ITC Infotech ಗೆ ವಿದಾಯ

Wednesday, October 29, 2008

ಈ ಲೇಖನವನ್ನ 24-ಶುಕ್ರವಾರ-2008 ರಂದೇ ಬರೆಯಬೇಕಿತ್ತು, ಕಾರಣಾಂತರಗಳಿಂದ ಆಗಲಿಲ್ಲ. ಅಂದಿನ ದಿನಾಂಕಕ್ಕೆ ಸಮೀಕರಿಸಿಕೊಳ್ಳಿ ;-)



ನನ್ನ ಜೀವನದ 22ವರುಷಗಳದ್ದು ಒಂದು ಪರ್ವವಾದರೆ ಇನ್ನೆರಡು ವರ್ಷ ಮತ್ತೊಂದು ಪರ್ವ. ಪರ್ವದಲ್ಲಿ ನನ್ನ ಮೊದಲ ಕಂಪೆನಿಯಾದ ITC Infotech ಗೆ ತನ್ನದೇ ಆದ ಸ್ಥಾನವಿದೆ. ಹಲವಾರು ಮೊದಲುಗಳಿಗೆ ಕಾರಣವಾಗಿದೆ. ಒಂದು ಕಂಪೆನಿಯಲ್ಲಿ ಹೇಗಿರಬೇಕು ಎಂಬುದರಿಂದ ಹಿಡಿದು ಜನರ ಜೊತೆ ಹೇಗಿರಬಾರದು ಎಂಬುದರವರೆಗೂ ಕಂಪೆನಿ ಕಲಿಸಿಕೊಟ್ಟಿದೆ. ಅನೇಕ ಕಟು ಸತ್ಯಗಳನ್ನು ಕಲಿಸಿದೆ, ಸಿಹಿ ಸಿಂಚನಗಳಿಗೇನೂ ಕಮ್ಮಿಯಿಲ್ಲ. ಹೌದು ಇಂದು ಕಂಪೆನಿಯಿಂದ ಬೇರ್ಪಡುತ್ತಿದ್ದೇನೆ ಇನ್ನೊಂದು ಕಡೆಗೆ...Change is the only constant thing in Life...Hmmm

ಎಂಜಿನಿಯರಿಂಗ್ ವಿದ್ಯಾರ್ಥಿ ಜೀವನದ ಮುಂದುವರಿದ ಭಾಗದಂತೇ ಇತ್ತು ITC Infotech ನಲ್ಲಿ ನನ್ನ ದಿನಗಳು. ನನ್ನ ಜೊತೆ ಸೇರಿದವರೆಲ್ಲರನ್ನು ನಾನು ಗೆಳೆಯರೆಂದೇ ಹೇಳಲಿಚ್ಚಿಸುತ್ತೇನೆ, ಯಾರೊಬ್ಬರನ್ನು ಕಲೀಗ್ಸ್ ಎಂದು ಸಂಭೋದಿಸಲು ಇಂದಿಗೂ ಮುಜುಗರವಾಗುತ್ತದೆ. ಎರಡು ವರ್ಷಗಳು ಆಟ ಆಡಿಕೊಂಡೇ ಕಳೆದುಬಿಟ್ಟೆ. ಕೆಲಸ ಮಾಡುತ್ತಿದ್ದೇನೆ ಎಂದೆನಿಸುತ್ತಿರಲಿಲ್ಲ, ಕಾಲೇಜಿಗೇ ಹೋಗಿ ಬರುವಂತಿತ್ತು ದಿನವೂ. ಇಂದಿಗೆ ನನ್ನ ಎಲ್ಲ ಆಟಗಳಿಗೆ, ಆರಾಮದಾಯಕ Professional ಜೀವನಕ್ಕೆ ತೆರೆ ಬಿದ್ದಿದೆ. ನಾನು ಈಗ ಹೋಗುತ್ತಿರುವ ಕಡೆ ಹೇಗಿರುತ್ತದೋ ಏನೋ??

ಕಳೆದ ವಾರವೇ ನನ್ನ ಕಟ್ಟ ಕಡೆಯ ರಾತ್ರಿ ಪಾಳಿಯನ್ನು ಇಡೀ ರಾತ್ರಿ ತೂಕಡಿಸದೆ ವಿಜೃಂಭಣೆಯಿಂದ ನಾನೊಬ್ಬನೇ ಆಚರಿಸಿದ್ದೆ. ಅಲ್ಲೆಲ್ಲಾ ನಾನೊಬ್ಬನೇ ತಿರುಗಾಡುತ್ತಾ ಚಿತ್ರಗಳನ್ನು ಕ್ಲಿಕ್ಕಿಸುತ್ತಿದ್ದೆ. ಮತ್ತೆ ಹೀಗೆ ರಾತ್ರಿಯೆಲ್ಲಾ ಕೆಲಸ ಮಾಡುವ ಕರ್ಮವಿರುವುದಿಲ್ಲವೆಂಬ ಸಂತೋಷ ಒಂದು ಕಡೆಯಾಗಿದ್ದರೆ ಇಂದಿಗೆ ಮತ್ತೆ ಇವೆಲ್ಲವನ್ನು ಮಿಸ್ ಮಾಡಿಕೊಳ್ಳುತ್ತೇನೆಂಬ ದುಗುಡ ಇನ್ನೊಂದು ಕಡೆ. ರಾತ್ರಿ ಪಾಳಿಯಲ್ಲಿ ಇಡೀ ರಾತ್ರಿ ಇರುತ್ತಿದ್ದದ್ದೆ ಹಾಗೆ, ಕೆಲಸವಿದ್ದರೆ ಯಾವುದೇ ತಾಪತ್ರಯವಿರುತ್ತಿರಲಿಲ್ಲ, ಹೇಗೋ ಎಚ್ಚರವಾಗಿದ್ದು ಕೆಲಸ ಮಾಡುವುದರಲ್ಲಿ ಮಗ್ನರಾಗಿ ಸಮಯ ಕಳೆಯುತ್ತಿದ್ದೆವು, ಕೆಲಸ ಇರದಿದ್ದರೆ 2 ಗಂಟೆಯೊಳಗಾಗಿ ನಿದಿರಾದೇವಿ ಆವರಿಸಿಕೊಳ್ಳುತ್ತಿದ್ದಳು, ತನ್ನ ಕಬಂದ ಬಾಹುಗಳನ್ನು ಚಾಚಿ ಬರಸೆಳೆದು ನಿದಿರೆಗೆ ಜಾರಲು ಪ್ರೇರೇಪಿಸುತ್ತಿದ್ದಳು, ಅದರ ಪರಿಣಾಮ ಅಲ್ಲೇ ತೂಕಡಿಸಿ ಹಾಗೆ ಒರಗಿಕೊಂಡು ನಿದಿರೆಗೆ ಜಾರಿಬಿಡುತ್ತಿದ್ದೆ. ರಾತ್ರಿ ಪಾಳಿಯ ಇನ್ನೊಂದು ಸೊಗಸೆಂದರೆ ಕೆಲಸ ಮಾಡುತ್ತ ಹಾಡುಗಳು ಕೇಳುತ್ತಾ, ಕಾಪಿ ಹೀರುತ್ತ ಆರಮಾಗಿ ಇರಬಹುದಾಗಿತ್ತು , ಯಾರೊಬ್ಬರು ಕೇಳಲು ಇರುತ್ತಿರಲಿಲ್ಲ. ನಮ್ಮ ಕೆಲಸಗಳು ಸಾವಧಾನವಾಗಿ ಮಾಡಿಕೊಳ್ಳಬಹುದಾಗಿತ್ತು, ಹೊಸ ವಿಷಯಗಳ ಕಲಿಕೆಗೂ ಬಹಳ ಪೂರಕವಾಗಿತ್ತು. ಆದರೆ ಅದರಿಂದ ಆರೋಗ್ಯ ಹದಗೆಡುತ್ತಿತ್ತು. ನಾಲ್ಕು ತಿಂಗಳ ಹಿಂದೆ ಇನ್ನು ಮುಂದೆ ರಾತ್ರಿ ಪಾಳಿಗೆ ಬರಲಾಗುವುದಿಲ್ಲವೆಂದು ನನ್ನ ಮ್ಯಾನೇಜರಿಗೆ ಖಡಾಖಂಡಿತವಾಗಿ ಹೇಳಿಬಿಟ್ಟೆ. ಅವೆಲ್ಲಾ ಮುಗಿದ ಮೇಲೆ ಬೇರೆ ಕಂಪೆನಿಯಲ್ಲಿ ಕೆಲಸ ದೊರೆತು ನನ್ನ ರಾಜೀನಾಮೆಯನ್ನು ನೀಡಿದ ಬಳಿಕ ಮ್ಯಾನೇಜರಿನ ಕೋರಿಕೆಯ ಮೇರೆಗೆ ಮತ್ತೆ ಒಂದು ವಾರ ರಾತ್ರಿ ಪಾಳಿಗೆ ಒಪ್ಪಿಕೊಂಡೆ. ಅದನ್ನು ಕಳೆದ ಶುಕ್ರವಾರ(17-Friday-2008) ಮುಗಿಸಿದೆ.

ಕಡೆಯ ವಾರ ಕಂಪೆನಿಯಿಂದ ಹೊರನಡೆಯಲು ಇದ್ದ ಬದ್ದ ಎಲ್ಲ ನಿಯಮಾವಳಿಗಳನ್ನು ಮುಗಿಸುವುದರಲ್ಲಿ ಒಡಾಡುತ್ತಿದ್ದೆ. ಪ್ರತಿಯೊಂದು ವಿಭಾಗದಲ್ಲೂ ಅವರ ಸಹಿ ಹಾಕಿ, ಕ್ಲಿಯರೆನ್ಸ್ ಪತ್ರ ಕೊಡುತ್ತಿದ್ದ ಹಾಗೆ ಇಂಚಿಂಚಾಗಿ ಕಂಪೆನಿಯಿಂದ ಬೇರ್ಪಡುತ್ತಿದ್ದ ಭಾವ ಸುಳಿಯುತ್ತಿತ್ತು. ಮತ್ತೆ ವಾಪಸು ಸೇರಿಬಿಡೋಣವೇ ಎಂದಂತಲೂ ಅನಿಸುತ್ತಿತ್ತು, ನಿರ್ಧಾರ ಬಿಗಿ ಮಾಡಿ ಮುಂದಿನ ವಿಭಾಗದೆಡೆಗೆ ನಡೆದೆ.


ಎಲ್ಲಾ ವಿಭಾಗಗಳಿಂದಲೂ ಕ್ಲಿಯರೆನ್ಸ್ ಪತ್ರ ಪಡೆದು ಕಂಪೆನಿಗೆ ಪಾವತಿಸಬೇಕಾದ ಹಣ ಪಾವತಿಸಿ ಸಂಜೆ ಐದರ ಹೊತ್ತಿಗೆ ಕಂಪೆನಿಯ ರಿಲೀವಿಂಗ್(ಕನ್ನಡ ಪದ ತಿಳಿಯಲಿಲ್ಲ) ಪತ್ರ ಇಸಿದುಕೊಂಡೆ. ನನ್ನ ಕಂಪೆನಿ ಗೆಳೆಯರು ಏರ್ಪಡಿಸಿದ್ದ ವಿದಾಯ ಸಮಾರಂಭದಲ್ಲಿ ಎರಡು ಮಾತನಾಡಿ ಎಲ್ಲರ ಕೈಕುಲುಕಿ ಎಲ್ಲಾ ಮುಗಿದ ಮೇಲೆ ಅಲ್ಲೇ ಮೂಲೆಯಲ್ಲಿ ಒಂದೆಡೆ ಕುಳಿತೆ. ಸಂಜೆ ಗೆಳೆಯರಿಗೆ Farewell ಪಾರ್ಟಿ ಕೊಡಿಸಿ ಮತ್ತೆ ಆಫೀಸಿಗೆ ಹಿಂದಿರುಗಿದಾಗ ಗಂಟೆ ಹತ್ತಾಗಿತ್ತು. ಲೀಟರುಗಟ್ಟಲೆ ಕಾಫಿ ಎರಕ ಹೊಯ್ದಿದ್ದ ಕಾಫಿ ಮೆಶೀನಿನ ಎರಡು ಫೋಟೋ ಕ್ಲಿಕ್ಕಿಸಿ ಮತ್ತೊಂದು ಕಪ್ ಕಾಫಿ ಕುಡಿದು ಜಡಿ ಮಳೆಯಲ್ಲೇ ಮನೆಗೆ ಹಿಂದಿರುಗಿ ಬಂದೆ.

ಪದಗಳಿಗೆ ನಿಲುಕದ ಅನೇಕ ಭಾವಗಳಿಗೆ ನನ್ನ ಮೊದಲ ಕಂಪೆನಿ ಸಾಕ್ಷಿಯಾಗಿದೆ, ಎರಡು ವರ್ಷಗಳು ಕಳೆದದ್ದೇ ಗೊತ್ತಾಗಲಿಲ್ಲ. ಅನೇಕ ಗೆಳೆಯರನ್ನು ಮಿಸ್ ಮಾಡಿಕೊಳ್ಳಲಿದ್ದೇನೆ. ಹೊಸ ಪ್ರಪಂಚಕ್ಕೆ ಕಾಲಿಡಲಿದ್ದೇನೆ ಸೋಮವಾರದಿಂದ. Wish me all the best.

ಕಡೆಯ ದಿನಗಳಲ್ಲಿ ಕಂಪೆನಿಯಲ್ಲಿ ತೆಗೆದ ಫೋಟೋಗಳನ್ನು ಬಿಡುವು ಮಾಡಿಕೊಂಡು ನೋಡಿಬಿಡಿ.