ಉಪ್ಪಿಗಿಂತ ರುಚಿ ಬೇರೆ ಇಲ್ಲ.......

Monday, November 26, 2007


ಈ ಹಾಡನ್ನ ಎಲ್ಲರೂ!!!! ಕೇಳಿರಬಹುದು..ಅದರ ಮುಂದಿನ ಸಾಲುಗಳು ಹೀಗಿವೆ...."ಉಪ್ಪಿಗಿಂತ ರುಚಿ ಬೇರೆ ಇಲ್ಲ...ಒಪ್ಪಿಕೊಂಡೋರು ದಡ್ಡರಲ್ಲ...".....dha dha dha...dha...

ನನ್ನೆಡೆಗೆ ಹಲವಾರು ಟೀಕೆಗಳಿವೆ..ನಾನು ಉಪೇಂದ್ರನ ಅಭಿಮಾನಿ ಎಂದು...."ಥೂ ನಿನ್ನ..ಯಾವನೋ ನೀನು..ಹೋಗಿ ಹೋಗಿ ಉಪೇಂದ್ರನ ಅಭಿಮಾನಿ ಅಂತೀಯಲ್ಲ...ನಾಚಿಕೆ ಆಗಲ್ಲ್ವ..." ಹಲವಾರು ಮಂದಿ ಹಲವಾರು ರೀತಿ ಬೈದಿದ್ದಾರೆ, ಆಡಿಕೊಂಡಿದ್ದಾರೆ..ಆದರೆ ಅಷ್ಟೆಲ್ಲ ಮಾಡಿದರೂ ನನಗೆ ಆತನ ಬಗ್ಗೆ ಕಿಂಚಿತ್ತೂ ಅಭಿಮಾನ ಕಮ್ಮಿ ಆಗಿಲ್ಲ ಎಂದು ಹೇಳಲು ನನ್ನವರಿಗೆ ನನ್ನ ಉಪೇಂದ್ರನ ವಿರೋಧಿಗಳಿಗೆ ಸ್ಪಷ್ಟಪಡಿಸಲು ಇಚ್ಚಿಸುತ್ತೇನೆ..."Uppi simply rocks" :-)

ಉಪೇಂದ್ರನ ಹೆಸರು ಹೇಳಿದರೆ ಹಲವಾರು ಮಂದಿ ಮೂಗು ಮುರಿಯುವವರು ಇದ್ದಾರೆ..ಮುರಿಯಲಿ ಅವರ ಮೂಗುಗಳೇ ತಾನೆ...ನನಗೇನು??... ನನಗೆ ಆತನನ್ನು ಅಭಿಮಾನಿಸಲು ಸ್ಪಷ್ಟವಾಗಿ ಕಾರಣಗಳು ಹೇಳಲಾರೆ...ಉಪೇಂದ್ರನ ಚಿತ್ರಗಳು ಇತರ ಹೀರೋ ಚಿತ್ರಗಳಿಗಿಂತ ಚೆನ್ನಾಗಿ ಓಡಬೇಕೆಂಬ ಹಂಬಲ ನನ್ನಲ್ಲಿ ಸದಾ ಇರತ್ತದೆ...ಹಾಗೆ ಆದರೆ ಬಹಳ ಸಂತೋಷವಾಗುತ್ತದೆ.... ನಿಜಕ್ಕೂ ಆತ ರಿಯಲ್ ಸ್ಟಾರ್... ಉಪೇಂದ್ರನ ಸಾಧನೆಗಳ ಬಗ್ಗೆ ನನಗೆ ತಿಳಿದಿರುವ ಮತ್ತಿಗೆ ಒಂದು ಸಣ್ಣ ಕಿರುಪರಿಚಯ...


ಯಾವುದೇ God Father ಗಳ ನೆರವಿಲ್ಲದೆಯೆ ಮೇಲೆ ಬೆಳೆದು ಬಂದಾತ...ಆರಂಭದ ದಿನಗಳಲ್ಲಿ ಕಾಶಿನಾಥ್ ಸಾಥ್ ನೀಡಿದ್ದರು ಅಷ್ಟೆ...ಆತನ ಪ್ರತಿಭೆಗೆ ಮನ್ನಣೆ ಸಿಕ್ಕಿದ್ದು ಹಲವಾರು ವರ್ಷಗಳು ಕಾಲು ಸವೆಸಿದ ನಂತರ...

ಭಾರತ ಚಿತ್ರರಂಗ ಕಂಡ, ವಿಭಿನ್ನವಾಗಿ ಆಲೋಚಿಸುವ ಅತ್ಯಂತ ಕಿರಿಯ ನಿರ್ದೇಶಕ...ಆತನ ಕಿರಿತನ ಕೇವಲ ವಯಸ್ಸಿಗಷ್ಟೆ ಸೀಮಿತ....ಆದರೂ ಈ ವಿಷಯ ಇಲ್ಲಿ ಉಲ್ಲೇಖಾರ್ಹ...

ಇಂದು ಕನ್ನಡ ಚಿತ್ರರಂಗದಲ್ಲಿ ಬಂದಂತಹ ಅಷ್ಟೂ ರೌಡಿ ಚಿತ್ರಗಳಿಗೆ ನಾಂದಿ ಹಾಡಿದ್ದು ಇದೇ ಉಪೇಂದ್ರನ "ಓಂ" ಚಿತ್ರ...ಅದರ ಬಗ್ಗೆ ಎಷ್ಟೆ controversy ಗಳಿರಬಹುದು ..ಆದರೆ ಅದು trend setting cinema ಅಂತೂ ಹೌದು...
ಉಪೇಂದ್ರ ಒಬ್ಬ trend setter -e ಸರಿ..

ಉಪೇಂದ್ರ ಚಿತ್ರ ನಿರ್ಮಿಸುತ್ತಿದ್ದ ರೀತಿಗಳಲ್ಲಿ ಹಲವಾರು ಪ್ರಯೋಗಗಳನ್ನು ಮಾಡುತ್ತಿದ್ದ..ಅದರಿಂದ ಕನ್ನಡ ಚಿತ್ರಕ್ಕೆ ಮನ್ನಣೆ ಸಿಕ್ಕಿದೆ ಎಂಬುದು ಒಪ್ಪಿಕೊಳ್ಳಬೇಕಾದ ವಿಷಯ..ಚಿತ್ರದ ಹೆಸರಿನಿಂದ ಹಿಡಿದು ಚಿತ್ರದ ಅಂತ್ಯದವರೆಗೂ...ಹಾಗೆ ಚಿತ್ರದ ಪ್ರಚಾರದ ವಿಷಯಗಳಲ್ಲಿ ಕೂಡ...ಅದನ್ನ ತೆರೆಯ ಮೇಲೆ ತೋರಿಸುವ ಯತ್ನದಲ್ಲೂ ಸಹ....

ಇಂದೂ ಎಲ್ಲ ಚಿಳ್ಳೆ ಪಿಳ್ಳೆಗಳು ಬಾಯಿ ತೆರೆದರೆ ತಮ್ಮ ಚಿತ್ರ ವಿಭಿನ್ನವಾಗಿದೆ ಎಂದೇ ಬಡಿದುಕೊಳ್ಳುತ್ತಾರೆ...ಅದೇನೊ ವಿಭಿನ್ನತೆಯೋ ಭಗವಂತನಿಗೇ ಗೊತ್ತು..!!!

ಇಂದು ಕನ್ನಡ ಚಿತ್ರರಂಗದ ಗಮನೀಯ ವ್ಯಕ್ತಿಗಳ ಪಟ್ಟಿಗೆ ಸೇರಿರುವ ಗುರುಕಿರಣ್,ಸಾಧುಕೋಕಿಲ, ವಿ.ಮನೋಹರ್, ಕವಿರಾಜ್, ಎಲ್ಲರೂ ಉಪೇಂದ್ರನ ನೆರಳಿನಲ್ಲಿ ಬೆಳೆದವರು..ಒಟ್ಟೊಟ್ಟಿಗೆ ಮೇಲೆ ಬಂದವರು....


ಉಪೇಂದ್ರನಲ್ಲಿ ಮೆಚ್ಚಬೇಕಾದ ಅಂಶವೆಂದರೆ ಕಲಾವಿದರಲ್ಲಿ, ತಂತ್ರಜ್ಞಾನ ಕಲೆಯನ್ನು ಹುಡುಕಿ ಕೆದಕಿ ಹೊರತರುವ ಗುಣ....ಅವನ ಬಳಿ ಬೆಳೆದ ಮಂದಿ ಸಾಕಷ್ಟಿದ್ದಾರೆ...ಇನ್ನು ಬೆಳೆಯುತ್ತಲೇ ಇದ್ದಾರೆ...ಇಷ್ಟೆಲ್ಲ ಮಾಡಿರುವ ಉಪೇಂದ್ರನ ವಯಸ್ಸು ಕೇವಲ 35ರ ಆಸುಪಾಸು...ಅಚ್ಚರಿಯಾಗುವುದಿಲ್ಲವೇ??... :-)

ನಾನು ಇಷ್ಟನ್ನು ಹೇಳುತ್ತಿರುವುದು ಆತನ ನಿರ್ದೇಶಿಸಿ-ನಟಿಸಿರುವ ಚಿತ್ರಗಳ ಬಗ್ಗೆ..ಆತ ಬರೆದಿರುವ ಕಥೆ, ಸಂಭಾಷಣೆಗಳ ಇರುವ ಚಿತ್ರಗಳ ಬಗ್ಗೆ...ಮಿಕ್ಕ ಚಿತ್ರಗಳ ಬಗ್ಗೆ ನನ್ನ ಕಡೆಯಿಂದ "No Comments......"

ಆತನ ಚಿತ್ರಗಳಿಗೆ ಆರಂಭದ ದಿನಗಳಲ್ಲಿ ಬಂದು ವಿರೋಧ, ತಿರಸ್ಕಾರ ಬೇರಾವ ನಟನಿಗೆ ಬಂದದ್ದೇ ಆಗಿದ್ದಲ್ಲಿ ಆತನ ಸದ್ದಡಗಿ ಹೋಗುತ್ತಿತ್ತು...ಉಪೇಂದ್ರ ಜನರ ಸದ್ದಡಿಗಿಸಿದ!!...ಎಲ್ಲ ನಿರ್ದೇಶಕರ, ನಿರ್ಮಾಪಕರು ಒಪ್ಪಿ ಕೊಳ್ಳುವಂತೆ ಮಾಡಿದ..

ಉಪೇಂದ್ರನ ಚಿತ್ರಗಳ ಬಗ್ಗೆ ಒಂದು ಅಪವಾದವಿದೆ...ಆತನ ಸಂಭಾಷಣೆ vulgar, ಅಸಭ್ಯವಾಗಿರುತ್ತದೆಂದೂ...ಹೇಳುವುದನ್ನು ಮರ್ಮಕ್ಕೆ ತಾಗುವಂತಹ ಸಂಭಾಷಣೆ ಸ್ವಲ್ಪ ಢಾಳಗಿ ಕಾಣುತ್ತದೆ...ನನ್ನಂತಹ ಹುಡುಗರಿಗೆ ಇಷ್ಟವಾಗುತ್ತದೆ :-)...vulgar ನಲ್ಲೂ ವಿಧಗಳಿವೆ....ಅದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿಲ್ಲ......ತೀರ ಅಸಹ್ಯಕರವಂತೂ ಇರುವುದಿಲ್ಲ. ... ಮಡಿವಂತರಿಗೆ ಇಷ್ಟವಾಗದಿರಬಹುದು... ಹಾಗೆಂದ ಮಾತ್ರಕ್ಕೆ "ಸಂಸ್ಕೃತ" ;-) ಪದ ಬಳಕೆ ಮಾಡುವರ ಚಿತ್ರಗಳ ಬಗ್ಗೆ ಅಸಡ್ಡೆಯಿಂದಿರಬೇಕಿಲ್ಲ..ಜನ ಶ್ರೀಸಾಮಾನ್ಯರು ಮಾತಾಡುವ ಭಾಷೆಯ ಬಳಕೆ ಆಗಿರುತ್ತದೆ ಉಪೇಂದ್ರನ ಚಿತ್ರಗಳಲ್ಲಿ...ಅಸಭ್ಯತೆಯಂತೂ ಅಲ್ಲ...ಅದರಿಂದ ಸಮಾಜಕ್ಕೆ ಯಾವ ಹಾನಿಯೂ ಇಲ್ಲ...

ನಾನು ಉಪೇಂದ್ರನ ವಿಪರೀತ ಅಭಿಮಾನಿಯೇನು ಅಲ್ಲ, ಆತನ ಚಿತ್ರ ಬಿಡುಗಡೆಯಾದರೆ ಮೊದಲ show ನಲ್ಲೇ ನೋಡಬೇಕೆಂಬ ಹಂಬಲವೂ ನನ್ನಲ್ಲಿ ಎಂದೂ ಬಂದಿಲ್ಲ, ಅಕಸ್ಮಾತ್ ಎರಡು ಅಕ್ಕ-ಪಕ್ಕ ಇರುವ ಚಿತ್ರಮಂದಿರಗಳ ಎದುರುಗಡೆ ನಿಂತಾಗ, ಒಂದರಲ್ಲಿ ಉಪೇಂದ್ರನ ಚಿತ್ರ ಮತ್ತೊಂದರಲ್ಲಿ ಬೇರೊಬ್ಬ ನಟನ ಚಿತ್ರವಿದ್ದಲ್ಲಿ, ಖಂಡಿತವಾಗಿ ಉಪೇಂದ್ರನ ಚಿತ್ರಕ್ಕೆ ಹೋಗುವೆ... :-) :-)

ಉಪೇಂದ್ರ ಆದಷ್ಟೂ ಬೇಗ ಚಿತ್ರಗಳನ್ನು ನಿರ್ದೇಶಿಸುವಂತಾಗಲಿ...ಮತ್ತಷ್ಟು ಒಳ್ಳೆಯ ಚಿತ್ರಗಳು ಹೊರಹೊಮ್ಮಲಿ...ಇದೇ ನನ್ನ ಅಭಿಲಾಷೆ..

ವಿ.ಸೂ : ಉಪೇಂದ್ರನ ಬಗ್ಗೆ ಉಪೇಂದ್ರನ ಚಿತ್ರಗಳ ಬಗ್ಗೆ ವಿರೋಧವಿದ್ದಲ್ಲಿ ಅದನ್ನ ಈ ಬ್ಲಾಗಿನ comments ನ ಮುಖಾಂತರ ತೀರಿಸಿಕೊಳ್ಳಬೇಡಿ ಎಂದು ಹೇಳಲು ಇಚ್ಚಿಸುತ್ತೇನೆ.. ನನ್ನ ಲೇಖನದ ವೈಖರಿಯ ;-) ಬಗೆಗಿನ comments ಎಂದೆಂದಿಗೂ ಸ್ವಾಗತಾರ್ಹ...


ವೈರುಧ್ಯ - ವೈವಿಧ್ಯ

Sunday, November 18, 2007


ಜೀವನ ಯಾರಿಗೆ ತಾನೆ ವೈವಿಧ್ಯ ಪೂರ್ಣವಾಗಿ ಇರಬೇಕೆಂದು ಅನ್ನಿಸುವುದಿಲ್ಲ..ದಿನವೂ ಮಾಡಿದ್ದನ್ನೇ ಮಾಡುತ್ತಿದ್ದರೆ ಬೋರ್ ಆಗುತ್ತದೆ...ನನಗೆ ವೈವಿಧ್ಯತೆಯು ಬೇಕು ವೈರುಧ್ಯವೂ ಬೇಕು...ನನ್ನ ಒಂದು ಸಣ್ಣ ಪಟ್ಟಿ..ಹಾಗೆ ಒಮ್ಮೆ ಕಣ್ಣಾಡಿಸಿಬಿಡಿ..ವೈವಿಧ್ಯತೆ - ವೈರುಧ್ಯತೆ ಇದ್ದರೆ ಜೀವನ ಮಜವಾಗಿರುತ್ತದೆ ಎಂಬುದು ಖಚಿತ...

1) ಒಂದು ದಿನ ಕಲಾಸಿಪಾಳ್ಯದಲ್ಲಿ ಕೂಲಿ ಕೆಲಸ ಮಾಡಬೇಕು....ತಳ್ಳು ಗಾಡಿಯಲ್ಲಿ ಮೂಟೆಗಳನ್ನು ಹಾಕಿಕೊಂಡು ಆ ಜನಭರಿತ ಗಲ್ಲಿಗಳಲ್ಲಿ ಆ ಗಾಡಿಯನ್ನು ಎಳೆದಾಡುತ್ತಿರಬೇಕು....ದಿನದ ಕೂಲಿ ತೆಗೆದು ಕೊಂಡು ರಾತ್ರಿ ಹೊತ್ತಿಗೆ ಅಲ್ಲೆ ಸಿಕ್ಕಿದ್ದನ್ನು ತಿಂದು ಲೈಟಾಗಿ ಸಾರಾಯಿ ಕುಡಿದು ಅಲ್ಲೆ fly over ಕೆಳಗೆ ಮಲಗಬೇಕು...

ಅದರ ಮರುದಿನವೇ ಲೀಲಾ - ಪ್ಯಾಲೇಸಿನಲ್ಲಿ ಬೆಳಗಿನ ಕಾಫಿ ಕುಡಿದು swimming pool ಪಕ್ಕ ಅಂಗಾತ ಮಲಗಿರಬೇಕು...ನನ್ನ ದಿನವೆಲ್ಲ ಲೀಲಾ - ಪ್ಯಾಲೆಸಿನಲ್ಲಿ ವಿಧ ವಿಧವಾದ just chill ಆಗುವಂತಹ ಕೆಲಸಗಳಲ್ಲಿ ತೊಡಗಿಕೊಂಡಿರಬೇಕು.

2)ಒಂದು ಇಳಿಸಂಜೆಯ ಹೊತ್ತಿನಲ್ಲಿ ಲಾಲ್ ಬಾಗ್ ಕೆರೆದಂಡೆಯಲ್ಲಿ ನನ್ನವಳೊಂದಿಗೆ ;-) "ಚೀ ಕಳ್ಳ...ಎಂದು ಕೆನ್ನೆ ಗಿಲ್ಲಿಸಿಕೊಳ್ಳಬೇಕು..." ಅದರ ಮರುದಿನವೇ ಅದೇ ಕೆರೆದಂಡೆಯಲ್ಲಿ ಅದೇ ನನ್ನವಳೊಂದಿಗೆ "ಚೀ ಕಳ್ ನನ್ ಮಗನೆ...ಎಂದು ಆಕೆಯಿಂದ ಕಪಾಳಮೋಕ್ಷ ಆಗಬೇಕು.."

3) ಒಂದು ದಿನ ಇಪ್ಪತ್ತನಾಲ್ಕು ಗಂಟೆಗಳೂ ಪ್ರಪಂಚದ ಅರಿವಿಲ್ಲದೇ ನನಗಿಷ್ಟವಾದ ಕೆಲಸಗಳಲ್ಲಿ ತೊಡಗಿಕೊಳ್ಳಬೇಕು.... ಹಾಗೆ ಇಪ್ಪತ್ತನಾಲ್ಕು ಗಂಟೆಗಳೂ ಮೈಮೇಲೆ ಅರಿವಿಲ್ಲದೆಯೇ ನಿದ್ರಾಲೋಲ ನಾಗಬೇಕು..ಕುಂಬಕರ್ಣನ ಅಪರಾವತಾರ ನಾಗಬೇಕು...

4)ನನ್ನ ಜನರಿಂದ, ಇತರರಿಂದ ಹಾಡಿ ಹೊಗಳಿಸಿಕೊಳ್ಳಬೇಕು.....ಮತ್ತೊಂದು ದಿನ ಅದೇ ಜನಗಳ ಬಳಿ ಮೂರು ಜನ್ಮಕ್ಕಾಗುವಷ್ಟು ಕುಳಿತು ಉಗಿಸಿಕೊಳ್ಳಬೇಕು...ವಾಚಮಗೋಚರವಾಗಿ..

5)ಬೈಕನ್ನೇರಿ ಕರಾವಳಿಯ ಉದ್ದಕ್ಕೂ ಓಡಿಸಿಕೊಂಡು ಹೋಗಬೇಕು...ಗೊತ್ತು ಗುರಿಯಿಲ್ಲದೆಯೇ..ದಿನಗಳ ಪರಿವಿಲ್ಲದೆಯೇ...ಮತ್ತೊಂದು ದಿನ ಬೈಕನ್ನು kick start ಮಾಡಲು ಸಹಾ ಶಕ್ತಿಯಿರಬಾರದು...

6)ಮನೆಯವರಿಂದ..."ಅಹಾ ಹೆತ್ತರೆ ಇಂತಹ ಮಗನನ್ನು ಹೆರಬೇಕು.... ಕುಲತಿಲಕ ಇವನು " ಎಂದು ಒಂದು ದಿನ ಅನ್ನಿಸಿಕೊಂಡರೆ...ಮತ್ತೊಂದು ದಿನ ಅವರಿಂದಲೇ "ಯಾಕಾದರೂ ಹುಟ್ಟಿದನೋ....ಕುಲಕ್ಕೇ ಕಳಂಕ, ಹುಟ್ಟದಿದ್ದರೇ ಚೆನ್ನಾಗಿತ್ತೇನೋ ಇವನು" ಎಂದು ಕೇಳಬೇಕು..

7)ಜೇಬು ತುಂಬ ದುಡ್ಡು ಇಟ್ಟುಕೊಂಡು ಬೇಕಾದ ರೀತಿಯಲ್ಲಿ ಖರ್ಚು ಮಾಡಬೇಕು...ನೀರಿಗಿಂತ ಕೇವಲವಾಗಿ...
ಮತ್ತೊಂದು ದಿನ ಬಿಡಿಗಾಸು ಸಹಾ ನನ್ನ ಬಳಿಯಿರಬಾರದು...ಬೀದಿಗೆ ಬಿದ್ದಿರಬೇಕು...

8) ಇನ್ನೇನು ಪ್ರಾಣವೇ ಹೋಗಿಬಿಡುತ್ತದೇನೊ ಎಂಬಂತೆ ಒಂದು ಹಾಸ್ಪಿಟಲ್ ನಲ್ಲಿ ಮಲಗಿರಬೇಕು..ಅದರ ಮರುದಿನವೇ foot ball ಆಡುತ್ತಿರಬೇಕು..

9)ನನ್ನ ಜೀವನ settle ಆಯಿತೆನ್ನುವ ಭಾವ ನನ್ನನ್ನ ಆವರಿಸಬೇಕು ಒಂದು ದಿನ...ಮತ್ತೊಂದು ದಿನ.. ಮುಂದೆ ಜೀವನ ಹೇಗೆ ನಡೆಯುತ್ತದೆ ಎಂದು ಕಳವಳ ಪಡುತ್ತಿರಬೇಕು...ದಿಕ್ಕುಗಾಣದೆ ಒಬ್ಬನೇ ಒಂದು ಮೂಲೆಯಲ್ಲಿ ಕಾಲು ಕೊಸರಿಕೊಂಡು ಕುಳಿತು ಗಾಢ ಕತ್ತಲಿರುವ ಕೋಣೆಯಲ್ಲಿ ದೀರ್ಘವಾಗಿ ಯೋಚಿಸುತ್ತಿರಬೇಕು..

10) ಒಂದು ದಿನವಿಡೀ ನನ್ನ ಆತ್ಮೀಯ ಗೆಳೆಯರೊಡನೆ ಕಾಲ ಕಳೆಯಬೇಕು.ಇಪ್ಪತ್ತನಾಲ್ಕು ಗಂಟೆಗಳೂ ಎಗ್ಗಿಲ್ಲದೆ ಹೊತ್ತಿಲ್ಲದೆ.. ಗೊತ್ತಿಲ್ಲದೆ...ಮತ್ತೊಂದು ದಿನ ನನ್ನ ಬದ್ದ ವೈರಿಗಳೊಡನೆ ಒಂದು ದಿನವಿಡೀ ಕಳೆಯಬೇಕು...ಆ ರೀತಿಯ ಪರಿಸ್ಥಿತಿ ಬಂದೊದಗಬೇಕು..

11)ಜ್ಯೋತಿಷಿಗಳಿಂದ "ಹೋಗಯ್ಯ ನೀನು 80+ ವರ್ಷ ಬದುಕುತ್ತೀಯ"..ಎಂದು ಅನ್ನಿಸಿಕೊಂಡು ಜ್ಯೋತಿಷಾಲಯದಿಂದ ಹೊರಬರುತ್ತಲೇ..ಹೃದಯಾಘಾತವಾಗಿ ಅಲ್ಲೆ ಕುಸಿದು ಬಿದ್ದು ಕೊನೆಯುಸಿರೆಳೆಯಬೇಕು.. :-)


12)ಸತ್ತಾಗ ನಾಲ್ಕು ಜನರು ಕಣ್ಣೀರಿಟ್ಟರೆ ಇನ್ನೊಂದು ಕಡೆ ನಾಲ್ಕು ಜನ ಖುಶಿಯಿಂದ ಸಂತಸ ಪಡಬೇಕು...

ಸದ್ಯಕ್ಕೆ ನನ್ನ ಪಟ್ಟಿ ಇಷ್ಟೆ...ಇನ್ನು ಬೇಕಾದಷ್ಟಿವೆ..ಬರೆಯುತ್ತಾ ಹೋದರೆ ಮೊದಲಿರುವುದಿಲ್ಲ ಕೊನೆಯಿರುವುದಿಲ್ಲ..
ನಿಮ್ಮ ಜೀವನ ವೈವಿಧ್ಯ ಪೂರ್ಣವಾಗಿರಲಿ....

ಕಿವಿಮಾತು..........

Friday, November 2, 2007

ಏಕೋ ಏನೋ ಈ ಹಾಡು ಬಹಳ ಇಷ್ಟ ಆಯ್ತು .... ನಿಮ್ಮೊಂದಿಗೆ ಹಂಚಿಕೊಳ್ಳುವ ಉಮೇದಿನೊಂದಿಗೆ ಇಲ್ಲಿ ಪ್ರಕಟಿಸುತ್ತಿರುವೆ..ಹಾಡನ್ನು ಓದಿಕೊಂಡು, ಹಾಡನ್ನು ಕೇಳುವ ಗುನುಗುವ , ಹಾಡುಗಾರನ ಜೊತೆ ಹಾಡುವ ಮಜವೇ ಬೇರೆ ... ಸಿಕ್ಕಾಪಟ್ಟೆ ಎಂಜಾಯ್ ಮಾಡಿದೆ .... :-) ಇದನ್ನ ಬರೆದ ಜಯಂತ್ ಕಾಯ್ಕಿಣಿ ರವರಿಗೆ ಮತ್ತು ಮನೋಮುರ್ತಿ ಸಂಗೀತ ಸಂಯೋಜನೆಗೆ ಹೃತ್ಪೂರ್ವಕವಾದ ನಮನಗಳು...ಓದಿಕೊಳ್ಳಿ , ಹಾಡಿಕೊಳ್ಳಿ.......

ಕಿವಿಮಾತೊಂದು ಹೇಳಲೆ ನಾನಿಂದು
ದಾರಿನಿಂತಾಗ ಸಾಗಲೆ ಬೇಕೆಂದು
ನಿನ್ನೆ ಈಗಿಲ್ಲ ನಾಳೆಯು ತಿಳಿದಿಲ್ಲ
ನೀನು ನೀನಾಗೆ ಬಾಳಲೆಬೇಕೆಂದು .....

ಹಸಿರಾಗಿದೆ ದೀಪವು ನಿನಗಾಗಿ...
ನಸು ನಗುತಲೆ ಸಾಗು ನೀ ಗೆಲುವಾಗಿ
ಹೊಸ ತಂಗಾಳಿ ಹೇಳಿದೆ ಮೆಲುವಾಗಿ
ಈ ಬಾಳುಂಟು ಬಾಳುವ ಸಲುವಾಗಿ...............

ಬಾಗಿಲಿನಾಚೆಗೆ ತಾ ಬಂದು
ಗೂವಿಗೆ ಬಾಳು ಬಾ ಎಂದು
ಸಂತಸದಿಂದ ಓ ಎಂದು
ಓಡಲೆ ಬೇಕು ನೀನಿಂದು.........................

ಸಾವಿರ ಕಣ್ಣಿನ ನವಿಲಾಗಿ
ನಿಂತಿದೆ ಸಮಯ ನಿನಗಿಂದು
ಕಣ್ಣನು ತೆರೆದು ಹಗುರಾಗಿ
ನೋಡಲೇಬೇಕು ನೀಬಂದು......................

ಬೆಳ್ಳಿಯ ಅಂಚಿನ ಈ ಮೋಡ
ನಗುವ ಬೀರಿದೆ ಬಾನಲ್ಲಿ
ನಿನ್ನಯ ಬಾಳಿನ ಸಂಗೀತ
ಹಾಡಲೇಬೇಕು ನೀನಿಲ್ಲಿ...........................

ಮಿಂಚುವ ಅಲೆಗಳ ನದಿಯಾಗಿ
ಮುಂದಕೆ ಚಲಿಸು ನೀ ಬೇಗ
ನಿನ್ನಯ ಪಾಲಿನ ಈ ಆಟ
ಆಡಲೇಬೇಕು ನೀನೀಗ........................

ಈ ಹಾಡನ್ನು ನೀವು ಕೇಳಬೇಕೆನಿಸಿದರೆ ಇಲ್ಲಿ ಕ್ಲಿಕ್ಕಿಸಿ ...
http://www.kannadaaudio.com/Songs/Moviewise/M/Milana/Kivi.ram