರದಿಂದ...ಅದೇ ಭಾವದಲ್ಲಿ ಒಂದತ್ತು ನಿಮಿಷಗಳು ಕಳೆದೆ ಎಂದೆನಿಸುತ್ತೆ...




ನನಗೆ ನಾನು ಅಂದುಕೊಳ್ಳುತ್ತಲ್ಲಿದ್ದೆ..."ನಾನೀಗ ಮುಖ್ಯಮಂತ್ರಿ..ರಾಜ್ಯವನ್ನಾಳುವ ಮುಖ್ಯಮಂತ್ರಿ..."

ತಲೆ ನೇವರಿಸುತ್ತ ಬ್ರಹ್ಮ ಕೇಳಿದ.."ಮಗೂ ಇದುವರೆಗೂ ನಿನಗೆ ಅಂತ ಏನು ಕೇಳಿಕೊಳ್ಳಲಿಲ್ಲವಲ್ಲ, ಏನಾದರೂ ಕೇಳು"

"ನನಗೆ ಕೇಳಬೇಕೆಂದೆನಿಸಲ್ಲಿಲ್ಲ ಬ್ರಹ್ಮ..." ಹಾಕಿರುವ ಯೋಜನಾಪಟ್ಟಿಗಳನ್ನು ಪೂರೈಸುವ ಶಕ್ತಿ ಕೊಡು ಸಾಕು ನನಗೆ".

"ಶಕ್ತಿಯೆಲ್ಲವನ್ನು ಕೊಟ್ಟಾಯಿತು, ವಯುಕ್ತಿಕವಾಗಿ ನೀನು ಏನೊಂದನ್ನೂ ಕೇಳಲಿಲ್ಲವಲ್ಲ, ಏನಾದರೂ ಇದ್ದರೆ ಕೇಳು, ಇದು ನನ್ನ ಆದೇಶ.." ಎಂದು ನನ್ನ ಮೇಲೆ ಹುಸಿಕೋಪವನ್ನು ಹೊರಸೂಸಿದ..

"ಸರಿ ಹಾಗಿದ್ದಲ್ಲಿ, ನನ್ನವರನ್ನೆಲ್ಲಾ ಚೆನ್ನಾಗಿಡು..." ಎಂದೆ..

"ಮುಂದೆ" ಎಂದ ಬ್ರಹ್ಮ..

ಮತ್ತೆ ಮತ್ತೆ ಯೋಚಿಸಿದೆ, ಮನದಾಳದಲ್ಲಿ ಒಂದು ಆಸೆ ಕೂತಿತ್ತು, ನನ್ನ ವಯುಕ್ತಿಕ ಕನಸಾಗಿತ್ತು ಅದು, ಅದಕ್ಕೆ ನೀರೆರೆದು ಪಾಲಿಸಿ ಪೋಷಿಸಿ ಜತನವಾಗಿ ಕಾಪಿಟ್ಟುಕೊಂಡು ಬಂದಿದ್ದೆ, ಈ ಗಡಿಬಿಡಿಯಲ್ಲಿ ಮರೆತಿದ್ದೆ, ಕೇಳೋಣವೆಂದೆನಿಸಿತು, ಒಂದು ರೀತಿಯ ಅಳುಕಿತ್ತು,ರಾಜನ ಮುಂದೆ ಬದನೆಕಾಯಿ ಕೇಳಿದ ಹಾಗಿರುತ್ತದೆ ಎಂದು.

ಗಂಟಲು ಸರಿ ಮಾಡಿಕೊಂಡು "ಬ್ರಹ್ಮಾ.................." ಎಂದೆ..

"ಏನು ಮಗೂ, ಏನದು ನಿಸ್ಸಂಕೋಚವಾಗಿ ಕೇಳುವವನಂತಾಗು...."

"ಅ...ಅದು...ನನಗೆ.." ಎಂದು ತಡವರಿಸುತ್ತಿದ್ದೆ...

ಅಷ್ಟರಲ್ಲಿ.....

ನನ್ನ ಮೊಬೈಲು ರಿಂಗುಣಿಸುತ್ತಿತ್ತು, ಮುಸುಕು ಹಾಕಿ ಮಲಗಿದ್ದ ನಾನು ಧಡಾರನೆ ಎದ್ದು ನೋಡಿದೆ, ಸಮಯ ಅದಾಗಲೇ ಬೆಳಿಗ್ಗೆ 5:45 ಆಗಿತ್ತು, ನನ್ನನ್ನು ಆಫೀಸಿಗೆ ಹೊತ್ತುಕೊಂಡು ಹೋಗಲು ಬಂದಿದ್ದ ನನಗಾಗಿ ಕಾದು ಕುಳಿತಿದ್ದ ಕ್ಯಾಬ್ ಡ್ರೈವರ್ ನ ಕರೆಯಾಗಿತ್ತು ಅದು...

ಎದ್ದೆನೋ ಬಿದ್ದೆನೋ ಎಂದು ಕೆಳಗೋಡಿದೆ, ಮಧ್ಯ ಮಧ್ಯ ಕಣ್ಣುಜ್ಜಿ ನೋಡಿಕೊಳ್ಳುತ್ತಿದ್ದೆ, ಬ್ರಹ್ಮ ನಿದ್ದಾನೋ ಇಲ್ಲವೋ ಎಂದು, ಬ್ರಹ್ಮನೂ ಇಲ್ಲ ಯಾವನೂ ಇಲ್ಲ..ಅದಾಗಲೆ 5 ಬಾರಿ missed calls ಕೊಟ್ಟಿದ ಡ್ರೈವರನಿಗೆ 10ನಿಮಿಷದಲ್ಲಿ ಬರುವುದಾಗಿ ತಿಳಿಸಿ ಸ್ನಾನಾದಿಕಾರ್ಯಗಳಿಗೋಸ್ಕರ ಕರ್ಮಭೂಮಿಯೆಡೆಗೆ ನುಗ್ಗಿದೆ....


-(ಮುಗಿಯಿತು)

ನಾನು ಕವಿಯಲ್ಲ...

Thursday, February 14, 2008

ಅದೇ ಲಹರಿಯಲ್ಲಿ ಬಂದ ಎರಡನೆಯ ಕವನ.. :-) :-)
ನಾನು ಕವಿಯಲ್ಲ...

ಮನದಾಳದ ಭಾವಗಳನು ಕವನಗಳಲಿ ಚಿತ್ರಿಸಲು ಬಾರದಲ್ಲ,
ಆದರೂ ನನ್ನೀ ಪ್ರಯತ್ನಕ್ಕೆ ನಿನ್ನ ಮೆಚ್ಚುಗೆ ಇರುತ್ತದಲ್ಲ?
ನಾನು ಕವಿಯಲ್ಲ...

ಇಂದ್ರ ಚಂದ್ರರ ಉಪಮೆಗಳನ್ನೊಡಗೂಡಿಸಿ ಬಣ್ಣಿಸಲೆನಗೆ ಬಾರದು,
ನಿನಗೆ ಜೋಗುಳ ಹಾಡಿ ಮಲಗಿಸದೆ ಎನಗೆ ನಿದಿರೆಯು ಸನಿಹ ಸುಳಿಯದು,
ನಾನು ಕವಿಯಲ್ಲ...

ಹಸುಗೂಸಿನ ನಗುವು, ಕಲ್ಮಷವನರಿಯದ ಕಂಗಳು,
ನಿನ್ನಿಂದಲೇ ನನ್ನೀ ಮನದ ಮುಗಿಲೆಲ್ಲಾ ತುಂಬಿದೆ ಬೆಳದಿಂಗಳು,
ನಾನು ಕವಿಯಲ್ಲ...

ನಂದಿ ಹೋಗಿದ್ದ ಒಲವಿಗೆ ಹಚ್ಚಿದೆ ನೀನು ಹಣತೆ,
ನೆಲೆಸಿಹುದಿಂದು ಹೃದಯಾಳದಲ್ಲಿ ನಿನ್ನಿಂದಲೇ ದಿವ್ಯತೆ,
ನಾನು ಕವಿಯಲ್ಲ...
-ಶ್ರೀಧರ

ಮೊದಲು ...

ನನ್ನವಳಿಗಾಗಿ ನನ್ನ ಮೊದಲ ಕವನ .. :-)


ನಾ ಬರೆಯ ಹೊರಟೆ ಒಲವಿನ ಓಲೆ ನನ್ನ ನಲ್ಲೆಗೆ,
ಇದು ನನ್ನ ಮೊದಲ ಕವನ ಅರ್ಪಿಸುವೆನೆಮ್ಮೆಯ ಪ್ರೀತಿಗೆ,

ಕವಿವರೇಣ್ಯರಂತೆ ನಿನ್ನ ತಿಂಗಳ ಬೆಳಕಿಗೆ, ಕಾಮನಬಿಲ್ಲಿಗೆ ಹೋಲಿಸುವುದಿಲ್ಲ,
ನೀ ನನ್ನ ಬಾಳಿಗಾಸರೆಯೆಂದು ಹೇಳುವುದಾ ನಾ ಮರೆಯುವುದಿಲ್ಲ,

ಗುರಿಯಿಲ್ಲದ ಹುಡುಕಾಟದಲ್ಲಿದ್ದೆ ನಾನು, ಆಕಸ್ಮಿಕವಾಗಿ ಬಂದೆ ನೀನು,
ಎಣೆಯಿಲ್ಲದಾ ಕನಸುಗಳಿಗೆ ಸ್ಪೂರ್ತಿಯಾಗಿರುವೆಯಿಂದು ನೀನು,

ನಿನ್ನ ಬಿಗಿದಪ್ಪಿ ಮುದ್ದಾಡುವ ಕಾತುರ,
ಇದ ತಿಳಿದೂ ತಿಳಿದೂ ನೀನಿರುವಿಯೇಕೆ ಅಷ್ಟು ದೂರ?

ನಮ್ಮೀ ಪ್ರೀತಿ ಎಂದೆಂದಿಗೂ ಅಜರಾಮರ...ಅಜರಾಮರ ........
-ಶ್ರೀಧರ

ಚಿತ್ರಚಾಪ - ನನಗನ್ನಿಸಿದ್ದು....

Tuesday, February 12, 2008


’ಚಿತ್ರಚಾಪ’ದ ಬಿಡುಗಡೆ ಸಮಾರಂಭಕ್ಕೆ ನೀವೆಲ್ಲರೂ ಬಂದು ಕಾರ್ಯಕ್ರಮ ಯಶಸ್ವಿಗೊಳಿಸಿದುದಕ್ಕೆ ನಿಮಗೆಲ್ಲರಿಗೂ ನನ್ನ ಹೃತ್ಪೂರ್ವಕವಾದ ನಮನಗಳು. ನಾನು ತೆಗೆದಿರಿಸಿದ ಪ್ರತಿಯನ್ನು ಮನೆಗೆ ಕೊಂಡು ಹೋಗಿ ಇದಾಗಲೇ ಓದಲು ಶುರುವಿಕ್ಕಿರುತ್ತೀರಿ ಎಂಬುದು ಸಹ ತಿಳಿದ ವಿಷಯವೇ.


Proffessor ಜಿ.ವೆಂಕಟಸುಬ್ಬಯ್ಯನವರು ’ನಾನು ಕಳೆದ 20ವರ್ಷಗಳಲ್ಲಿ ಈ ರೀತಿಯ ಸಮಾರಂಭವನ್ನು ನೋಡಿರಲಿಲ್ಲ’ ಎಂದಾಗ ಪುಸ್ತಕದ ಬಗ್ಗೆ ಅಪಾರ ಮೆಚ್ಚುಗೆಯನ್ನು ಸಭಿಕರ ಮುಂದೆ ವ್ಯಕ್ತಪಡಿಸಿದಾಗ ಉಂಟಾದ ಕರಾಡತನದ ಶಬ್ಧ ಇನ್ನೂ ಕಿವಿಯಲ್ಲಿ ಗುಯ್ ಗುಡುತ್ತಿರುವಾಗಲೇ ಪುಸ್ತಕವನ್ನು ಓದಿ ಮುಗಿಸಿದೆ.

ಪುಸ್ತಕ ಬಿಡುಗಡೆಯ ಹಿಂದಿನ ದಿವಸ ರಾತ್ರಿ 1ಗಂಟೆಯಲ್ಲಿ ಅರುಣ ಕೇಳಿದ ’ಮುನ್ನುಡಿ’ ಓದುವೆಯಾ ಎಂದು, ಅದು ಪುಸ್ತಕದ ಮೊದಲ ಪ್ರತಿ. ಇಲ್ಲ ನಾಳೆ ಬಿಡುಗಡೆಯಾದಮೇಲೆ ಕೊಂಡೇ ಓದುವೆ ಎಂದು ಸುಮ್ಮನಾದೆ.

’ಚಿತ್ರಚಾಪ’ದ ಉದ್ದಿಶ್ಯ ಒಂದೇ ವಾಕ್ಯದಲ್ಲಿ ಸವಿಸ್ತಾರವಾಗಿ ವರ್ಣಿಸಿದ್ದಾರೆ.."ಮೊದಲ ಪ್ರಯತ್ನವಿದು ಚಿತ್ರಚಾಪ. ಪ್ರಕೃತಿಗಾಗಿ, ಕನ್ನಡಕ್ಕಾಗಿ, ನಮಗಾಗಿ, ನಿಮಗಾಗಿ, ಎಲ್ಲರಿಗಾಗಿ". ವಸುಧೇಂದ್ರರ ಮುನ್ನುಡಿಯು ಪುಸ್ತಕಕ್ಕೆ ಕಳಶವಿಟ್ಟಂತಿದೆ.

ಒಟ್ಟಾರೆಯಾಗಿ ಪುಸ್ತಕದಲ್ಲಿ 3 ಕವನಗಳು 5 ಪ್ರಭಂದಗಳು ಇವೆ, ಯಾವುದೇ ಕವನಗಳು ನನಗೆ ಏಕೆ ಅರ್ಥವಾಗುವುದಿಲ್ಲ ಎಂದು ನನಗೇ ಅರ್ಥವಾಗಿಲ್ಲ!!, ಅದರ ಬಗ್ಗೆ No Comments!!!

ಶ್ರೀನಿಧಿಯವರ ಪರಿಸರದ ನಾಲ್ಕು ಚಿತ್ರಗಳಾದ ಕೆರೆ,ಕೃಷಿ,ನೆಲೆ, ಅಲೆ ಇವುಗಳ ಬಗ್ಗೆ ಸವಿಸ್ತಾರವಾಗಿಯೇ ಬರೆದಿದ್ದಾರೆ. ಇವುಗಳ ಮೇಲೆ ಮಾನವರ ಅವಲಂಬಿತನದ ಚಿತ್ರಣ ಸಿಗುತ್ತದೆ, ಇದರಲ್ಲಿ ಯಾವುದಕ್ಕೊ ಅಂತ್ಯವಿಲ್ಲ, ಓದುಗರನ್ನು ಅದರ ಬಗ್ಗೆ ಚಿಂತಿಸುವಂತೆಯೇ ಮಾಡಿ ಅದರ ಬಗ್ಗೆ ಯೋಚಿಸುತ್ತಿರುವಾಗಲೇ ಮುಂದಿನ ಚಿತ್ರದ ಬಗ್ಗೆ ಚಿತ್ರಣ ಶುರುವಾಗಿರುತ್ತದೆ. ಅರೆರೆ ಮುಗಿದೇ ಹೋಯಿತೇ ಎಂದೆನಿಸುತ್ತದೆ ಮತ್ತೊಮ್ಮೆ ಮಗದೊಮ್ಮೆ ಓದುವಂತೆ ಪ್ರೇಪಿಸುತ್ತದೆ. ಪಾತ್ರಗಳ ಕಟ್ಟುವಿಕೆ ಅದ್ಭುತವಾಗಿದೆ, ಅರ್ಥವಾದರೂ ಅರ್ಥವಾಗದ ಒಂದು ಗುಂಗಿನಲ್ಲಿ ಇದ್ದೇ ’ಪರಿಸರದ ನಾಲ್ಕು ಚಿತ್ರಗಳು’ ಓದಿದ ಮೇಲೆ, ಮತ್ತೊಮ್ಮೆ ಓದುತ್ತೇನೆ...ರಾಹೆಯವರ ರೇಖಾಚಿತ್ರಗಳು ಇಲ್ಲದಿದ್ದರೆ ಮತ್ತಷ್ಟು ತಿಣುಕಾಡುತ್ತಿದ್ದನೇನೋ...

ಶ್ರೀನಿವಾಸನ ’ಇದು ಎಂಥಾ ಲೋಕವಯ್ಯ!’ ಆತ ಮಾಡಿದ ಬೆಳಗಾವಿಯ ಪ್ರವಾಸಕಥನ. ಸಂಪೂರ್ಣ ಪ್ರವಾಸ ಕಥನ ಕಣ್ಣಿಗೆ ಕಟ್ಟಿದಂತಿದೆ, ಅಲ್ಲಲ್ಲಿ ಕಂಡು ಬರುವ ಉಪಮೆಗಳು, ಕಂಡ ದೃಶ್ಯಗಳನ್ನು ವರ್ಣಿಸುವ ರೀತಿ, ಪದಬಳಕೆ ನಿರ್ಜೀವ ವಸ್ತುಗಳಲ್ಲಿ ಜೀವಂತಿಕೆ ತುಂಬಿ ಓದುಗರ ಮುಂದೆ ಸಾದ್ಯಂತ ಪಡಿಸುವ ರೀತಿ ಬಹಳ ಸೊಗಸಾಗಿದೆ.


ಸುಶ್ರುತರ ’ಹಳ್ಳಿ ಪರಿಸರದಲ್ಲೊಂದು ಸುತ್ತು’ ತೇಜಸ್ವಿಯವರ 'ಪರಿಸರದ ಕತೆ' ನೆನಪಿಸಿತು ನನಗೆ, ಹಳ್ಳಿ ವಾತವರಣದಲ್ಲಿ ನಡೆಯುವ ಘಟನಾವಳಿಗಳು, ಅಲ್ಲಿನ ಜನಜೀವನವನ್ನ ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ. ’ಅಡಿಕೆ’ ಬೆಳೆಯ ಸಂಪೂರ್ಣ ಮಾಹಿತಿ ದೊರೆಯುತ್ತದೆ, ಆರಂಭದಿಂದ ಹಿಡಿದು ಕೊನೆಯವರೆಗೆ ನಾವೇ ಆ ಸಕಲ ಕಾರ್ಯಗಳು ನಮ್ಮ ಕಣ್ಣ ಮುಂದೇನೇ ನಡೆಯುತ್ತಿದ್ದೇನೋ ಎಂಬಂತೆ ಭಾಸವಾಗುತ್ತಿತ್ತು.

ಅರುಣನ ’ಅರಿವೆಷ್ಟಿದೆ ನಮಗೆ’ ಲೇಖನವನ್ನು ಒಂದು ಪಠ್ಯಪುಸ್ತಕದ ಪಾಠವನ್ನಗಿಸುವ ಸಕಲ ಲಕ್ಷಣಗಳೂ ಇವೆ. Trekking ಏಕೆ ಮಾಡುತ್ತೇವೆ? ಪರಿಸರದ ಸಂರಕ್ಷಣೆಯಲ್ಲಿ ನಮ್ಮ ಪಾತ್ರವೆಷ್ಟು, ಪ್ರಾಣಿ ಪಕ್ಷಿ ಸಂಕುಲಗಳ ಜಾಗವನ್ನು ನಾವೆಷ್ಟು ಆಕ್ರಮಿಸಿದ್ದೇವೆ, ಎಷ್ಟೋ ಮಂದಿಗೆ ಇದಾವುದರ ಅರಿವಿಲ್ಲದೆಯೇ ಪರಿಸರವನ್ನು ಹಾಳುಗೆಡವುತ್ತಿರುತ್ತಾರೆ ತಿಳಿದೆಯೋ ತಿಳಿಯದೆಯೋ... ವಯೋಮಾನದ ಮಿತಿಯಿಲ್ಲದೆ ಎಲ್ಲರೂ ಓದಲೇಬೇಕಾದ ಲೇಖನ ’ಅರಿವೆಷ್ಟಿದೆ ನಮಗೆ’? ಓದಿದ ಮೇಲೆ ಪರಿಸರದ ಬಗ್ಗೆ ನಿಮ್ಮ ದೃಷ್ಟಿಕೋನ ಸ್ವಲ್ಪ ಮಟ್ಟಿಗಾದರೂ ಬದಲಾಗುತ್ತದೆ ಎಂಬುದರ ಅರಿವು ನನಗಿದೆ..!!

ಕೊನೆಯದಾಗಿ ಅನ್ನಪೂರ್ಣರ ’ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ, ಸಾಯೊದ್ರೊಳಗೆ ಒಮ್ಮೆ ನೋಡು ಕೆಮ್ಮಣ್ ಗುಂಡಿ ’ ಓದಿದ ಮೇಲೆ ಕೆಮ್ಮಣ್ಣುಗುಂಡಿಗೇ ಹೋಗಿ ಬಂದಂತಾಯಿತು. ನಾನೂ ಒಮ್ಮೆ ಇವರೊಡನೆ ಹೋಗಬೇಕು. ’ರಾಣಿ’ ಮತ್ತೆ ’ವಾಣಿ’ ಯನ್ನು ನೋಡಬೇಕು. !!

ಪುಸ್ತಕ ರೂಪದ ಮೊದಲ ಪ್ರಯತ್ನದಲ್ಲೇ ಎಲ್ಲರಿಗೂ full ಮಾರ್ಕ್ಸ್ ಬಂದಿದೆ, ಸಂಪೂರ್ಣ ಪುಸ್ತಕ ಓದಿದ ಮೇಲೆ ಪುಸ್ತಕ ಮುಗಿದೇ ಹೋಯಿತೇ ಎಂಬ ಭಾವ ನಿಮ್ಮನ್ನು ಕಾಡೇ ಕಾಡುತ್ತದೆ. ಹೀಗೆ ಮುಂಬರುವ ಎಲ್ಲಾ ಪ್ರಯತ್ನಗಳಿಗೂ ನಿಮಗೆ ಯಶ ಸಿಗಲಿ. ’ಪ್ರಣತಿ’ ಸಂಸ್ಥೆಯಿಂದ ಸಾಕಷ್ಟು ಪುಸ್ತಕಗಳು ಹೊರಬರಲಿ...