ಈ ಲೇಖನವನ್ನ ಪೂರಾ ಓದಿದ ಮೇಲೆ ಬಹಳಷ್ಟು ಜನರಿಗೆ ಅನ್ನಿಸುವುದಿಷ್ಟೆ "ಎಲ್ಲಾ ಟೈಮು....." , ಅದಕ್ಕೆಂದೇ ಇದೇ ಹೆಸರನ್ನು ಟೈಟಲಾಗಿಟ್ಟುಬಿಟ್ಟೆ. ಬಹಳ ಸಲ ನಾವೊಂದು ಅಂದುಕೊಂಡರೆ ಅದಿನ್ನೊಂದಾಗಿರುತ್ತದೆ, ಇಂತಹವುದೆಲ್ಲವನ್ನು ನೋಡಿದರೆ "ಎಲ್ಲಾ ಟೈಮೂ...." ಎಂದು ಸುಮ್ಮನಾಗಬೇಕಷ್ಟೆ
ಅರುಣನ ಮದುವೆ ಏಪ್ರಿಲ್ 16ರಂದು "ಹೊಳೆನರಸೀಪುರ"ದಲ್ಲಿದ್ದುದರಿಂದ ಶ್ರೀಕಾಂತ ಅದಕ್ಕೆ ಸರಿಯಾಗಿ ಒಂದು ತಿಂಗಳ ಮುಂಚೆಯೇ ಸಿದ್ಧತೆ ನಡೆಸಿದ್ದ !! "ನಾವೆಲ್ಲರೂ" ಅಲ್ಲಿಗೆ ಹೇಗೆ ತಲುಪುವುದು ಮತ್ತದರ ಟೈಮಿಂಗ್ಸ್ ವಿಷಯವಾಗಿ. "ಹಚ್ ಅಲಿಯಾಸ್ Vodafone ಪ್ರಕಾಶಿಸುತ್ತಲೇ ಇರುತ್ತದೆ" :-)
ಎಲ್ಲಾ ಜನರ ಲಿಸ್ಟ್ ರೆಡಿಯಾದಮೇಲೆ ಮೊದಲಿಗೆ "ಟಾಟಾ ಇಂಡಿಕಾ" ಬುಕ್ ಮಾಡಿದ್ದೆವು. ಲಿಸ್ಟ್ ಹಿಗ್ಗಿದುದರ ಪರಿಣಾಮವಾಗಿ "ಟವೇರಾ"ದಲ್ಲಿ "ಸವಾರಿ" ಮಾಡಬೇಕಾಯಿತು. ಶುಭಾಳನ್ನು ಬಸವೇಶ್ವರ ನಗರದಿಂದ ಹತ್ತಿಸಿಕೊಂಡು ಬೆಂಗಳೂರು ಮಹಾನಗರದಿಂದ ಹೊರಬರುವ ಹೊತ್ತಿಗೆ ಸಂಜೆ ಏಳಾಗಿತ್ತು. ಶ್ರೀಕಾಂತನ ಲೆಕ್ಕಾಚಾರ ಅದಾಗಲೇ ಲೆಕ್ಕ ತಪ್ಪಿತ್ತು. "ಟವೇರಾ" ದಲ್ಲಿದ್ದಿದ್ದು ನಾವು ಒಟ್ಟು ಏಳು ಜನ. ನಾನು, ಶ್ರೀಕಾಂತ, ಶುಭಾ, ಶ್ರುತಿ ಶರ್ಮಾ, ಅರ್ಜುನ್, ಹರೀಶ್ ಮತ್ತೆ ಗೋವಿಂದರಾಜ್. ಡ್ರೈವರ್ ಸೇರಿಸಿ ಒಟ್ಟು ಎಂಟು. ಎಲ್ಲರ ಪರಿಚಯ ಮಾಡಿಕೊಂಡು ಹೋಗುತ್ತಾ ಶ್ರುತಿ "ಮೂಕಾಭಿನಯ" ಆಡುವುದೋ ಅಥವಾ "ಅಂತ್ಯಾಕ್ಷರಿ" ಆಡುವುದೋ ಎಂಬುದರ ಸಲುವಾಗಿ ಎಲ್ಲರನ್ನು ಕೇಳುತ್ತಿದ್ದಳು. ಡ್ರೈವರ್ ಮಹಾಶಯ ತನ್ನ ಕಿರಿಕಿರಿಯನ್ನು ಆರಂಭಿಸಿದ್ದ. ಗಾಡಿಯ ಸೌಂಡ್ ಸಿಸ್ಟಮ್ ಸರಿ ಇರಲಿಲ್ಲವೆಂದು ತೊರುತ್ತದೆ, ಮುಂದೆ ಕೂತವರಿಗೆ ಯಾವ ಹಾಡು ಬರುತ್ತಿದೆ ಎನ್ನುವುದು ಕೂಡ ಗೊತ್ತಾಗುತ್ತಿರಲಿಲ್ಲ. ಈ ಮಹಾಶಯ ಇದ್ದಕ್ಕಿದ್ದ ಹಾಗೆ ಸೌಂಡ್ ಜಾಸ್ತಿ ಮಾಡಿಬಿಡುತ್ತಿದ್ದ, ಹಿಂದಿನಿಂದ ಶರ್ಮಾ ನನ್ನನ್ನು ತಿವಿಯುತ್ತಿದ್ದಳು, "ಸೌಂಡ್" ಸಲ್ಪ ಕಮ್ಮಿ ಮಾಡು ಎಂದು. ಇಲ್ಲಿ ಸೌಂಡ್ ಜಾಸ್ತಿ ಮಾಡಿದರೆ ಹಿಂದೆ ಕೂತವರಿಗೆ "ಧೋಮ್ ಧೋಮ್" ಸದ್ದು. ಸೌಂಡ್ ಕಮ್ಮಿ ಮಾಡಿದ ಸಲ್ಪ ಹೊತ್ತಿನಲ್ಲೇ ಮತ್ತೆ ಏರಿಸಿಬಿಡುತ್ತಿದ್ದ. "ನೈಸ್" ರೋಡಿನಲ್ಲಿ ನೈಸಾಗಿ ಜಾರಿ, ನೆಲಮಂಗಲದ ಟ್ರಾಫಿಕ್ ಕಿರಿಕಿರಿ ಅನುಭವಿಸಿ ಊರು ಬಿಡುವ ಹೊತ್ತಿಗೆ ಕತ್ತಲಾಗಿತ್ತು. "ಮೂಕಾಭಿನಯ" ದ ಆಟ ಸಾಗುತ್ತಲೇ ಇತ್ತು. ಆದರೆ ತೊಂದರೆಗಿಟ್ಟುಕೊಂಡ ವಿಷಯವೆಂದರೆ ಡ್ರೈವರನೂ ಕೂಡ ನಮ್ಮ ಆಟದಲ್ಲಿ ಭಾಗವಹಿಸಿದ್ದು!!. ನಾನು ಡ್ರೈವರ್ ಪಕ್ಕದಲ್ಲಿ ಕೂತಿದ್ದೆ, ನಾನು ಮಾಡುವ "ಮೂಕಾಭಿನಯ" ವನ್ನು ನೋಡುತ್ತ ಆತನೂ ಕೂಡ ಅದರಲ್ಲಿ ಭಾಗವಹಿಸುತ್ತಿದ್ದ!!. ಇದು ಒಳ್ಳೆ ಡ್ರೈವರನ ಲಕ್ಷಣವಂತೂ ಖಂಡಿತಾ ಅಲ್ಲ.
ಹೀಗೆ ಸಾಗುತ್ತಲೇ ಸುಮಾರು ಏಳೂ ಮುಕ್ಕಾಲಿರಬಹುದು, ಇದ್ದಕ್ಕಿಂದಂತೆ ಗಾಡಿಯ ವೇಗವನ್ನು ಕಮ್ಮಿ ಮಾಡಿ ಪಕ್ಕದಲ್ಲಿ ನಿಲ್ಲಿಸಿದ, ಮತ್ತೆ ಮತ್ತೆ ಶುರು ಮಾಡಲು ಯತ್ನಿಸಿದನಾದರೂ ಆಗಲಿಲ್ಲ. ಎಲ್ಲರ ಮುಖದಲ್ಲೂ ಆತಂಕದ ಗೆರೆಗಳು ಹೆದ್ದಾರಿಯಲ್ಲಿ ಒಡಾಡುತ್ತಿದ್ದ ಗಾಡಿಗಳ ಬೆಳಕಿನಿಂದ ಕಾಣುತ್ತಿತ್ತು. ಪ್ರಾಮಾಣಿಕವಾಗಿ ನನಗನ್ನಿಸಿದ್ದು ಯಾವುದೋ ಇದು ಡಬ್ಬಾ ಗಾಡಿ ಮತ್ತು ಬೇಜವಾಬ್ದಾರಿ ಡ್ರೈವರ್ ಎಂದು. ಯಾರ್ಯಾರಿಗೋ ಫೋನ್ ಮಾಡಿ ಆಯಿಲ್ ಲೀಕ್ ಆಗಿದೆ, ನೋಡಿಲ್ಲವಾ? ಚೆಕ್ ಮಾಡಿಲ್ಲವಾ? ಎಂದು ಜೋರಾಗಿ ಕೇಳುತ್ತಿದ್ದ . ಫೋನಿನ ಆಬದಿಯವರು ಎಲ್ಲಾ ಸರಿಯಾಗಿದೆ ಎಂದು ಹೇಳಲಿ ಎನ್ನುವದೇ ನನ್ನ ಆಶಯವಾಗಿತ್ತು, ಆದರೆ ಹಾಗಾಗಲಿಲ್ಲ. ಕಡೆಗೆ ನಮ್ಮೆಡೆಗೆ ತಿರುಗಿ "ಏನು ಆಗಿಲ್ಲ ಸಾರ್, ಟೆನ್ಷನ್ ಆಗ್ಬೇಡಿ" ಎಂದು ಹೇಳಿ ಕಿಸಕ್ಕನೆ ನಕ್ಕಿದ.
ಹಾಗೂ ಹೀಗೂ ಸ್ಟಾರ್ಟ್ ಮಾಡಿ ಗಾಡಿ ಮುಂದಕ್ಕೆ ಚಲಿಸತೊಡಗಿತು, ಅನತಿ ದೂರದಲ್ಲಿದ್ದ ಪೆಟ್ರೋಲ್ ಬಂಕಿನಲ್ಲಿ ಸಲ್ಪ ಆಯಿಲ್ ಕೊಂಡು ಮುಂದೆ ಹೊರಟೆವು. ಮತ್ತೆ ಎಲ್ಲೂ ಗಾಡಿ ನಿಲ್ಲದಿರಲಿ ಎಂದು ಎಲ್ಲರೂ ಒಕ್ಕೊರಲಿನಿಂದ ಪ್ರಾರ್ಥಿಸಿದ್ದರೋ ಏನೋ?? ಮತ್ತೆ ಗಾಡಿ ಕೆಡಲಿಲ್ಲ.. ಹೊಳೆನರಸೀಪುರದ ದಾರಿಯಲ್ಲಿ "ಮಂಗಳೂರು ಟೀಸ್ಟಾಲ್" ನಲ್ಲಿ ಟೀ ಕುಡಿದು ಸುಮಾರು 9 ರ ಹೊತ್ತಿಗೆ ಊಟಕ್ಕೆ ಗಾಡಿ ನಿಲ್ಲಿಸಿದೆವು(ಸ್ಥಳ ಮರೆತುಹೋಗಿರುವೆ). ಗಾಡಿ ಕೆಟ್ಟು ನಿಂತಾಗಲೇ ಶ್ರುತಿ ಶರ್ಮಾ ನನ್ನ ಬಳಿ ಬಂದು "ಈ ಡ್ರೈವರ್ ಸರಿ ಇಲ್ಲ, ಎಲ್ಲಾ ಮುಂಚೆಯೇ ಚೆಕ್ ಮಾಡ್ಕೋಬೇಕಿತ್ತು, ಈಗ ನೋಡಿದ್ರೆ ಹೀಗಾಗಿದೆ" ಎಂದು ಪೇಚಾಡುತ್ತಿದ್ದಳು, ಹಾಗೆ ಅದನ್ನು ಮುಂದುವರೆಸಿ "ನೀನು ಆಡುವುದನ್ನೇ ಈ ಡ್ರೈವರ್ ನೋಡ್ತಾನೆ ಇರ್ತಾನೆ, ಮುಂದೆ ನೋಡ್ಕೊಂಡ್ ಗಾಡಿ ಒಡ್ಸಲ್ಲ ಸರ್ಯಾಗಿ, ಆದ್ರಿಂದ ನೀನು ಆಟಗಳಿಂದ "ಔಟ್" ಎಂದಳು. ನನಗೂ ಸರಿಯೆನ್ನಿಸಿತು, ತೆಪ್ಪಗೆ ತಲೆಯಾಡಿಸಿದೆ.
ಕತ್ತಲು ಕವಿದುದ್ದರಿಂದ "ಮೂಕಾಭಿನಯ" ದಿಂದ "ಅಂತ್ಯಾಕ್ಶರಿ"ಗೆ ಶಿಫ್ಟ್ ಆಗಿದ್ದರು. ಹೆದ್ದಾರಿಯಲ್ಲಿ ಹರಿದಾಡುತ್ತಿದ್ದ ವಾಹನಗಳ ಬೆಳಕಿನಿಂದ ಇಕ್ಕೆಲಗಳಲ್ಲಿ ಕಾಣುತ್ತಿದುದ್ದನ್ನು ನನ್ನ ಕಣ್ಣು ಸುಮ್ಮನೆ ನೋಡುತ್ತಲಿತ್ತು. ಎಲ್ಲಾ ದೃಶ್ಯಗಳು ಒಂದೇ ತರವೇ ಆಗಿದ್ದರೂ ಕೂಡ ಮನಸ್ಸು ಹುಚ್ಚು ಕುದುರೆಯಂತೆ ಸಾವಿರ ದಿಕ್ಕಿನಲ್ಲಿ ಯೋಚಿಸುತ್ತಿತ್ತು. ಕೆಲವು ಕಡೆ ಹೆದ್ದಾರಿ ಬಹಳ ಅಚ್ಚುಕಟ್ಟಾಗಿತ್ತು, ಮತ್ತೆ ಕೆಲವು ಕಡೆ ವಿವರಿಸಲು ಆಗದಷ್ಟು ಹದೆಗೆಟ್ಟಿತ್ತು. ಅದ್ಯಾಕೆ ಹೀಗೆ ಮಾಡಿದಾರೋ ಎಂದು ಅರಿಯದಾದೆ.
ಹೊಳೆನರಸೀಪುರ ತಲುಪುವ ಹೊತ್ತಿಗೆ ರಾತ್ರಿ 11 ಗಂಟೆ ಆಗಿತ್ತು. ಅರುಣ ಮತ್ತೆ ಶ್ರೀನಿವಾಸ ಪಂಚೆಧಾರಿಗಳಾಗಿ ನಮ್ಮೆಲ್ಲರನ್ನು ಎದುರುಗೊಂಡರು . ಅರುಣ ಅಲಿಯಾಸ್ "ಮದುವೆ ಗಂಡು" ಕ್ಲೀನಾಗಿ ಕ್ರಾಪ್ ಕಟ್ ಮಾಡಿಸಿಕೊಂಡು ಮಂದಸ್ಮಿತನಾಗಿ ಚೈನು, ಉಂಗುರ ಧರಿಸಿ ಕೊಂಚ "ಭಿನ್ನ"ವಾಗಿ ನನಗೆ ತೋರಿದ. ರೇಖಾ ಮತ್ತೆ ಅರುಣ ಇಬ್ಬರು ಬಂದು ನಾವು ಉಳಿದುಕೊಳ್ಳಬೇಕಾದ ಜಾಗವನ್ನು ತೋರಿಸಿದರು. ಬರೀ ಸಿನೆಮಾಗಳಲ್ಲಿ ಈ ರೀತಿಯ ಮನೆಗಳನ್ನು ನೋಡಿದ ನಾನು ಅಲ್ಲಿ ಮಲಗುವುದಕ್ಕೆ ನಿಜಕ್ಕೂ ಉತ್ಸುಕನಾಗಿದ್ದೆ. ಹೆಚ್ಚಾಗಿ ನನ್ನನ್ನು ಆಕರ್ಷಿಸಿದ್ದು ಮನೆ ಜಗುಲಿ. ಶೌಚಕಾರ್ಯಗಳನ್ನು ಮುಗಿಸಿ ಬರುವ ಹೊತ್ತಿಗೆ ನಮಗೆ ಮಲಗಲು ನೀಡಿದ್ದ ಜಾಗ ಸಾಕಗುವುದಿಲ್ಲವೆನಿಸಿತು. ಗೋವಿಂದರಾಜ್, ಹರೀಶ್, ಅರ್ಜುನ್ ಒಂದು ಕಡೆ ಮತ್ತೆ ಶ್ರುತಿ, ಶುಭಾ ಇನ್ನೊಂದೆಡೆ ಮಲಗಲು ಅಣಿಯಾಗುತ್ತಿದ್ದರು. ಶರ್ಮಾ ತಂದಿದ್ದ ಒಂದು ಎಕ್ಸ್ಟ್ರಾ ಹೊದಿಕೆಯನ್ನು ಇಸಿದುಕೊಂಡು ನಾನು, ಶ್ರೀನಿವಾಸ ಮತ್ತೆ ಶ್ರೀಕಾಂತ ಅಲ್ಲಿಂದ ಕಾಲ್ತೆಗೆದವು. ಸಮಯ 11:30 ಆಗಿತ್ತೇನೋ. ಅಲ್ಲೇ ಮೂವರು ಮಲಗಿದೆವು, ಒಂದು ಹೊದಿಕೆ ಮೂವರಿಗೆ ಹೇಗೆ ತಾನೇ ಸಾಕಾದೀತು?
ನಾನೊಬ್ಬನೇ ಹೊದ್ದುಕೊಂಡು ಅಲ್ಲೇ ಮಲಗಿದೆ, ಪಾಪ ಶ್ರೀನಿವಾಸ ಕೇಳಲಿಲ್ಲ, ಅವನಿಗೆ ನಿದ್ದೆ ಬಂದರೆ ಅದು ಬೇಕಾಗುವುದಿಲ್ಲವೆಂದು ನನಗಿಂತ ಅವನಿಗೇ ಚೆನ್ನಾಗಿ ಗೊತ್ತಿತ್ತು. ಶ್ರೀಕಾಂತ ಕೇಳಿದನಾದರೂ "ತ್ಯಾಗ" ಮನೋಭಾವ ಅವನನ್ನು ಸುಮ್ಮನಿರಿಸಿತು ಎಂದು ನಾನೆಂದುಕೊಂಡೆ ;-) ನನ್ನ ಎತ್ತರದ ಬಗ್ಗೆ ನನಗೆ ಬಹಳಷ್ಟು ಬಾರಿ ಕಿರಿ ಕಿರಿ ಆಗಿದೆ, ಈ ದಿನವೂ ಅದೇ ಆಯಿತು. ಆ ಹೊದಿಕೆಯಿಂದ ಕಾಲು ಮುಚ್ಚಿದರೆ ಮುಖ ಮುಚ್ಚುತ್ತಿರಲಿಲ್ಲ, ಮುಖ ಮುಚ್ಚಿದರೆ ಕಾಲು ಮುಚ್ಚುತ್ತಿರಲಿಲ್ಲ. ಆ ಮನೆಯವರೆಲ್ಲರೂ ಸೊಳ್ಳೆ ಪರದೆಯಲ್ಲಿ ಮಲಗಿದುದ್ದನ್ನು ನೋಡಿದಾಗಲೇ ತಿಳಿದು ಹೋಯಿತು, ಸೊಳ್ಳೆ ಕಾಟವಿದೆಯೆಂದು. ಹೊರಗಡೆ ಮಲಗಿದ ಕೂಡಲೆ ಸೊಳ್ಳೆಗಳ ತಮ್ಮ ನಿತ್ಯ ವ್ಯವಹಾರ ಶುರು ಮಾಡಿದ್ದವು. ತಣ್ಣಗೇನೋ ಗಾಳಿಯಿತ್ತು, ಆದರೆ ಕಾಲಿಗೆ, ಕೈಗೆ, ಮುಖಕ್ಕೆ ಎಲ್ಲೆಂದರಲ್ಲಿ ಕಚ್ಚುತ್ತಿದ್ದ ಸೊಳ್ಳೆಗಳಿಂದ ನಿದ್ದೆ ಬರುವುದಾದರೂ ಹೇಗೆ ಸಾಧ್ಯ??
ಸುಮ್ಮನೆ ಹೊದಿಕೆಯನ್ನು ಸರಿ ಮಾಡಿಕೊಂಡು ಹೊರಳಾಡುತ್ತಿದ್ದೆ. ಇತ್ತ ಶ್ರೀಕಾಂತ, ಶ್ರೀನಿವಾಸನ ಸ್ಥಿತಿಯೂ ಅದೇ ಆಗಿತ್ತು. ಅದಾಗ್ಯೂ ನಾನು ಏನೋ ಒಂದು ಹೇಳಿದ್ದಕ್ಕೆ ಇಬ್ಬರೂ ಮಲಗಿದ್ದಲ್ಲೇ ಹೊರಳಾಡಿಕೊಂಡು ನಗಲು ಶುರು ಮಾಡಿದರು. ಸೊಳ್ಳೆಗಳ ಕಾಟ ಶ್ರುತಿ ಶರ್ಮಾ ಮತ್ತೆ ಅರ್ಜುನ್ ಗೂ ತಟ್ಟಿತ್ತು. ಅವರೂ ಸಹ ನಿದ್ದೆ ಬಾರದೆ ಹೊರಗಡೆ ಬಂದು ಜಗುಲಿಯಲ್ಲಿ ಕುಳಿತರು. ಹೊದಿಕೆಯನ್ನು ಮೈಯೆಲ್ಲ ಹೊದ್ದುಕೊಂಡು ಕೂತಿದ್ದೆ, ಆದರೂ ಅಲ್ಲಿ ಇಲ್ಲಿ ಕಚ್ಚುತ್ತಿದ್ದವು. ಐವರೂ ಅದೂ ಇದೂ ಅಂತ ಮಾತನಾಡುತ್ತಿದ್ದೆವು. ನಾವು ಕುಳಿತಿದ್ದ ಜಗುಲಿಯ ಎದುರುಗಡೆಯೇ ನಮ್ಮೊಡನೆ ಬಂದಿದ್ದ ಡ್ರೈವರ್ ತನ್ನ "ಟವೇರಾ" ದಲ್ಲಿ ಸುಖವಾಗಿ ನಿದ್ದೆ ಮಾಡುತ್ತಿದ್ದ. ಬಹಳ ಅಸೂಯೆಯಾಯಿತು. ಎದುರು ಮನೆಯವರೆಲ್ಲಾ "ಬೆಡ್ ಲೈಟ್" ಹೊತ್ತಿಸಿಕೊಂಡು ಮಲಗಿದ್ದು ಕಣ್ಣಿಗೆ ಬಿದ್ದು ಮತ್ತಷ್ಟು ಸಂಕಟವಾಗುತ್ತಿತ್ತು. ಮತ್ತೆ ಸುಮಾರು ಒಂದು ಗಂಟೆಗೆ ಎಲ್ಲರೂ ಮಲಗಲು ನಿರ್ಧರಿಸಿದೆವು. ಎಲ್ಲಿಯ ನಿದ್ದೆ?? ಹಾಗೂ ಹೀಗೂ ಆ ಹೊದಿಕೆಯಲ್ಲೇ ತೂರಿಕೊಂಡು ಒಂದು ಗುಬ್ಬಿ ನಿದ್ದೆ ತೆಗೆಯುವಲ್ಲಿ ಯಶಸ್ವಿಯಾಗಿದ್ದೆ. ಮಧ್ಯ ಇವರೀರ್ವರಿಗೂ ನಿದ್ದೆ ಬರದೆ "ಹೊಳೆನರಸೀಪುರ"ದ ರಸ್ತೆಗಳಲ್ಲಿ ಬೀಟ್ ಹಾಕಿಕೊಂಡು ಬಂದರಂತೆ. ನನಗೆ ಗೊತ್ತಾಗಲಿಲ್ಲ. ಮತ್ತೆ ಬಂದು ನಿದ್ದೆ ಮಾಡಲು ಯತ್ನಿಸಿದರಾದರೂ ಆಗಲಿಲ್ಲ.
ಬೀಟ್ ಮುಗಿಸಿಕೊಂಡು ಬಂದ ಶ್ರೀಕಾಂತನಿಗೆ "ತ್ಯಾಗ" ಭಾವ ಕಳಚಿ ಹೋಗಿತ್ತೆಂದೆನಿಸುತ್ತದೆ. ನನ್ನ ಹೊದಿಕೆಯನ್ನು ಕಿತ್ತುಕೊಂಡ. ಮತ್ತೆಲ್ಲಿಯ ನಿದ್ದೆ?? ಅವನಿಗೂ ನಿದ್ದೆ ಬರಲಿಲ್ಲ. ಸಮಯ ೪ಗಂಟೆ ಎಂದು ತೋರಿಸುತಿತ್ತು. ಒಳಗೆ ಮಲಗಿರುವವರೆಲ್ಲರೂ "ದಿವ್ಯ ಭವ್ಯ" ನಿದ್ದೆಯಲ್ಲಿರುವವರೆಂದು ನಾವೆಂದುಕೊಳ್ಳುವ ಹೊತ್ತಿಗೆ ಅರ್ಜುನ "ದರಿದ್ರ ಸೊಳ್ಳೆಗಳು" ಎನ್ನುತ್ತಾ ಹೊರಬಂದ. ರಾತ್ರಿ ಪೂರ ನಿದ್ದೆ ಆಗಲಿಲ್ಲವೆಂದು ತನ್ನ ಅಳಲು ತೋಡಿಕೊಂಡ. ಮತ್ತೆ ಎಲ್ಲರೂ ಬೀಟ್ ಹಾಕಲು ನಿರ್ಧರಿಸಿದೆವು. ಅಷ್ಟರಲ್ಲಿ ಕಾಫಿಗಾಗಿ ನನ್ನ ನಾಲಗೆ ಚಡಪಡಿಸುತಿತ್ತು. ಅರುಣನಿಗೆ ಮೆಸೆಜ್ ಕಳಿಸಿದೆ. ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. "ಸಿಗುತ್ತೆ" ಅಂದಿದ್ದ. ದೇವೇಗೌಡರ ಪ್ರಭಾವೋ ಏನೋ ಅರುಣನ ಮೇಲೆ, ಅದು ಹುಸಿ ಆಶ್ವಾಸನೆ ಎಂದು ತಿಳಿಯಲು ಬಹಳ ಸಮಯ ಹಿಡಿಯಲಿಲ್ಲ.
ಮತ್ತೊಂದು ಸುತ್ತು ಮುಗಿಸಿ ಮತ್ತೆ ನಾವು ಉಳಿದು ಕೊಂಡಿದ್ದ ಜಾಗಕ್ಕೆ ಬಂದಾಗ ಐದು ಗಂಟೆ. ಸ್ನಾನಕ್ಕೆ ಹೊಳೆಗೆ ಹೋಗಲನುವಾದೆವು. ದಾರಿ ಕೇಳಿಕೊಂಡು ಹೋಗುವಾಗ ಅಲ್ಲೇ ಒಂದು ಸರ್ಕಲ್ಲಿನಲ್ಲಿ "ಮದುವೆ ಆಗ್ಬೇಡಿ ಸಾರ್" ಎಂದು ಆಣಿಮುತ್ತನ್ನುದುರಿಸುತ್ತಿದ್ದ. ಕುಡಿದಿದ್ದ ಎಂದು ಅವನ ಹಾವ-ಭಾವದಲ್ಲೇ ತಿಳಿಯಿತು. ಸ್ನಾನಕ್ಕೆಂದು ಹೊಳೆ ಬಳಿ ಬಂದಾಗ ಭಯಂಕರವಾದ ಸಹಿಸಲಸಾಧ್ಯವಾದ ಘಾಟು ಆ ಘಾಟಿನಲ್ಲಿ ಆವರಿಸಿಕೊಂಡಿತು. ಗಾಳಿ ಬೀಸಿದರೆ ದುರ್ನಾತ. ಅಲ್ಲೆ ಪಕ್ಕದಲ್ಲಿ 'ದಾನಿ'ಗಳು ಅಪಾರಪ್ರಮಾಣದಲ್ಲಿ ದಾನ ಮಾಡಿದ್ದುದರ ಪರಿಣಾಮ ಇದು(ಈ 'ದಾನಿ' ಪದಪ್ರಯೋಗ ಅರ್ಜುನನ ಅನ್ವೇಷಣೆ). ಆಗಸದಲ್ಲಿ ಇನ್ನು ಸೂರ್ಯ ಮೂಡಿರಲಿಲ್ಲ. 'ಹೇಮಾವತಿ' ಯಲ್ಲಿ ಮಿಂದಲು ಹೆದರಿಕೆಯಾಯಿತು. ಗೋವಿಂದರಾಜ್ ಮತ್ತು ಹರೀಶ್ ಸ್ನಾನ ಮಾಡುವ ನಿರ್ಧಾರವನ್ನು ಕೈಬಿಟ್ಟರು, ಹೊಳೆಯಲ್ಲಿ. ನಾನು ಮತ್ತೆ ಅರ್ಜುನ್ ಸೂರ್ಯನ ಆಗಮನಕ್ಕಾಗಿ ಎದುರು ನೋಡುತ್ತಿದೆವು. ಶ್ರೀನಿವಾಸ ಮತ್ತು ಶ್ರೀಕಾಂತ ಕತ್ತಲೆಯಲ್ಲಿ ದಾರಿ ಮಾಡಿಕೊಂಡು ನೀರಿಗಿಳಿದು 'ಸಾಹಸಿ'ಗಳಾದರು. ಬೆಳಕು ಮೂಡಿ ನೀರಿಗಿಳಿಯುವ ಹೊತ್ತಿಗೆ 'ದಾನಿ'ಗಳ ಆಗಮನ ಶುರುವಾಯಿತು. ಅವರ 'ದಾನ' ಯಾವ ಕಡೆಗೆ ಸಾಗುತ್ತಿದೆ ಎಂದು ನೋಡಿಕೊಂಡು ನೀರಿಗೆ ಇಳಿದೆವು. 'ದಾನಿ'ಗಳ ಬಗೆಗಿನ ಎಚ್ಚರಿಕೆಯಿಂದ ಬೇಗ ಸ್ನಾನ ಮುಗಿಸಿ ಹೊರಬಂದೆವು, ಶ್ರೀನಿವಾಸ ಮತ್ತು ಶ್ರೀಕಾಂತ ಸಂಧ್ಯಾವಂದನೆ ಮುಗಿಸಿ ಹೊರಬಂದರು. ಹರೀಶ್ ಮತ್ತು ಗೋವಿಂದರಾಜ್ ಅವರು ಸ್ನಾನಕ್ಕೆ ಬೇರೆ ಕಡೆ ಹೋಗಿದ್ದರು.
ಎಲ್ಲಾ ಮುಗಿಸಿ ಚತ್ರಕ್ಕೆ ಮತ್ತೆ ಬಂದಾಗ ಸಮಯ ಎಂಟಾಗಿತ್ತು. ಅರುಣನನ್ನು 'ಮದುವೆ ಗಂಡಿನ' ಅವತಾರದಲ್ಲಿ ನೋಡುವ ತವಕ ನನ್ನಲ್ಲಿ ಹೆಚ್ಚಿತ್ತು. ರಾತ್ರಿಯೆಲ್ಲ ನಿದ್ದೆಯಿಲ್ಲವಾದ್ದರಿಂದ ಶ್ರೀನಿವಾಸ, ಶ್ರೀಕಾಂತ ಕೂತಲ್ಲಿಯೇ ನಿದ್ರಿಸಲು ಶುರು ಮಾಡಿದರು. ಅಷ್ಟರಲ್ಲಿ 'ಮೈಸೂರು ಪೇಟ' ಧರಿಸಿ ಹಸೆಮಣೆಗೆ ಬಂದೇ ಬಿಟ್ಟ ಅರುಣ. ಕಿವಿಯಲ್ಲಿ ಅರಿಶಿಣದಿಂದ ಮಾಡಿದ ಕೋಡುಬಳೆಯನ್ನು ಸಿಕ್ಕಿಸಿಕೊಂಡಿದ್ದ. ಬಹಳ ವಿನೋದಮಯವಾಗಿತ್ತು. ಒಂದಷ್ಟು ಫೋಟೋಗಳು ಶ್ರೀನಿವಾಸ ಮತ್ತು ಶ್ರೀಕಾಂತನ ಕ್ಯಾಮೆರಾಗಳಿಂದ ಕ್ಲಿಕ್ಕಿಸಲ್ಪಟ್ಟವು.
'ಕಾಶೀಯಾತ್ರೆ' ಯ ನಾಟಕದ ತೆರೆ ಸರಿದು ಮಾಂಗಲ್ಯಧಾರಣೆ ವಿಧ್ಯುಕ್ತವಾಗಿ ನಡೆಯಿತು. ಅರುಣ್ ಮತ್ತು ರೇಖಾ ದಂಪತಿಗಳಾದರು :-) ಅರುಣನ ಲಕ ಲಕ ಹಲ್ಲಿನ ಹೊಳಪು ಹೈಲೈಟು. ಅವನ ನಗು ಕ್ಯಾಮೆರಾ ಫ್ಲಾಶ್ ಗಳಿಗೇ ಸ್ಪರ್ಧೆಯೊಡ್ಡುವಂತಿದ್ದವು. ಅರುಣ್ ಮತ್ತು ರೇಖಾ ನೂರ್ಕಾಲ ಚೆನ್ನಾಗಿ ಬಾಳಿ ಬದುಕಲಿ :-) ನಮ್ಮೊಂದಿಗೆ ಒಡಾಡಿಕೊಂಡಿದ್ದ ಗೆಳೆಯ, ಕಾಫಿ ಗೆಳೆಯ ಸಂಸಾರಸ್ಥನಾಗಿದ್ದ. ಅದರ ಭಾವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಾಗುತ್ತಿಲ್ಲ ನನಗೆ. ತುಂಬಾ ಖುಶಿಯಾಯಿತು.
ಮದುವೆ ಕಲಾಪಗಳೆಲ್ಲ ಮುಗಿದು ನಾವು ತಂದಿದ್ದ "ಗಿಫ್ಟ್" ಕೊಟ್ಟು ಊಟಕ್ಕೆ ಹೊರಟೆವು. ಊಟ ಮುಗಿಸಿ ಬಂದಾಗ ಡ್ರೈವರ್ ಶಾಕ್ ನೀಡಿದ್ದ, "ಗಾಡಿ ಸ್ವಲ್ಪ ಪ್ರಾಬ್ಲಮ್ ಇದೆ ಸಾರ್, ಇಲ್ಲೆ ಪಕ್ಕದ ಊರಿಗೆ ಹೋಗಿ ರಿಪೇರಿ ಮಾಡಿಸಿಕೊಂಡು ಬರ್ತೀನಿ" ಅಂದ. ಮೈಉರಿದುಹೋಯಿತು ,ಆದರೂ ಉಗುಳು ನುಂಗಿಕೊಂಡು "ಎಷ್ಟೊತ್ತಾಗುತ್ತೆ" ಎಂದೆ .
"ಒನ್ ಅವರ್ ಸಾರ್, ಬೇಗ ಸರಿ ಮಾಡ್ಸ್ಕೊಂಡ್ ಬರ್ತೀನಿ" ಎಂದು ಹಲ್ಕಿರಿದ .
ನಾವೆಲ್ಲ ಊಟ ಮುಗಿಸಿ ಹೊರಡಬೇಕೆಂದಿದ್ದರೆ ಈ ಡಬ್ಬಾ ಗಾಡಿ ರಿಪೇರಿ ಅನ್ನುತ್ತಿದ್ದಾನಲ್ಲ ಎಂದು. ಶುಭಾ ಒಂದಷ್ಟು ಆಂಗ್ಲಭಾಷೆಯಲ್ಲಿ ಬೈದಳು. ಬೆಂಗಳೂರಿಗೆ ಎಷ್ಟೊತ್ತಿಗೆ ತಲುಪುವೆವೋ ಎನ್ನುವ ಆತಂಕದಿಂದ ಊಟ ಮುಗಿಸಿದೆವು.
ಗಾಡಿ ಹೊರಡುವುದು ತಡವಾಗುತ್ತದೆಂದು ತಿಳಿದ ಅರ್ಜುನ್ ಮತ್ತು ಹರೀಶ್ ಹೊರಡಲು ಸಿದ್ದವಾದರು. ಅವರಾಗಲೇ ಊಟ ಮುಗಿಸಿದ್ದುದರ ಕಾರಣ ಮತ್ತು ಅವರಿಗೆ ಬೆಂಗಳೂರಿನಲ್ಲಿ ಮುಖ್ಯವಾದ ಕೆಲಸವಿದ್ದುದ್ದರಿಂದ ಅವರು ಹೊರಟರು.
ನಾನು, ಶ್ರೀಕಾಂತ ಊಟ ಮುಗಿಸಿ ಬರುವ ಹೊತ್ತಿಗೆ ಅದೇನಾಯಿತೋ ಏನೋ ಡ್ರೈವರ್ "ಗಾಡಿ ಓಕೆ ಸಾರ್, ಬೆಂಗಳೂರಿಗೆ ಹೋಗಿ ರಿಪೇರಿ ಮಾಡಿಸ್ಕೋಬೋದು, ಏನು ತೊಂದ್ರೆ ಇಲ್ಲ" ಎಂದ. ಎಲ್ಲರೂ ನಿರಾಳರಾದೆವು, ಬೇಗ ರೆಡಿ ಆಗಿ ಹೊರಡಲು ನಿರ್ಧರಿಸಿದೆವು. ಅರ್ಜುನ್ ಮತ್ತು ಹರೀಶರ ಜಾಗವನ್ನು 'ಮದುವೆ ಗಂಡಿನ' ಎರಡು ಭಾರವಾದ ಸೂಟುಕೇಸುಗಳು ತುಂಬಿದವು, ಫಿಸಿಕಲಿ. ಅರುಣ ಮತ್ತು ರೇಖಾಗೆ ವಿದಾಯ ಹೇಳಿ ಹೊರಡುವ ಹೊತ್ತಿಗೆ ಸಮಯ ಮಧ್ಯಾಹ್ನ ಮೂರು ಗಂಟೆ. ಶ್ರೀನಿವಾಸ ಕೂಡ ನಾವು ಹೊರಡುವ ಹೊತ್ತಿಗೆ ಹೊರಟು ನಿಂತಿದ್ದ. ಅವನು ಮೈಸೂರಿನಿಂದ ಹೊಳೆನರಸೀಪುರಕ್ಕೆ ಬೈಕಿನಲ್ಲಿ ಬಂದಿದ್ದ. ಶ್ರೀಕಾಂತ ಡ್ರೈವರನ ಹತ್ತಿರ ಮಾತನಾಡಿ ಮೈಸೂರಿನ ಮಾರ್ಗವಾಗಿ ಬೆಂಗಳೂರನ್ನು ಸೇರುವ ಬಗ್ಗೆ ಅವನನ್ನು ಒಪ್ಪಿಸಿದ್ದ. 'ಟವೇರಾ' ವೇಗಕ್ಕೆ ಬೈಕಿನ ಸ್ಪೀಡು ಹೊಂದುವುದೇ?? ಶ್ರೀನಿವಾಸ ನಮ್ಮನ್ನು ಹಿಂದಿಕ್ಕಿ ಮೈಸೂರಿನೆಡೆಗೆ ಶರವೇಗದಲ್ಲಿ ಧಾವಿಸಿದ್ದ.
ಹಿಂದಿನ ರಾತ್ರಿ ಯಾರೊಬ್ಬರಿಗೂ ಸರಿಯಾದ ನಿದ್ದೆ ಆಗಿರಲಿಲ್ಲ. ಗಾಡಿ ಹೊರಟ ಹದಿನೈದು ಇಪ್ಪತ್ತು ನಿಮಿಷದೊಳಗೆ ಎಲ್ಲರಿಗೂ ನಿದ್ದೆ ಹತ್ತಿಬಿಟ್ಟಿತ್ತು ಶ್ರೀಕಾಂತನ ಹೊರತಾಗಿ. ಡ್ರೈವರ ಪಕ್ಕ ಕೂತಿದ್ದ ಅವನು ರಸ್ತೆಯ ಇಕ್ಕೆಲಗಳನ್ನು ನೋಡುತ್ತಿದ್ದ, ಅವನನ್ನೇ ನೋಡುತ್ತಾ ನಾನು ನಿದ್ದೆಗೆ ಜಾರಿದ್ದೆ. ಸುಮಾರು ಅರ್ಧ ಗಂಟೆ ಆಗಿರಬಹುದು.
ಇದ್ದಕ್ಕಿದ್ದ ಹಾಗೆ ಶ್ರೀಕಾಂತ "ಗಾಡಿ ನಿಲ್ಸಿ ಗಾಡಿ ನಿಲ್ಸಿ " ಎಂದು ಕೂಗಿದ.
ಏನಾಯಿತು ಎಂದು ಕೇಳಿದಾಗ "ಅಲ್ಲಿ ಹಿಂದಗಡೆ ಶ್ರೀನಿವಾಸ ನಿಂತಿದ್ದಾನೆ, ಅವನ ಗಾಡಿ ಇದೆ" ಎಂದ.
ನಿದ್ದೆಯಿಂದ ಎದ್ದ ನಾನು ಕಣ್ಣುಜ್ಜಿಕೊಳ್ಳುತ್ತ ಗಾಡಿ ಇಳಿದು ಹಿಂದಕ್ಕೆ ಓಡಿದೆ, ಒಂದಷ್ಟು ಜನ ನಿಂತಿದ್ದರು, ಅವರನ್ನು ಸರಿಸಿ ನೊಡಿದರೆ ಶ್ರೀನಿವಾಸ ನಿಂತಿದ್ದಾನೆ, ಬಲ ಮೊಣಕೈಯೆಲ್ಲವೂ ರಕ್ತ ಸಿಕ್ತ. ಮುಖದ ಬಲಭಾಗದಲ್ಲಿ ತರಚಿದ ಗಾಯಗಳು, ಮುಖ ಸ್ವಲ್ಪ ಊದಿಕೊಂಡಿತ್ತು. ಹಾಕಿಕೊಂಡಿದ್ದ ಶರ್ಟ್ ಹರಿದಿತ್ತು. ಕತ್ತು ತಿರುಗಿಸಲಾಗದೆ ನರಳುತ್ತಿದ್ದ. ನನಗೆ ಬಹಳ ಗಾಬರಿಯಾಯಿತು, ನೀರು ಬೇಕಾ ಎಂದು ಕೇಳಿದ್ದಕ್ಕೆ ಸರಿಯಾಗಿ ನಮ್ಮೊಡನೆ ಮಾತನಾಡುತ್ತಿರಲಿಲ್ಲ, ಮಾತನಾಡಲು ಆಗುತ್ತಿರಲಿಲ್ಲ. ಅಪಘಾತದ 'ಶಾಕ್' ನಲ್ಲಿದ್ದ. ಅವನು ಉತ್ತರಿಸದೇ ಇರುವುದನ್ನು ನೋಡಿ ಇನ್ನಷ್ಟು ಭಯವಾಯಿತು.
ಅಲ್ಲೇ ಅಕ್ಕಪಕ್ಕದ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ಜನಗಳು ಹೇಳಿದ್ದಿಷ್ಟು. "ನಾವು ನೋಡ ನೋಡುತ್ತಿದ್ದಂತೆ ಗಾಡಿ ಸ್ಕಿಡ್ ಆಗಿ ಗಾಡಿ ಸಮೇತ ಮೂರು ಪಲ್ಟಿ ಹೊಡೆದು ಇಲ್ಲಿ ಕಾಣುತ್ತಿದೆಯಲ್ಲ ಈ ಪೊದೆ ಇಲ್ಲಿ ಬಂದು ಬಿದ್ಬಿಟ್ರು, ಸಾರ್ ಹೆಲ್ಮೆಟ್ ಇಲ್ದಿದ್ರೆ ಇವ್ರು ಇಲ್ಲೇ ಔಟ್ ಆಗ್ಬಿಡ್ತಿದ್ರು" ಎಂದರು.
ಎಲ್ಲರಿಗೂ ವಂದಿಸಿ ಅವನನ್ನು ಅಲ್ಲಿಂದ 'ಟವೇರ' ಬಳಿ ಕರೆತಂದೆವು. ಕುಡಿಯಲು ನೀರು ಕೊಟ್ಟು, ಏನಾಯಿತೋ ಎಂದು ಕೇಳಿದಾಗ, "ದಾರಿ ಮಧ್ಯ ಒಂದು ಕಲ್ಲು ಸಿಕ್ಕಿ, ಮುಂದಿನ ಟಯರ್ ಪಂಚರ್ ಆಗಿ ಪಲ್ಟಿ ಹೊಡೆದು ಬಿದ್ದುಬಿಟ್ಟೆ, ಅಲ್ಲೊಂದು ಕಲ್ಲಿತ್ತು ಅದಕ್ಕೆ ಸರಿಯಾಗಿ ಕುತ್ತಿಗೆಗೆ ಬಿತ್ತು" ಎಂದು ಕತ್ತು ಅಲುಗಿಸಲಾಗದೆ ಚೀರಿದ.
ಸ್ಥಳಕ್ಕೆ ಹೋಗಿ ನೋಡಿದಾಗ ಅಪಘಾತ ಎಷ್ಟು ಭೀಕರವಾಗಿತ್ತೆಂದರೆ ಬೈಕಿನ ರುಂಡವೇ ಕಳಚಿ ಬಿದ್ದಿತ್ತು!! ಕ್ರಾಶ್ ಗಾರ್ಡ್ ಬೆಂಡಾಗಿತ್ತು, ಹ್ಯಾಂಡಲ್ ಬೇರೆ ದಿಕ್ಕಿನೆಡೆಗೆ ತಿರುಗಿತ್ತು, ಎಲ್ಲಕ್ಕಿಂತ ಹೆಚ್ಚಾಗಿ ಶ್ರೀನಿವಾಸ ನ ಹೆಲ್ಮೆಟ್ ದವಡೆಯ ಬಳಿ ಬಿರುಕು ಬಿಟ್ಟಿತ್ತು. ನಮಗೂ ಪ್ರಾಮಾಣಿಕವಾಗಿ ಅನ್ನಿಸಿತ್ತು ಹೆಲ್ಮೆಟ್ ಇಲ್ಲದಿದ್ದರೆ ತಲೆಗೆ ಬಲವಾದ ಪೆಟ್ಟು ಬೀಳುತ್ತಿತ್ತು ಎಂದು, ಜೀವ ಹೋಗುವ ಸಾಧ್ಯತೆಯಂತೂ ಇತ್ತು ಹೆಲ್ಮೆಟ್ ಇಲ್ಲದಿದ್ದರೆ.
ಅಲ್ಲಿದ್ದ ಹಳ್ಳಿಗರು ಹೇಳಿದರು ಮುಂದೆ ಸಲ್ಪ ದೂರದಲ್ಲಿ ಆಸ್ಪತ್ರೆಯಿದೆ ಕರೆದುಕೊಂಡು ಹೋಗಿ ಎಂದು, ಅಲ್ಲಿಗೆ ಕರೆದುಕೊಂಡು ಹೋಗಿ ಪ್ರಥಮಚಿತ್ಸೆಯನ್ನು ಕೊಡಿಸಿದೆವು. ಅಲ್ಲಿದ್ದ ಡಾಕ್ಟರ್ ಸಲಹೆಯ ಮೇರೆಗೆ ಮೈಸೂರಿಗೆ ಕರೆದುಕೊಂಡು ಹೋಗಿ X-ray ತೆಗೆಸಿ ಎಂದು. ನಮಗಿದ್ದಿದ್ದ ಮುಖ್ಯ ಆತಂಕವೇ ಅದಾಗಿತ್ತು, ಕತ್ತಿನ ಮೂಳೆಯೇನಾದರೂ ಮುರಿದಿದ್ದರೆ ಎಂದು. ಆದಷ್ಟು ಮೈಸೂರಿಗೆ ಹೊರಡಬೇಕೆಂದು ನಿರ್ಧರಿಸಿದೆವು.
ಸಂಜೆ ಏಳರ ಹೊತ್ತಿಗೆ ಬೆಂಗಳೂರನ್ನು ತಲುಪುವ ಎಲ್ಲರ ಆನಿಕೆ ದಿಕ್ಕು ತಪ್ಪಿತ್ತು. ಮುಂದೆ ಹೇಗೆ ನಡೆಸುವುದು ?, ಏನು ಮಾಡುವುದು ? ನೂರು ಪ್ರಶ್ನೆಗಳನ್ನು ಪರಿಸ್ಥಿತಿ ನಮ್ಮೆದುರು ಇರಿಸಿ "ಈಗೇನ್ಮಾಡ್ತೀ" ಎಂಬಂತಿತ್ತು. ಸ್ವಲ್ಪ ಚೇತರಿಸಿಕೊಂಡು ಶ್ರೀನಿವಾಸನೇ ಅವರ ತಂದೆ ತಾಯಿಗೆ ವಿಷಯ ತಿಳಿಸಿದ, ಆದಷ್ಟು ಬೇಗ ಊರಿಗೆ ಬರುತ್ತೇನೆಂದ. ಇಲ್ಲಿ ಇದೆಲ್ಲ ನಡೆಯುತ್ತಿದ್ದರೆ ಅಲ್ಲಿ ಗೋವಿಂದರಾಜ್ ಮತ್ತು ಡ್ರೈವರ್ ಬೈಕನ್ನು ರಿಪೇರಿ ಮಾಡಿಸುತ್ತಿದ್ದರು. ಹೀಗೆಲ್ಲಾ ಆದರೂ ಶ್ರೀನಿವಾಸ "ನೀವೆಲ್ಲಾ ಹೊರ್ಡಿ, ನಾನು ಮೈಸೂರಿಗೆ ಹೋಗ್ತೀನಿ" ಎಂದಿದ್ದು ನನಗೆ ಬಹಳ ವಿಚಿತ್ರವಾಗಿ ತೋರಿತು.
ಅಮೇಲೆ ಶ್ರೀಕಾಂತ ಬಂದು "ಸರಿ ಈಗ ನೀನು ಮತ್ತು ಗೋವಿಂದರಾಜ್ ಗಾಡಿಯನ್ನು ಮೈಸೂರಿಗೆ ಲಗ್ಗೇಜ್ ಆಟೋ ದಲ್ಲಿ ಹಾಕ್ಕೊಂಡ್ ಬನ್ನಿ, ನಾನು ಇವನನ್ನ ಉಳಿದವರೊಡನೆ ಮೈಸೂರಿನ ಅಪೊಲೊ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆ, ಅಲ್ಲಿ ಚೆಕ್ ಮಾಡಿಸಿ ಅವನ ಗಾಡಿಯನ್ನ ಬಜಾಜ್ ಸರ್ವೀಸ್ ಸೆಂಟರಿಗೆ ಕೊಟ್ಟು ಶ್ರೀನಿವಾಸನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗೋಣ" ಎಂದ. ಯಾಕೋ ಗಾಡಿಯನ್ನು ಸರ್ವೀಸ್ ಸೆಂಟರಿಗೆ ಕೊಟ್ಟು ಬರುವುದು ಯಾರಿಗೂ ಸರಿ ಬರಲಿಲ್ಲ. ಅದೊಂದು ಮಾತನ್ನು ಧಿಕ್ಕರಿಸಿ ಉಳಿದಕ್ಕೆ ಅನುಮೋದಿಸಿ ಮೈಸೂರಿಗೆ ಹೊರಡಲು ನಿರ್ಧರಿಸಿದೆವು.
ಶ್ರೀಕಾಂತ, ಶ್ರೀನಿವಾಸ, ಶ್ರುತಿ, ಶುಭಾ ಇಷ್ಟು ಜನ ಗಾಡಿಯಲ್ಲಿ ಮೈಸೂರಿಗೆ ಹೊರಟರು. ನಾನು ಮತ್ತೆ ಗೋವಿಂದರಾಜ್ ಬೈಕನ್ನು ಬೈಕನ್ನು ಮೈಸೂರಿನ ಅಪೋಲೊ ಆಸ್ಪತ್ರೆ ಬಳಿ ತಂದೆವು. ಸಮಯ ಸುಮಾರು 7 ಗಂಟೆ ಆಗಿತ್ತೆನಿಸುತ್ತದೆ. ನಾನು ಮತ್ತೆ ಗೋವಿಂದರಾಜ್ ಬರುವ ಹೊತ್ತಿಗೆ ಚೆಕಪ್ ಮುಗಿದಿತ್ತು. ಕತ್ತಿಗೇನೂ ಆಗಿಲ್ಲವೆಂದು ಕೇಳಿ ಸಮಾಧಾನವಾಯಿತು. ಉಳಿದ ಫಾರ್ಮಾಲಿಟಿಗಳನ್ನ ಮುಗಿಸಿ ಬರುವುದಕ್ಕಾಗಿ ಅಪೊಲೊ ಆಸ್ಪತ್ರೆ ಹೊರಾಂಗಣದಲ್ಲಿ ಕಾಯುತ್ತಿದ್ದೆವು, ಎಲ್ಲರೂ ಅದೇ ಮಾತು, ಏನೋ ಅನ್ಕೋತಿದ್ವಿ, ಏನೋ ಆಗ್ಬಿಡ್ತು, ನಾವು ಆ ಹಾದಿಯಲ್ಲಿ ಹೋಗದಿದ್ದರೆ ? ಶ್ರೀಕಾಂತ ನಡೆದ ಅಪಘಾತವನ್ನು ಗಮನಿಸದಿದ್ದರೆ? ಅವನೂ ಕೂಡ ನಿದ್ರಿಸಿದ್ದರೆ?? ಹೀಗೆ ನಮಗೆ ಕೇಳಿಕೊಂಡ ಪ್ರಶ್ನೆಗಳಿಗೆ ಯಾರೊಬ್ಬರಲ್ಲೂ ಉತ್ತರವಿರಲಿಲ್ಲ, ಶ್ರೀನಿವಾಸ ಹೊರಗಡೆ ಬರುವುದಕ್ಕೇ ಕಾಯುತ್ತಿದ್ದೆವು. ಅಷ್ಟೊತ್ತಿಗೆ ಶುಭಾ ಅವರ ದೊಡ್ಡಪ್ಪನ ಮನೆ ಇಲ್ಲೇ ಹತ್ತಿರವಿದೆಯೆಂದೂ ಬೈಕನ್ನು ಇಲ್ಲೇ ಬಿಡೋಣ ಎಂದು ಹೇಳುತ್ತಿದ್ದಳು. ಶ್ರೀನಿವಾಸ ಹೊರಗಡೆ ಬಂದಾಗ ಮುಖ ಸಲ್ಪ ಮಟ್ಟಿಗೆ ಗೆಲುವಾಗಿತ್ತು. ಮತ್ತೆ ಅವನ್ನು ವಿಚಾರಿಸಿಕೊಂದು ಗಾಡಿಯಲ್ಲಿ ಕೂತು ಶುಭಾಳ ದೊಡ್ಡಪ್ಪನ ಮನೆ ಕಡೆಗೆ ಹೊರಟೆವು. ಮನೆ ಬಹಳ ಸೊಗಸಾಗಿತ್ತು, ಮನೆಯ ಮುಂದೆ ಒಂದಷ್ಟು ಗಿಡಗಳನ್ನು ಬೆಳೆಸಿದ್ದರು, ಬಾಗಿಲ ಎದುರಿಗೆ ತುಳಸೀಕಟ್ಟೆ, ತಂಪಿನ ಹವೆ ಬಹಳ ಹಿತವನ್ನು ನೀಡಿತು. ಮನೆಯಲ್ಲಿದ್ದ ಶುಭಾಳ ದೊಡ್ಡಪ್ಪ ಶ್ರೀನಿವಾಸನ್ನು ವಿಚಾರಿಸಿ ಎಲ್ಲಾ ಸರಿ ಹೋದ ಮೇಲೆ ಬಂದು ಗಾಡಿ ತೆಗೆದುಕೊಂಡು ಹೋಗು, ಏನೂ ಯೋಚನೆ ಮಾಡಬೇಡ ಎಂದು ಹೇಳಿ ನಮ್ಮೆಲ್ಲರನ್ನು ಬೀಳ್ಕೊಟ್ಟರು.
ಸಮಯ ಎಂಟಾಗಿದ್ದಿರಬಹುದು. ಆಗ ಬೆಂಗಳೂರಿನೆಡೆಗೆ ಹೊರಟೆವು. ದೇಹಕ್ಕೆ ಅಷ್ಟಾಗಿ ದಣಿವಾಗಿಲ್ಲದಿದ್ದರೂ ಮನಸಿಗೆ ಏನೇನೇನೋ ನಡೆದು ಹೋಯಿತೆಂಬ ಭಾವನೆ. ಯಾರ ಪ್ರಶ್ನೆಗಳಿಗೂ ಯಾರ ಬಳಿಯೂ ಉತ್ತರವಿರಲಿಲ್ಲ. ಮತ್ತೆ ಎಲ್ಲರೂ ನಿದ್ದೆಗೆ ಜಾರಿದೆವು, ಮಾರ್ಗ ಮಧ್ಯ ಊಟ ಮುಗಿಸಿ ಕೆಂಗೇರಿಯ ಬಳಿ ಬಂದಾಗ ಗೋವಿಂದರಾಜ್ ನಾನು ಇಲ್ಲೇ ಇಳಿದುಕೊಳ್ಳುತ್ತೇನೆಂದರು. ಅವರ ವಯಸ್ಸಿನವರು ಬೇರೆಯಾರಾಗಿದ್ದರೂ "ಮನೆವರೆಗೂ ಬಿಟ್ಬಿಡೀ ಪಾ" ಎನ್ನುತ್ತಿದ್ದರೇನೋ ?? ಎಲ್ಲರಿಗೂ ಬೈ ಬೈ ಹೇಳಿ ಅಲ್ಲೆ ಕಣ್ಮರೆಯಾಗಿಬಿಟ್ಟರು.ಶ್ರೀನಿವಾಸನನ್ನು ಜಾಲಹಳ್ಳಿಯ ಅವರ ಮನೆ ಬಳಿ ಬಂದೆವು. ಶ್ರೀಕಾಂತ ಅವನನ್ನ ಕರೆದು ಕೊಂಡು ಅವರ ಮನೆ ಬಾಗಿಲ ವರೆಗೂ ಬಿಟ್ಟು ಬಂದ, ನಂತರ ಶುಭಾಳ ಮನೆಗೆ ಹೋಗಿ ಅಲ್ಲಿಂದ ಶರ್ಮಾಳನ್ನು ಚಾಮರಾಜಪೇಟೆ ಬಳಿ ಇಳಿಸಿ ನಾನು ಮತ್ತೆ ಶ್ರೀಕಾಂತ ನ.ರಾ. ಕಾಲೋನಿ ಬಳಿ ಬರುವ ಹೊತ್ತಿಗೆ ರಾತ್ರಿ ಹನ್ನೊಂದೂವರೆಯಾಗಿತ್ತು. ಡ್ರೈವರನ ದುಡ್ಡು ಸೆಟಲ್ ಮಾಡಿ ನಾನು ಮನೆ ದಾರಿ ಹಿಡಿದೆನು. ಹೋಗಿದ್ದು ಎರಡೇ ದಿನವಾದರೂ ಏನೆಲ್ಲ ನಡೆದು ಹೋಯಿತೆಂಬ ಅಚ್ಚರಿ, ಒಂದು ತೆರನಾದ ಭಾರ ಮನಸಿಗೆ.
ನಾಗಸಂದ್ರ ಸರ್ಕಲ್ಲಿನ ಇಳಿರೋಡಿನಲ್ಲಿ ನಡೆದು ಬರುತ್ತಿದ್ದ ನನ್ನನ್ನು ನೋಡಿ ಬೀದಿ ನಾಯಿಯೊಂದು ನನ್ನ ನೋಡುತ್ತಲೇ ತಾನಿದ್ದ ಜಾಗದಿಂದ ವಿಕಾರವಾಗಿ ಬೊಗಳುತ್ತಾ ನನ್ನೆಡೆಗೆ ಓಡಿ ಬಂತು. "ಭಗವಂತಾ" ಎಂದು ಉದ್ಗರಿಸಿದ್ದಷ್ಟೆ ನೆನಪು.
ಉತ್ತಿ ಬಿತ್ತಿದ್ದು
5 months ago
8 comments:
ಅಂತು ಕರ್ಮಕಾಂಡದಲ್ಲಿ ಮಹಾಕಾವ್ಯವೊಂದು ಆವಿರ್ಭವಿಸಿತು! ಅದಕ್ಕೇ ಬೆಂಗಳೂರಿನಲ್ಲಿ ಆಕಾಶವೇ ತೂತುಬಿದ್ದಂತೆ ಮಳೆ !ಎಲ್ಲಾ...ಟೈ"mingu"
ಶ್ರೀಕಾಂತ್ ಹೇಳಿದ್ದರು, ನೀವು ಈ ಘಟನೆಯನ್ನ ಮಹಾಕಾವ್ಯವನ್ನಾಗಿ ಬರೆದು ಬ್ಲಾಗಿಗೆ ಹಾಕದೇ ಸೀದಾ ಬುಕ್ಕನ್ನೇ ಪಬ್ಲಿಷ್ ಮಾಡಿಸುವ ಸಾಧ್ಯತೆ ಇದೆ ಅಂತ..ಬಿಡಿ...ಎಲ್ಲಾ ಟೈಮೂ...
ವಿಚಿತ್ರ ಅಂದರೆ, ನಾನು ಅರುಣ್ ಮದುವೆಗೆ ಬರಲಾಗದೇ ಇಂಟರ್ವ್ಯೂ ಒಂದಕ್ಕೆ ಹೋದಾಗ ನನಗೂ ಆವತ್ತೇ ಅಪಘಾತವಾಗಿದ್ದು...ಇರ್ಲಿ ಬಿಡಿ, ಎಲ್ಲಾ ಟೈಮೂ..
GB ಗೆ ಹೀಗಾಗಿದ್ದನ್ನು ಕೇಳಿ ನನಗೂ ಸಿಕ್ಕಾಪಟ್ಟೆ ಗಾಬರಿ ಮತ್ತು ಬೇಜಾರು ಆಯ್ತು, ಘಟನೆಯನ್ನು ನೀಟಾಗಿ ವಿವರಿಸಿ ಅಂದರೆ GB ಮತ್ತು ಶ್ರೀಕಾಂತ್ ಇಬ್ಬರೂ - "ಶ್ರೀಧರನ ಬಾಯಲ್ಲೇ ಕೇಳಬೇಕು ನೀನು ಇದನ್ನ. ನಾವು ಹೇಳಿದರೆ effect ಇರೋದಿಲ್ಲ" ಅಂದಿದ್ದರು. ನಾನು "ಓಕೆ" ಅಂದಿದ್ದೆ..ಎಲ್ಲಾ ಟೈಮು.
ನಿಮ್ಮ ಬ್ಲಾಗಿಂದ ವಿಷಯವನ್ನು ಓದಿ ತಿಳಿದರೂ ನೀವು ಮಾತಾಡಿದಷ್ಟೇ effective ಆಗಿದೆ ಆದ್ದರಿಂದ, ಪರ್ವಾಗಿಲ್ಲ.
ಹಚ್ ಅಲಿಯಾಸ್ Vodafone ---> ಕ್ರೈಂ ಸ್ಟೋರಿ ಜಾಸ್ತಿ ನೋಡಿದ್ದರ effect-u ಅನ್ಸತ್ತೆ !
ಮಿಂದಲು---> ಅದು ಮೀಯಲು ಅಂತಾಗಬೇಕು ಕರ್ಮಕಾಂಡ ಪ್ರಭುಗಳೇ...
"ನೀವೆಲ್ಲಾ ಹೊರ್ಡಿ, ನಾನು ಮೈಸೂರಿಗೆ ಹೋಗ್ತೀನಿ" ಎಂದಿದ್ದು ನನಗೆ ಬಹಳ ವಿಚಿತ್ರವಾಗಿ ತೋರಿತು.
----> ಹ್ಮ್ಮ್ಮ್....
"ಭಗವಂತಾ" ಎಂದು ಉದ್ಗರಿಸಿದ್ದಷ್ಟೆ ನೆನಪು.---> ಮಿಕ್ಕಿದ್ದಿನ್ನೇನು ನೆನಪಿಲ್ವಾ ಇದಾದ್ಮೇಲೆ ? :O :O ಶ್ರೀಧರ್...ನಿಮ್ಮ ಹೆಸರೇನು ನೆನಪಿಸಿಕೊಳ್ಳೀ...:)
ಒಳ್ಳೇ ಶ್ರೀನಿವಾಸ. ಪಾಪ, ಹೋಗ್ಬಿಡ್ತಿದ್ದ. ಹೋಗ್ಲಿಲ್ಲ.
"ನೋಡ್ಕೊಂಡ್ ಅಲ್ವೇನಯ್ಯ ಬೀಳೋದು?" ಎಂದು ಕೇಳಿದ್ದೆ."ನೋಡ್ಕೊಂಡೇ ಬಿದ್ದೆ ಮ್ಯಾನ್, ಏನ್ ಮಾಡ್ಲಿ?" ಎಂದ. ನನಗೆ ಬೇರೆ ಉತ್ತರವೇನೂ ತೋರದೆ "ಅದೂ ಸರಿನೇ..." ಎಂದಿದ್ದೆ.
ನಿನ್ನ ಲೇಖನದ ಇಡೀ ಅಂಶವು ಶ್ರೀನಿವಾಸನ ಘಟನೆಯೊಂದಿಗೆ ಎಲ್ಲರನ್ನೂ ಕರೆದೊಯ್ದುಬಿಡುತ್ತೆ. ಈ ಲೇಖನದಲ್ಲಿ 'ಮದುವೆ ಸಂಭ್ರಮ' ಮರೆಯಾಗಿಬಿಡುತ್ತೆ. ಓದಿದ ನನಗೂ ಮದುವೆಯ ಖುಷಿಯ ನೆನಪುಗಳು ಮರೆಯಾಗಿ ಶ್ರೀನಿವಾಸನ ಅವಘಡವೇ ಕಣ್ಣು ಮುಂದೆ ಬಂದಂತಾಯಿತು. ಓದಿ ಮುಗಿಸಿದ ಮೇಲೂ ಮದುವೆ ವಿಷಯ ನೆನಪಿನಲ್ಲಿರುವುದಿಲ್ಲ. ಎಲ್ಲಾ ಟೈಮು!
ಇನ್ನು ಡೈನಮಿಕ್ ವಿಷಯಕ್ಕೆ ಬರ್ತೀನಿ. ಇವಳಿಗೆ ಕಮೆಂಟು ಬರೆಯುವುದನ್ನು ಹೇಳಿಕೊಡುವ ಕ್ಲಾಸಿಗೆ ಕಳಿಸಬೇಕು ಅನ್ಸುತ್ತೆ. ಒಳ್ಳೇ ಕಾಲೇಜಿದ್ದರೆ ಸೇರಿಕೊಳ್ಳಲಿ.
ಇಲ್ಲಿಗೆ ನಿಲ್ಲಿಸಬೇಡ. ಬರೀತಿರು. ಹೆಚ್.ಎಫ್.
[ಶ್ರೀನಿವಾಸ] ಶ್ರೀಧರನ್ನ ನೋಡಿ ಕಲ್ತ್ಕೊಳೋ... ಜಾಣ ಇವನು.
Welcome back mahaaa tarle!
anthu inthu [tin tin]
article bannnnnntuu... innu hosadaada title-linalliiii...
anthu inthu [ahaa] article bannntu...
chanaaagide niroopaNe!
Sridhara,
tumba chennagi bardideeya, sikkapatte improvement ide munche neenu bareetiddakkinta. Heege bareetiru. Ninne ne comment haakbeku antha idde ... aadre comments disable aagittu. Ivattoo innu ondu hosa post nodi khushi aaytu ...
shreedharavare
correct agi helidhira
ella time antha
:-) ಸಾವನ್ನ ಬಹಳ ಹತ್ತಿರದಿಂದ ಸಂಧಿಸಿ ಬಂದೆ.. ಈಗ ಎಲ್ಲಿ ಬೇಕಾದರೂ ಅಳುಕಿಲ್ಲದೆ ಧೈರ್ಯವಾಗಿ ಹೇಳಬಹುದು, "ಸಾವಿಗೆ ಹೆದರಬೇಕಾದ್ದೇನೂ ಇಲ್ಲ.. ಅದರಲ್ಲಿ ಅಷ್ಟು ಭಯಂಕರವಾದದ್ದು ಏನೂ ಇಲ್ಲ" ಅಂತ ;-) ಎಲ್ಲ first hand experience-ಉ... ಆವತ್ತು ನೀವೆಲ್ಲ ನಿಮ್ಮ ಕೆಲಸ ಬಿಟ್ಟು ನನ್ನ ಶುಶ್ರೂಷೆ ಮಾಡಬೇಕಾಗಿ ಬಂದಿದ್ದಕ್ಕೆ ಬೇಜಾರಾಗಿ ಅದೆಷ್ಟು ಬೈದುಕೊಂಡಿದ್ದೀನೋ, ನಾನು ನನ್ನನ್ನೇ! ಇರಲಿ... ಎಲ್ಲವೂ ನಾರಾಯಣನ ನಿಯಮನ..
ಪಾಪ.. ಅರುಣನ ಮದುವೆ ಹೈಲೈಟ್ ಮಾಡೋ ಅಂದ್ರೆ ಅವ್ನು ಹಾಗೆ complain ಮಾಡೋ ಹಾಗೆ ಬರ್ದಿದ್ದೀಯಲ್ಲೋ! ದಡ್ಡ! :P
ಚೆನ್ನಾಗಿದೆ.. ನಿನ್ನ ಎರಡೂ ಬರವಣಿಗೆಗಳು.. ವಿಜಯಕ್ಕ ಹೇಳಿದಹಾಗೆ ನಿನ್ನೆ ಕಮೆಂಟ್ ಮಾಡಕ್ಕೇ ಆಗ್ಲಿಲ್ಲ.. ಅದಕ್ಕೆ ಈವತ್ತು ಕಮೆಂಟಿಂಗ್...
[ಶ್ರೀನಿವಾಸ] ಬೇರೆಯವರ ಮದುವೆಯಾಗಿದ್ದಿದ್ದರೆ ನಾನು ಹಾಗೆ complain ಮಾಡ್ತಿದ್ನಾ ಹೇಳು. ಖಂಡಿತ ಇಲ್ಲ. ;-)
ಒಳ್ಳೇ ಯಮಲೋಕದ ಬಾಗಿಲು ತಟ್ಟಿ ಬಂದಿದ್ದೀಯ. ಅವನು "ಈಗ ಬ್ಯುಸಿ ಇದ್ದೀನಿ, ಆಮೇಲೆ ಬಾ ಹೋಗೋಲೋ" ಎಂದಿದ್ದಾನೆ. ಇದೇ ರೀತಿ ನಾನೂ ಉಗಿಸಿಕೊಂಡಿದ್ದೇನೆ ಯಮನ ಬಳಿ ಮೂರು ಸಲ!!
Post a Comment