ಗೋವಿಂದಾ ಗೋವಿಂದಾ...

Saturday, July 28, 2007




ಅಂದು ಅಂದರೆ ಶುಕ್ರವಾರದ(20/07/2007) ಸಂಜೆ 8ರ ಸಮಯದಲ್ಲಿ ತಂದೆಯೊಂದಿಗೆ ಊಟ ಮಾಡುತ್ತಲಿದ್ದೆ...


"hmm...ಎಷ್ಟೊತ್ತಿಗೆ ಬಸ್ ಇರೋದು ತಿರುಪತಿಗೆ .... ಬುಕ್ ಮಾಡ್ಸಿದ್ದೀರಲ್ವ..." ? ಎಂದು ನನ್ನ ತಂದೆ ನನ್ನೆಡೆಗೆ ಪ್ರಶ್ನೆಯೆಸೆದರು.



"ಇಲ್ಲಪ್ಪ ಇವಾಗ ಹೋಗಿ ನೋಡಬೇಕು... ನಾವೆಲ್ಲ ಬಸ್ ಸ್ಟಾಂಡ್ ನಲ್ಲಿ ಮೀಟ್ ಆಗೋದು ಅಂತ ಪ್ಲಾನ್ ಮಾಡಿದ್ದೀವಿ." ಅಂದೆ...
"ಲೋ ನಿನಗೆ ಸ್ವಲ್ಪನಾದ್ರು ತಲೆ ಇದ್ಯಾ?? ..ತಿರುಪತಿಗೆ ಅಂತ ಹೋಗ್ತಿದ್ಯ, ಬುಕ್ ಮಾಡ್ಸಿಲ್ಲ, ಟೈಮ್ ಗೊತ್ತಿಲ್ಲ , ವೀಕೆಂಡ್ ಬೇರೆ, ರಶ್ ಇರತ್ತೋ, ಬಸ್ ಸಿಗಲ್ಲಾ, ಪ್ಲಾನ್ ಮಾಡೋದ್ ಬೇಡ್ವಾ , ಸುಮ್ನೆ ಪಕ್ಕದೂರಿಗೆ ಹೋಗಿ ಬರೋ ತರ ಮಾತಡ್ತಾ ಇದ್ಯಲ್ಲ, ಅವಸ್ಥೆ ಪಟ್ಟೆಲ್ಲಾ ಹೋಗ್ಬೇಡ, ಬಸ್ ಸಿಗ್ಲಿಲ್ಲಾ ಅಂದ್ರೆ ತೆಪ್ಪಗೆ ವಾಪಸ್ ಮನೆಗೆ ಬಂದುಬಿಡು.." ಹೀಗೆ ಸಾಗುತ್ತಿತ್ತು ಅವರ ಬುದ್ದಿಮಾತುಗಳು....



ಇಷ್ಟೆಲ್ಲಾ ರಂಪಾಟಕ್ಕೆ ವೇದಿಕೆ ಆಗಿದ್ದು ನಾನು ಅಂದು ತಿರುಪತಿಗೆ ನನ್ನ ಕಂಪೆನಿಯ ಗೆಳೆಯರೊಡನೆ ತಿರುಪತಿಗೆ ಹೊರಟು ನಿಂತಿದ್ದೆ... ಪೂರ್ವಾಭಾವಿಯಾಗಿ ನಾವು ಮೊದಲು ಧರ್ಮಸ್ಥಳಕ್ಕೆ ಹೋಗುವುದು ಎಂದು ತೀರ್ಮಾನಿಸಿದ್ದೆವು... ಆದರೆ ಅಲ್ಲಿ ಪ್ರತಿಕೂಲ ವಾತವರಣ ಇಲ್ಲದೆ ಇರುವುದರ ಕಾರಣ ಮತ್ತು ನಾನು ಮತ್ತೆ ಮಂಜು ಧರ್ಮಸ್ಥಳವನ್ನು ಕಳೆದ ತಿಂಗಳಷ್ಟೆ ಹೋಗಿಬಂದ್ದೆವಾದ್ದರಿಂದ ಮತ್ತೊಮ್ಮೆ ಧರ್ಮಸ್ಥಳಕ್ಕೆ ಹೋಗುವುದಕ್ಕೆ ಹಿಂಜರಿಯುತ್ತಿದ್ದೆವು.. ಕೊನೆಗೆ "ತಿರುಪತಿ" ನಮ್ಮ ಗಮ್ಯಸ್ಥಾನ ಎಂದು ಒಕ್ಕೊರಲಿನಿಂದ ನಿರ್ಧರಿಸಿದ್ದೆವು..

ಹಾ! ಮರೆತಿದ್ದೆ ನಮ್ಮೀ ತಿರುಪತಿಯ ಕರ್ಮಕಾಂಡದ ಸಹವರ್ತಿಗಳನ್ನು ಹೆಸರನ್ನು ಹೇಳಲು ಇಚ್ಚಿಸುತ್ತೇನೆ..
ಕೆಂಪರಾಜ್, ನಾನು,ವಿಕಾಸ್,ರಾಜೇಶ್, ಮಂಜುನಾಥ

ಆದಷ್ಟು ಲಗುಬಗೆಯಿಂದ ಊಟ ಮುಗಿಸಿ KSRTC ಬಸ್ ಸ್ಟಾಂಡ್ ತಲುಪಿದೆ... ನಾ ಹೋಗುವ ವೇಳೆಗೆ ಕೆಂಪ ಮತ್ತು ಮಂಜು ಅದಾಗಲೆ ಕಾಯುತ್ತಿದ್ದರು.... ಮತ್ತೆ ನಮ್ಮನ್ನು ವಿಕಾಸ್ ಮತ್ತೆ ರಾಜೇಶ್ ಜೊತೆಗೂಡಿದರು...

ಮಂಜುವಿನ ಚುರುಕುತನದಿಂದಾಗಿ ನಮಗೆ ತಿರುಪತಿಗೆ ಅಷ್ಟಾಗಿ ತೊಂದರೆಯಿಲ್ಲದೆ ಬಸ್ ದೊರಕಿತು. ಎಲ್ಲರೂ ಕುಳಿತು ಹರಟಲನುವಾದೆವು, ನಮ್ಮ ಮುಂದುಗಡೆಯಿದ್ದ ಸೀಟಿನಲ್ಲಿ ಒಂದಷ್ಟು ಪಡ್ಡೆ ಐಕಳುಗಳಿದ್ದವು..ವಿಚಿತ್ರವಾಗಿ ಕೇಕೆ ಹಾಕುತ್ತಾ ಕಿರುಚಾಡುತ್ತಿದ್ದರು... ತಟ್ಟನೆ ನಾನು,ಕೆಂಪ,ರಾಜೇಶ ಕುಳಿತಿದ್ದ ಕಡೆ ಏನೋ ಬಿದ್ದಹಾಗೆ ಆಯಿತು..ಕೆಳಗೆ ಬಿದ್ದ ವಸ್ತುವನ್ನೆತ್ತಿ ನೋಡಿದರೆ ಕಿಟಕಿಯ ಗಾಜಿನ ಸಂದುಗಳಿಂದ ಬರುತ್ತಿದ್ದ ಕಿರುಬೆಳಕಿನಲ್ಲಿ Kingfisher ಬೀರ್ ಬಾಟಲಿ ಪ್ರತಿಫಲಿಸುತ್ತಿತ್ತು... ನಾವು ಮೂವರು ಒಬ್ಬರೊಬ್ಬರನ್ನು ಬೆಕ್ಕಸಬೆರಗಾಗಿ ನೋಡಿಕೊಂಡು ಆ ಪಡ್ಡೆ ಐಕಳಿಗೆ ಅದನ್ನು ಹಸ್ತಾಂತರಿಸಿದೆವು!!!

ಶನಿವಾರ ಮುಂಜಾವು ಸುಮಾರು ನಾಲ್ಕೂವರೆ ಹೊತ್ತಿಗೆ ತಿರುಪತಿಯನ್ನು ತಲುಪಿದೆವು... ಅಲ್ಲಿಂದಲೇ ನಮಗೆ ಶನಿ ಕಾಟ ಶುರುವಾಗಿತ್ತೆಂದು ತೋರುತ್ತದೆ.. ಇಳಿದು ನೋಡಿದರೆ ಹನುಮಂತನ ಬಾಲವನ್ನು ಮೀರಿಸಿದ queue ಬಸ್ ನಿಲ್ದಾಣದಲ್ಲಿ "ಸುದರ್ಶನ" ticket ಗಾಗಿ ನಿಂತಿತ್ತು.. ಅ queue ನಲ್ಲಿ ನಿಂತು ನಮ್ಮ ಸರತಿಗಾಗಿ ಕಾದು ticket ದೊರಕುವ ಆಸೆ ನಮಗಾರಿಗೂ ಇರಲಿಲ್ಲ..ಮತ್ತೆ ಮಂಜು ತನ್ನ plan execute ;-) ಮಾಡಲನುವಾದ...



"ಲೋ ಕೇಳ್ರೊ...ನೋಡಿ..ಬಸ್ ಸ್ಟಾಂಡ್ ನಲ್ಲಿ ಮಾತ್ರ ಇಷ್ಟೊಂದು ಜನ ಇರೋದು...ರೈಲ್ವೆ ಸ್ಟೇಷನ್ ನಲ್ಲಿ ಇಷ್ಟೊಂದು ಇರೋಲ್ಲಾ..ನಡೀರಿ ಹೋಗೊಣ" ಎಂದು ಒಂದಿಬ್ಬರನ್ನು ಬಸ್ ಸ್ಟಾಂಡ್ ನಲ್ಲಿ ನಿಲ್ಲಿಸಿ ಕೆಂಪನ ಜೊತೆ ರೈಲ್ವೆ ನಿಲ್ದಾಣದೆಡೆಗೆ ಧಾವಿಸಿದ...

ಐದು ನಿಮಿಷ ಬಿಟ್ಟು ಫೋನ್ ಮಾಡಿದ.."ಲೋ ಬೇಗ ಬನ್ರೋ ticket ಸಿಗ್ತಾ ಇದೆ..."ಎಂದು
ನಾವೆಲ್ಲ ಇಬ್ಬಿಬ್ಬರಾಗಿ ಗುಂಪಿನಿಂದ ಆಚೆಯಾಗಿದ್ದೆವು..ಎಲ್ಲಾರೂ ಜೊತೆಯಾಗಿ ಸೇರಿ ರೈಲ್ವೆ ನಿಲ್ದಾಣದ ticket counterನ ಬಳಿ ಬರುವುದೊರಳಗೆ 5:05am "tickets for sudarshana will be issued only between 2am-5am " ಎಂದು ಯಾರೋ ಹೇಳಿದರು... ಅಲ್ಲಿ ಸರಿಯಾದ ವ್ಯವಸ್ಥೆಯೆಂಬುದೇ ಇಲ್ಲ..ಯಾರೊಬ್ಬರಿಗೂ ಸರಿಯಾದ ಮಾಹಿತಿಯೇ ದೊರೆಯುತ್ತಿರಲಿಲ್ಲ..ಮುಂಚೆ ticket 6ರ ವರೆಗು ಕೊಡುತ್ತಿದ್ದರಂತೆ..ನಮ್ಮ ದುರಾದೃಷ್ಟ, ಅಂದು 5ಗೆ ಮುಗಿಸ್ಬಿಟ್ಟಿದ್ದರು...ಇದರ ಅರಿವೆ ನಮಗಿರಲಿಲ್ಲ... ಯಾರ ಶಾಪವೊ ಏನೋ... ಅಂದು ನಮ್ಮ ಗ್ರಹಗತಿಗಳು ಚೆನ್ನಾಗಿದ್ದು ticket ದೊರೆತಿದ್ದೇ ಆಗಿದ್ದಲ್ಲಿ...ಅಂದೇ ಬೆಳಿಗ್ಗೆ ಸುಮಾರು 11ಗಂಟೆಗೆಲ್ಲಾ ತಿಮ್ಮಪ್ಪನ ದರುಶನ ಆಗಿಬಿಡುತಿತ್ತು..we just missed it. :-( ಆ ಐದು ನಿಮಿಷದ ತಡಕ್ಕಾಗಿ ನಾವು ತೆತ್ತ ಬೆಲೆ ಅಷ್ಟಿಷ್ಟಲ್ಲ...


ನಾವು ಮುಂದೆ ಪಡಬೇಕಾದ ಬವಣೆಗಳಿಗೆ ಕಷ್ಟಕೋಟಲೆಗಳಿಗೆ ಆ ಐದು ನಿಮಿಷದ ತಡ ಭದ್ರ ಬುನಾದಿಯನ್ನು ಹಾಕಿ ನಿಂತಿತ್ತು...

ಅಲ್ಲಿ ನಾವು ಕೇಳಿದವರೆಲ್ಲ ತಲೆಗೊಂದಂತೆ ಮಾತನಾಡುತ್ತಿದ್ದರು... ಮತ್ತದೇ ಗೋಳು ನಮಗೆಲ್ಲೂ ನಂಬಲರ್ಹ ಮಾಹಿತಿ ಕೊನೆವರೆಗೂ ದೊರೆಯಲೇಇಲ್ಲ ....

ಆದಕಾರಣ ಅಂದು ರಾತ್ರಿ ಅಂದರೆ ಶನಿವಾರ ರಾತ್ರಿ ತಿರುಮಲ ಬೆಟ್ಟವನ್ನು ಹತ್ತಿ ಬೆಟ್ಟದಲ್ಲೇ ದರುಶನ ticket ಪಡೆದು ಮುಂದುವರೆಯುವ ಎಂದು ಸಮಾಲೋಚಿಸಿ ಶನಿವಾರದಂದು ಅಲ್ಲೆ ತಿರುಪತಿಯ ಬಳಿಯಿರುವ "ಕಾಳಹಸ್ತಿ" ಮತ್ತು "ಅಲಮೇಲು ಮಂಗಾಪುರಮ್" ದೇವಸ್ಥಾನಗಳನ್ನು ದರ್ಶಿಸುವ ಎಂದು ನಿರ್ಧರಿಸಿದೆವು..

ಅಲ್ಲೇ ಬಸ್ ಸ್ಟಾಂಡ್ ಸಮೀಪದಲ್ಲಿದ್ದ ಹೊಟೆಲೊಂದರಲ್ಲಿ ಉಳಿದು ಸ್ನಾನಾದಿಕಾರ್ಯಗಳನ್ನು ಮುಗಿಸಿ ತಿಂಡಿ ತಿಂದು "ಕಾಳಹಸ್ತಿ" ಕಡೆಗೆ ಬಸ್ಸನ್ನೇರಿ ಹೊರಟೆವು..

ಸಮಯ ಸುಮಾರು ಹತ್ತೂವರೆ ಇರಬಹುದು..ನಾವು ಕಾಳಹಸ್ತಿ ತಲುಪಿದಾಗ ಬಿರುಬಿಸಿಲು... ಯಮಯಾತನೆ ಆಗುತ್ತಿತ್ತು..



"ತಿರುಪತಿ ಬಾಳ ಸೆಖೆ ಕಣೊ..ಬೆಂಗ್ಳೂರೇ ವಾಸಿ " ಎಂದು ನಮ್ಮಲ್ಲೆ ಮಾತಾಡಿಕೊಳ್ಳುತ್ತಿದ್ದೆವು..

"ಕಾಳಹಸ್ತಿ" ದೇವಾಲಯ ಸೊಗಸಾಗಿದೆ.... ಯಾವ ರಾಜ ಕಟ್ಟಿಸಿದನೋ ಅದರ ವಾಸ್ತು ಯಾವ ಶೈಲಿಯೊ ನನಗೊಂದೂ ತಿಳಿಯದು.... ಎಲ್ಲೆಲ್ಲೂ ಸುಂದರ ಶಿಲ್ಪಗಳ ಕೆತ್ತನೆ ಎದ್ದು ಕಾಣುತ್ತಿತ್ತು.. ಬಹಳ ಅಚ್ಚುಕಟ್ಟಿನಿಂದ ಕುಶಲಕರ್ಮಿಗಳು ತಮ್ಮ ಕೆಲಸವನ್ನು ಮಾಡಿದ್ದರು.. ದೇವಾಲಯದ ವಿಸ್ತೀರ್ಣ ಕೂಡ ಬಹಳ ದೊಡ್ಡದಿತ್ತು..ಅದು ಶಿವನ ದೇವಾಲಯ... ಪಾತಳ ಗಣೇಶನನ್ನು ದರ್ಶಿಸಿ ಶಿವನ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತೆವು queue ಬಹಳ ಉದ್ದವಾಗಿತ್ತು... ವೀಕೆಂಡ್ ಪ್ರಭಾವವೋ ಎನೋ ಬಹಳ ಜನ ಜಮಾಯಿಸಿದ್ದರು... ನಾನು ಕಳೆದ ಸಲ ಹೋಗಿದ್ದಾಗ ಅಂದರೆ ಮೂರು ವರ್ಷದ ಕೆಳಗೆ ಕೆವಲ 10-15ನಿಮಿಶ ದಲ್ಲಿ ದರುಶನ ವಾಗಿತ್ತು.. ಆ ದೇವಸ್ಥಾನದಲ್ಲೂ!! ಸಹ ದರುಶನಕ್ಕಾಗಿ ನಾವು ಸುಮಾರು 2ಗಂಟೆಗಳು queue ನಲ್ಲಿ ಕಳೆದವು... ಇಲ್ಲೇ ಇಷ್ಟೊತ್ತು ಆಗಬೇಕಾದರೆ ಇನ್ನು ತಿಮ್ಮಪ್ಪನ ಗತಿಯೇನು ಎಂಬ ಕಳವಳ ನನ್ನ ಮನಸ್ಸಿನಲ್ಲಿ ಇನ್ನಿಲ್ಲದಂತೆ ಸುಳಿದಾಡುತಿತ್ತು..


2ಗಂಟೆಗಳ ಕಾಲ queue ನಲ್ಲಿ ನಿಂತು ಇನ್ನಿಲ್ಲದಂತೆ ಹೈರಾಣಾಗಿ ಹೊರಬಂದೊಡನೆಯೆ ವರುಣದೇವ ತನ್ನ ಆರ್ಭಟವನ್ನು ಪ್ರಾರಂಭಿಸಿಬಿಟ್ಟಿದ್ದ... ಧೋ ಎಂದು ಮಳೆ ಸುರಿಯುತಿತ್ತು.. ನಮಗೋ ಆಶ್ಚರ್ಯ, ಬರುವಾಗ ಸುಡುಬಿಸಿಲು... ಹೊರಡುವ ವೇಳೆಯಲ್ಲಿ ಜೋರು ಮಳೆ.. ಅಲ್ಲೆ ನಿಂತು ಸ್ವಲ್ಪ ಸಮಯ ಕಾದೆವಾದರೂ ಹೊಟ್ಟೆ ಚುರುಗುಡುತಿತ್ತು queue ನಲ್ಲಿ ನಿಂತು ಬಹಳಷ್ಟು ಬಳಲಿದ್ದೆವು... ಮಳೆ ನಿಲ್ಲುವ ಯಾವುದೇ ಮುನ್ಸೂಚನೆಯೇ ಕಾಣುತ್ತಿರಲಿಲ್ಲ... ಸಮಯ ಮೂರೂವರೆ ದಾಟಿತ್ತು... ಇಲ್ಲಿ ತಡ ಮಾಡಿದರೆ ಸಂಜೆ ಬೆಟ್ಟ ಹತ್ತುವುದಕ್ಕೆ ತಡ ಆಗುತ್ತೆಂದು ಆ ಮಳೆಯಲ್ಲೇ ಹೊರಟುಬಿಟ್ಟೆವು..


ಹೊರಬಂದು ಅಲ್ಲೆ ಇದ್ದ ಹೊಟೆಲೊಂದರಲ್ಲಿ ಹೊಕ್ಕು ಊಟ ಮಾಡಿದೆವು.... ರುಚಿ-ಶುಚಿಯ ಯಾವುದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಾನಂತೂ ಚೆನ್ನಾಗಿ ತಿಂದೆ....ಅದಕ್ಕಾಗಿ ಈಗ ಪರಿತಪಿಸುತ್ತಿದ್ದೇನೆ :-(, ರಾಜೇಶ ಸಾಂಬಾರಿನಿಂದ ಪೇಪರಿನ ಚೂರನ್ನು ಹೊರತೆಗೆದ...!! ನಾನಾಗಿದ್ದರೆ ಅಂದು ಇದ್ದ ಹಸಿವಿನಲ್ಲಿ ಅದನ್ನು ಕೂಡ ಗಮನಿಸದೆ ತಿಂದುಬಿಡುತ್ತಿದ್ದೆನೇನೊ..!!!

ಅಲ್ಲಿಂದ ಹೊರಬಿದ್ದು ಮತ್ತೆ ತಿರುಪತಿಯೆಡೆಗೆ ಸಾಗಿದೆವು... ಬಸ್ನಲ್ಲಿ ಎಲ್ಲಾರಿಗೂ ಒಳ್ಳೆ ನಿದ್ದೆ.. ಹೊಟೆಲ್ ತಲುಪಿ ಮತ್ತೆ ಎಲ್ಲರೂ ಮತ್ತೊಂದು ಸುತ್ತು ನಿದ್ದೆ ಮಾಡಿದೆವು... ಸುಮ್ಮರು 5:45ರ ವೇಳೆಗೆ ರೂಮ್ ಚೆಕ್ ಔಟ್ ಮಾಡಿ ಅಲಿಪಿರಿಗೆ ಬಂದಿಳಿದೆವು...ತಿರುಮಲ ಬೆಟ್ಟಕ್ಕೆ ನಾವು ಹತ್ತಿ ಹೋಗುವೆದೆಂದು ನಿರ್ಧರಿಸಿದ್ದೆವು.. ಅಲಿಪಿರಿಯಿಂದ ಪಯಣ ಶುರುವಾಗುತ್ತದೆ... ಸರಿಯಾಗಿ ಮೂರುಸಾವಿರದಾಐವತ್ತು(3500) ಮೆಟ್ಟಿಲುಗಳು ಹತ್ತಿದರೆ ವೆಂಕಟಾದ್ರಿ ಬೆಟ್ಟ ತಲುಪುತ್ತೇವೆ.. ತಿರುಮಲ ದೇವಸ್ಥಾನ ಇರುವುದು "ವೆಂಕಟಾದ್ರಿ" ಬೆಟ್ಟದಲ್ಲಿ...ಒತ್ತು ಏಳು ಬೆಟ್ಟಗಳೊನ್ನೊಳಗೊಂಡಿದೆ ತಿರುಪತಿ.. ಈ ಏಳು ಬೆಟ್ಟಗಳನ್ನು ಸವೆಸಿ ನಡೆದರೆ ಕೊನೆಯ ಅಂದರೆ ಏಳನೆಯ ಬೆಟ್ಟವಾದ "ವೆಂಕಾಟದ್ರಿ" ಅಲ್ಲಿ ತಿಮ್ಮಪ್ಪನ್ನ ದರುಶನ ಸಾಧ್ಯ... :-)

ಯಾತ್ರಾರ್ಥಿಗಳಿಗೆ ಎಲ್ಲೂ ತೊಂದರೆಯಾಗದಂತೆ ದಾರಿ ಮಧ್ಯೆ ಸಾಕಷ್ಟು ತಂಗುದಾಣಗಳು ಇವೆ ಮೆಟ್ಟಿಲು ಹತ್ತುವಾಗ..ಮಧ್ಯೆ ಮಧ್ಯೆ ನಾವು ವಿರಮಿಸಿಕೊಳ್ಳುತ್ತಿದ್ದವು.. ಸಮಚಿತ್ತ,ಸಮವಯಸ್ಕರೊಡನೆ ಇದ್ದುದ್ದೆನಾದ್ದರಿಂದ ಹತ್ತುವ ಪ್ರಯಾಸ ನನಗಾಗಲಿಲ್ಲ... ದಾರಿಉದ್ದಕ್ಕು ಹಾಸ್ಯಚಟಾಕಿಗಳು ಹಾರಡುತ್ತಿದ್ದವು, ಮಧ್ಯೆ ಮಧ್ಯೆ " ಲೊ ತಿರುಪತಿಗೆ ಬಂದಿದ್ದೀವೆ ಇಲ್ಲಾದರೂ double meanings ಬಿಟ್ಟು ಮಾತಾಡ್ರೊ ಎಂದು ಕೆಂಪ ಬೊಬ್ಬೆಯಿಡುತ್ತಿದ್ದ.. ಕಣ್ಮುಚ್ಚಿ ನಡೆದರೂ ಸಹ ನಾವು ಬೆಟ್ಟವನ್ನು ಹತ್ತಬಹುದು..ಅಷ್ಟು ಅಚ್ಚುಕಟ್ಟಾಗಿ ಮೆಟ್ಟಿಲುಗಳನ್ನು ನಿರ್ಮಿಸಿದ್ದಾರೆ..ಎಲ್ಲೂ ಸಹ ಅಂಕು ಡೊಂಕುಗಳಿಲ್ಲ.. ಬೆಟ್ಟ ಹಟ್ಟುತ್ತಿದ್ದೇವೆ ಎಂಬ ಅರಿವು ಸಹ ಆಗುವುದಿಲ್ಲ ನಮಗೆ... ಹೆಚ್ಚಾಗಿ ದಣಿವು ಸಹ ಆಗಲಿಲ್ಲ ನನಗೆ..ಪ್ರಾಯಶ: ಒಂದಷ್ಟು ಚಾರಣಗಳನ್ನು ಮಾಡಿದ್ದೆನಾದ್ದರಿಂದ ನನಗೆ ಹೀಗೆಂದೆನಿಸಿರಬಹುದು.. "ತಡಿಯಂಡಮೋಳ್" ಬೆಟ್ಟದ ಚಾರಣ ಮುಂದೆ ಇದೇನೂ ಲೆಕ್ಕಕಿಲ್ಲ ಬಿಡಿ...ಎಂದು ಸಾಕಷ್ಟು ಬಾರಿ ಎಲ್ಲಾರಿಗೂ ಹೇಳುತ್ತಲಿದ್ದೆ.. ಸುಮಾರು 3500 ಮೆಟ್ಟಿಲುಗಳನ್ನು 3ಗಂಟೆಗಳ ಅವಧಿಯಲ್ಲಿ ಮುಗಿಸಿ ತಿರುಮಲ ಬೆಟ್ಟವನ್ನು 11ಕ್ಕೆ ತಲುಪಿದೆವು.. ನಮಗಾಗಿ ಕಾದಿತ್ತು ಅಲ್ಲೊಂದು ಶಾಕ್!!
3550 milestone



ತಲುಪಿದ ಕೂಡಲೆ "ಸುದರ್ಶನ" ticket ಗಾಗಿ ವಿಚಾರಿಸಿದೆವು... ಅಲ್ಲಿದ್ದವರನ್ನು ವಿಚಾರಿಸಿದಾಗ ತಿಳಿಯಿತು "ತಿರುಮಲೆ" ಬೆಟ್ಟದಲ್ಲಿ "ಸುದರ್ಶನ" ticket ಕೊಡುವುದಿಲ್ಲವೆಂದು, ನೀವು ದರುಶನಕ್ಕೆ ಹೋಗಬೇಕಾದರೆ "ಧರ್ಮದರ್ಶನ" ದಲ್ಲಿ ಹೋಗಬೇಕೆಂದು ಹೇಳಿದರು... ಸಾಕಷ್ಟು ಮಂದಿಯನ್ನು ಕೇಳಿದೆವು..ಎಲ್ಲಾರದೂ ಒಂದೇ ಉತ್ತರ..ಇಲ್ಲಿ ನಿಮಗೆ ಆ 50ರೂಪಾಯ್ ticket ಸಿಗಲ್ಲ ಕಣ್ರಯ್ಯ...ಕೆಳಗಡೆ ಹೋಗಿ.. ನಮಗೆ ನಮ್ಮ ಪರಿಸ್ಥಿತಿಯನ್ನು ಕಂಡು ಅಳಬೇಕೊ ನಗಬೇಕೊ ತಿಳಿಯುತ್ತಿರಲಿಲ್ಲ... ಅಲ್ಲೇ ಒಂದು ಕಲ್ಲು ಬೆಂಚಿನ ಮೇಲೆ ಕುಳ್ಳರಿಸಿದೆವು... ಇಡೀ ತಿರುಮಲ ದೇವಸ್ಥಾನ ಹಾಗು ಬೆಟ್ಟದ ನಿರ್ವಹಣೆ "ತಿರುಮಲ ತಿರುಪತಿ ದೇವಸ್ಥಾನಮ್ಸ್" ಎಂಬ ಸಂಘದ ಉಸ್ತುವಾರಿ ಹಾಗು ಸುಪರ್ದಿಯಲ್ಲಿದೆ.. ಇದರ ಮೇಲೆ ಆಂಧ್ರ ಸರಕಾರದ ಯಾವ ಹಕ್ಕೂ ಸಹ ಇಲ್ಲ !! ..ಅಲ್ಲೊಂದು ಸರಿಯಾದ ಮಾಹಿತಿ ಕೇಂದ್ರವೆಂಬುದೇ ಇರಲಿಲ್ಲ... Information Centre ಎಂಬ ನಾಮಫಲಕ ಹೊತ್ತ ಒಂದು ಚಿಕ್ಕ ಗೂಡು ನಮ್ಮ ಕಣ್ಣಿಗೆ ಬಿತ್ತಾದರೂ ಅದೂ ಸಹ ಮುಚ್ಚಿತ್ತು..ಇಲ್ಲೂ ಸಹ ಕೇಳಿದವರೆಲ್ಲ ತಲೆಗೊಂದಂತೆ ಮಾತನಾಡುತ್ತಿದ್ದರು... ನಮಗೆ ನಿಜವಾದ ಗೊಂದಲವುಂಟಾಯಿತು.. we had got wrong information that we will get tickets for sudarshana in tirumala hills..........ಆ ಮಾಹಿತಿ ತಪ್ಪಾಗಿತ್ತು.. ಸಮಯ ಮೀರುತ್ತಿತ್ತು ..ಸುಮಾರು ರಾತ್ರಿ ಹನ್ನೊಂದೂವರೆಯಿರಬಹುದು...

ನಮಗೆ ಇದ್ದದ್ದು ಮೂರು ಆಯ್ಕೆಗಳು :


1) ಬೆಟ್ಟದಿಂದ ಕೆಳಗೆ ಬಸ್ನಲ್ಲಿ ಇಳಿದು ರಾತ್ರಿ 2am-5am ರ ನಡುವೆ ticket ಗಾಗಿ ಕಾದು ಪಡೆಯುವುದು...



2)ಹುಚ್ಚುಧೈರ್ಯದಿಂದ "ಧರ್ಮದರ್ಶನ" ದ ಸಾಲಿನಲ್ಲಿ ಹೋಗಿ ನಿಂತುಬಿಡುವುದು.. ಇದರಲ್ಲಿ ನಿಂತರೆ ಎಂದು ನಮಗೆ ದರುಶನ ಸಾಧ್ಯ ಎಂಬುದು ತಿಳಿಯುವುದಿಲ್ಲ..ದಿನಗಟ್ಟಲೆ ಹಿಡಿಯಬಹುದು..ಅಥವಾ ಬೇಗನೆ ಸಹ ಆಗಲೂಬಹುದು.. depends



3)ತಿಮ್ಮಪ್ಪನ ದರುಶನದ ಆಸೆಯನ್ನು ತೊರೆದು ಮರಳಿ ಬೆಂಗಳೂರಿಗೆ ವಾಪಸಾಗುವುದು..(ಇದರ ಬಗ್ಗೆ ನಾನು ಮತ್ತೆ ಕೆಂಪನನ್ನು ಉಳಿದು ಮತ್ಯಾರು ಸಹ ಯೋಚಿಸಿರಲಿಲ್ಲವೆಂದೆನಿಸುತ್ತೆ...he he he)



ಮಂಜು ಮಾತ್ರ "ಲೊ ಬೇಡ್ರೊ ಕೆಳಗಡೆ ಮಾತ್ರ ಹೋಗೋದು ಬೇಡ, ಅಲ್ಲಿ queue ಇರತ್ತೆ..ticket ತಗೊಂಡ್ರೆ ನಾಳೇನೆ ದರುಶನ ಆಗುತ್ತೆ ಅಂತ ಏನುಗ್ಯಾರಂಟಿ??, ಧರ್ಮದರ್ಶನಕ್ಕೆ ಹೋಗಿಬಿಡೋಣ, ಬೆಳಿಗ್ಗೆ 10ಕ್ಕೆಲ್ಲ ಹೊರಗಡೆ ಇರಬಹುದು ನಾವು" ಎನ್ನುತ್ತಿದ್ದ.. ವಿಕಾಸನು ಕೆಳಗಡೆ ಹೋಗಿ ticket ಪಡೆಯುವ ಹಂಬಲದಲ್ಲಿದ್ದ..ನಾನೂ ಸಹ ಗೊಂದಲದಲ್ಲಿದ್ದೆ.. ಕೆಂಪ ಮಾತ್ರ ಮೌನಿಯಾಗಿ ಒಂದೆಡೆ ಮುಗುಮ್ಮಾಗಿ ಕುಳಿತಿದ್ದ..ಏನಾದ್ರು ಮಾತಾಡೊ ಅಂದರೆ "ನಾವಿಲ್ಲಿಗೆ ಪ್ಲಾನ್ ಮಾಡದೆ ಬಂದದ್ದು ಮೊದಲು ದೊಡ್ಡ ತಪ್ಪು" ಎಂದು ಸುಮ್ಮನಾದ... ನಮ್ಮೀ ಪರಿಸ್ಥಿತಿ ಯಾವ ಶತ್ರುವಿಗೂ ಬೇಡ... ಒಂದಷ್ಟೊತ್ತು ಅಲ್ಲೆ ಸುಮ್ಮನೆ ಕುಳಿತಿದ್ದೆವು...ಕೊನೆಗೆ ಮಂಜು "ಲೊ ನಂಗೂ ಬೇಡ ನಿಂಗೂ ಬೆಡ..ಟಾಸ್ ಹಾಕಣ...ದೇವ್ರಿಟ್ಟಂಗೆ..." ಎಂದ.. !!

"ಲೊ ಥೂ ನಿನ್ನ..ಟಾಸ್ ಹಾಕ್ಬೇಕಾ??..ಅದೆಲ್ಲಾ ಬೇಡ....ನಡಿ ನಡಿ.. ಧರ್ಮದರ್ಶನಕ್ಕೆ ಹೊರಟುಬಿಡೋಣ..ಏನಾಗುತ್ತೊ ಆಗಲಿ" ಎಂದು ಯಾರೋ ಹೇಳಿದರು.... ಇದು ನಮ್ಮೆಲ್ಲರ ಒಕ್ಕೊರಲಿನ ನಿರ್ಧಾರವಾಗಿರಲಿಲ್ಲ..ಪರಿಸ್ಥಿತಿ ಹೊಡೆತಕ್ಕೆ ಸಿಲುಕಿ ಬೇರೆ ದಾರಿ ಕಾಣದೆ ಹೋದದ್ದು.. ಮತ್ತೆ ಎಲ್ಲರೂ ಲಗುಬಗೆಯಿಂದ ಬೆಟ್ಟದ ಮೇಲಿನ ವರೆಗೂ ಹೊತ್ತು ತಂದಿದ್ದ ಸಾಮಗ್ರಿಗಳನ್ನು ಒಂದು ಲಾಕರಿನಲ್ಲಿ ಹಾಕಿ ಕುಳಿತೆವು..ರಾಜೇಶ ಮತ್ತು ಮಂಜು ಕೂದಲು ಮುಡಿ ಕೊಟ್ಟು ನಮ್ಮೊಡನೆ ಸೇರಿದರು...... ಅತ್ತ ವಿಕಾಸ್ ಅದನ್ನೇ ಬಡಬಡಿಸುತ್ತಿದ್ದ.. "ಲೋ ಕೆಳಗಡೆ ಹೋಗಿದ್ದರೆ ticket ಸಿಕ್ತಿತ್ತು ಕಣ್ರೋ... ನೋಡ್ತಾಇರಿ ಸೋಮವಾರ ಆಗುತ್ತೆ ನಾವು ದರುಶನ ಮಾಡೋದು.. ತುಂಬ ಸುಸ್ತಾಗುತ್ತೆ " ಎಂದು..

ಅತ್ತ ಮಂಜು ಮತ್ತೆ ರಾಜೇಶ ಮುಡಿಕೊಡಲು ಹೋಗಿದ್ದಾಗ ನಾವು ಮೂವರು ಅಂದರೆ ನಾನು,ಕೆಂಪ,ವಿಕಾಸ ಒಂದು ದೊಡ್ಡ ಹಜಾರದಲ್ಲಿ ಕುಳಿತಿದ್ದೆವು..ಅಲ್ಲಿ ಸಾಕಷ್ಟು ಲಾಕರ್ಸ್ ಗಳಿದ್ದವು.... ಅಲ್ಲೆ ನೆಲದ ಮೇಲೆ ಸಾಕಷ್ಟು ಮಂದಿ ಮಲಗಿದ್ದರು... ಅವರು ಏತಕ್ಕಾಗಿ ಕಾಯುತ್ತಿದ್ದರು, ಏಕೆ ಇಲ್ಲಿ ಮಲಗಿದ್ದರು ಎಂದು ನಮಗೆ ಅರ್ಥವೆ ಆಗಲಿಲ್ಲ..ಒಂದು ನಿರಾಶ್ರಿತರ ಶಿಬಿರದಲ್ಲಿದ್ದೇವೊ ಎಂಬ ಭಾವ ನನ್ನನ್ನು ಸದಾ ಕಾಡುತಿತ್ತು.. ಕೆಂಪ ಇನ್ನೂ ಮೌನವಾಗೆ ಕುಳಿತಿದ್ದ....ಆ ಸರಿ ಹೊತ್ತಿನಲ್ಲಿ ನಡೆಯುತ್ತಿದ್ದ ಘಟನಾವಳಿಗಳನ್ನು ಕಂಡು ರೇಗಿ ಹೋಗಿದ್ದಿರಬೇಕು..ಮೈದಡವಿ ಕೇಳಿದೆ.."ಏನಾಯಿತೊ ಅವಾಗಲಿಂದ silent ಆಗೆ ಇದ್ದಿಯಾ" ಅಂತ..ಅದಕ್ಕೆ ಆತ ."ನಾನು ಹೋದ ಕಡೆಯಲೆಲ್ಲ ಹೀಗೆ ಆಗುತ್ತದೆ...ಸರಿಯಾದ ವ್ಯವಸ್ಥೆ ಇರುವುದಿಲ್ಲ, ಎಲ್ಲೆಲ್ಲೊ ಅರಾಜಕತೆ, ಸಮಯಕ್ಕೆ ಸರಿಯಾದ ಮಾಹಿತಿ ದೊರೆಯುವುದಿಲ್ಲ, ಎಲ್ಲಾ ಕಡೆಯು ಹೀಗೆಯೆ, ನಾವೆಂದಿಗು ಬದಲಾಗುವುದೇ ಇಲ್ಲವೆ..?? ಇದನ್ನ ಸರಿ ಮಾಡುವುದಕ್ಕೆ ಯಾರು ಸಹ initiative ಸಹ ತೆಗುದುಕೊಳ್ಳುವುದಿಲ್ಲ... ಏಕೆ ಹೀಗೆ??" ಎಂದು... ಒಹೋ ಈತ ಬಹಳ serious ಆಗಿ ಯೋಚಿಸುತ್ತಿದ್ದಾನೆ ಎಂದು ಅರಿತು... "ಎಲ್ಲರೂ ಸಹ ತಮ್ಮ ಕೆಲಸ ಕಾರ್ಯ ಮುಗಿದ ಮೆಲೆ ಆ ಕಡೆ ತಿರುಗಿ ಸಹ ನೋಡುವುದಿಲ್ಲ ಕಣೊ.. ನಿನಗಿಲ್ಲಿ ಇಂದು ಸರಿಯಾಗಿ ನಡೆಯುತ್ತಿಲ್ಲವೆಂದು ಪರಿತಪಿಸುತ್ತಿದ್ದೆಯ.. ಅದೆ timeಗೆ correct ಆಗಿ ಎಲ್ಲಾ ಸುಸೂತ್ರವಾಗಿ ನಡೆದಿದ್ದರೆ ಇದರ ಬಗ್ಗೆ ಯೋಚನೆ ಸಹ ನಿನಗೆ ಬರುತ್ತಿರಲಿಲ್ಲ.. ಎಲ್ಲ ನಮ್ಮ bad luck " ಎಂದು ಹೇಳಿ ಸುಮ್ಮನಾದೆ...



ಲಾಕರ್ಸ್ ಗಳಲ್ಲಿ ನಮ್ಮ ಸಾಮಾಗ್ರಿಗಳೊಡಣೆ ಮೊಬೈಲನ್ನು ಸಹ ಇಟ್ಟು ಹೊರಟು ನಿಂತೆವು.. ಆಗ ಸಮಯ ರಾತ್ರಿ 1ಗಂಟೆಯಿರಬಹುದು ದರುಶನ ನಮಗೆ ಯಾವ ವೇಳೆಗೆ ಆಗುತ್ತದೆ ಎಂಬ ಪರಿವೆಯೆ ಇಲ್ಲದೆ ಬೇರಾವ ದಾರಿವು ತೋಚದೆ ಆ ಸಾಲಿನಲ್ಲಿ ಕಾಯಲು ಸಿದ್ದವಾಗಿ ಹೊರಟು ನಿಂತಿದ್ದೆವು... ನಮದಿನ್ನೂ ಊಟಸಹಾ ಆಗಿರಲಿಲ್ಲ..ಅಷ್ಟೊತ್ತಿನಲ್ಲಿ ಊಟ ಮುಗಿಸಿ general queue ನಲ್ಲಿ ಕಾಯಬೇಕಾದ ಭೀಕರತೆಯನ್ನು ಅರಿತು ಸಾಕಷ್ಟು ತಿಂಡಿಯನ್ನು ಕೊಂಡು ತಿಂದ ದೋಸೆ ಪ್ಲೇಟನ್ನು ಬದಿಗಿಟ್ಟು ಕೈತೊಳೆದುಕೊಂಡು ಹೊರಡುವ ವೆಳೆಗೆ ಧೋ ಎಂದು ಮಳೆ ಶುರುವಾಯಿತು.... ಮೊದಲೇ ರೋಸಿ ಹೋಗಿದ್ದೆವು.. "ಎನಪ್ಪಾ ನಿನ್ನ ದರುಶನಕ್ಕೆ ಇಷ್ಟೊಂದು ಅದ್ದಿ ಆತಂಕಗಳೇ" ಎಂದು ಹಲಬುತ್ತಿದ್ದೆವು... ರಾಜೇಶ ಹೇಳುತ್ತಿದ್ದ "ಯಾವನೊ ನನ್ಮಗ ನಮಗೆ ಮಾಟ ಮಾಡಿಸಿರಬಹುದು ಕಣ್ರೋ...ಇಲ್ಲಾಂದ್ರೆ ಇಷ್ಟೊಂದು ತೊಂದ್ರೆ ಆಗುತ್ತಾ??, ನಮ್ಮಲ್ಲಿ ಯಾವನೊ ಒಬ್ಬನಿಗೆ ನಿಜವಾಗ್ಲು ಗ್ರಹಗತಿ ಚೆನ್ನಾಗಿಲ್ಲ ಅನ್ಸುತ್ತೆ.. ಅವ್ನ ಜಾತಕದಲ್ಲಿ ಈ ದಿನ ಮನೆ ಸಹ ಬಿಟ್ಟು ಹೊರಗೆ ಬರಬಾರದು ಅಂತ ಇದೆ ಅನ್ಸತ್ತೆ.. ನೋಡಿದ್ರೆ ತಿರುಪತಿವರೆಗು ಬಂದಿದ್ದಾನೆ..ಲೋ ವಾಪಸ್ ಬೆಂಗ್ಳೂರ್ ಗೆ ಹೊದ್ಮೇಲೆ ನಿಮ್ ನಿಮ್ ಜಾತಕ ಚೆಚ್ಕ್ ಮಾಡಿಸ್ಕೊಳ್ರೊ" ಯಾವನದು culprit ಎಂದು ಕಂಡುಹಿಡಿಯೋಣ... ಆ ಮಳೆಯಲ್ಲು ಎಲ್ಲರೂ ಮನಸಾರೆ ನಕ್ಕೆವು... ಇನ್ನು ತಡ ಮಾಡಿದರೆ ಸರಿ ಬರುವುದಿಲ್ಲವೆಂದು ಆ ಮಳೆಯಲ್ಲೆ ಹೊರಟೆವು.... ಎಲ್ಲರೂ ಒಡುತ್ತಿದ್ದೆವು..ಮಳೆ ಇನ್ನು ಜೋರಾಯಿತು... ಎಲ್ಲರೂ ನೆನೆದು ತೊಯ್ದು ತೊಪ್ಪೆಯಾಗಿ ಅಲ್ಲೆ ನಿಂತೆವು... ಮತ್ತದೇ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿ ಸುಳಿದಾಡುತಿತ್ತು .ನಮಗೆ ಏಕೆ ಹೀಗಾಗುತ್ತಿದೆ ಎಂದು...ಸ್ವಲ್ಪ ಕಮ್ಮಿ ಆದ ಕೂಡಲೆ ಮತ್ತೆ ಒಡಿ ಧರ್ಮದರ್ಶನದ ಸಾಲಿಗೆ ನುಗ್ಗಿಬಿಟ್ಟೆವು...

ಧರ್ಮದರ್ಶನಕ್ಕೆಂದೇ ದೊಡ್ಡ ಸೆಲ್ ಗಳನ್ನು ಕಟ್ಟಿರುತ್ತಾರೆ...ಮುಖ್ಯ ದೇವಸ್ಥಾನದಿಂದ ಬಹಳ ದೂರವೆ ಈ ಸಾಲು ಶುರುವಾಗುತ್ತದೆ... ಇಲ್ಲಿ ಕಾಯಲು ಕುಳಿತರೆ ದರ್ಶನದ ವೇಳೆ ಅನಿಶ್ಚಿತ.. ಅದಕ್ಕಾಗಿಯೆ ಅಲ್ಲಿ ಯಾತ್ರಾರ್ಥಿಗಳಿಗೆ ದಣಿವಾಗಬಾರದೆಂದು!! ಬಹಳಷ್ಟು ದೊಡ್ಡ ದೊಡ್ಡ ಸೆಲ್ ಗಳನ್ನು ನಿರ್ಮಿಸಿದ್ದಾರೆ....ಅಲ್ಲಿ ಒಮ್ಮೆ ಹೋದರೆ ಹೊರಗಡೆ ಬರುವಂತಿಲ್ಲ... ಒಂದಾದರೊಂದಂತೆ ಒಂದು ಸೆಲ್ ಗಳಿಂದ ನಮ್ಮನ್ನು ಹೊರಗಡೆ ಬಿಡುತ್ತಾರೆ... ಅಂತಹ ಒಂದು ಸೆಲ್ ಗೆ ನಾವು ಐವರು ಹೋಗಿ ಕುಳಿತೆವು...ಆಗ ಸಮಯ ಭಾನುವಾರ ಮಧ್ಯರಾತ್ರಿ 2ಗಂಟೆ... ಅಲ್ಲಿಂದ ಎಂದು ಹೊರಬೀಳುವೆವು ಎಂಬುದು ಅಲ್ಲಿರುವವರ್ಯಾರಿಗು ತಿಳಿದಿರಲಿಲ್ಲ..ನಾವಿದ್ದ ಸೆಲ್ ನಲ್ಲಿ ಸುಮಾರು 600 ಜನರು ಇದ್ದರೆಂದೆನಿಸುತ್ತೆ.. ನಮಗೆ ಅಲ್ಲಿ ಕುಳಿತು ಏನು ಮಾಡುವೆದೆಂದು ತಿಳಿಯಲಿಲ್ಲ..ಒಬ್ಬೊಬ್ಬರಾಗಿ ನಿದ್ದೆಗೆ ಜಾರುತ್ತಿದ್ದರು..ಸುತ್ತಮುತ್ತಲಿನ ಜನರನ್ನು ನಾನು ಸುಮ್ಮನೆ ವೀಕ್ಷಿಸುತ್ತಿದ್ದೆ....ನಮಗೆ ಅಲ್ಲಿ ಸರಿಯಾಗಿ ಕೂತುಕೊಳ್ಳಲು ಸಹ ಜಾಗವಿರಲಿಲ್ಲ...ಸುತ್ತಲೂ ಜನ...ಸರಿಯಾಗಿ ಕಾಲು ಸಡಿಲಿಸಿ ಕೊಸರಾಡಲು ಸಹ ಜಾಗವಿಲ್ಲದಷ್ಟು ಜನ ತುಂಬಿಕೊಂಡಿದ್ದರು..ಅಲ್ಲಿದ್ದವರು ಯಾರೊ ಬೆಳಿಗ್ಗೆ 5ಗಂಟೆಗೆ ಈ ಸೆಲ್ ನಿಂದ ಹೊರಗಡೆ ಬಿಡುತ್ತಾರೆ ಎಂಬುವ ವದಂತಿ ಹಬ್ಬಿತ್ತು... ಸ್ವಲ್ಪ ಕತ್ತೆತ್ತಿ ನೋಡಿದರೆ ಸಾಕಷ್ಟು ಬೋಳು ಮಂಡೆಗಳು ಕಾಣಿಸುತಿತ್ತು..ಇದ್ಯಾವ ಪರಿಯ ಹುಚ್ಚು..ದೇವರ ದರ್ಶನಕ್ಕಾಗಿ ಇಷ್ಟೆಲ್ಲಾ ಪಡಿಪಾಟಲು ಪಟ್ಟು ದರ್ಶಿಸುವ ಅಗತ್ಯವಾದರೂ ಏನು...ಎಂದೆನ್ನುಕೊಳ್ಳುತ್ತಿದ್ದೆ..ಹಾಗೆ ಇದೇ ಪ್ರಶ್ನೆಯನ್ನು ನನ್ನ ಗೆಳೆಯರಿಗೆ ಕೇಳಿದೆ..ಅದಾಗಲೆ ವಿಕಾಸ್ ಇದ್ದ ಸ್ವಲ್ಪ ಜಾಗದಲ್ಲೆ ನಿದ್ದೆಗೆ ಜಾರಿದ್ದ...ರಾಜೇಶನು ಸಹ ಮಲಗಿದ್ದ...ನಾನು ಕೆಂಪ ಮತ್ತೆ ಮಂಜು ಕಾಲು ಚಾಚಲು ಸಹ ಜಾಗವಿಲ್ಲದೆ ಕುಳಿತಿದ್ದೆವು..ವಿಪರೀತ ನೋವಾಗುತಿತ್ತು... ಕಾಲು ಗಂಟೆಗೊಮ್ಮೆ ನಮ್ಮ ಕುಳಿತಿರುವ ಭಂಗಿಯನ್ನು ಬದಲಾಯಿಸಿಕೊಳ್ಳುತ್ತಿದ್ದೆವು.... ನಮ್ಮನ್ನು ನಾವೇ ನೋಡಿ , ನಮ್ಮ ಪರಿಸ್ಥಿತಿಗೆ ನಾವೇ ನಗಾಡಿಕೊಳ್ಳುತ್ತಿದ್ದೆವು...
ಮಂಜು ಕೇಳಿದವೆಂದೆನಿಸುತ್ತೆ.."ಎನೋ ಮಾಡೊದು ಬೆಳಿಗ್ಗೆ ವರೆಗೂ .." ಅದಕ್ಕೆ ನಾನು "ನೀನು ನನ್ನ ನೋಡಿ ನಗು, ನಾನು ನಿನ್ನ ನೋಡಿ ನಗ್ತೀನಿ.., ಅಷ್ಟ್ ಬಿಟ್ ಬೇರೆ ಎನು ಇಲ್ಲಿ ಮಾಡಕ್ ಆಗಲ್ಲ..." ಎಂದೆ... ಇನ್ನೇನು ತಾನೆ ಹೇಳಲು ಸಾಧ್ಯ..

ಹೀಗೆ ಅಲ್ಲಿ ಕುಳಿತಿದ್ದ ನನ್ನ ಗೆಳೆಯರಿಗೆ ಕೇಳಿದೆ.."ಯಾಕ್ ಮಗಾ..ಇಷ್ಟೊಂದ್ ಜನ ಇಷ್ಟೊಂದ್ ಕಷ್ಟ ಪಟ್ಟೆಲ್ಲಾ ಇಷ್ಟೊಂದು ಒದ್ದಾಡಿಕೊಂಡೆಲ್ಲ ದರ್ಶನ ಮಾಡಕ್ ಬರ್ತಾರೆ..??" ಅದಕ್ಕೆ ಮಂಜು "ಅದನ್ನೆ ಕಣೊ ಭಕ್ತಿ ಎನ್ನೋದು" ಎಂದ..
ನನಗೆ ಉರಿದು ಹೋಯಿತು... "ಲೋ ಪಿಂಡಾ ಭಕ್ತಿ... ಇಷ್ಟೆಲ್ಲ ಕಷ್ಟ ಪಟ್ಟು , ಸರಿಯಾಗಿ ಸ್ನಾನ ಊಟ ಇಲ್ಲದೆ, ಇಷ್ಟೆಲ್ಲ ದಣಿವಾಗಿ ದೇವರ ಮುಂದೆ ನಿಂತರೆ ಭಕ್ತಿ ಎಲ್ಲಿಂದ ಬರತ್ತೋ, ಎಲ್ಲ ಗುಂಪಲ್ಲಿ ಗೋವಿಂದ ಮಗಾ...ಜನರಿಗೆ ಹುಚ್ಚು..ತಾವು ಹರಕೆ ಹೊತ್ತು ಬಂದಿದ್ದನ್ನು ಈ ದೇವರಲ್ಲಿ ಬಿನ್ನವಿಸಿದರೆ...ಅದು ಜರುಗುತ್ತದೆಂದು..ಅಷ್ಟೆ... ಇನ್ನೇನಿಲ್ಲ".. ಎಂದು..

ಅದಕ್ಕೆ ಆತ "ಹೌದು...ನಾವೆಲ್ಲ ಆರ್ಥಿಕವಾಗಿ ಸಬಲರಾಗಿದ್ದರೂ ಮಾನಸಿಕವಾಗಿ ಜರ್ಜರಿತವಾಗಿಬಿಟ್ಟಿದೇವೆ." ಎಂದು ಏನೊ ಹೇಳಿದ..ಸುಮ್ಮನೆ ಗೋಣಲ್ಲಾಡಿಸಿದೆ...ರಾಜೇಶ ನಿದ್ದೆಗೆ ಜಾರಿದ್ದ... ಮಂಜು ಕುಳಿತಲ್ಲಿಯೆ ನಿದ್ದೆ ಮಾಡುತ್ತಿದ್ದ..ಕೆಂಪ ನಾನು ಮುಖ ಮುಖ ನೋಡಿಕೊಳ್ಳುತ್ತಿದೆವು... ಏನೇ ಆದರೊ ನಾನು ನಿದ್ದೆ ಮಾಡಬಾರದೆಂದು ನಿರ್ಧರಿಸಿದ್ದೆ... ನಿದ್ದೆ ಮಾಡಬೇಕಿದ್ದರೂ ಅಲ್ಲಿ ಸ್ಥಳವೇ ಇರಲಿಲ್ಲ..!!! ಸುಮ್ಮನೆ ಸುತ್ತಲೂ ಕತ್ತಾಡಿಸುತ್ತಿದ್ದೆ...
ಕಾಳಹಸ್ತಿಯಲ್ಲಿ queue ನಲ್ಲಿ ನಿಂತಿದ್ದು, ಬೆಟ್ಟ ಹತ್ತಿದುದರ ಪರಿಣಾಮ ಬಹಳವಾಗಿ ದಣಿವಾಗಿತ್ತು... ಕಣ್ಣೆಳೆಯುತಿತ್ತು.. ಒಂದಷ್ಟು ಮಧ್ಯ ವಯಸ್ಕ ಮಂದಿ ಅಲ್ಲಿ ಕೂತು ಹರಟುತ್ತಿದ್ದರು... ಜನರು ಶೌಚಕ್ಕೆ ಹೋಗಬೇಕಾದರೆ ಮಲಗಿರುವ ಮಂದಿಯನ್ನು ಸರಿಸಿ ಮಧ್ಯ ಮಧ್ಯ ಕಾಲಿಟ್ಟು ಸಾಗುತ್ತಿದ್ದರು... ನನಗೆ ಎಲ್ಲೋ ಒಂದು ಬಂದೀಖಾನೆಯಲ್ಲಿದ್ದೆವೆಂದೊ ಅನಿಸುತಿತ್ತು... ಒಮ್ಮೊಮ್ಮೆ ನಿರಾಶ್ರಿತರ ಶಿಬಿರದಲ್ಲಿದ್ದ ಭಾವ.. we were not at all comfortable ..



ಮನುಷ್ಯ ಒಂಟಿಯಾಗಿದ್ದಾಗ ಸಾಕಷ್ಟು ಭಾವಗಳು ಕಾಡುತ್ತವೆ...ಮೊಬೈಲಾದರು ಇದ್ದಿದ್ದರೆ message ಆದರೊ ಮಾಡುತ್ತಿದ್ದೆ.. ನಾವು ಒಂಟಿಯಾಗಿದ್ದಾಗ , ಏನೊಂದು ಮಾಡಲು ಸಾಧ್ಯವಿಲ್ಲದಿರುವಾಗ ನಮಗೆ ಹತ್ತಿರವಾದವರನ್ನು ನೆನೆದು ಪರಿತಪಿಸುತ್ತೇವೆ.. ಬಹಳ ಹೊತ್ತು ಒಂದೇ ಭಂಗಿ ಯಲ್ಲಿ ಕುಳಿತಿದ್ದ ಕಾರಣ ಕಾಲಿಗೆ ಬಹಳ ನೋವಾಗುತಿತ್ತು... ಅಷ್ಟರಲ್ಲಿ ಅಲ್ಲೊಂದು 3-4ವರ್ಷದ ಹುಡುಗಿ ಜೋರಾಗಿ ಅಳಲು ಶುರು ಮಾಡಿತು..ಅದೇಕೆ ಅಳಲು ಶುರು ಮಾಡಿತೊ ನನಗೆ ಅರಿಯದು...ಅದರ ಅಪ್ಪ ಅದನ್ನು ಸಂತೈಸುವ ಬದಲು ರಪರಪನೆ ನಾಲ್ಕು ಬಿಟ್ಟ..ನನಗೆ ಕಣ್ಣಲ್ಲಿ ನೀರು ತುಂಬಿ ಬಂದು ತಲೆ ತಿರುಗಿಸಿಬಿಟ್ಟೆ...ಏನೇನೊ ಭಾವಗಳು ಮನಸ್ಸಿನಲ್ಲಿ ಸುಳಿದಾಡುತಿತ್ತು... ಮಗವನ್ನು ಅಲ್ಲಿಂದ ಕರೆದುಕೊಂಡು ಬೇರೆಡೆಗೆ ಹೋದರು...



ಬೆಳಗಿನ ಜಾವ ಸರಿಯಾಗಿ ಐದಕ್ಕೆ ಧುತ್ತೆಂದು ಅಲ್ಲಿದ್ದ ಎರಡು TV ON ಆಯಿತು..ಅಲ್ಲಿದ್ದೆವರೆಲ್ಲ ಮೈದಡವಿಕೊಂದು ಎಳಲು ಶುರು ಮಾಡಿದರು...ಮಂಜು ಅತ್ಯಂತ ಸಂತಸದಿಂದ "TV ON ಮಾಡಿದ ಅರ್ಧ ಗಂಟೆಯಲ್ಲಿ ನಮ್ಮನ್ನು ಇಲ್ಲಿಂದ ಬಿಡುತ್ತಾರೋ..." ಎಂದ... ನಿಜವಿರಬಹುದೆಂದು ಕಾದೆವು.. ಉಹೂ ಗಂಟೆ ಏಳಾದರು cell open ಯಾವುದೆ ಸೂಚನೆಯೆ ಇರಲಿಲ್ಲ..ಎಲ್ಲರು ಮಂಜುವಿಗೆ ಬಯ್ಯುತ್ತಿದ್ದೆವು.... ಅಷ್ಟರಲ್ಲಿ.. ಎಲ್ಲರಿಗೂ ಹಾಲು ಕೊಡಲು ಶುರು ಮಾಡಿದರು..ಆಗ ಮತ್ತೆ ಮಂಜು..." ಒಹ್..ಹಾಲು ಕೊಡೋಕೆ ಶುರು ಮಾಡಿದ್ದಾರೆ..ಇನ್ನು ಕೇವಲ ಅರ್ಧ ಗಂಟೆ ಅಷ್ಟೆ ಬಿಟ್ಬಿಡ್ತಾರೆ.. sure ಮಗಾ.." ಎಂದ....

"ಲೈ...ಮಗನೆ ನೀನು ತೆಪ್ಪಗೆ ಸುಮ್ಮನಿದ್ಬಿದು.. ಅವಾಗ್ಲಿಂದ ಹೇಳಿದ್ದೆ ಹೇಳ್ತಾಇದ್ಯಾ.. ಧರ್ಮದರ್ಶನಕ್ಕೆ ಅಂತ ಬಂದಿದ್ದೀವಿ..ನಿನಗೆ ಇವಾಗ ನಮ್ಮಿಂದ ನಿಂಗೆ ಧರ್ಮದೇಟು ಬೀಳತ್ತೆ..ಸುಮ್ನಿದ್ಬಿದು.." ಎಂದು ಎಲ್ಲರೂ ಹೇಳಿದರು.. manju was over optimistic..ಯಾವಾಗ ಕೇಳಿದರೂ..ಸಹ ಇನ್ನು ಕೇವಲ ರ್ಧ ಗಂಟೆ ಯಷ್ಟೆ ಇಲ್ಲಿಂದ ಆಚೆ ಬಿಟ್ಟು ಬಿಡ್ತಾರೆ ಎಂದೆ ಹೇಳುತ್ತಿದ್ದ..ಅದಾವ ಧೈರ್ಯದ ಮೇಲೆ ಹೇಳುತ್ತಿದ್ದನೊ ನಮಗೆ ತಿಳಿಯುತ್ತಿರಲಿಲ್ಲ... ಸರಿಯಾಗಿ 12ಗಂಟೆಗೆ ನಮ್ಮನ್ನು ಅ ಸೆಲ್ ನಿಂದ ಹೊರಬಿಟ್ಟರು..ಸರಿಯಾಗಿ 10ಗಂಟೆಗಳ ಕಾಲ ಆ ಕೂಪದಲ್ಲಿ ಕಾಲಕಳೆದಿದ್ದೆವು.. ಅಲ್ಲಿಂದ ಬಿಟ್ಟೊಡನೆಯೆ ಜನರು ಮತ್ತೊಂದು queue ಸೇರಲು. ಹೋ ಎಂದು ಒಡುತ್ತಾರೆ... ವಿಪರೀತ ನೂಕುನುಗ್ಗಲಿತ್ತು... "ಏಡುಕೊಂಡಲವಾಡ ವೆಂಕಟರಮಣ ಗೋವಿಂದಾ ಗೋವಿಂದಾ" ಎಂಬ ಉದ್ಗಾರ ಭಕ್ತವರ್ಗದಿಂದ ಆಗಿಂದಾಗ್ಗೆ ಹೊರಹೊಮ್ಮುತಿತ್ತು.. ಅಲ್ಲಿಂದ ಮತ್ತೆ ಎರಡು ಗಂಟೆಗಳು queue ನಲ್ಲಿ ಸವೆಸಿ ಮುಖ್ಯದೇವಸ್ಥಾನದ ಅಂಗಳಕ್ಕೆ ಬಂದೆವು..ಅಲ್ಲಿಂದ ಎಲ್ಲರನ್ನೂ ಒಂದು ಮಾಡಿಬಿಡುತ್ತಾರೆ.. ಅಂದರೆ special entrance, VIP entrance ಎಲ್ಲರು ಒಂದೆ queue ನಲ್ಲಿ ಲೀನವಾಗಿಬಿಡುತ್ತರೆ..ಎಂದಿನಂತೆ ನೂಕುನುಗ್ಗಲು ಇತ್ತು..ಪೋಲೀಸರ ತಪಾಸಣೆ ಮುಗಿದು ಒಳಗೆ ಕಾಲಿಟ್ಟಾಗ ದೇವಸ್ಥಾನ ದ ಒಳಗೆಲ್ಲ ಚಿನ್ನದ ಕುಸುರಿಕೆಲಸ ಕಾಣಸಿತ್ತದೆ..ಎಲ್ಲೆಲ್ಲೂ ನ್ನದ plating,ಎಷ್ಟಾದರೂ ಭಾರತದ ಶ್ರೀಮಂತದೇವರಲ್ಲವೆ ತಿರುಪತಿ ತಿಮ್ಮಪ್ಪ...ಇಷ್ಟೆಲ್ಲ ಕಷ್ಟಪಟ್ಟು ಹೋದರೂ ಆ ತಿಮ್ಮಪ್ಪನ ದರುಶನವಾದ ಕೂಡಲೆ ಎಲ್ಲ ಉಪಶಮನವಾಗುತ್ತದೆ...ಎಂತದೋ ಒಂದು ಶಕ್ತಿ ಆ ಮೂರ್ತಿಯಲ್ಲಿದೆ ಎಂದು ನನಗನ್ನಿಸುತ್ತದೆ..ಬಹಳ ಸುಂದರವಾದ ಮೂರ್ತಿಯದು...ನೋಡಿದರೂ ಮತ್ತಷ್ಟು ನೋಡಬೇಕೆಂದಿನಿಸುತ್ತದೆ... ಆ ಮೂರ್ತಿಯ ದರುಶನ ಸಿಕ್ಕಿದ್ದು ಕೇವಲ 40seconds ಅಷ್ಟೆ.. ಅದೊಂದು ರೀತಿಯ ಚುಂಬಕ ಶಕ್ತಿ ಕೆಲಸ ಮಾಡುತ್ತದೆ ಎಂದು ನನ್ನ ಅಭಿಪ್ರಾಯ. ಅಷ್ಟಲ್ಲದೆ ಪ್ರಪಂಚದ ಮೂಲೆ ಮೂಲೆಯಿಂದ ಭಕ್ತರನ್ನು ಆಕರ್ಷಿಸುವುದಾದರೂ ಹೇಗೆ??? ಅಲ್ಲಿ ಸೆಲ್ ನಲ್ಲಿ ಕುಳಿತು ನಾವೆಲ್ಲ ಅಷ್ಟೆಲ್ಲ ಎಗರಾಡುತ್ತಿದ್ದರೂ ಮೂರ್ತಿಯ ದರುಶನವಾದ ಕೂಡಲೆ ಅದಾವ ಭಾವ ತುಂಬಿತೊ ಎನೋ..ದಿಗ್ಮೂಢರಾಗಿ "ದರುಶನ ಬಹಳ ಚೆನ್ನಾಗಾಯಿತು" ಎಂದು ನಮ್ಮಲ್ಲೆ ನಾವೆಂದು ಕೊಳ್ಳುತ್ತ ಹೊರ ಬಂದುಬಿಟ್ಟೆವು.. ಅಷ್ಟೆಲ್ಲ ತೊಂದರೆ ಪಡಿಪಾಟಲು ಪಟ್ಟಿದಕ್ಕೂ ಸಾರ್ಥಕವಾಯಿತೆನ್ನುವ ಭಾವ....!!!!

ದರುಶನ ಮುಗಿಸಿ.. ಪ್ರಪಂಚಲ್ಲೆ ಖ್ಯಾತಿವೆತ್ತ ತಿಮ್ಮಪ್ಪನ ಹುಂಡಿಯೆಡೆಗೆ ಹೋದೆವು..ಸಾಕಷ್ಟು ನೂಕು ನುಗ್ಗಲು ಇತ್ತು.. ಒಂದು ಪ್ರದಕ್ಷಿಣೆ ಹಾಕಿ ಒಂದಷ್ಟು ಹಣವನ್ನು ಹುಂಡಿಯಲ್ಲಿ ಹಾಕಿ..ಹೊರಬಂದೆವು...ಈ ಹುಂಡಿಗೆ ಕೆಲವರು ಲಕ್ಷಗಟ್ಟಲೆ ಹಾಕುತ್ತಾರೆ.ಕೆಲವರು ತಮ್ಮ ಚಿನ್ನಭರಣಗಳನ್ನೇ ಹಾಗೆ ಕಳಚಿ ಅದರೊಳಗೆ ಹಾಕಿಬಿಡುತ್ತಾರೆ...!!
ಇಲ್ಲಿ ಜನ ಏಕೆ ಇಷ್ಟೊಂದು ಹಣ ಹಾಕುತ್ತರೆ ಎನ್ನುವುದರ ಬಗ್ಗೆ ಒಂದು ಪ್ರತೀತಿ ಇದೆ..."ಶ್ರೀನಿವಾಸನು ಪದ್ಮಾವತಿ ಜೊತೆ ಪರಿಣಯಕ್ಕೆ ಕುಬೇರನ ಬಳಿ ಸಾಲ ಮಾಡಿದ್ದನಂತೆ.. ಆ ಮದುವೆಗೆ ಆದ ಖರ್ಚನ್ನು ತೀರಿಸಲು ಜನರು ಹುಂಡಿಗೆ ದುಡ್ಡು ಹಾಕುತ್ತಾರಂತೆ..ಅಂದು ಯಾವುದೂ ಕಾಲದಲ್ಲಿ ಮಾಡಿದ ಸಾಲ ಇಂದು ಸಹ ಇನ್ನೂ ತೀರಿಲ್ಲವಂತೆ". !!

ದರುಶನ ಮುಗಿಸಿ..ಲಾಡು ಪ್ರಸಾದವನ್ನು ಪಡೆದು.. ದೇವಸ್ಥಾನದ ಪ್ರಾಂಗಣದಿಂದ ಹೊರಬಂದೆವು... ಎಲ್ಲರಿಗೂ ಸಾಕಷ್ಟು ದಣಿವಾಗಿತ್ತು...ಹೊಟ್ಟೆ ಚುರಗುಡುತಿತ್ತು..ಸಮಯ ಆಗ ಭಾನುವಾರ ಮಧ್ಯಾಹ್ನ ಎರಡೂವರೆ ಇರಬಹುದು.. ಆದಷ್ಟು ಬೇಗ ಬಸ್ ಹಿಡಿದು ಬೆಂಗಳೂರು ತಲುಪುವ ಬಯಕೆ ಎಲ್ಲರನ್ನು ಆವರಿಸಿತ್ತು.. ಲಗುಬಗೆಯಿಂದ ಊಟ ಮುಗಿಸಿ.. ಅಲ್ಲೆ ಪುಣ್ಯಕ್ಕೆ ನಮಗೆ ತಿರುಮಲೆಯಲ್ಲಿ ಬೆಂಗಳೂರಿಗೆ ಬಸ್ ದೊರೆತುದ್ದರಿಂದ ಹತ್ತಿ ಕುಳಿತೆವು... ಸರಿಯಾಗಿ 5:30pm ಗೆ ಬಸ್ ತಿರುಮಲೆಯಿಂದ ಹೊರಟು ತಿರುಪತಿಗೆ ಬಂದಿಳಿಯಿತು. ಅಲ್ಲಿಂದ 7ಕ್ಕೆ ಹೊರಟು ಮಧ್ಯ ರಾತ್ರಿ 1ಕ್ಕೆ ಬೆಂಗಳೂರು ತಲುಪಿದೆವು...ಕ್ಷೇಮವಾಗಿ....
ಅಲಿಪಿರಿ

ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಅಷ್ಟೊತ್ತಿನಲ್ಲಿ ಮನೆ ಸೇರುವುದಕ್ಕೆ ವ್ಯವಸ್ಥೆಮಾಡಿಕೊಂಡಿದ್ದರು... ರಾಜೇಶನನ್ನು ಅವನ ಮನೆಗೆ ಬಿಟ್ಟು ನಾನು ಮನೆ ಸೇರಿದಾಗ ಸಮಯ ಮಧ್ಯರಾತ್ರಿ 2ಗಂಟೆ..ಸರಿಯಾಗಿ ಕನ್ನಡಿಯಲ್ಲಿ ಮುಖ ನೋಡಿಕೊಂಡು 10ಗಂಟೆಗಳ ಮೇಲಾಗಿತ್ತು... ತಲೆಯೆಲ್ಲಾ ಇನ್ನು ಅದೇ ಗುಂಗಿನಲ್ಲಿತ್ತು... ನಾವು ತಿರುಪತಿಗೆ ಹೋದದ್ದು ಕೇವಲ 2 ದಿವಸ..ಒಂದು 5 ದಿನಗಳಿಗೆ ಆಗುವಷ್ಟು ಅನುಭವಾಗಿತ್ತು.



ದಿಂಬಿಗೆ ತಲೆ ಇಟ್ಟವನು ಮತ್ತೆ ಎದ್ದದ್ದು ನನ್ನ ಮೊಬೈಲ್ ಸೋಮವಾರ ಮಧ್ಯಾಹ್ನ 1:10ಕ್ಕೆ ರಿಂಗುಣಿಸಿದಾಗ..ಅದು ಆಫೀಸಿನಿಂದ ಬಂದ ಕರೆಯಾಗಿತ್ತು..




ತಿರುಪತಿಗೆ ಹೋಗುವ ಮುನ್ನ ಸರಿಯಾಗಿ ಪ್ಲಾನ್ ಮಾಡಿ ಹೋಗಿ, ಬೆಂಗಳೂರಿನ ವಯಾಲಿಕಾವಲ್ ನಲ್ಲಿ "ಸುದರ್ಶನ" ಕ್ಕೆ ticket ದೊರೆಯುತ್ತದೆಯಂತೆ..ವಿಚಾರಿಸಿ ನೋಡಿ... ಪ್ಲಾನ್ ಮಾಡದೆ ಹೋದರೂ ಅದೃಷ್ಟ ನಿಮ್ಮೊಡನೆ ಇದ್ದರೆ ಎಲ್ಲವೂ ಸೂಸೂತ್ರವಾಗಿ ನಡೆದೀತು..ಇಲ್ಲವಾದರೆ ಗೋವಿಂದಾ ಗೋವಿಂದಾ...



9 comments:

Parisarapremi said...

ನಾನೇ ಭಾಗ್ಯವಂತ.. ನಾನೇ ಪುಣ್ಯವಂತ...

Sridhar Raju said...

:-( :-( :-(

samnvaya2 said...

iyyo nimma paadu yarigu barde idre sakappa saaku

Srinivasa Rajan (Aniruddha Bhattaraka) said...

lo! modle plan maadkobeku kaNo... adilde sumne goNagaaDidre enu sigalla... seriously, neevenadru modle plan maadkondbittidre sikkapatte enjoy maadtidde trip na.. nan personal experience idu...

and alli haage maadtare, heege maadtare anta naavu sulabhavaagi heLbidtivi. paapa.. alli actually eshtu rush ide anta imagine maadkondre yaaru enu maadakkagalla. paapa... timmappa dinakke 15 mins ashte malgodu.. gotta? the door will be closed only for 15 mins in a day, for rest.. :-)

anyways, oLLe experience-u.. jeevanadalli ella thara nu exp. maadbeku.. so irli bidu.. ella oLLedakke aagodu... ;-)

Sridhar Raju said...

[Srinivasa]: Howdhu naav plan maadbekittu...nam thappu idhe...TTD thappu kooda idhe ;-)..
arre yaar heLiddu naav enjoy maadilla antha?? ishtella oddadiddu memories maryakke aagodhe illa.....10hrs maatra kooothkond oddadiddu ashte..mikkiddella enjoyment -e... :-) sarvavyaapi sarvashaktha timmappanige 15 nimits niddeya avashyakathey ididya?? :-D

Srinivasa Rajan (Aniruddha Bhattaraka) said...

Aha! puNyaatma.... nin office ge hogi vaapas baro hottige sustaagi chatting gu kai koTTu oDhogtiya... innu jagattannella naDskond hogbekironige rest beDveno? thu ninna ;-)

actually avnige rest bekagiralla. adre naavu avnanna manushya anta bhaavistivalla. so aa preetiyindle naave malgsbidtivi ashte. naavu (manushyaru) maado pooje ella ide bhaavane inda taane.. beLigge ebsodu, karedu seat kottu koorsodu, snaana maadsodu, alankaara maadodu, oota-tindi-paaneeya kododu, malgsodu ella ide manushya sahaja preeti inda ashte.. aa preeti nu bhaktiya ondu roopa aagutte.. :-)

Sridhar Raju said...

[Srinivasa]: Naanu shreesaamanya kaNo..nanna compare maadbeda.. :-)
howdhu aa reetiya sevegaLu devra melina preetiye sari... :-)
bhakthi, seve ella pakkakittu yochane maadu.."idhella bhrame" ansallva?? devranna malgsodhu, tottilu thoogodhu, srinvasa kalyaaNa maadodhu ;-), ella devrige maadtidivi anno bhrame ansallva??? Topic ellollo hogtide..aadru uttara needuvavananthaagu vathsa :-)

Srikanth - ಶ್ರೀಕಾಂತ said...

ತಿಮ್ಮಪ್ಪನಿಗೆ ನಿನ್ನ ಮೇಲೆ ಬಹಳ ಕರುಣೆ ಬಂದಿರತ್ತೆ ಬಿಡು - ನಿನ್ನನ್ನೂ ಒಂದು 'ಮಿನಿ' ತಿಮ್ಮಪ್ಪ ಮಾಡ್ತಾನೆ

Sridhar Raju said...

"nini" timmappa ne??