ಪುಟ್ಟ - ಪುಟ್ಟಿ ....

Saturday, February 9, 2008

ನನ್ನನ್ನು ಯಾರಾದರೂ ತಡೆದು ಜಗತ್ತಿನ ಅತ್ಯಂತ ಶ್ರೇಷ್ಠ ಸಂಭಂದ ಯಾವುದೆಂದು ಕೇಳಿದರೆ ಪಟ್ ಎಂದು ಹೇಳುತ್ತೇನೆ...ಅದು ನನ್ನವರಾದ ಪುಟ್ಟ - ಪುಟ್ಟಿ ಸಂಭಂದ ಎಂದು.

ಬಾಹ್ಯ ಪ್ರಪಂಚಕ್ಕೆ ಅಕ್ಕ-ತಮ್ಮ ಇವರು. ಪುಟ್ಟ ಎಲ್ಲೆಲ್ಲಿಯೂ ಪುಟ್ಟಿಯನ್ನು ಕಾಣುತ್ತಾನೆ, ಪುಟ್ಟಿ ಮಗುವಿನಂತೆ ಎತ್ತಿ ಮುದ್ದಾಡಿಸುತ್ತಾಳೆ, ಉಹೂ ನನಗೆ ಈ ಸಂಭಂದವನ್ನು ವಿವರಿಸಲು ಬಣ್ಣಿಸಲು ಪದಗಳಿಗೆ ತಡಕಾಡುತ್ತಿದ್ದೇನೆ, ಪದಗಳಿಗೆ ನಿಲುಕದ ಭಾವವಿದು. ಸಂಭಂದದಲ್ಲಿ ನಿಷ್ಠೆ ಎಂದರೆ ಹೇಗಿರಬೇಕು ಎಂಬುದನ್ನು ಇವರುಗಳನ್ನು ನೋಡಿ ಕಲಿಯಬೇಕು, ಆ ನಿಷ್ಠೆಯನ್ನು ಪ್ರಯತ್ನಪೂರ್ವಕವಾಗಿ ಹೇರಿಕೊಂಡಿದುದಲ್ಲ, ಹೃದಯಾಂತರಾಳದ ಭಾವ.

ಎಂತೆಂತಹ ಕ್ಷುಲ್ಲಕ ವಿಷಯಗಳಿಗೆ ಸಂಭಂದಗಳನ್ನು ಕಳೆದುಕೊಳ್ಳುವ ಮಂದಿಯನ್ನು ನೋಡಿದ್ದೇನೆ, ಯಾರೋ ಒಬ್ಬರು ಮೋಸ ಮಾಡಿದರು ಎಂದು ಇಡೀ ಸಂಕುಲವನ್ನು ಜೀವನ ಪರ್ಯಂತ ಶಪಿಸುವರನ್ನು ನೋಡಿದ್ದೇನೆ, ಸಂಭಂದಗಳಲ್ಲಿನ ಅವಕಾಶವಾದವನ್ನು ನೋಡಿದ್ದೇನೆ. ಅಂತಹವರಿಗೆ ಇವರೀರ್ವರನ್ನು ತೋರಿಸಬೇಕು, ಅವರು ಜೀವನವನ್ನು ನೋಡುವ ದೃಷ್ಟಿಕೋನ ಸ್ವಲ್ಪ ಮಟ್ಟಿಗಾದರೂ ಬದಲಾಗುತ್ತದೆ.
"ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ, ಸಾಯೋದ್ರೊಳಗೆ ಒಮ್ಮೆ ನೋಡು ಜೋಗಾದ್ ಗುಂಡಿ..." ಎಂದು ಹೇಳಿದ್ದಾರಲ್ಲವೆ?

ಬಿಟ್ಟಾಕಿ, ಜೋಗವನ್ನು ನೋಡದಿದ್ದರೂ ಪರವಾಯಿಲ್ಲ, ಇರೋದ್ರೊಳಗೆ ಇವರಿಬ್ಬರನ್ನು ನೋಡಿ.
ಅಂತಹ ಜೋಗದಲ್ಲೇ ನೀರು ಕಮ್ಮಿ ಆಗುತ್ತದಂತೆ, ಆದರೆ ಇಲ್ಲಿ...............................

ಅತಿ ಶೀಘ್ರದಲ್ಲಿ ನಿಮಗೆ ಪರಿಚಯಿಸುತ್ತೇನೆ.................

ಚಿತ್ರಚಾಪ....

Thursday, February 7, 2008


ಈ ಭಾನುವಾರ ಅಂದರೆ Feb 10ರಂದು ಸರಿಯಾಗಿ ಬೆಳಿಗ್ಗೆ ಹತ್ತೂವರೆಗೆ Indian Institute of World Culture ನ ಅಂಗಳದಲ್ಲಿ ನಿಮ್ಮನ್ನು ಎದುರುಗೊಳ್ಳುವ ಅಭಿಲಾಷೆ ನನ್ನದು.. ಏನು ವಿಶೇಷ ಎಂದು ಕೇಳಿದಿರಾ??

ನಮ್ಮ ಉತ್ಸಾಹಿ ಯುವಕರ ತಂಡ "ಚಿತ್ರಚಾಪ" ಎಂದು ಶೀರ್ಷಿಕೆಯನ್ನೊತ್ತ ಪುಸ್ತಕದ ಅನಾವರಣದ ಸಮಾರಂಭವನ್ನು ಇಟ್ಟುಕೊಂಡಿದ್ದೇವೆ. ಇದರ ಕರ್ತೃಗಳು ನಮ್ಮವರೇ ಆದ ಅರುಣ್, ಶ್ರೀನಿವಾಸ, ಸುಶೃತ, ಶ್ರೀನಿಧಿ ಮತ್ತು ಅನ್ನಪೂರ್ಣ . ಅತಿಥಿಗಳಾಗಿ Professor ಜಿ.ವೆಂಕಟಸುಬ್ಬಯ್ಯ ಹಾಗು ಶ್ರೀ ಹೆಚ್ ಕೆ ಶ್ರೀನಿವಾಸ ಮೂರ್ತಿಗಳು ಆಗಮಿಸಲಿದ್ದಾರೆ.

ಕನ್ನಡ ಸಾಹಿತ್ಯ ಲೋಕಕ್ಕೆ ಪಾದರ್ಪಣೆ ಮಾಡುತ್ತಿರುವ ಹೊಸ ಪ್ರತಿಭೆಗಳ ಹೊಸ ಪ್ರಯತ್ನಗಳನ್ನು ಪ್ರೋತ್ಸಾಹಿಸುವ ಜವಾಬ್ದಾರಿ ಓದುಗರಾದ ನಮ್ಮೆಲ್ಲರದು. ಬರುವಿರಿ ತಾನೆ? ನಿಮಗಾಗಿ ಒಂದು ಪ್ರತಿಯನ್ನು ತೆಗೆದಿರಿಸಿರುತ್ತೇನೆ.. Feb 10 ರಂದು ಸಿಗುವ..

ಅಭಿಮಾನಿ...

Tuesday, January 29, 2008



ನಾನು ಭೈರಪ್ಪನವರ ಎರಡು ಕಾದಂಬರಿಗಳನ್ನು ಮಾತ್ರ ಓದಿದ್ದೇನೆ...’ಆವರಣ’ ಮತ್ತು ’ಸಾಕ್ಷಿ’, ಎರಡೂ ಸಹ ಅನನ್ಯ ಕೃತಿಗಳು. ಅವರು ಇದುವರೆಗೂ ಬರೆದ ಅಷ್ಟೂ ಕಾದಂಬರಿಗಳನ್ನು ಕೊಂಡು ಯಾವುದಾದರೂ ಬೆಟ್ಟದ(ಕೊಡಚಾದ್ರಿ) ತುದಿಯಲ್ಲಿ ಒಂದು ಸಣ್ಣ ಗೂಡು ಮಾಡಿಕೊಂಡು ಓದಬೇಕೆಂದೆನಿಸುತ್ತಿದೆ, ಒಬ್ಬನೇ.

ಅವರ ಕಾದಂಬರಿಗಳ ವಿಮರ್ಶೆಮಾಡಲು ನಾನು ಯೋಗ್ಯನಲ್ಲ, ಅದರ ಯೋಚನೆ ಸಹ ಮಾಡುವುದಿಲ್ಲ(ಶಾಂತಂ ಪಾಪಂ), ಅವರೇ ಹೇಳುವಂತೆ ಅವರ ಪ್ರತಿ ಕಾದಂಬರಿಯಲ್ಲೂ ಯಾವುದಾದರೊಂದರ(ಸತ್ಯದ!!)(ಸತ್ಯದ ವಿವಿಧ ಮಜಲುಗಳು) ಅನ್ವೇಷಣೆ ಇದ್ದೇ ಇದೆ. ಅವರಂತೆಯೇ ನಾನು ಆಗಬೇಕು(ದಯಮಾಡಿ ನಗಬೇಡಿ...please... ನಂಗೊತ್ತು ನೀವು ನಗ್ತಾಇದ್ದೀರ ಅಂತ..hmmmm) ಅನ್ವೇಷಣೆ ನಡೆಸಬೇಕು, ಆ ಅನ್ವೇಷಣೆಯಲ್ಲಿ ಹಲವಾರು ವರ್ಷಗಳನ್ನು ಕಳೆದು, ನಿಂತಲ್ಲಿ ಕುಂತಲ್ಲಿ ಚಿಂತನ ಮಂಥನ ನಡೆಸಿ ಕೂತು ಬರೆಯಬೇಕು, ನಿಂತು ಬರೆಯಬೇಕು. ನನೂ ಸಹ ಸತ್ಯವನ್ನು ತಿಳಿಯಬೇಕು, ಅರಿಯಬೇಕು. ಭೈರಪ್ಪನವರ ಕಾದಂಬರಿಗಳನ್ನು ಅಭ್ಯಸಿಸಬೇಕು. ಅವರನ್ನೊಮ್ಮೆ ನೇರವಾಗಿ ಕಾಣಬೇಕು. ಏನೇನೋ ಆಸೆಗಳು. hmmm
ಅವರ ಅಷ್ಟೂ ಕಾದಂಬರಿಗಳನ್ನು ಕೊಳ್ಳುತ್ತೇನೆ, ಆದಷ್ಟು ಬೇಗ. ಆದರೆ ಬೆಟ್ಟದ ತುದಿಯಲ್ಲಿ ಕುಳಿತು ಅವರ ಕಾದಂಬರಿಗಳನ್ನು ಅಭ್ಯಸಿಸುವ ಪುಣ್ಯ ನನ್ನದಾಗುತ್ತದೋ ಇಲ್ಲವೊ ತಿಳಿದಿಲ್ಲ, ನನ್ನೀ ಆಸೆಗೆ(ಹುಚ್ಚಿಗೆ!!) ನಿಮ್ಮ ಹಾರೈಕೆಯಿರಲಿ.




@ಭೈರಪ್ಪ : ಭೈರಪ್ಪನವರೇ ನಿಮಗೆ ನೀವೇ ಸಾಟಿ, ನಿಮ್ಮ ಸಾಹಿತ್ಯ ಕೃಷಿ ಹೀಗೆ ಸಾಗುತ್ತಿರಲಿ, ನಿರಂತರವಾಗಿ....... ಎಂದೆಂದಿಗೂ ನಂದದ ದೀಪವಾಗಿರಲಿ. ನಿಮಗೆ ನನ್ನ ಭಾವಪೂರ್ಣವಾದ ನಮಸ್ಕಾರ.

ನಿನದೇ ನೆನಪು...

Wednesday, January 2, 2008

ಕವಿರಾಜ್ ರ ಒಳ್ಳೆ ಸಾಹಿತ್ಯ..ಇಷ್ಟ ವಾಯಿತು..ಇದು ನನ್ನವಳಿಗೆ ;-) ಅರ್ಪಿತ....

ಹೀಗೀಕೆ ನಂಗೆ ನೆನಪಾಗುವೆ
ಈಗ ಎಲ್ಲೆಲ್ಲೂ ನಂಗೆ ನೀ ಕಾಣುವೆ...
ಸುಡುಸುಡುತಿದೆ ಎದೆಯೊಳಗೆ ನಿನದೇ ನೆನಪು
ಕಾಡಿಸುತಿದೆ ಪ್ರತಿಘಳಿಗೆ ನಿನದೇ ನೆನಪು ನನ್ನಾಣೆ..


ಅರೆಘಳಿಗೆಯು ಮರೆತಿರಲು ನಾನೂ ನಿನ್ನಾ
ಮರುಘಳಿಗೆಯೇ ಮರಣ ಕಣೇ ನಂಗೆ ಚಿನ್ನಾ
ಇನ್ನು ದೂರಾಗದೆ ಎಂದು ಕೈಜಾರದೆ ನನ್ನ ಸಂಗಾತಿ ನೀನಾಗು ಬಾ...

ನೀನಿಲ್ಲದ ಕನಸುಗಳೂ ನನಗೆ ಬೇಡ
ನಿನ್ನ ಕಾಣದೆ ನರಳುವುದು ನೆರಳೂ ಕೂಡ
ಮರೆತೂ ನಿನ್ನನೂ ಮರೆತೂ ಹೋಗೆನು, ಇನ್ನು ಎಂದೆಂದು ನಿನ್ನೋನು ನಾ...

ಹೀಗೀಕೆ ನಂಗೆ ನೆನಪಾಗುವೆ
ಈಗ ಎಲ್ಲೆಲ್ಲೂ ನಂಗೆ ನೀ ಕಾಣುವೆ...
ಸುಡುಸುಡುತಿದೆ ಎದೆಯೊಳಗೆ ನಿನದೇ ನೆನಪು
ಕಾಡಿಸುತಿದೆ ಪ್ರತಿಘಳಿಗೆ ನಿನದೇ ನೆನಪು ನನ್ನಾಣೆ..

Weekend Culture....

ಈ ಲೇಖನವನ್ನು ಎಂದೊ ಬರೆಯಬೇಕಿತ್ತು ಆಗಿರಲಿಲ್ಲ..ಇಂದು ಬರೆದೆ...ಸಮಾಧಾನವಾಯಿತು..
"ಏನ್ ಮಗಾ ಏನ್ ಪ್ರೋಗ್ರಾಮ್ ಈ ವೀಕೆಂಡ್ ಗೆ?"..

"Hey how was your weekend man ?"...

ಈ ರೀತಿಯ ತರೇವಾರಿ ಪ್ರಶ್ನೆಗಳು ಬೆಂಗಳೂರಿಗರ ನಾಲಿಗೆಯಲಿ ಹರಿದಾಡುತ್ತಲೇ ಇರುತ್ತದೆ..ಪ್ರತಿ ವೀಕೆಂಡ್ ಬಂದರೆ.. IT ಯ ಕೊಡುಗೆಯಲ್ಲಿ(!!) ವೀಕೆಂಡ್ ಕಲ್ಚರ್ ಕೂಡ ಒಂದು..

ಐದಾರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ವೀಕೆಂಡ್ ಗಳು ಬಂದು ಹೋಗುತ್ತಿದ್ದು ದಿಟವಾದರೂ ಅದರ ಅರಿವು(!!) ನಮಗೆ ಅಷ್ಟಾಗಿ ಇರಲಿಲ್ಲ..ಭಾನುವಾರ ಬಂತೆಂದರೆ ಖುಶಿ ಪಡುತ್ತಿದ್ದೆವು...ಬೆಳಿಗ್ಗೆ 10ರ ವರೆಗೂ ಮಲಗಿ, ಎಣ್ಣೆ ಸ್ನಾನ ಮಾಡಿ, ಚೆನ್ನಾಗಿ ಉಂಡು ಮತ್ತೆ ನಿದ್ರಿಸಿ ಟೀವಿಯಲ್ಲಿ ಬರುವ ಯಾವುದಾದರೂ ಪಿಚ್ಚರ್ ನೋಡಿ ಮಲಗುತ್ತಿದ್ದೆವು... ಈಗ ಪರಿಸ್ಥಿತಿ ಬದಲಾಗಿದೆ...IT ವರ್ಗದವರಿಗೆಲ್ಲ 5 ದಿನ ಸಜೆಯ ನಂತರ ಬರುವ ಎರಡು ದಿನದ ರಜಕ್ಕಾಗಿ ಕಾಯುತ್ತಿರುತ್ತಾರೆ...ಬಹಳ ಮಂದಿ ಶುಕ್ರವಾರ ಸಂಜೆಯಿಂದಲೆ ಪ್ರೋಗ್ರಾಮ್ fix ಮಾಡಿಕೊಂಡಿರುತ್ತಾರೆ... IT ಮಂದಿಗೆ ಹಣದ ಕೊರತೆಯು ಅಷ್ಟಾಗಿ ಇರುವುದಿಲ್ಲ... ಪ್ರತಿ ಶುಕ್ರವಾರವೂ ಯಾವುದಾದರೊಂದು ಚಲನ ಚಿತ್ರವು ಬಿಡುಗಡೆಯಾಗುವುದರಿಂದ ಅದಕ್ಕೆ ಪ್ಲಾನ್ ಮಾಡಿರುತ್ತಾರೆ..Internet ನಲ್ಲಿ ticket ಬುಕ್ ಮಾಡಿಸಿಯೂ ಇರುತ್ತಾರೆ ಕೂಡ.. ಬಹಳ ಮಂದಿಗೆ ಗೆಳೆಯರನ್ನು ಪ್ರತಿ ವಾರವೂ ಭೇಟಿಯಾಗುವ ಹಂಬಲದಿಂದ ಈ ರೀತಿಯ ನೆಪ ಮಾಡಿಕೊಂಡಿರುತ್ತಾರೆ...

ಗೆಳೆಯರ ಬಳಗವೂ ದೊಡ್ಡದಿರುತ್ತದೆ...ಆಫೀಸಿನ ಸಹೋದ್ಯೋಗಿಗಳ ಜೊತೆ, ಶಾಲಾ-ಕಾಲೇಜು ಗೆಳೆಯರ ಜೊತೆ, girl friend, boy friend ಗಳಿದ್ದರೆ ಮುಗಿದೇ ಹೋಯಿತು..ವೀಕೆಂಡ್ ಕ್ಷಣದಂತೆ ಉರುಳಿರುತ್ತದೆ....

PVR/Inox ನಲ್ಲಿ ಚಿತ್ರ ವೀಕ್ಷಿಸಿ , McDonalds ಅಥವ KFC ನಲ್ಲಿ ಬರ್ಗರ್ ಮೆಲ್ಲಿ, ಹಾಗೆ ಕಾಫಿ ಡೆ ನಲ್ಲೆ ಚಿತ್ರ ವಿಚಿತ್ರ ಕಾಫಿ ಕುಡಿದು ವೀಕೆಂಡ್ ಮುಗಿಸುವ ದೊಡ್ಡ ದಂಡೇ ಇದೆ..ಎಲ್ಲ ಮುಗಿದ ಮೇಲೆ Credit cardಗಳನ್ನು ಉಜ್ಜಿ ಹಣ ಪಾವತಿಸಿ ಮುನ್ನಡೆಯುತ್ತಾರೆ....ಇದಾವುದೂ ತಪ್ಪಲ್ಲ...ನಾವು ಬೆಳೆದಂತೆ ಬೆಂಗಳೂರು ಬೆಳೆದಂತೆ ನಾವು ನಮ್ಮವರನ್ನು ಭೇಟಿಮಾಡುವ ಕಾಲವನ್ನು ಕಳೆಯುವ ರೀತಿ-ರಿವಾಜುಗಳು ಹೇಗೆ ಬದಲಾಗುತ್ತಿವೆ ಎಂದು ಕೂತು ವೀಕ್ಷಿಸುತ್ತಿದ್ದೇನೆ...ಈ ಚಿತ್ರಣ ನಮಗೆ ಸಿಗುವುದು ಬೆಂಗಳೂರಿನಲ್ಲಿ ಮಾತ್ರ..ಕಾರಣ ದೇಶದ ಮೂಲೆ ಮೂಲೆಯಿಂದ ವಲಸೆ ಬಂದ ಜನರಿಗೆ ಅವರ ಅಭಿರುಚಿಗೆ ತಕ್ಕಂತೆ, ಅವರ ಕಾಸಿಗೆ ತಕ್ಕಂತೆ ಅವರನ್ನು ಸಂತಸ ಪಡಿಸುವ ವ್ಯವಸ್ಥೆ ಬೆಂಗಳೂರಿನಲ್ಲಿ ಚೆನ್ನಾಗೇ ಇದೆ.. ಪಕ್ಕದ ಮೈಸೂರಿನಲ್ಲಿ, ಮಂಗಳೂರಿನಲ್ಲಿ ಈ ಚಿತ್ರಣ ನಿಮಗೆ ಕಾಣ ಸಿಗುವುದಿಲ್ಲ... "ಜಾಗತೀಕರಣ" ದ special effect ಗಳಲ್ಲಿ ಇದೂ ಒಂದು ಎಂದು ನನ್ನ ಅಭಿಪ್ರಾಯ...ಬೆಂಗಳೂರು hmmm....

ಇನ್ನೊಂದು ಬಳಗ ಇದೆ..."Cool Dudes", ಪಡ್ಡೆ ಹುಡುಗರು ಇತ್ಯಾದಿ ಉಪಮೆಗಳಿಂದ ಕರೆಯಲ್ಪಡುವ ಹುಡುಗರು...ಇವರ್ಯಾರು girl friend ಕೆನ್ನೆ ಗಿಲ್ಲಲು ಹೋಗುವುದಿಲ್ಲ, ಮಾಲ್, show room ಗಳಲ್ಲಿ ಕಾಣಸಿಗುವುದಿಲ್ಲ.... ಬೈಕನ್ನೇರಿ ಯಾವುದಾದರೂ ಜಾಗ ಗೊತ್ತು ಮಾಡಿಕೊಂಡು ಹೊರಡುತ್ತಾರೆ....ಹೋದ ಜಾಗದಲ್ಲಿ ಸಿಗರೆಟ್ , ಎಣ್ಣೆ ಸಮಾರಾಧನೆ ನಡೆಸಿ, ಬಿಯರ್ ಬಾಟಲಿಗಳಿಂದ ನೊರೆ ಉಕ್ಕಿಸಿ, ಕೇಕೆ ಹಾಕಿ, ಕುಡಿದು ತೂರಾಡಿ "We had a great weekend dude" ಎಂದು ray-ban ಗ್ಲಾಸ್ ಧರಿಸಿ ಸಿಗರೆಟ್ ಹೊಗೆ ಬಿಡುತ್ತಾರೆ.... ಇದೂ ತಪ್ಪಲ್ಲ..ಯಾರಿಗೂ ತೊಂದರೆ ಕೊಡದಿದ್ದರೆ ಸಾಕು..

ಮತ್ತೊಂದಷ್ಟು ಮಂದಿ ಸ್ವಲ್ಪ ತಲೆ ಓಡಿಸಿ ಗಾಯನ ಕಛೇರಿಗೋ, ಪುಸ್ತಕ ಮೇಳಕ್ಕೋ, ಯಾವುದಾದರೂ ಗೋಷ್ಟಿಗೋ, ನಾಟಕಕ್ಕೋ, ಅಥವಾ ಕರ್ನಾಟಕದ ಯಾವುದಾದರೂ ಮೂಲೆಗೋ ಚಾರಣಕ್ಕೆ ಹೊರಡುತ್ತಾರೆ.... "ಚಾರಣ" ಮಾಡುವುದು ಸಹ ವೀಕೆಂಡ್ ಪ್ರೋಗ್ರಾಮ್ ಗಳಾಗಿ ಸೇರ್ಪಡೆಯಾಗಿದೆ... Weekdays ನಲ್ಲಿ ಮೈಮರೆತು ದುಡಿಯುವ ಜನರಿಗೆ ವೀಕೆಂಡ್ ಬಂತೆಂದರೆ ಏನು ಮಾಡಬೇಕೆಂದು ತಿಳಿದಿರುವುದಿಲ್ಲ... ಎಲ್ಲರಿಗೂ ಏನಾದರೂ ಮಾಡಬೇಕೆಂದಿರುತ್ತದೆ, ಆದರೆ ಅದೇನೆಂದು ತಿಳಿದಿರುವುದಿಲ್ಲ....


ಬೆಂಗಳೂರು ಬೆಳೆದಿದೆ, ಸಮಯ ಕಳೆಯಲು ಬೇಕಾದಷ್ಟು ಮಾರ್ಗಗಳಿವೆ , ಜನರು ಅವರಿಗೆ ಬೇಕಾದ ಮಾರ್ಗಗಳನ್ನು ಹುಡುಕಿಕೊಂಡಿದ್ದಾರೆ. ಮತ್ತಷ್ಟು ಪಟ್ಟಿಗೆ ಸೇರುತ್ತಲೇ ಇವೆ..."ಜಾಗತೀಕರಣ" ದಿಂದ ಮಧ್ಯಮ ವರ್ಗದವರು ಸದ್ದಿಲ್ಲದೆ ಮೇಲ್ಮಧ್ಯಮವರ್ಗಕ್ಕೆ ಸೇರ್ಪಡೆಯಾಗುತ್ತಾರೆ.. ಹಣ ಖರ್ಚು ಮಾಡಲು ಅಷ್ಟಾಗಿ ಯೋಚಿಸುವುದಿಲ್ಲ..
ವಸಾಹತುಶಾಹಿ ಜನಾಂಗದ ಪ್ರಭಾವ ಮಧ್ಯಮ ವರ್ಗ ಹಾಗೂ ಮೇಲ್ಮಧ್ಯಮವರ್ಗದವರ ಮೇಲೆ ಢಾಳಾಗಿಯೇ ಇದೆ..

ಕಾಫಿ ಡೆ ನಲ್ಲಿ ಗೆಳೆಯರ ಜೊತೆ ಮೈ ಮರೆತು ನಗುತ್ತಿರುವಾಗ, ಯಾವುದಾದರೂ ಚಾರಣದಲ್ಲಿದ್ದಾಗ, credit card ಉಜ್ಜುವಾಗ , ಬ್ರಾಂಡ್ ವಸ್ತುಗಳನ್ನು ಉಪಯೋಗಿಸುವಾಗ, Inbox ನಲ್ಲಿ ಸಂಬಳ ಜಮೆ ಆದ ಮೇಲ್ ನೋಡಿದಾಗ ಫಕ್ಕನೆ ಮನಸಿಗೆ ಬಂದು ಹೋಗುತ್ತದೆ...ಶಾಲಾ-ಕಾಲೇಜು ದಿನಗಳೇ ಚೆನ್ನಾಗಿದ್ದವೇನೊ ಎಂದು..ಉಹೂ comparisons ಸಲ್ಲ......

Three Stages -u

ಎಲ್ಲೋ ಕೇಳಿದ ನೆನಪು..

ಮನುಷ್ಯನಾಗಿ ಹುಟ್ಟಿದ ಮನುಷ್ಯ ಗುಣಗಳನ್ನು ರೂಢಿಸಿಕೊಂಡವನು ಜೀವನದ ಉದ್ದಗಲಕ್ಕೂ ಈ ಮೂರು ಹಂತಗಳಲ್ಲಿ ತೊಯ್ದಾಡುತ್ತಿರುತ್ತಾನೆ...ನನಗೆ ಹೌದೆನ್ನಿಸಿತು...ಓದಿಕೊಳ್ಳಿ..

೧) ನಾನು ಮಾಡುತ್ತಿರುವುದು ಸರಿ, ಪ್ರಪಂಚ ಸರಿಯಿಲ್ಲ..

೨) ನನ್ನಲ್ಲೇ ಏನೋ ತಪ್ಪಿದೆ, ಪ್ರಪಂಚ ಸರಿಯಾಗೆ ಇದೆ...

೩) ನಾನು ಸರಿಯಾಗಿದ್ದೀನಿ, ಪ್ರಪಂಚ ಕೂಡ ಸರಿಯಾಗೆ ಇದೆ...

ಓದಿ ನಿಮಗೆ ಏನೆನ್ನಿಸಿತು??

ನೂತನ ಸಂವತ್ಸರದ ಹಾರ್ದಿಕ ಶುಭಾಶಯಗಳು......

ನೆಮ್ಮದಿ....

Tuesday, January 1, 2008

ಇವತ್ತು ಎರಡನೆ ಬಾರಿ "ರಂಗಶಂಕರ" ದಲ್ಲಿ "ಮೈಸೂರ ಮಲ್ಲಿಗೆ" ನಾಟಕ ನೋಡಿದೆ.. ಬಹಳ ಬಹಳ ಹಿಡಿಸಿತು..ಬಹಳ ಸೊಗಸಾಗಿದೆ, ಅಚ್ಚುಕಟ್ಟಾಗಿದೆ...

ಅದರಲ್ಲಿ ಒಂದು ಕಡೆ ಕೆ.ಎಸ್.ನರಸಿಂಹಸ್ವಾಮಿಯವರ ಪತ್ನಿ ಹೀಗೆ ಕೇಳುತ್ತಾರೆ...."ನೀವು ಸಂತಸ ದಿಂದ ಬರೆದ್ರಿ, ನೋವಲ್ಲಿ ಬರೆದ್ರಿ, ನಲಿವಲ್ಲಿ ಬರೆದ್ರಿ, ಕಷ್ಟ ಇದ್ದಾಗ ಬರೆದ್ರಿ, ಸುಖ ಇದ್ದಾಗ ಬರೆದ್ರಿ, ಆದ್ರೆ ನೆಮ್ಮದಿಯಾಗಿ ಒಂದೂ ಪದ್ಯ ಬರೆದಿಲ್ಲವೆಂದೆನಿಸುತ್ತೆ ನಂಗೆ" ಎಂದು..

ಅದಕ್ಕೆ ಪ್ರತ್ಯುತ್ತರವಾಗಿ ನರಸಿಂಹಸ್ವಾಮಿಯವರು " ’ನೆಮ್ಮದಿ’ ಇದ್ದರೆ ಕವಿ ಯಾಗುವುದಕ್ಕೆ ಹೇಗೆ ಸಾಧ್ಯ..." ಎಂದರು..


ಯಾಕೋ ಏನೋ ಬಹಳ ಮನ ಮುಟ್ಟಿತು ಅವರ ಮಾತು...ಅದಕ್ಕಾಗಿ ಬ್ಲಾಗಿಸಿದೆ..

ಓದಿದುದಕ್ಕಾಗಿ ವಂದನೆಗಳು...