ಕಥೆಗಾರ....

Monday, September 29, 2008


ಇದು ನನ್ನ ತಂಗಿಯ ಅಬ್ಸರ್ವೇಶನ್. ಜೊತೆಗೆ ನನ್ನಗನ್ನಿಸಿದ್ದು ಸೇರಿಸಿ ನಿಮ್ಮ ಮುಂದಿಡುತ್ತಿದ್ದೇನೆ. ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಕಮೆಂಟಿಸಿ..

ಒಂದು ಮಧ್ಯಾನ್ಹ ಹೀಗೆ ಅವಳೊಡನೆ ಚರ್ಚಿಸುತ್ತಿದ್ದೆ, ಕನ್ನಡ ಬರಹಗಾರರ ಬಗ್ಗೆ, ತೇಜಸ್ವಿ ಬಹಳ ಚೆನ್ನಾಗಿ ಬರೀತಾರೆ, ಎಷ್ಟು ಸರಳವಾಗಿ ವಿಷಯ ಮುಟ್ಟಿಸುತ್ತಾರೆ, ಭೈರಪ್ಪನೋರು ಒಂಥರಾ ಸ್ತ್ಯಾಂಡರ್ಡ್, ಸಿಕ್ಕಾಪಟ್ಟೆ ಫಿಲಾಸಪಿ ಓದಿಕೊಂಡಿದ್ದಾರೆ, ಅವರ ಕಾದಂಬರಿಗಳು ಓದಿ ಮುಗಿಸಿದರೆ ಅದೇ ಗುಂಗಿನಲ್ಲಿ ಇರಬೇಕಾಗುತ್ತದೆ ಹಾಗೆ ಹೀಗೆ ಅಂತೆಲ್ಲ.

ತಟ್ಟನೆ ಹೇಳಿದಳು "ನೋಡಣ್ಣ ಈ ಕತೆಗಳು ಕಾದಂಬರಿಗಳು ಬರೆಯುವ ಮಂದಿಯನ್ನು ನೋಡಿದ್ದೇನೆ, ಅವರ್ಯಾರು ಮೂಲತ: ಬೆಂಗಳೂರಿನವರಲ್ಲ, ಅವರಿಗೊಂದು ಮೂಲವೆಂಬುದು ಇರುತ್ತದೆ ಅದು ಹಳ್ಳಿಗಳು. ಬೆಂಗಳೂರಿನ ಮೂಲದವರಿಗೆ ಒಳ್ಳೆ ಕತೆ ಹೆಣೆಯಲು ಆಗುವುದಿಲ್ಲವೆನಿಸುತ್ತದೆ" ಎಂದಳು.ನಾನು ಆದಾದ ಬಳಿಕ ಯೋಚಿಸತೊಡಗಿದೆ, ಬೆಳಗೆರೆ ಬಳ್ಳಾರಿಯವರು, ಭೈರಪ್ಪ ಚನ್ನಪಟ್ಟಣದ ಕಡೆಯವರು, ತೇಜಸ್ವಿ ಮೂಡಿಗೆರೆಯವರು, ಕಾಯ್ಕಿಣಿ ಗೋಕರ್ಣದವರು. ಅರೆರೆ ನನಗೆ ತಿಳಿದವರು ಬೆಂಗಳೂರಿನವರು ಯಾರು ಇಲ್ಲ!! ತಕ್ಷಣ soft soft software ಕತೆಗಳನ್ನು ಬರೆಯುವ ವಸುಧೇಂದ್ರರಿದ್ದಾರಲ್ಲ ಎಂದು ನಿರಾಳವಾಯಿತು. ನಾನು ಅದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕಾರಣ ಅವರ ಕತೆಗಳು ಹೆಚ್ಚು ಇಷ್ಟವಾಗುತ್ತದೆ, ಕಾರಣ ಅದು ನಮಗೆ ಹತ್ತಿರವಾಗಿರುತ್ತದೆ. ಅವರ "ಎಲ್ಲರ ಮನೆ ಕಾರಿಗೂ ನೆಗ್ಗು" ಎಂಬ ಲೇಖನವನ್ನ ಪತ್ರಿಕೆಯಲ್ಲಿ ಓದಿದ್ದೆ. ಇಡೀ ಪತ್ರಿಕೆಯನ್ನ ಜತನವಾಗಿ ಇಂದಿಗೂ ಕಾಪಿಟ್ಟುಕೊಂಡಿದ್ದೇನೆ, ಅಷ್ಟು ನಕ್ಕಿದ್ದೇನೆ. ಒಬ್ಬರಾದರೂ ಸಿಕ್ಕರಲ್ಲ ಎಂದು ಅವರ ಪುಸ್ತಕ ತೆರೆದು ನೋಡಿದರೆ "ಬಳ್ಳಾರಿಯ ಸಂಡೂರಿನಲ್ಲಿ ಜನನ" ನೋಡಿ ನಿರಾಶನಾದೆ. ಉಹೂ ಬೆಂಗಳೂರಿನವರು ಸಿಗಲೇ ಇಲ್ಲ.
ಮತ್ತೆ ಹುಡುಕಿ ಹುಡುಕಿ ಸಾಕಾಯಿತು. ನಿಮಗಾರಾದರು ಗೊತ್ತಿದ್ದರೆ ತಿಳಿಸಿ.

ಪಟ್ಟಣಗಳಲ್ಲಿ ದೊಡ್ಡ ದೊಡ್ಡ ಶಹರಗಳಲ್ಲಿ ಹುಟ್ಟಿ ಬೆಳೆದವರಿಗೆ ಕತೆಗಳು ಏಕೆ ಹುಟ್ಟುವುದಿಲ್ಲವೋ ನಾ ಕಾಣೆ. ನಾನು ಹಲವಾರು ಪ್ರಯತ್ನಿಸಿದ್ದೇನೆ, ಸಣ್ಣ ಕತೆಗಳು ಬರೆಯಲು. ರಭಸವಾಗಿ ಬೈಕ್ ಓಡಿಸುವಾಗ ಯಾವುದೋ ತಿರುವಿನಲ್ಲೋ ಸಿಗ್ನಲಿನಲ್ಲೋ ಕತೆ ಹುಟ್ಟಿಕೊಂಡಿರುತ್ತದೆ. ಲೋಕದ ಚಿಂತೆ ಮರೆತು ಕತೆಗೆ ರೆಕ್ಕೆ ಪುಕ್ಕ ಕಟ್ಟಲು ಕೂತಿದ್ದೇನೆ. ಬೈಕ್ ಪಾಡಿಗೆ ರಭಸವಾಗಿ ಹೋಗುತ್ತಿರುತ್ತದೆ ಕತೆಯ ಓಘ ಕೂಡ ಅದೇ ರಭಸದಲ್ಲಿ ಬೆಳೆಯುತ್ತಿರುತ್ತದೆ. "ಒಂದು ಮುಂಜಾವಿನಲ್ಲಿ ಆತ ಹಳ್ಳಿಯಿಂದ ಹೊರಟ, ಮನೆಯಲ್ಲಿ ಇನ್ನು ಇರಲಾಗುವುದಿಲ್ಲವೆಂದು ನಿರ್ಧರಿಸಿದ, ಮನೆಯ ಕಿರುಕುಳ ಸಾಕೆಂದು .........." ಹೀಗೆ ಹಲವು ಸಾಲುಗಳು. ಮತ್ತೆ ಕತೆ ಆರಂಭಿಸಲು ಯಾವುದೋ ಹಳ್ಳಿ ಹೆಸರನ್ನು ತಡಕಾಡುತ್ತಿರುತ್ತೇನೆ. ಜೀವಮಾನದಲ್ಲೇ ಒಂದು ಹಳ್ಳಿಯನ್ನೂ ಸರಿಯಾಗಿ ನೋಡದ, ಅಲ್ಲಿನ ಪರಿಸರ ತಿಳಿಯದ ನಾನು ಕತೆ ಹೇಗೆ ಬರೆಯಲು ಸಾಧ್ಯ?M G road ಶುರುವಾಗುವ ಹೊತ್ತಿಗೆ ಶುರುವಾಗುವ ಕತೆ Corporation ಬಳಿ ಬರುವುದರೊಳಗಾಗಿ ರೆಕ್ಕೆ ಪುಕ್ಕ ಸರಿಯಾಗಿ ಅಂಟಿಕೊಳ್ಳದೆ ಕತೆ ಸತ್ತಿರುತ್ತದೆ, ಬೈಕ್ ನ ವೇಗವೂ ಕಮ್ಮಿಯಾಗಿರುತ್ತದೆ. ಕತೆ ಬರೆಯಲು ಮನಸಿನ್ನೂ ಮಾಗಿಲ್ಲವೆಂದು ಸುಮ್ಮನಾಗುತ್ತೇನೆ. ತೇಜಸ್ವಿಯವರ "ಚಿದಂಬರ ರಹಸ್ಯ" ಓದಿ ಅದರಲ್ಲಿ ಬರುವ ಲಂಟಾನದ ಜಿಗ್ಗು ತಿಳಿಯಲು ನಾನು ಪಟ್ಟ ಹರಸಾಹಸ ಅರುಣನಿಗೆ ಮಾತ್ರ ಗೊತ್ತು. ರಂಗಶಂಕರದಲ್ಲಿ ನಾಟಕವನ್ನು ಏರ್ಪಡಿಸಿದಾಗ ನಾನು ಕಾಯುತ್ತಲಿದ್ದು ಲಂಟಾನದ ಜಿಗ್ಗು ನೋಡಲೆಂದೆ. ಮುಳ್ಳಯ್ಯನಗಿರಿ ಚಾರಣದಲ್ಲಿ ಅರುಣ ತೋರಿಸಿದ್ದ "ಇದೇ ಕಣೊ ಲಂಟಾನದ ಜಿಗ್ಗು" ಎಂದು..ಇನ್ನು ಸಮಾಧಾನವಾಗಿಲ್ಲ. ತೇಜಸ್ವಿಯರ ಕತೆಗಳ ಪಾತ್ರಗಳೇ ತಿಳಿಯಲು ಇಷ್ಟು ಒದ್ದಾಡಿದರೆ ನಾನು ಹೇಗೆ ತಾನೆ ಕತೆ ಬರೆಯಬಲ್ಲೆನು?

ಕನ್ನಡದಲ್ಲಿ ಆರುನೂರಕ್ಕೂ ಹೆಚ್ಚು ಬ್ಲಾಗುಗಳಿದೆ. ಅದರಲ್ಲಿ ಬೆಂಗಳೂರಿನವರೆಂದರೆ ಎಂದರೆ ಒಂದಂಕಿಯಲ್ಲಿ ಎಣಿಸಿಬಿಡಬಹುದು. ಎಲ್ಲರಿಗೂ ಬೇರೆಯ ಮೂಲವೊಂದಿರುತ್ತದೆ. ಅದಕ್ಕಾಗಿ ಕತೆಗಳು ಹುಟ್ಟುತ್ತವೆ ಎನಿಸುತ್ತಿದೆ ನನಗೆ. ಒಂದಷ್ಟು ಹಳ್ಳಿಗಳು, ಬೆಟ್ಟಗಳು, ಊರು ಕೇರಿ ಸುತ್ತಿ ಬಂದರೆ ಕತೆಗಳನ್ನ ಬರೆಯಬಹುದೇನೊ? ಬರೆದರೆ ಖಂಡಿತಾ ನಿಮ್ಮ ಮುಂದಿಡುತ್ತೇನೆ.

ವಿ.ಸೂ : ಇಲ್ಲಿ ಬೆಂಗಳೂರಿನವರು ಏಕೆ ಕತೆ ಬರೆಯಲಾಗುತ್ತಿಲ್ಲ ಎಂಬುದನ್ನ ತಿಳಿಯಲು ಯತ್ನಿಸಿರುವದರ ಬಗ್ಗೆ ಬರೆದಿದ್ದೇನಷ್ಟೆ, ಬೇರೆ ಊರಿನವರ ಬಗ್ಗೆ ಜೆಲಸಿ ಇದೆಯೆಂದು ಅಪ್ಪಿ ತಪ್ಪಿಯೂ ಕೂಡ ಭಾವಿಸಬೇಡಿ. ಜೈ ಕರ್ನಾಟಕ.

ನಾನೇಕೆ ಬರೆಯುತ್ತಿಲ್ಲ!!??...

Wednesday, September 24, 2008


ಎಸ್. ಎಲ್. ಭೈರಪ್ಪನವರ  "ನಾನೇಕೆ ಬರೆಯುತ್ತೇನೆ" ಎಂಬ ಪುಸ್ತಕವನ್ನು ಓದಿ ಮುಗಿಸುವ ಹೊತ್ತಿಗೆ ಇಂತಹುದೊಂದು ಲೇಖನ ಕುಟ್ಟುತ್ತಿದ್ದೇನೆ. ಹೌದು "ನಾನೇಕೆ ಬರೆಯುತ್ತಿಲ್ಲ" ??


ಇದು ನನಗನ್ನಿಸಿದ್ದು ಬ್ಲಾಗ್ ಬರೆಯುವುದು ಬಿಟ್ಟು ಸುಮಾರು ಎರಡು ತಿಂಗಳಾಗುವ ಹೊತ್ತಿಗೆ. ಅರುಣ ಚಾಟ್ ನಲ್ಲಿ ಸಿಕ್ಕಾಗಲೆಲ್ಲ ಪಿಂಗಿ ಪಿಂಗಿ ಪಿಂಗಿ "ಬರ್ಯೋ ಇವತ್ತಾದ್ರು" ಎನ್ನುತ್ತಿದ್ದ, ಶ್ರೀಕಾಂತ್ ನನ್ನ ಹಳೆಯ ಬ್ಲಾಗ್ ಲೇಖನದ ಕೊಂಡಿಗಳನ್ನು ಗೆಳೆಯರಿಗೆ ಕಳಿಸಿ ಬ್ಲಾಗ್ update ಆಗಿದೆ ಎಂದು ಸಾರುತ್ತಿದ್ದ!!. ಲಕ್ಷ್ಮಿ "ಕರ್ಮಕಾಂಡ ಪ್ರಭುಗಳೇ , ಕಂಗ್ಲೀಷ್ ನಲ್ಲಿ ಲೇಖನ ಬರೆದು ಕೊಡಿ ಕನ್ನಡಕ್ಕೆ ತರುವ ಜವಾಬ್ದಾರಿ ನನ್ನದು" ಎನ್ನುತ್ತಿದ್ದರು.. ಎಲ್ಲರ ಮಾತಿಗೂ, ಅಪ್ಪಣೆಗೂ, ಬೆದರಿಕೆಗೂ, ಛೀಮಾರಿಗಳಿಗೂ "ದಿವ್ಯ"ಮೌನ ವಹಿಸಿದ್ದೆ.

 

ಹೊಸ ಕೆಲಸ ಹುಡುಕುವ ಗೋಜಿನಲ್ಲೇ ಇವರುಗಳೆಲ್ಲರ ಬ್ಲಾಗುಗಳನ್ನು ಓದುತ್ತಿದ್ದೆ. ಓದುವುದು ಕಮೆಂಟಿಸುವುದು ಇಷ್ಟಕ್ಕೆ ಸೀಮಿತವಾಗಿತ್ತು ನನ್ನ ಬರವಣಿಗೆ. ಇತ್ತ ಅರುಣ consistent ಆಗಿ ಪರಿಸರಪ್ರೇಮಿ ಮತ್ತು Speaktonature ನಲ್ಲಿ ಯಾವುದೇ ಅಡೆ ತಡೆಯಿಲ್ಲದೆ ಅಂಕಣಗಳು ಹೊರಹೊಮ್ಮುತ್ತಿತ್ತು, ಲಕ್ಷ್ಮಿಯಂತೂ 5-6 ಬ್ಲಾಗುಗಳನ್ನು ನಿಭಾಯಿಸುತ್ತಿದ್ದರು, ವಾರಕ್ಕೆ ಎರಡರಂತೆ ಲೇಖನಗಳು ಬರುತ್ತಿದ್ದವು, ಚಾಟ್ ಗೆ ಸಿಕ್ಕಾಗಲೆಲ್ಲ ಪಿಂಗಿ ಪಿಂಗಿ update ಸರಮಾಲೆ ಹೇಳುತ್ತಿದ್ದರು. ಶ್ರೀಕಾಂತ ಆಗಾಗ್ಗೆ

ವೈಚಾರಿಕ ಲೇಖನಗಳನ್ನು ಹರಿಯಬಿಡುತ್ತಿದ್ದ ಮತ್ತು ಶ್ರೀನಿವಾಸ ಆಂಗ್ಲಭಾಷೆಯಲ್ಲಿ ಬರೆಯಲು ಶುರುಮಾಡಿದ್ದ. ಅರೆರೆ ನನ್ನ ಗೆಳೆಯರೆಲ್ಲಾ ಬರೆಯುತ್ತಿದ್ದಾರೆ, ಒಂದರ ಮೇಲೊಂದಂತೆ ಒಂದರ ಮೇಲೊಂದಂತೆ. ಏನಾದರಾಗಲಿ ಕುಪ್ಪಳ್ಳಿ ಪ್ರವಾಸ ಕಥನವನ್ನು ಮುಗಿಸಿಯೇ ಬಿಡುವ ಎಂದು ಕೂತು 10ಸಾಲುಗಳಿಂದ 20ಸಾಲಿಗೆ ಏರಿಸಿಬಿಟ್ಟೆ, ಆ ಜೋಷ್ ನಲ್ಲಿ, ಅಷ್ಟೇ ಅದು ಅಲ್ಲಿಗೆ ನಿಂತುಬಿಟ್ಟಿತು, ಅರುಣನಿಗೆ ಹೇಳಿದೆ "ಕುಪ್ಪಳ್ಳಿ ಲೇಖನ ಬರೀತಿದೀನಿ ಕಣೊ" ಎಂದು ಹಲ್ಲುಕಿರಿಯುತ್ತ. ಯಥಾಪ್ರಕಾರ ಬೈದು ಹೂಂಕರಿಸಿ ಸುಮ್ಮನಾದ. ಈ "ಕುಪ್ಪಳ್ಳಿ" ಪ್ರವಾಸ ಕಥನಕ್ಕೆ ಅರುಣನಿಂದ ಕಾಫಿಯಲ್ಲಿ ವಿಷಬೆರಕೆ ಶ್ರೀಕಾಂತನಿಂದ ಕೊಲೆಬೆದರಿಕೆ ಎಲ್ಲವನ್ನು ಎದುರಿಸಿದ್ದೇನೆ, ಏಕೋ ಏನೋ ಅದು ಅದು ಮುಂದೆ ಹೋಗುತ್ತಿಲ್ಲ ಕರ್ಮಕಾಂಡ ಬ್ಲಾಗಿಗೆ ಅಲಂಕರಿಸುವ ಯೋಗ ಎಂದಿದೆಯೋ??

 

ಮತ್ತೆ ಅದೇ ಪ್ರಶ್ನೆಗೆ ಬರೋಣ, ನಾನೇಕೆ ಬರೆಯುತ್ತಿಲ್ಲ?? ಕಾರಣಗಳು ಹಲವಾರು. ಹೊಸಕೆಲಸ ಹುಡುಕುವುದೇ ಮುಖ್ಯವಾಗಿತ್ತು, ಈಗ ಮಾಡುತ್ತಿದ್ದ ಕೆಲಸ ಅನುಕೂಲಕರವಾಗಿರದುದ್ದರ ಪರಿಣಾಮ ಹೊಸತನ್ನು ಹುಡುಕಲೇ ಬೇಕಾದ ಅನಿವಾರ್ಯತೆ ಇತ್ತು. ಅದಕ್ಕಾಗಿ ಸಂದರ್ಶನಗಳಿಗೆ ಅಣಿಯಾಗುತ್ತಲಿದ್ದೆ ಇಷ್ಟು ದಿನವೂ, ಅದಕ್ಕಾಗಿ ಬರವಣಿಯೆಡೆಗೆ ಬರಲಾಗಲಿಲ್ಲ. ಮುಂದಿನ ತಿಂಗಳಿಂದ ಬೇರೆ ಕಂಪೆನಿಗೆ ಹೋಗಲಿದ್ದೇನೆ. ಏಲ್ಲೋ ನಡೆದು ಹೋಗುತ್ತಿರುವಾಗ, ಬೈಕ್ ಓಡಿಸುತ್ತಿರುವಾಗ, ಇನ್ನೇನು ನಿದ್ದೆ ಹತ್ತುತ್ತಿದೆ ಅನ್ನುವಾಗ ಪುಂಖಾನುಪುಂಖವಾಗಿ ಲೇಖನಗಳು ಬಂದಿವೆ, ಎಷ್ಟು ಕೊರೆತ ಎಂದರೆ ಬರೆದುಬಿಡಲೇ ಬೇಕು ಎಂದು ತಡಬಡಿಸಿ ಸಿಸ್ಟಮ್ ಮುಂದೆ ಕೂತ ಕೂಡಲೇ ಎಲ್ಲವೂ ಖಾಲಿ ಖಾಲಿ. ಹೀಗೆಷ್ಟು ಬಾರಿ ಆಗಿದೆಯೋ ಲೆಕ್ಕವಿಟ್ಟಿಲ್ಲ. ಬರೆಯಬೇಕು ಅನಿಸಿದಾಗಲೆಲ್ಲ ಬರೆದುಬಿಟ್ಟಿದ್ದರೆ ಅದರ ಕತೆಯೇ ಬೆರೆಯದಾಗಿರುತ್ತಿತ್ತು, ಸುಮ್ಮನೇ ಶೀರ್ಷಿಕೆಗಳನ್ನು ಹೇಳಿಕೊಂಡು ತಿರುಗಾಡುತ್ತಿದ್ದೆ. ನನ್ನ ಕನ್ನಡ ಕೈಬರಹ ಯಾವುದೇ ಗುಪ್ತಭಾಷೆಗೂ ಕಮ್ಮಿಯಿಲ್ಲದುದ್ದರ ಕಾರಣ ಪೆನ್ನು ಹಿಡಿದು ಪೇಪರಿನ ಮೇಲೆ ಬರೆಯುವ ದುಸ್ಸಾಹಸ ಮಾಡಲಿಲ್ಲ. ಈಗಲೂ ಸಾಕಷ್ಟು ಶೀರ್ಷಿಕೆಗಳು ಹರಿದಾಡುತ್ತಿವೆ. "ನಾನೇಕೆ ಬರೆಯುತ್ತಿಲ್ಲ" ಎಂದು ಮತ್ತೆ ಬರವಣಿಗೆ ಶುರು ಮಾಡಿದ್ದೇನೆ.

 

ನಿಮ್ಮ ಹಾರೈಕೆಯಿರಲಿ. 

ಸೈಕೊ....

Sunday, September 14, 2008

ಚಿತ್ರ ಬಿಡುಗಡೆಯಾಗಬೇಕಿದೆ, ಅಪಾರ ನಿರೀಕ್ಷೆ ಹೊತ್ತಿದ್ದೇನೆ ಚಿತ್ರದ ಬಗ್ಗೆ, ಜಯಂತ್ ಕಾಯ್ಕಿಣಿ ಯುಗಳಗೀತೆಗಳ ರಚನಾಕಾರರಾಗಿ ಹೊರಹುಮ್ಮುತ್ತಿದ್ದಾರೆ.

ನನಗೆ ಬಹಳ ಇಷ್ಟವಾದ ಹಾಡೊಂದನ್ನು ನಿಮ್ಮ ಮುಂದಿರಿಸಿದ್ದೇನೆ. ಗುನುಗಿಕೊಳ್ಳಿ....

 

ಬೆಳದಿಂಗಳಂತೆ ಮಿನು ಮಿನುಗುತ ಬೆಳಕಾಗಿ ಬಂದಿರಲು ನೀನು

ಅನುರಾಗದಲ್ಲಿ ಹೊಳೆ ಹೊಳೆಯುತ ನಸು ನಾಚಿ ನಿಂದಿರಲು ನೀನು

ಮರುಳಾದೆ ದಿವ್ಯಸಖಿ ನಿನಗೆ ಪ್ರಣಾಮ, ಅಪರೂಪ ರೂಪಸಿಯೇ ನಿನಗೆ ಪ್ರಣಾಮ

 

ತಂಗಾಳಿಯಂತೆ ಸುಳಿ ಸುಳಿಯುತ ಆವರಿಸಿಕೊಂಡಿರಲು ನೀನು

ಕುಡಿನೋಟದಲ್ಲೆ ನುಲಿ ನುಲಿಯುತ ನೀವರಿಸಿನಿಂದಿರಲು ನೀನು

ಮನಸೋತೆ ಮೋಹಿತನೆ ನಿನಗೆ ಪ್ರಣಾಮ, ಹಿತವಾದ ಸ್ನೇಹಿತನೆ ನಿನಗೆ ಪ್ರಣಾಮ

 

ಕನಸಲ್ಲು ಹುಚ್ಚನಂತೆ ನಿನಗಾಗಿ ಓಡುವೆ, ಮೈಮರೆತು ಸಂತೆಯಲ್ಲೂ ನಿನ್ನನ್ನೆ ಕೂಗುವೆ

ಒರಗಿರಲು ನಿನ್ನ ಮಡಿಲಲಿ

ಕಾಗದದ ದೋಣಿಯಲ್ಲಿ ಕಡಲನ್ನು ದಾಟುವೆ, ಗಂಧರ್ವ ಸೀಮೆಯಲ್ಲಿ ಉಯ್ಯಾಲೆ ಜೀಕುವೆ

ನೀನಿರಲು ನನ್ನಾ ಕತೆಯಲಿ

 

ನಾನಿರುವೆ ನಿನ್ನಾ ಜೊತೆಯಲಿ

 

ಬೆಳದಿಂಗಳಂತೆ ಮಿನು ಮಿನುಗುತ ||

 

 

ಕಣ್ತುಂಬ ನಿನ್ನ ಅಂದ ಸವಿಯುತ್ತಾ ಕೂಡಲೇ, ಕಂಡಿದ್ದು ನಿಜವೇ ಅಂತ ಮುತ್ತಿಟ್ಟು ನೋಡಲೇ

ನೀನಿರಲು ನನ್ನಾ ತೊಳಲಿ

ನಾನೆಂದು ನೋಡದಂತ ಬೆಳಕೊಂದು ಮೂಡಿದೆ ನಿನಗಷ್ಟೆ ಕೇಳುವಂತೆ ಮನಸಿಂದು ಹಾಡಿದೆ

ಕೈಯಿರಲು ನಿನ್ನಾ ಕೈಯಲಿ

 

ನಾನಿರುವೆ ನಿನ್ನಾ ಬಾಳಲಿ

 

ಬೆಳದಿಂಗಳಂತೆ ಮಿನು ಮಿನುಗುತ ||