Three Stages -u

Wednesday, January 2, 2008

ಎಲ್ಲೋ ಕೇಳಿದ ನೆನಪು..

ಮನುಷ್ಯನಾಗಿ ಹುಟ್ಟಿದ ಮನುಷ್ಯ ಗುಣಗಳನ್ನು ರೂಢಿಸಿಕೊಂಡವನು ಜೀವನದ ಉದ್ದಗಲಕ್ಕೂ ಈ ಮೂರು ಹಂತಗಳಲ್ಲಿ ತೊಯ್ದಾಡುತ್ತಿರುತ್ತಾನೆ...ನನಗೆ ಹೌದೆನ್ನಿಸಿತು...ಓದಿಕೊಳ್ಳಿ..

೧) ನಾನು ಮಾಡುತ್ತಿರುವುದು ಸರಿ, ಪ್ರಪಂಚ ಸರಿಯಿಲ್ಲ..

೨) ನನ್ನಲ್ಲೇ ಏನೋ ತಪ್ಪಿದೆ, ಪ್ರಪಂಚ ಸರಿಯಾಗೆ ಇದೆ...

೩) ನಾನು ಸರಿಯಾಗಿದ್ದೀನಿ, ಪ್ರಪಂಚ ಕೂಡ ಸರಿಯಾಗೆ ಇದೆ...

ಓದಿ ನಿಮಗೆ ಏನೆನ್ನಿಸಿತು??

ನೂತನ ಸಂವತ್ಸರದ ಹಾರ್ದಿಕ ಶುಭಾಶಯಗಳು......

ನೆಮ್ಮದಿ....

Tuesday, January 1, 2008

ಇವತ್ತು ಎರಡನೆ ಬಾರಿ "ರಂಗಶಂಕರ" ದಲ್ಲಿ "ಮೈಸೂರ ಮಲ್ಲಿಗೆ" ನಾಟಕ ನೋಡಿದೆ.. ಬಹಳ ಬಹಳ ಹಿಡಿಸಿತು..ಬಹಳ ಸೊಗಸಾಗಿದೆ, ಅಚ್ಚುಕಟ್ಟಾಗಿದೆ...

ಅದರಲ್ಲಿ ಒಂದು ಕಡೆ ಕೆ.ಎಸ್.ನರಸಿಂಹಸ್ವಾಮಿಯವರ ಪತ್ನಿ ಹೀಗೆ ಕೇಳುತ್ತಾರೆ...."ನೀವು ಸಂತಸ ದಿಂದ ಬರೆದ್ರಿ, ನೋವಲ್ಲಿ ಬರೆದ್ರಿ, ನಲಿವಲ್ಲಿ ಬರೆದ್ರಿ, ಕಷ್ಟ ಇದ್ದಾಗ ಬರೆದ್ರಿ, ಸುಖ ಇದ್ದಾಗ ಬರೆದ್ರಿ, ಆದ್ರೆ ನೆಮ್ಮದಿಯಾಗಿ ಒಂದೂ ಪದ್ಯ ಬರೆದಿಲ್ಲವೆಂದೆನಿಸುತ್ತೆ ನಂಗೆ" ಎಂದು..

ಅದಕ್ಕೆ ಪ್ರತ್ಯುತ್ತರವಾಗಿ ನರಸಿಂಹಸ್ವಾಮಿಯವರು " ’ನೆಮ್ಮದಿ’ ಇದ್ದರೆ ಕವಿ ಯಾಗುವುದಕ್ಕೆ ಹೇಗೆ ಸಾಧ್ಯ..." ಎಂದರು..


ಯಾಕೋ ಏನೋ ಬಹಳ ಮನ ಮುಟ್ಟಿತು ಅವರ ಮಾತು...ಅದಕ್ಕಾಗಿ ಬ್ಲಾಗಿಸಿದೆ..

ಓದಿದುದಕ್ಕಾಗಿ ವಂದನೆಗಳು...

ಗೋವೆ ಪ್ರವಾಸ.. ಭಾಗ-1

ಮೊದಲ ಬಾರಿಗೆ ಅಂತರರಾಜ್ಯ ಪ್ರವಾಸಕ್ಕೆ ಅಣಿಯಾಗುತ್ತಲಿದ್ದೆ..ನಮ್ಮ ಗಮ್ಯ ಗೋವೆಯೆಂದು ನಿರ್ಧರಿಸಿದ್ದೆವು..ಪಶ್ಚಿಮ ಘಟ್ಟಗಳ ನಡುವೆ ಹಾದು ನುಸುಳುವ ರುದ್ರ ರಮಣೀಯ ಕೊಂಕಣ ರೈಲ್ವೆ ನಲ್ಲಿ ಪಯಣಿಸುವ ಬಯಕೆ ನಮ್ಮೆಲ್ಲರದಾಗಿತ್ತು...ರಂಜನ್ ಇದರ ರೂಪುರೇಶೆಯನ್ನು ಇತರರ ಮುಂದಿಟ್ಟಿದ್ದ...ಹಾ ಮರೆತಿದ್ದೆ ಈ ಪ್ರವಾಸದ ಪಾತ್ರಧಾರಿಗಳ ನಾಮಾಂಕಿತಗಳು ಹೀಗಿವೆ.. ಅಜಿತ್, ಶ್ರೀರಾಮ್, ಸಂದೀಪ್, ರಂಜನ್, ಉಜ್ವಲ್, ಸುನೀಲ್, ಶ್ರೀಧರ್..ಒಟ್ಟು ಏಳು ಜನ.. ಬೆಂಗಳೂರಿನಿಂದ ಮಂಗಳೂರಿಗೆ ಹೊರಟು ಅಲ್ಲಿಂದ ಕೊಂಕಣ ರೈಲ್ವೆ ನಲ್ಲಿ ಸಾಗಿ ಗೋವೆಯನ್ನು ತಲುಪಬೇಕೆಂದು ನಿರ್ಧರಿಸಿದ್ದೆವು.. ಸರಿ ಸುಮಾರು 15 ವರ್ಷಗಳ ತರುವಾಯ ಬೆಂಗಳೂರು-ಮಂಗಳೂರು ರೈಲ್ವೆ ಮಾರ್ಗ ಮತ್ತೆ ತನ್ನ ಸಂಚಾರ ಆರಂಭಿಸಿತ್ತು...ಅದನ್ನು ನೋಡುವ ಬಯಕೆ ಕೂಡ ನಮ್ಮೆಲ್ಲರದಾಗಿತ್ತು..ಅನೇಕ ರಾಜಕೀಯ ಕುಯುಕ್ತಿ ಹುನ್ನಾರ ಗಳಿಗೆ ಒಳಗಾಗಿ ಸುದೀರ್ಘ ೧೫ ವರ್ಷಗಳ ನಂತರ ರೈಲ್ವೆ ಮಾರ್ಗ ಏರ್ಪಟ್ಟಿತ್ತು ಬೆಂಗಳೂರು-ಮಂಗಳೂರು ರೈಲ್ವೆ ಮಾರ್ಗ...

19/12/2007 ರಾತ್ರಿ ಎಂಟೂವರೆಗೆ ಗಿಜಿಗುಡುತ್ತಿದ್ದ ಬೆಂಗಳೂರು ರೈಲ್ವೆ ನಿಲ್ದಾಣದ platform ಎಂಟರಲ್ಲಿ ನಮ್ಮ ಸಾಮಾನು ಸರಂಜಾಮುಗಳೊಂದಿಗೆ ರೈಲನ್ನು ಎದುರು ನೋಡುತ್ತಿದ್ದೆವು.....ಬಂದ ಕೂಡಲೇ ಹತ್ತಿ ನಮ್ಮ ನಮ್ಮ ಸ್ಥಾನಗಳಲ್ಲಿ ಕುಳ್ಳರಿಸಿದೆವು..ಆದಷ್ಟು ಬೇಗ ಹೊರಟರೆ ಸಾಕು ಎಂಬಂತಿದ್ದೆವು...ನಾನು ರೈಲಿನಲ್ಲಿ ಪ್ರಯಾಣ ಮಾಡಿ ಒಂದು ವರ್ಷದ ಮೇಲಾಗಿತ್ತು... ಶ್ರೀರಾಮ್, ಸಂದೀಪ್, ರಂಜನ್ ಇವರೆಲ್ಲ ನನ್ನ ಹೈಸ್ಕೂಲ್ ಗೆಳೆಯರು..ಸರಿ ಸುಮಾರು 12 ವರ್ಷಗಳ ಒಡನಾಟ ಇದೆ ಇವರೊಡನೆ..ಶ್ರೀರಾಮ್ ನೊಡನೆ 19ವರ್ಷಗಳ ಸಖ್ಯ...ನನ್ನ ಆಪ್ತವರ್ಗ ಇವರೆಲ್ಲಾ..ಸುನೀಲ್ PESIT ಗೆಳೆಯ. 4 ವರ್ಷದ ಒಡನಾಟ...ಮಿಕ್ಕಿಬ್ಬರಾದ ಉಜ್ವಲ್ ಮತ್ತು ಅಜಿತ್ ರಂಜನ್ ಗೆಳೆಯರು....



ರಾಮ ಮಾತು ಮಾತಿಗೂ ದಬ್ಬಲ್ meaning ಮಾತುಗಳನ್ನು ತರುತ್ತಿದ್ದ...ಹೆಸರಿಗೆ ಮಾತ್ರ "ಶ್ರೀರಾಮ" ನಷ್ಟೆ ಆತ... ;-) ಉಜ್ವಲ್ ಮತ್ತು ಅಜಿತ್ ಅದನ್ನ ಅರ್ಥ ಮಾಡಿಕೊಳ್ಳುವುದರಲ್ಲಿ ಸಫಲರಾಗಿದ್ದರು..ಎಲ್ಲರೂ ಹಲ್ಕಾಗಳೆಂದೇ ಭಾವಿಸಿ filter ;-) ಇಲ್ಲದೆ ಮಾತನಾಡತೊಡಗಿದೆವು.. ತುಂಬಾ ಆಪ್ತರೊಡನೆ ರೈಲಿನಲ್ಲಿ ಪಯಣಿಸುವ ಅನುಭವವೇ ಬೇರೆ..ಅದನ್ನ ಪದಗಳಲ್ಲಿ ವ್ಯಕ್ತಪಡಿಸಲಾಗುವುದಿಲ್ಲ.. ಯಾವುದೇ ಪ್ರವಾಸವು ಎಲೆಗಳ ಆಟ ವಿಲ್ಲದೆ ಮುಕ್ತಿ ಹೊಂದುವುದಿಲ್ಲ....ನಮ್ಮಲ್ಲಿ ಕೆಲವರು ಊಟ ಮಾಡಿರಲಿಲ್ಲ...ಬ್ಯಾಗಿನಲ್ಲಿ ಇದ್ದ ಕುರು ಕುರು ತಿಂಡಿಗಳನ್ನೇ ಹೊಟ್ಟೆಗೆ ಆಧಾರಪಡಿಸಿಕೊಂಡರು...ನನಗೆ ಕಾಫಿ ಸಿಗಲಿಲ್ಲ..ರೈಲ್ವೆ ನಿಲ್ದಾಣದಲ್ಲಿ ಕುಡಿದದ್ದೇ ಕೊನೆ... ನಾನು ಸುನೀಲ್ ಈ ಎಲೆಗಳ ಆಟದಲ್ಲಿ ಹೆಬ್ಬೆಟ್ಟು... ರಾಮನು ತನಗೆ ಗೊತ್ತಿದ್ದ ಆಟವನ್ನು ಹೇಳಿಕೊಟ್ಟ...ರಂಜನ್ ಮತ್ತು ಸಂದೀಪ್ ಚದುರಂಗ ಆಡುತ್ತಿದ್ದರು..ಯಾರೊಬ್ಬರಿಗೂ ನಿದ್ದೆ ಬರುತ್ತಿರಲಿಲ್ಲ ಸುನೀಲನನ್ನು ಬಿಟ್ಟು...ಬಹಳ ಬೇಗ ನಿದ್ದೆಗೆ ಜಾರಿದ್ದ..ನಿದ್ರಲೋಲನೆ ಸರಿ....ಈ ಪ್ರವಾಸದುದ್ದಕ್ಕೂ ಎಲ್ಲರಿಗಿಂತ ಈತನೆ ಹೆಚ್ಚು ನಿದ್ದೆ ಮಾಡಿದ್ದು ಎಂದೆನಿಸುತ್ತೆ.....ಸುಮಾರು ಎರಡರ ಹೊತ್ತಿಗೆ ಎಲ್ಲರೂ ನಿದ್ರಿಸಲನುವಾದರು ರಾಮನನ್ನು ಹೊರತು ಪಡಿಸಿ..ಒಬ್ಬೊಬ್ಬರಾಗಿ ನಿದ್ದೆಗೆ ಜಾರುತ್ತಿದ್ದೆವು. ಈತ ಮಾತ್ರ ಕಿಟಕಿಯಾಚೆ ಏನೋ ನೋಡುತ್ತಿದ್ದ..ಘಾಟಿಗಳ ನಡುವೆ ನುಸುಳುವ ರೈಲು ನೊಡುವ ಭಾಗ್ಯ ನಮ್ಮದಾಗಲಿಲ್ಲ.. ಸಕಲೇಶಪುರ ಇತ್ಯಾದಿ ಊರುಗಳೆಲ್ಲವು ಮುಂಜಾನೆ 4ರ ಸಮಯದಲ್ಲಿ ಬಂದು ಹೋಗಿತ್ತು...ಒಟ್ಟಿನಲ್ಲಿ ರೈಲಿನ ಪ್ರಯಾಣ ಆರಾಮದಾಯಕವಾಗಿತ್ತು..



ಮಂಗಳೂರು ಇಳಿದ ಕೂಡಲೇ ಎಲ್ಲರೂ ಬೆವರಲಾರಂಭಿಸಿದೆವು...ಬೆಂಗಳೂರಿನಿಂದ ಹೊರಟಾಗ ಚುಮು ಚುಮು ಚಳಿ...ಮಂಗಳೂರಿನಲ್ಲಿ ಇದಕ್ಕೆ ಸಂಪೂರ್ಣ ವ್ಯತಿರಿಕ್ತ ವಾತವರಣ...ಏರಿಸಿದ್ದ ಉಣ್ಣೆ ಬಟ್ಟೆಗಳನ್ನು ಕಳಚಿ ಬ್ಯಾಗಿನಲ್ಲಿ ತುರುಕಿ ಲಾಕರ್ ಗಳಲ್ಲಿ ತುಂಬಿದೆವು...ಗೋವೆಗೆ ರೈಲು ಮಧ್ಯಾನ್ಹ 2:4೦ಕ್ಕೆ ಇತ್ತು...ನಮಗೆ ಸುಮಾರು ಏನಿಲ್ಲವೆಂದರೂ 4-5 ಗಂಟೆಗಳ ಅವಕಾಶವಿತ್ತು...ಹಾಗಾಗಿ ರೈಲ್ವೆ ನಿಲ್ದಾಣದ ಮಂದಿಯಲ್ಲಿ ಕೇಳತೊಡಗಿದೆವು...ಇಲ್ಲೆಲ್ಲಾದರು ನೋಡುವಂತಹ ಸ್ಥಳಗಳಿವೆಯೇ ಎಂದು..ಯಾರೋ ಪುಣ್ಯಾತ್ಮ St.Mary's Island ಗೆ ಹೋಗಿ ಬನ್ನಿ ಅಂದ.. ರೈಲ್ವೆ ನಿಲ್ದಾಣದಿಂದ ಕೇವಲ ಅರ್ಧ ಗಂಟೆ ಪ್ರಯಾಣ ಎಂದು ಆಸೆ ಹುಟ್ಟಿಸಿದರು...ಲಗುಬಗೆಯಿಂದ ಎಷ್ಟು ಬೇಕೊ ಅಷ್ಟು ದಿರಿಸುಗಳನ್ನು ಸಣ್ಣ ಬ್ಯಾಗಿನಲ್ಲಿ ಇಟ್ಟುಕೊಂಡು ಆ ಪುಣ್ಯಾತ್ಮ ತೋರಿಸಿದ ಮಂಗಳೂರು ಬಸ್ ನಿಲ್ದಾಣದೆಡೆಗೆ ಹೆಜ್ಜೆಯಿಟ್ಟೆವು.... ದಾರಿಯುದ್ದಕ್ಕು ಸುಡು ಬಿಸಿಲು...ಇನಿಲ್ಲದಂತೆ ಬೆವರತೊಡಗಿದೆವು..ಬೆಂಗಳೂರಿನ ಚಳಿಯನ್ನು ನೆನೆಯುತ್ತಾ ಬಿಸಿಲಿಗೆ ಶಪಿಸುತ್ತಾ ನಡೆದೆವು... "ಹೋಟೆಲ್ ತಾಜ್ ಮಹಲ್" ನಲ್ಲಿ ಉಪಹಾರ ಸೇವಿಸಿ ಪಣಂಬೂರು ಬೀಚಿನೆಡೆಗೆ ಬಸ್ ಹಿಡಿದೆವು..ಕಾರಣ ಪಣಂಬೂರು ಬೀಚಿನಿಂದ St.Mary's Island ಪಯಣಿಸಬಹುದು ಎಂದು....ಮಂಗಳೂರಿಗೆ ಇದು ನನ್ನ ಮೊದಲ ಭೇಟಿ....traffic ಕಿರಿ ಕಿರಿ ಅಷ್ಟಾಗಿರಲಿಲ್ಲ..ಮಂಗಳೂರನ್ನು ನೋಡುವ ಆಸೆ ಬಹಳ ಹಿಂದಿನಿಂದ ಇತ್ತು..ಅದು ಅಂದು ಒಂದು ರೀತಿಯಲ್ಲಿ ಪೂರ್ಣಗೊಂಡಿತ್ತು..ಪಣಂಬೂರು ಬೀಚಿನಲ್ಲಿ ಇಳಿದ ಕೂಡಲೇ ಆಟೋದವರು ನಿಮಗೆ ತಪ್ಪು ಮಾಹಿತಿ ದೊರೆತಿದೆ..ಈ ಬೀಚಿನಿಂದ St.Mary's Island ಹೋಗಲಾಗುವುದಿಲ್ಲ...ಮಲ್ಪೆ ಬೀಚಿನಿಂದ ಹೋಗಿ ಎಂದುಬಿಟ್ಟರು..ಮಲ್ಪೆ ಬೀಚು ಅಲ್ಲಿಂದ ಸುಮಾರು 45ನಿಮಿಶಗಳ ಪ್ರಯಾಣ...ಸಮಯ ಮೀರುತ್ತಿದ್ದುದರಿಂದ ಪಣಂಬೂರು ಬೀಚಿಗೆ ಹೋಗಲು ನಿರ್ಧರಿಸಿದೆವು....ಬಸ್ ಸ್ಟಾಪಿನಿಂದ ಅಲ್ಲಿಗೆ ಹೋಗುವ ದಾರಿ ಯಲ್ಲಿ ಗಣಿಗಾರಿಕೆ ನಡೆಯುತ್ತದೆಂದು ತೋರುತ್ತದೆ..ಬಹಳ ಧೂಳಿತ್ತು..ಆಟೋದವರಿಗೆ ಕೆಳಿದ್ದಕ್ಕೆ "manganese" ಅದಿರನ್ನು ಬೇರೆ ದೇಶಗಳಿಗೆ ರಪ್ತು ಮಾಡುತ್ತರೆಂದು ಹೇಳಿದರು...



ಬೀಚಿನ ಮರಳು ಕಾವೇರಿತ್ತು...ಬರಿಗಾಲಿಡಲು ಸಹ ಆಗುತ್ತಿರಲಿಲ್ಲ...ಕಾದ ಕಾವಲಿಯಾದಂತಿತ್ತು..ಸಮುದ್ರವನ್ನು ನೋಡ ನೋಡುತ್ತಿದ್ದಂತೆ ನಮ್ಮ ಹುಡುಗರು ಅದರೆಡೆಗೆ ಧಾವಿಸಿದರು...ನನಗೇನೊ ನೀರಿಗೆ ಇಳಿಯಲು ಮನಸಾಗಲಿಲ್ಲ...ಸಂದೀಪನು ಕೂಡ ನನ್ನೊಡನಿದ್ದ.... photo session ಅದಾಗಲೇ ಶುರು ಆಗಿತ್ತು...ವಿಧ ವಿಧ ಭಾವ ಭಂಗಿಗಳಲ್ಲಿ photo ಗಳು ಒಂದೆ ಸಮನೇ ಕ್ಲಿಕ್ಕಿಸಲ್ಪಡುತ್ತಿದವು... ಬಿಸಿಲಿನ ಝಳ ಹೆಚ್ಚಾಗುತ್ತಲೇ ಇತ್ತು.ಅಲ್ಲೆ ಬಾಕ್ಸ್ ಟೆನ್ನಿಸ್ ಮತ್ತು frisbee ಯಲ್ಲಿ ಆಡುತ್ತಿದ್ದೆವು.. ಅಷ್ಟರಲ್ಲಿ ರಂಜನ್ ಅದೆಲ್ಲಿಂದ ಹುಡುಕಿ ತಂದನೋ 4-5 ಸ್ಟಾರ್ ಮೀನುಗಳನ್ನು ಹಿಡಿದಿಟ್ಟಿದ್ದ...ಅದನ್ನ ಒಂದು ಕವರೊಳಗೆ ಹಾಕಿ ಅದಕ್ಕೆ ನೀರು ಸೇರಿಸಿ ಅದನ್ನ ಬೆಂಗಳೂರಿಗೆ ಹೊತ್ತೊಯ್ಯುವ್ವ ಮಹತ್ ಅಭಿಲಾಷೆಯನ್ನು ಹೊಂದಿದ್ದ!!... ಇನ್ನಿಲ್ಲದಂತೆ ಅದನ್ನು ಪ್ಲಾಸ್ಟಿಕ್ ಕವರೊಳಗೆ ಅಲ್ಲಾಡಿಸಿ ಕಾಟ ಕೊಟ್ಟು ಹಿಡಿದಿಟ್ಟಿದ್ದ....ಯಾರೆಷ್ಟು ಬೇಡವೆಂದರೂ ತನ್ನ ಹಟವನ್ನು ಸಾಧಿಸಿಯೇ ತೀರುತ್ತೇನೆಂದಿದ್ದ.... ಸಮುದ್ರಲ್ಲಿ ಈಜಾಡಿ ಆಟ ಮುಗಿಸಿ ಅಲ್ಲೆ ಹತ್ತಿರದಲ್ಲಿದ್ದ ಹೋಟೆಲಿನಲ್ಲಿ ಆಳು ಮೂಳು ತಿಂದು ಮತ್ತೆ ಮಂಗಳೂರು ರೈಲ್ವೆ ನಿಲ್ದಾಣದೆಡೆಗೆ ಧಾವಿಸಿದೆವು..ರಂಜನ್ ಸ್ಟಾರ್ ಮೀನುಗಳನ್ನು ಹಿಡಕೊಂಡೇ ಬಂದ...ನಮಗಾಗಲೇ ಅನ್ನಿಸಿತ್ತು ಅದರ ಪ್ರಾಣ ಪಕ್ಷಿ ಹಾರಿಹೋಗಿದೆಯೆಂದು....ವೃಥಾ ಅಲ್ಲಾಡಿಸಿ ನೋಡುತ್ತಿದ್ದ..ಬದುಕಿದೆಯೇನೊ ಎಂದು ನೋಡಿ "ಬದುಕಿದೆ ಕಣ್ರೊ" ಎಂದು ಸಂಭ್ರಮಿಸುತ್ತಿದ್ದ...ಮಂಗಳೂರು ರೈಲ್ವೆ ನಿಲ್ದಾಣದ ಸೆರುವ ಹೊತ್ತಿಗೆ "ಮಥ್ಸ್ಯಗಂಧ express" ನಮಗಾಗಿ ಕಾದು ನಿಂತಿತ್ತು ಗೋವೆಕಡೆಗೆ ಮುಖ ಮಾಡಿ..ಲಗುಬಗೆಯಿಂದ ಸಿಕ್ಕಿದ್ದು ತಿಂದು ನಮ್ಮ ಬ್ಯಾಗಳು ಹೊತ್ತು ನಮ್ಮ ಆಸನಗಳನ್ನು ಹಿಡಿದೆವು...ರಂಜನ್ ಒಂದು ಪ್ಲಾಸ್ಟಿಕ್ ಡಬ್ಬವನ್ನು ತಂದು ಕವರಿನಿಂದ ಆ ಮೀನುಗಳನ್ನು ಪ್ಲಾಸ್ಟಿಕ್ ಡಬ್ಬಕ್ಕೆ ಹಸ್ತಾಂತರಿಸಿದ್ದ....ಜೀವ ಹೋದ ಮೇಲೆ ಏನು ಮಾಡಿ ಏನು ಪ್ರಯೋಜನ..ಆದರೂ ಅದು ಹೋಗಿದೆ ಎಂದು ನಂಬುವುದಕ್ಕೆ ಆತನು ಸಿದ್ದನೇ ಇರಲಿಲ್ಲ.. ರಂಜನ್ ನಮ್ಮೆಲ್ಲರ ಘೋರವಾದ ಖಂಡನೆ ಇದೆ ಆ ಜೀವಿಗಳ ಪ್ರಾಣ ತೆಗೆದಿದುದಕ್ಕೆ...




ಮತ್ತೆ ರೈಲಿನ ಪ್ರಯಾಣ.... ಬೆವರು ಹನಿ ತನ್ನ ಪಾಡಿಗೆ ಎಲ್ಲರ ಮುಖದಲ್ಲೂ ಇಳಿಯುತ್ತಲೇ ಇತ್ತು...ಬಳಲಿಕೆ ಯಾರೊಬ್ಬರ ಮುಖದಲ್ಲೂ ಇರಲಿಲ್ಲ...ಕೊಂಕಣ ರೈಲ್ವೆ ..ಸಾಕಷ್ಟು ಸುರಂಗಗಳು, ಪಶ್ಚಿಮ ಘಟ್ಟಗಳ ಶ್ರೇಣಿ ಮಧ್ಯೆ ನುಸುಳುವ ರೈಲನ್ನು ನೆನೆನೆನು ಪುಳಕಿತರಾಗುತ್ತಿದ್ದೆವು...ಕಿಟಕಿ ಪಕ್ಕದ ಸೀಟಿಗಾಗಿ ಗುದ್ದಾಡುತ್ತಿದ್ದೆವು..ಸಂದೀಪ್, ರಂಜನ್ ಇನ್ನು ಮುಂದೆ ಹೋಗಿ ಬಾಗಿಲ ಬಳಿ ಕುಳಿತಿದ್ದರು...ನಾನು ಸುನೀಲ ಇನ್ನೊಂದು ಬಾಗಿಲ ಬಳಿ ಕುಳಿತಿದ್ದೆವು.. ಕಂಗಳಲ್ಲಿ ಪ್ರಕೃತಿಯ ರಮ್ಯ ನೋಟ ತುಂಬಿಕೊಳ್ಳುವ ತವಕ ಎಲ್ಲರಲ್ಲೂ ಇತ್ತು..ಆಗಾಗ ಕಾಪಿ-ಟೀ ಸಮಾರಾಧನೆ ಎಡೆಬಿಡದೆ ನಡೆಯುತ್ತಲೇ ಇತ್ತು... ಹಾಲಿಗಿಂತ ನೀರೇ ಹೆಚ್ಚಾಗಿತ್ತು..photo sessions ನಡೆಯುತ್ತಲೇ ಇತ್ತು..ಇದ್ದ ಬದ್ದ ಭಾವ ಭಂಗಿಗಳು ಎಲ್ಲರೂ ಮಾಡುತ್ತಿದ್ದೆವು...ಒಟ್ಟು ಮೂರು ಕ್ಯಾಮೆರಾ ಮನಸೋ ಇಛ್ಛೆ ಕ್ಲಿಕ್ಕಿಸುತ್ತಿದ್ದರು.. ರೈಲಿನ ಬಾಗಿಲ ಬಳಿ ಕುಳಿತು ಮೊಬೈಲ್ ನಲ್ಲಿದ್ದ ಹಾಡುಗಳನ್ನು ಕೇಳುತ್ತಿದ್ದೆ..ರೈಲಿನ ರಭಸಕ್ಕೆ ಮನಸೂ ಸಹ ಎಲ್ಲೆಲ್ಲೊ ಹಾರಡುತ್ತಿತ್ತು..ಸಾವಿರಾರು ಯೋಚನೆಗಳು...ಪ್ರತಿ ಕ್ಷಣಕ್ಕೂ ದೃಶ್ಯಗಳು ಬದಲಾಗುತ್ತಿರುವಂತೆ ಮನಸಿನ ಓಟ ನಡೆಯುತ್ತಲಿತ್ತು...







ಸುರಂಗಗಳು ಬಂದಾಗ "ಹೋ" ಎಂದು ಕೂಗಲು ಶುರು ಮಾಡುತ್ತಿದ್ದೆವು...ಅಮೇಲೆ ಸುರಂಗಗಳ ಸರಮಾಲೆಯೇ ಇತ್ತು..ಬಂತೆಂದರೆ ಬಾಗಿಲ ಬಳಿ ಬಂದು ಬಗ್ಗಿ ನೋಡುತ್ತಿದ್ದೆವು..ಏನೋ ರೋಮಾಂಚನ...ನಮ್ಮಲ್ಲೆ ಮಾತಾಡಿಕೊಳ್ಳುತ್ತಿದ್ದೆವು.."ಏಷ್ಟ್ ಕಷ್ಟ ಆಗಿರುತ್ತೆ ಅಲ್ಲ್ವ...ಇಷ್ಟ್ ದೊಡ್ಡ tunnel ಮಾಡಕ್ಕೆ.ಏಷ್ಟ್ ಉದ್ದ ಇದೆ ನೋಡು...ಸೂಪರ್ ಕಣೋ...worth ಈ ರೈಲಿನಲ್ಲಿ travel ಮಾಡಿದ್ದಕ್ಕೊ worth it." ಕೊಂಕಣ ರೈಲ್ವೆ ಮಾರ್ಗ ನಿಜಕ್ಕೊ ಸುಂದರ..ಪಶ್ಚಿಮಘಟ್ಟಗಳನ್ನು ಬಳಸಿಕೊಂಡು ರೈಲಿನ ಹಾದಿ ನಿರ್ಮಿಸಿರುವುದು ಬೃಹತ್ ಸಾಹಸವೇ ಸರಿ...ಎಲ್ಲರೂ ಒಮ್ಮೆಯಾದರೂ ಪಯಣಿಸಬೇಕಾದ ದಾರಿ ಅದು....ಯಾವುದು ಅತ್ಯಂತ ಉದ್ದವಾದ ಸುರಂಗ ಎಂದು ಕಾತುರದಿಂದ ಲೆಕ್ಕವಿಡುತ್ತಿದ್ದೆವು..ಪ್ರತಿ ಸುರಂಗ ಬಂದಾಗಲೂ...ನಮಗೆ ತಿಳಿದ ರೀತಿಯಲ್ಲಿ ಬೈಂದೂರು ಬಳಿಯ ಸುರಂಗ ಅತ್ಯಂತ ಉದ್ದವೆಂದು ಮಾತಾಡಿಕೊಳ್ಳುತ್ತಿದ್ದೆವು...ಎನಿಲ್ಲವೆಂದರೂ ಸುಮಾರು 10ನಿಮಿಷಗಳು ಸುರಂಗದಲ್ಲಿ ಸಂಪೂರ್ಣ ಓಟ ನಡೆಸಿತ್ತು ರೈಲು ಬೈಂದೂರು ಸುರಂಗದಲ್ಲಿ... ಕತ್ತಲಾಗುತ್ತಿತ್ತು, ಆದಷ್ಟು ಕಣ್ಣಿಗೆ ಕಾಣುವಷ್ಟು ಕಣ್ಣಿಗೆ ತುಂಬಿಕೊಳ್ಳುವ ತವಕ.. ಆಗ ಕಂಡದ್ದು ದೊಡ್ಡ ಶಿವನ ವಿಗ್ರಹ...ಅದೇ ಮುರುಡೇಶ್ವರ, ರಾಮ ವಿವರಿಸುತ್ತಿದ್ದ...ಆತನಿಗೊಂದು ಆಸೆ ಇತ್ತು..ಈ ರೈಲಿನಲ್ಲಿ ಪಯಣಿಸುವಾಗ ಮುರುಡೇಶ್ವರ ಬೀಚು ಕಾಣಿಸುತ್ತದಂತೆ ನೋಡಬೇಕೆಂದು..ಎಲ್ಲರೂ ಇರುವ ಎರಡು ಕಂಗಳನ್ನು ಊರಗಳ ಅರಳಿಸಿ ಕಾಲಿನ ಬೆರಳ ಮೇಲೆ ನಿಂತು ನೋಡುತ್ತಿದ್ದೆವು..ಶರವೇಗದಲ್ಲಿ ಸಾಗುತ್ತಿತ್ತು ರೈಲು.ಶಿವನ ಶಿಲೆ ದೂರದಿಂದ ವಿರಾಜಮಾನವಾಗಿ ಕಾಣಿಸಿತು, ಅದರ ಬಗ್ಗೆ ತನಗೆ ತಿಳಿದಿದ್ದ ಮಾಹಿತಿಯನ್ನು ನೀಡುತ್ತಿದ್ದ ರಾಮ, ಬೀಚು ಮಾತ್ರ ಕಾಣಿಸಲಿಲ್ಲ.."ಲೊ ಅದರ ಪಕ್ಕಾನೇ ಕಣ್ರೋ ಬೀಚು, ಕಾಣಿಸ್ತಿಲ್ಲ..ಚೆ ಚೆ."ಎಂತು ಪರಿತಪಿಸುತ್ತಿದ್ದ..ಶಿವನ ವಿಗ್ರಹ ಕಣ್ಣಿಗೆ ಕಾಣುವಷ್ಟು ದೂರ ನೋಡುತ್ತಲೆ ಇದ್ದೆವು...ಇದು ಮುಗಿಯುವುದರೊಳಗೆ ಕತ್ತಲೂ ಸಂಪೂರ್ಣ ಆವರಿಸಿತ್ತು ನೀಲಿ ಆಗಸದಲ್ಲಿ, ಮತ್ತೆ ಹಿತವಾದ ಚಳಿ ಶುರು ಆಗಿತ್ತು..ಕಿಟಕಿಯಿಂದ ಎಷ್ಟೆ ಆಚೆ ನೋಡಿದರೂ ಕಣ್ಣಿಗೆ ಏನೊಂದೂ ರಾಚುತ್ತಿರಲಿಲ್ಲ...ಮತ್ತೆ ಆಡಲು ಶುರು ಮಾಡಿದೆವು...ಮತ್ತದೇ ಜೋಕುಗಳು, ಎಲ್ಲರೂ ಎಲ್ಲರನ್ನು ರೇಗಿಸುತ್ತ "ಮಡಗಾವ್" ರೈಲು ನಿಲ್ದಾಣದ ಎದುರು ನೋಡುತ್ತಿದ್ದೆವು...ಕಾರವಾರ ದಿಂದ ಕೇವಲ ಅರ್ಧ ಗಂಟೆ "ಮಡಗಾವ್" ಎಂಬ ವಿಷಯ ತಿಳಿಯಿತು..ನಮಗೆ "ಮಡಗಾವ್" ನಿಂದ ರೂಮಿನಲ್ಲಿ ಉಳಿಯುವ ವ್ಯವಸ್ಥೆ ಹೊಣೆಯೆಲ್ಲವನ್ನು ರಂಜನ್ ಹೊತ್ತಿದ್ದ, ಅವನ ಗೆಳೆಯ ಅದರ ತಯಾರಿ ಮಾಡಿದ್ದ.."ಮಡಗಾವ್" ನಿಲ್ದಾಣದಲ್ಲಿ driver ರಂಜಿತ್ ಬಂದು ನಮ್ಮನ್ನು ಎದುರು ಮಾಡಿಕೊಳ್ಳುವ ಹಾಗೆ ವ್ಯವಸ್ಥೆ ಯಾಗಿತ್ತು..ಸುಮಾರು ರಾತ್ರಿ 9ಗಂಟೆಗೆ "ಮಡಗಾವ್" ತಲುಪಿದೆವು...ರಂಜಿತ್ ನಮಗಾಗಿ ಕಾದಿದ್ದ.. ಬ್ಯಾಗುಗಳನ್ನು ಹೊತ್ತು ಅವನ ಹಿಂದೆ ಹೆಜ್ಜೆ ಹಾಕಿದೆವು.. ನಮಗಾಗಿ ಕಾದು ನಿಂತಿತ್ತು "ಟಾಟ ಸುಮೋ..."




(ಸಶೇಷ)...

ನಿನ್ನಿಂದಲೇ ನಿನ್ನಿಂದಲೇ.......

Thursday, December 13, 2007


ಕಳೆದ ಎರಡು ತಿಂಗಳಲ್ಲಿ ನಡೆದ ಘಟನಾವಳಿಗಳನ್ನು ಒಬ್ಬನೇ ಕೂತು ನೆನೆದರೆ ರೋಮಾಂಚನ, ಪುಳಕ, ಭಯ, ಕಳವಳ ಎಲ್ಲವೂ ಒಟ್ಟೊಟ್ಟಿಗೆ ಆಗುತ್ತದೆ.. ಎಲ್ಲವೂ ಅನಿರೀಕ್ಷಿತ!!!!. ಹೀಗೂ ಆಗಬಹುದು ಎಂಬುದರ ಒಂದು ಸಣ್ಣ ಸುಳುಹು ಸಹ ಇರಲಿಲ್ಲ.....ಉಂಡಾಡಿ ಅಲೆಮಾರಿಯಾಗಿ ಅಲೆಯುತ್ತಿದ್ದ ನಾನು ಮುಂದಿನ ಹಲವು ವರ್ಷಗಳಿಗಾಗುವಷ್ಟು ಕನಸುಗಳನ್ನು ಪೋಣಿಸಿದ್ದೇನೆ..ಅತ್ಯಂತ ಜವಾಬ್ದಾರಿಯುತನಾಗಿ ನನ್ನ ಪಾತ್ರವನ್ನು ನಿರ್ವಹಿಸಬೇಕಿದೆ....

ನ(ಮ್ಮ)ನ್ನ ಕನಸುಗಳಿಗೆ ನಿಮ್ಮ ತುಂಬು ಹೃದಯದ ಆಶೀರ್ವಾದವಿರಲಿ.....

ಉಪ್ಪಿಗಿಂತ ರುಚಿ ಬೇರೆ ಇಲ್ಲ.......

Monday, November 26, 2007


ಈ ಹಾಡನ್ನ ಎಲ್ಲರೂ!!!! ಕೇಳಿರಬಹುದು..ಅದರ ಮುಂದಿನ ಸಾಲುಗಳು ಹೀಗಿವೆ...."ಉಪ್ಪಿಗಿಂತ ರುಚಿ ಬೇರೆ ಇಲ್ಲ...ಒಪ್ಪಿಕೊಂಡೋರು ದಡ್ಡರಲ್ಲ...".....dha dha dha...dha...

ನನ್ನೆಡೆಗೆ ಹಲವಾರು ಟೀಕೆಗಳಿವೆ..ನಾನು ಉಪೇಂದ್ರನ ಅಭಿಮಾನಿ ಎಂದು...."ಥೂ ನಿನ್ನ..ಯಾವನೋ ನೀನು..ಹೋಗಿ ಹೋಗಿ ಉಪೇಂದ್ರನ ಅಭಿಮಾನಿ ಅಂತೀಯಲ್ಲ...ನಾಚಿಕೆ ಆಗಲ್ಲ್ವ..." ಹಲವಾರು ಮಂದಿ ಹಲವಾರು ರೀತಿ ಬೈದಿದ್ದಾರೆ, ಆಡಿಕೊಂಡಿದ್ದಾರೆ..ಆದರೆ ಅಷ್ಟೆಲ್ಲ ಮಾಡಿದರೂ ನನಗೆ ಆತನ ಬಗ್ಗೆ ಕಿಂಚಿತ್ತೂ ಅಭಿಮಾನ ಕಮ್ಮಿ ಆಗಿಲ್ಲ ಎಂದು ಹೇಳಲು ನನ್ನವರಿಗೆ ನನ್ನ ಉಪೇಂದ್ರನ ವಿರೋಧಿಗಳಿಗೆ ಸ್ಪಷ್ಟಪಡಿಸಲು ಇಚ್ಚಿಸುತ್ತೇನೆ..."Uppi simply rocks" :-)

ಉಪೇಂದ್ರನ ಹೆಸರು ಹೇಳಿದರೆ ಹಲವಾರು ಮಂದಿ ಮೂಗು ಮುರಿಯುವವರು ಇದ್ದಾರೆ..ಮುರಿಯಲಿ ಅವರ ಮೂಗುಗಳೇ ತಾನೆ...ನನಗೇನು??... ನನಗೆ ಆತನನ್ನು ಅಭಿಮಾನಿಸಲು ಸ್ಪಷ್ಟವಾಗಿ ಕಾರಣಗಳು ಹೇಳಲಾರೆ...ಉಪೇಂದ್ರನ ಚಿತ್ರಗಳು ಇತರ ಹೀರೋ ಚಿತ್ರಗಳಿಗಿಂತ ಚೆನ್ನಾಗಿ ಓಡಬೇಕೆಂಬ ಹಂಬಲ ನನ್ನಲ್ಲಿ ಸದಾ ಇರತ್ತದೆ...ಹಾಗೆ ಆದರೆ ಬಹಳ ಸಂತೋಷವಾಗುತ್ತದೆ.... ನಿಜಕ್ಕೂ ಆತ ರಿಯಲ್ ಸ್ಟಾರ್... ಉಪೇಂದ್ರನ ಸಾಧನೆಗಳ ಬಗ್ಗೆ ನನಗೆ ತಿಳಿದಿರುವ ಮತ್ತಿಗೆ ಒಂದು ಸಣ್ಣ ಕಿರುಪರಿಚಯ...


ಯಾವುದೇ God Father ಗಳ ನೆರವಿಲ್ಲದೆಯೆ ಮೇಲೆ ಬೆಳೆದು ಬಂದಾತ...ಆರಂಭದ ದಿನಗಳಲ್ಲಿ ಕಾಶಿನಾಥ್ ಸಾಥ್ ನೀಡಿದ್ದರು ಅಷ್ಟೆ...ಆತನ ಪ್ರತಿಭೆಗೆ ಮನ್ನಣೆ ಸಿಕ್ಕಿದ್ದು ಹಲವಾರು ವರ್ಷಗಳು ಕಾಲು ಸವೆಸಿದ ನಂತರ...

ಭಾರತ ಚಿತ್ರರಂಗ ಕಂಡ, ವಿಭಿನ್ನವಾಗಿ ಆಲೋಚಿಸುವ ಅತ್ಯಂತ ಕಿರಿಯ ನಿರ್ದೇಶಕ...ಆತನ ಕಿರಿತನ ಕೇವಲ ವಯಸ್ಸಿಗಷ್ಟೆ ಸೀಮಿತ....ಆದರೂ ಈ ವಿಷಯ ಇಲ್ಲಿ ಉಲ್ಲೇಖಾರ್ಹ...

ಇಂದು ಕನ್ನಡ ಚಿತ್ರರಂಗದಲ್ಲಿ ಬಂದಂತಹ ಅಷ್ಟೂ ರೌಡಿ ಚಿತ್ರಗಳಿಗೆ ನಾಂದಿ ಹಾಡಿದ್ದು ಇದೇ ಉಪೇಂದ್ರನ "ಓಂ" ಚಿತ್ರ...ಅದರ ಬಗ್ಗೆ ಎಷ್ಟೆ controversy ಗಳಿರಬಹುದು ..ಆದರೆ ಅದು trend setting cinema ಅಂತೂ ಹೌದು...
ಉಪೇಂದ್ರ ಒಬ್ಬ trend setter -e ಸರಿ..

ಉಪೇಂದ್ರ ಚಿತ್ರ ನಿರ್ಮಿಸುತ್ತಿದ್ದ ರೀತಿಗಳಲ್ಲಿ ಹಲವಾರು ಪ್ರಯೋಗಗಳನ್ನು ಮಾಡುತ್ತಿದ್ದ..ಅದರಿಂದ ಕನ್ನಡ ಚಿತ್ರಕ್ಕೆ ಮನ್ನಣೆ ಸಿಕ್ಕಿದೆ ಎಂಬುದು ಒಪ್ಪಿಕೊಳ್ಳಬೇಕಾದ ವಿಷಯ..ಚಿತ್ರದ ಹೆಸರಿನಿಂದ ಹಿಡಿದು ಚಿತ್ರದ ಅಂತ್ಯದವರೆಗೂ...ಹಾಗೆ ಚಿತ್ರದ ಪ್ರಚಾರದ ವಿಷಯಗಳಲ್ಲಿ ಕೂಡ...ಅದನ್ನ ತೆರೆಯ ಮೇಲೆ ತೋರಿಸುವ ಯತ್ನದಲ್ಲೂ ಸಹ....

ಇಂದೂ ಎಲ್ಲ ಚಿಳ್ಳೆ ಪಿಳ್ಳೆಗಳು ಬಾಯಿ ತೆರೆದರೆ ತಮ್ಮ ಚಿತ್ರ ವಿಭಿನ್ನವಾಗಿದೆ ಎಂದೇ ಬಡಿದುಕೊಳ್ಳುತ್ತಾರೆ...ಅದೇನೊ ವಿಭಿನ್ನತೆಯೋ ಭಗವಂತನಿಗೇ ಗೊತ್ತು..!!!

ಇಂದು ಕನ್ನಡ ಚಿತ್ರರಂಗದ ಗಮನೀಯ ವ್ಯಕ್ತಿಗಳ ಪಟ್ಟಿಗೆ ಸೇರಿರುವ ಗುರುಕಿರಣ್,ಸಾಧುಕೋಕಿಲ, ವಿ.ಮನೋಹರ್, ಕವಿರಾಜ್, ಎಲ್ಲರೂ ಉಪೇಂದ್ರನ ನೆರಳಿನಲ್ಲಿ ಬೆಳೆದವರು..ಒಟ್ಟೊಟ್ಟಿಗೆ ಮೇಲೆ ಬಂದವರು....


ಉಪೇಂದ್ರನಲ್ಲಿ ಮೆಚ್ಚಬೇಕಾದ ಅಂಶವೆಂದರೆ ಕಲಾವಿದರಲ್ಲಿ, ತಂತ್ರಜ್ಞಾನ ಕಲೆಯನ್ನು ಹುಡುಕಿ ಕೆದಕಿ ಹೊರತರುವ ಗುಣ....ಅವನ ಬಳಿ ಬೆಳೆದ ಮಂದಿ ಸಾಕಷ್ಟಿದ್ದಾರೆ...ಇನ್ನು ಬೆಳೆಯುತ್ತಲೇ ಇದ್ದಾರೆ...ಇಷ್ಟೆಲ್ಲ ಮಾಡಿರುವ ಉಪೇಂದ್ರನ ವಯಸ್ಸು ಕೇವಲ 35ರ ಆಸುಪಾಸು...ಅಚ್ಚರಿಯಾಗುವುದಿಲ್ಲವೇ??... :-)

ನಾನು ಇಷ್ಟನ್ನು ಹೇಳುತ್ತಿರುವುದು ಆತನ ನಿರ್ದೇಶಿಸಿ-ನಟಿಸಿರುವ ಚಿತ್ರಗಳ ಬಗ್ಗೆ..ಆತ ಬರೆದಿರುವ ಕಥೆ, ಸಂಭಾಷಣೆಗಳ ಇರುವ ಚಿತ್ರಗಳ ಬಗ್ಗೆ...ಮಿಕ್ಕ ಚಿತ್ರಗಳ ಬಗ್ಗೆ ನನ್ನ ಕಡೆಯಿಂದ "No Comments......"

ಆತನ ಚಿತ್ರಗಳಿಗೆ ಆರಂಭದ ದಿನಗಳಲ್ಲಿ ಬಂದು ವಿರೋಧ, ತಿರಸ್ಕಾರ ಬೇರಾವ ನಟನಿಗೆ ಬಂದದ್ದೇ ಆಗಿದ್ದಲ್ಲಿ ಆತನ ಸದ್ದಡಗಿ ಹೋಗುತ್ತಿತ್ತು...ಉಪೇಂದ್ರ ಜನರ ಸದ್ದಡಿಗಿಸಿದ!!...ಎಲ್ಲ ನಿರ್ದೇಶಕರ, ನಿರ್ಮಾಪಕರು ಒಪ್ಪಿ ಕೊಳ್ಳುವಂತೆ ಮಾಡಿದ..

ಉಪೇಂದ್ರನ ಚಿತ್ರಗಳ ಬಗ್ಗೆ ಒಂದು ಅಪವಾದವಿದೆ...ಆತನ ಸಂಭಾಷಣೆ vulgar, ಅಸಭ್ಯವಾಗಿರುತ್ತದೆಂದೂ...ಹೇಳುವುದನ್ನು ಮರ್ಮಕ್ಕೆ ತಾಗುವಂತಹ ಸಂಭಾಷಣೆ ಸ್ವಲ್ಪ ಢಾಳಗಿ ಕಾಣುತ್ತದೆ...ನನ್ನಂತಹ ಹುಡುಗರಿಗೆ ಇಷ್ಟವಾಗುತ್ತದೆ :-)...vulgar ನಲ್ಲೂ ವಿಧಗಳಿವೆ....ಅದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿಲ್ಲ......ತೀರ ಅಸಹ್ಯಕರವಂತೂ ಇರುವುದಿಲ್ಲ. ... ಮಡಿವಂತರಿಗೆ ಇಷ್ಟವಾಗದಿರಬಹುದು... ಹಾಗೆಂದ ಮಾತ್ರಕ್ಕೆ "ಸಂಸ್ಕೃತ" ;-) ಪದ ಬಳಕೆ ಮಾಡುವರ ಚಿತ್ರಗಳ ಬಗ್ಗೆ ಅಸಡ್ಡೆಯಿಂದಿರಬೇಕಿಲ್ಲ..ಜನ ಶ್ರೀಸಾಮಾನ್ಯರು ಮಾತಾಡುವ ಭಾಷೆಯ ಬಳಕೆ ಆಗಿರುತ್ತದೆ ಉಪೇಂದ್ರನ ಚಿತ್ರಗಳಲ್ಲಿ...ಅಸಭ್ಯತೆಯಂತೂ ಅಲ್ಲ...ಅದರಿಂದ ಸಮಾಜಕ್ಕೆ ಯಾವ ಹಾನಿಯೂ ಇಲ್ಲ...

ನಾನು ಉಪೇಂದ್ರನ ವಿಪರೀತ ಅಭಿಮಾನಿಯೇನು ಅಲ್ಲ, ಆತನ ಚಿತ್ರ ಬಿಡುಗಡೆಯಾದರೆ ಮೊದಲ show ನಲ್ಲೇ ನೋಡಬೇಕೆಂಬ ಹಂಬಲವೂ ನನ್ನಲ್ಲಿ ಎಂದೂ ಬಂದಿಲ್ಲ, ಅಕಸ್ಮಾತ್ ಎರಡು ಅಕ್ಕ-ಪಕ್ಕ ಇರುವ ಚಿತ್ರಮಂದಿರಗಳ ಎದುರುಗಡೆ ನಿಂತಾಗ, ಒಂದರಲ್ಲಿ ಉಪೇಂದ್ರನ ಚಿತ್ರ ಮತ್ತೊಂದರಲ್ಲಿ ಬೇರೊಬ್ಬ ನಟನ ಚಿತ್ರವಿದ್ದಲ್ಲಿ, ಖಂಡಿತವಾಗಿ ಉಪೇಂದ್ರನ ಚಿತ್ರಕ್ಕೆ ಹೋಗುವೆ... :-) :-)

ಉಪೇಂದ್ರ ಆದಷ್ಟೂ ಬೇಗ ಚಿತ್ರಗಳನ್ನು ನಿರ್ದೇಶಿಸುವಂತಾಗಲಿ...ಮತ್ತಷ್ಟು ಒಳ್ಳೆಯ ಚಿತ್ರಗಳು ಹೊರಹೊಮ್ಮಲಿ...ಇದೇ ನನ್ನ ಅಭಿಲಾಷೆ..

ವಿ.ಸೂ : ಉಪೇಂದ್ರನ ಬಗ್ಗೆ ಉಪೇಂದ್ರನ ಚಿತ್ರಗಳ ಬಗ್ಗೆ ವಿರೋಧವಿದ್ದಲ್ಲಿ ಅದನ್ನ ಈ ಬ್ಲಾಗಿನ comments ನ ಮುಖಾಂತರ ತೀರಿಸಿಕೊಳ್ಳಬೇಡಿ ಎಂದು ಹೇಳಲು ಇಚ್ಚಿಸುತ್ತೇನೆ.. ನನ್ನ ಲೇಖನದ ವೈಖರಿಯ ;-) ಬಗೆಗಿನ comments ಎಂದೆಂದಿಗೂ ಸ್ವಾಗತಾರ್ಹ...


ವೈರುಧ್ಯ - ವೈವಿಧ್ಯ

Sunday, November 18, 2007


ಜೀವನ ಯಾರಿಗೆ ತಾನೆ ವೈವಿಧ್ಯ ಪೂರ್ಣವಾಗಿ ಇರಬೇಕೆಂದು ಅನ್ನಿಸುವುದಿಲ್ಲ..ದಿನವೂ ಮಾಡಿದ್ದನ್ನೇ ಮಾಡುತ್ತಿದ್ದರೆ ಬೋರ್ ಆಗುತ್ತದೆ...ನನಗೆ ವೈವಿಧ್ಯತೆಯು ಬೇಕು ವೈರುಧ್ಯವೂ ಬೇಕು...ನನ್ನ ಒಂದು ಸಣ್ಣ ಪಟ್ಟಿ..ಹಾಗೆ ಒಮ್ಮೆ ಕಣ್ಣಾಡಿಸಿಬಿಡಿ..ವೈವಿಧ್ಯತೆ - ವೈರುಧ್ಯತೆ ಇದ್ದರೆ ಜೀವನ ಮಜವಾಗಿರುತ್ತದೆ ಎಂಬುದು ಖಚಿತ...

1) ಒಂದು ದಿನ ಕಲಾಸಿಪಾಳ್ಯದಲ್ಲಿ ಕೂಲಿ ಕೆಲಸ ಮಾಡಬೇಕು....ತಳ್ಳು ಗಾಡಿಯಲ್ಲಿ ಮೂಟೆಗಳನ್ನು ಹಾಕಿಕೊಂಡು ಆ ಜನಭರಿತ ಗಲ್ಲಿಗಳಲ್ಲಿ ಆ ಗಾಡಿಯನ್ನು ಎಳೆದಾಡುತ್ತಿರಬೇಕು....ದಿನದ ಕೂಲಿ ತೆಗೆದು ಕೊಂಡು ರಾತ್ರಿ ಹೊತ್ತಿಗೆ ಅಲ್ಲೆ ಸಿಕ್ಕಿದ್ದನ್ನು ತಿಂದು ಲೈಟಾಗಿ ಸಾರಾಯಿ ಕುಡಿದು ಅಲ್ಲೆ fly over ಕೆಳಗೆ ಮಲಗಬೇಕು...

ಅದರ ಮರುದಿನವೇ ಲೀಲಾ - ಪ್ಯಾಲೇಸಿನಲ್ಲಿ ಬೆಳಗಿನ ಕಾಫಿ ಕುಡಿದು swimming pool ಪಕ್ಕ ಅಂಗಾತ ಮಲಗಿರಬೇಕು...ನನ್ನ ದಿನವೆಲ್ಲ ಲೀಲಾ - ಪ್ಯಾಲೆಸಿನಲ್ಲಿ ವಿಧ ವಿಧವಾದ just chill ಆಗುವಂತಹ ಕೆಲಸಗಳಲ್ಲಿ ತೊಡಗಿಕೊಂಡಿರಬೇಕು.

2)ಒಂದು ಇಳಿಸಂಜೆಯ ಹೊತ್ತಿನಲ್ಲಿ ಲಾಲ್ ಬಾಗ್ ಕೆರೆದಂಡೆಯಲ್ಲಿ ನನ್ನವಳೊಂದಿಗೆ ;-) "ಚೀ ಕಳ್ಳ...ಎಂದು ಕೆನ್ನೆ ಗಿಲ್ಲಿಸಿಕೊಳ್ಳಬೇಕು..." ಅದರ ಮರುದಿನವೇ ಅದೇ ಕೆರೆದಂಡೆಯಲ್ಲಿ ಅದೇ ನನ್ನವಳೊಂದಿಗೆ "ಚೀ ಕಳ್ ನನ್ ಮಗನೆ...ಎಂದು ಆಕೆಯಿಂದ ಕಪಾಳಮೋಕ್ಷ ಆಗಬೇಕು.."

3) ಒಂದು ದಿನ ಇಪ್ಪತ್ತನಾಲ್ಕು ಗಂಟೆಗಳೂ ಪ್ರಪಂಚದ ಅರಿವಿಲ್ಲದೇ ನನಗಿಷ್ಟವಾದ ಕೆಲಸಗಳಲ್ಲಿ ತೊಡಗಿಕೊಳ್ಳಬೇಕು.... ಹಾಗೆ ಇಪ್ಪತ್ತನಾಲ್ಕು ಗಂಟೆಗಳೂ ಮೈಮೇಲೆ ಅರಿವಿಲ್ಲದೆಯೇ ನಿದ್ರಾಲೋಲ ನಾಗಬೇಕು..ಕುಂಬಕರ್ಣನ ಅಪರಾವತಾರ ನಾಗಬೇಕು...

4)ನನ್ನ ಜನರಿಂದ, ಇತರರಿಂದ ಹಾಡಿ ಹೊಗಳಿಸಿಕೊಳ್ಳಬೇಕು.....ಮತ್ತೊಂದು ದಿನ ಅದೇ ಜನಗಳ ಬಳಿ ಮೂರು ಜನ್ಮಕ್ಕಾಗುವಷ್ಟು ಕುಳಿತು ಉಗಿಸಿಕೊಳ್ಳಬೇಕು...ವಾಚಮಗೋಚರವಾಗಿ..

5)ಬೈಕನ್ನೇರಿ ಕರಾವಳಿಯ ಉದ್ದಕ್ಕೂ ಓಡಿಸಿಕೊಂಡು ಹೋಗಬೇಕು...ಗೊತ್ತು ಗುರಿಯಿಲ್ಲದೆಯೇ..ದಿನಗಳ ಪರಿವಿಲ್ಲದೆಯೇ...ಮತ್ತೊಂದು ದಿನ ಬೈಕನ್ನು kick start ಮಾಡಲು ಸಹಾ ಶಕ್ತಿಯಿರಬಾರದು...

6)ಮನೆಯವರಿಂದ..."ಅಹಾ ಹೆತ್ತರೆ ಇಂತಹ ಮಗನನ್ನು ಹೆರಬೇಕು.... ಕುಲತಿಲಕ ಇವನು " ಎಂದು ಒಂದು ದಿನ ಅನ್ನಿಸಿಕೊಂಡರೆ...ಮತ್ತೊಂದು ದಿನ ಅವರಿಂದಲೇ "ಯಾಕಾದರೂ ಹುಟ್ಟಿದನೋ....ಕುಲಕ್ಕೇ ಕಳಂಕ, ಹುಟ್ಟದಿದ್ದರೇ ಚೆನ್ನಾಗಿತ್ತೇನೋ ಇವನು" ಎಂದು ಕೇಳಬೇಕು..

7)ಜೇಬು ತುಂಬ ದುಡ್ಡು ಇಟ್ಟುಕೊಂಡು ಬೇಕಾದ ರೀತಿಯಲ್ಲಿ ಖರ್ಚು ಮಾಡಬೇಕು...ನೀರಿಗಿಂತ ಕೇವಲವಾಗಿ...
ಮತ್ತೊಂದು ದಿನ ಬಿಡಿಗಾಸು ಸಹಾ ನನ್ನ ಬಳಿಯಿರಬಾರದು...ಬೀದಿಗೆ ಬಿದ್ದಿರಬೇಕು...

8) ಇನ್ನೇನು ಪ್ರಾಣವೇ ಹೋಗಿಬಿಡುತ್ತದೇನೊ ಎಂಬಂತೆ ಒಂದು ಹಾಸ್ಪಿಟಲ್ ನಲ್ಲಿ ಮಲಗಿರಬೇಕು..ಅದರ ಮರುದಿನವೇ foot ball ಆಡುತ್ತಿರಬೇಕು..

9)ನನ್ನ ಜೀವನ settle ಆಯಿತೆನ್ನುವ ಭಾವ ನನ್ನನ್ನ ಆವರಿಸಬೇಕು ಒಂದು ದಿನ...ಮತ್ತೊಂದು ದಿನ.. ಮುಂದೆ ಜೀವನ ಹೇಗೆ ನಡೆಯುತ್ತದೆ ಎಂದು ಕಳವಳ ಪಡುತ್ತಿರಬೇಕು...ದಿಕ್ಕುಗಾಣದೆ ಒಬ್ಬನೇ ಒಂದು ಮೂಲೆಯಲ್ಲಿ ಕಾಲು ಕೊಸರಿಕೊಂಡು ಕುಳಿತು ಗಾಢ ಕತ್ತಲಿರುವ ಕೋಣೆಯಲ್ಲಿ ದೀರ್ಘವಾಗಿ ಯೋಚಿಸುತ್ತಿರಬೇಕು..

10) ಒಂದು ದಿನವಿಡೀ ನನ್ನ ಆತ್ಮೀಯ ಗೆಳೆಯರೊಡನೆ ಕಾಲ ಕಳೆಯಬೇಕು.ಇಪ್ಪತ್ತನಾಲ್ಕು ಗಂಟೆಗಳೂ ಎಗ್ಗಿಲ್ಲದೆ ಹೊತ್ತಿಲ್ಲದೆ.. ಗೊತ್ತಿಲ್ಲದೆ...ಮತ್ತೊಂದು ದಿನ ನನ್ನ ಬದ್ದ ವೈರಿಗಳೊಡನೆ ಒಂದು ದಿನವಿಡೀ ಕಳೆಯಬೇಕು...ಆ ರೀತಿಯ ಪರಿಸ್ಥಿತಿ ಬಂದೊದಗಬೇಕು..

11)ಜ್ಯೋತಿಷಿಗಳಿಂದ "ಹೋಗಯ್ಯ ನೀನು 80+ ವರ್ಷ ಬದುಕುತ್ತೀಯ"..ಎಂದು ಅನ್ನಿಸಿಕೊಂಡು ಜ್ಯೋತಿಷಾಲಯದಿಂದ ಹೊರಬರುತ್ತಲೇ..ಹೃದಯಾಘಾತವಾಗಿ ಅಲ್ಲೆ ಕುಸಿದು ಬಿದ್ದು ಕೊನೆಯುಸಿರೆಳೆಯಬೇಕು.. :-)


12)ಸತ್ತಾಗ ನಾಲ್ಕು ಜನರು ಕಣ್ಣೀರಿಟ್ಟರೆ ಇನ್ನೊಂದು ಕಡೆ ನಾಲ್ಕು ಜನ ಖುಶಿಯಿಂದ ಸಂತಸ ಪಡಬೇಕು...

ಸದ್ಯಕ್ಕೆ ನನ್ನ ಪಟ್ಟಿ ಇಷ್ಟೆ...ಇನ್ನು ಬೇಕಾದಷ್ಟಿವೆ..ಬರೆಯುತ್ತಾ ಹೋದರೆ ಮೊದಲಿರುವುದಿಲ್ಲ ಕೊನೆಯಿರುವುದಿಲ್ಲ..
ನಿಮ್ಮ ಜೀವನ ವೈವಿಧ್ಯ ಪೂರ್ಣವಾಗಿರಲಿ....

ಕಿವಿಮಾತು..........

Friday, November 2, 2007

ಏಕೋ ಏನೋ ಈ ಹಾಡು ಬಹಳ ಇಷ್ಟ ಆಯ್ತು .... ನಿಮ್ಮೊಂದಿಗೆ ಹಂಚಿಕೊಳ್ಳುವ ಉಮೇದಿನೊಂದಿಗೆ ಇಲ್ಲಿ ಪ್ರಕಟಿಸುತ್ತಿರುವೆ..ಹಾಡನ್ನು ಓದಿಕೊಂಡು, ಹಾಡನ್ನು ಕೇಳುವ ಗುನುಗುವ , ಹಾಡುಗಾರನ ಜೊತೆ ಹಾಡುವ ಮಜವೇ ಬೇರೆ ... ಸಿಕ್ಕಾಪಟ್ಟೆ ಎಂಜಾಯ್ ಮಾಡಿದೆ .... :-) ಇದನ್ನ ಬರೆದ ಜಯಂತ್ ಕಾಯ್ಕಿಣಿ ರವರಿಗೆ ಮತ್ತು ಮನೋಮುರ್ತಿ ಸಂಗೀತ ಸಂಯೋಜನೆಗೆ ಹೃತ್ಪೂರ್ವಕವಾದ ನಮನಗಳು...ಓದಿಕೊಳ್ಳಿ , ಹಾಡಿಕೊಳ್ಳಿ.......

ಕಿವಿಮಾತೊಂದು ಹೇಳಲೆ ನಾನಿಂದು
ದಾರಿನಿಂತಾಗ ಸಾಗಲೆ ಬೇಕೆಂದು
ನಿನ್ನೆ ಈಗಿಲ್ಲ ನಾಳೆಯು ತಿಳಿದಿಲ್ಲ
ನೀನು ನೀನಾಗೆ ಬಾಳಲೆಬೇಕೆಂದು .....

ಹಸಿರಾಗಿದೆ ದೀಪವು ನಿನಗಾಗಿ...
ನಸು ನಗುತಲೆ ಸಾಗು ನೀ ಗೆಲುವಾಗಿ
ಹೊಸ ತಂಗಾಳಿ ಹೇಳಿದೆ ಮೆಲುವಾಗಿ
ಈ ಬಾಳುಂಟು ಬಾಳುವ ಸಲುವಾಗಿ...............

ಬಾಗಿಲಿನಾಚೆಗೆ ತಾ ಬಂದು
ಗೂವಿಗೆ ಬಾಳು ಬಾ ಎಂದು
ಸಂತಸದಿಂದ ಓ ಎಂದು
ಓಡಲೆ ಬೇಕು ನೀನಿಂದು.........................

ಸಾವಿರ ಕಣ್ಣಿನ ನವಿಲಾಗಿ
ನಿಂತಿದೆ ಸಮಯ ನಿನಗಿಂದು
ಕಣ್ಣನು ತೆರೆದು ಹಗುರಾಗಿ
ನೋಡಲೇಬೇಕು ನೀಬಂದು......................

ಬೆಳ್ಳಿಯ ಅಂಚಿನ ಈ ಮೋಡ
ನಗುವ ಬೀರಿದೆ ಬಾನಲ್ಲಿ
ನಿನ್ನಯ ಬಾಳಿನ ಸಂಗೀತ
ಹಾಡಲೇಬೇಕು ನೀನಿಲ್ಲಿ...........................

ಮಿಂಚುವ ಅಲೆಗಳ ನದಿಯಾಗಿ
ಮುಂದಕೆ ಚಲಿಸು ನೀ ಬೇಗ
ನಿನ್ನಯ ಪಾಲಿನ ಈ ಆಟ
ಆಡಲೇಬೇಕು ನೀನೀಗ........................

ಈ ಹಾಡನ್ನು ನೀವು ಕೇಳಬೇಕೆನಿಸಿದರೆ ಇಲ್ಲಿ ಕ್ಲಿಕ್ಕಿಸಿ ...
http://www.kannadaaudio.com/Songs/Moviewise/M/Milana/Kivi.ram