ನನ್ನವಳೊಂದಿಗೆ ಹಾಡು-ಪಾಡು......

Thursday, September 20, 2007

ನನ್ನವಳೊಂದಿಗೆ ;-) ಒಂದಷ್ಟು ಹಾಡುಗಳ ಜುಗಲ್ ಬಂದಿ..ನನ್ನ ಪ್ರತಿ ಹಾಡಿಗೂ ಅವಳ ಬಳಿ ಅದಕ್ಕೆ ಮತ್ತೊಂದು ಹಾಡನ್ನು ಪೋಣಿಸುತ್ತ ಹೋದಳು ಒಂದು ಸುಂದರ ಸಂಜೆಯಲ್ಲಿ...ನಾನು ಕೇಳುತ್ತ ಹೋದೆ... ನಿಮಗೂ ಕೇಳಿಸುವ ಮನಸಾಯಿತು..... ಅದಕ್ಕಾಗಿ ಬ್ಲಾಗಿಸುತ್ತಿದ್ದೇನೆ....ಅರ್ಥವಾದರೆ ಸಂತೋಷ.. ಇಲ್ಲದಿದ್ದರು ಸಂತೋಷ... ಅವರವರ ಭಾವಕ್ಕೆ ಬಿಟ್ಟದ್ದು..

ನಾನು : ಇದು ನನ್ನ ನಿನ್ನ ಪ್ರೇಮ ಗೀತೆ ಚಿನ್ನ...ಇದು ಎಷ್ಟು ಸಾರಿ ಹಾಡಿದರು ಚೆನ್ನ..ಇದು ನಿಲ್ಲಲಾರದೆಂದು, ಕೊನೆಯಾಗಲಾರದೆಂದು ಈ ಪ್ರೇಮ ಗೀತೆಯೆ ಹೀಗೆಯೊ..
ಅವಳು : ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ ಪಯಣಿಗ ನಾನಪ್ಪಾ...ಪ್ರೀತಿಯ ತೀರವ ಸೇರುವುದೊಂದೆ ಬಾಳಿನ ಗುರಿಯಪ್ಪಾ...(ಸ್ವಲ್ಪ modify ಮಾಡಿಬಿಟ್ಳು...) ನಿಮ್ಗೆ ಗೊತ್ತಾಯ್ತಲ್ಲ್ವ??


ನಾನು : ಯಾವುದೋ ಈ ಬೊಂಬೆ ಯಾವುದೋ...ಊರ್ವಶಿಯ ಕುಲವೋ ಮೇನಕೆಯ ಚೆಲುವೋ...
ಅವಳು : ಕೃಷ್ಣ ನೀ ಬೇಗನೆ ಬಾರೊ...ಶ್ರೀಕೃಷ್ಣ ನೀ ಬೇಗನೆ ಬಾರೊ...ಈ ರಾಧೆಯ ಕೂಗು ನೀ ಕೇಳಿಲ್ಲವೇನು..ವಾಸುದೇವ..ವೇಣುಗೋಪಾಲಾ...


ನಾನು : ತ್ರಿಪುರಾ ಸುಂದರಿ ಬಾರೆ ನೀ ಹಸೆಮಣೆಗೆ ಮದುವೆ ಮುಗಿದರೆ ರಾತ್ರಿಯೇ ಮೆರವಣಿಗೆ..ನಡೆ ನಡೆ ಮೆಲ್ಲಗೆ ದುಂಡು ದುಂಡು ಮಲ್ಲಿಗೆ...ಅಂಜದ ಗಂಡಿಗೆ ಜೋಡಿ ಆಗೆ ಮೆಲ್ಲಗೆ...
ಅವಳು : ಎಲ್ಲಾ ಒಕೆ ಮದುವೆ ಯಾಕೆ...ಎಲ್ಲಾ ಒಕೆ ಮದುವೆ ಯಾಕೆ... ಮದುವೆ ಅಂದ್ರೆ ಸೆಂಟ್ರಲ್ ಜೈಲು ಜೀವಕ್ಕಿಲ್ಲ ರಕ್ಷೆ.. ಏಳು ಹೆಜ್ಜೆ ಇಟ್ಟ ಮೇಲೆ ಏಳು ಜನ್ಮ ಶಿಕ್ಷೆ...


ನಾನು : ಸ್ವಾಭಿಮಾನದ ನಲ್ಲೆ ..tin tin tin tin ಸಾಕು ನಿನ್ನಯ ಬಲ್ಲೆ...tin tin tinಹೊರಗೆ ಸಾಧನೆ ಒಳಗೆ ವೇದನೆ..ಇಳಿದು ಬಾ ಬಾಲೆ.. tin tin tin


ಅವಳು : ಈ ಶತಮಾನದ ಹೆಣ್ಣು, ಸ್ವಾಭಿಮಾನದ ಹೆಣ್ಣು..


ನಾನು : ಯಾರೇ ನೀನು ಚೆಲುವೆ..ಯಾರೇ ನೀನು ಚೆಲುವೆ...ನಿನ್ನಷ್ಟಕ್ಕೆ ನೀನೇ ಏಕೆ ನಗುವೆ...ನಿನ್ನಷ್ಟಕ್ಕೆ ನೀನೇ ಏಕೆ ನಗುವೆ.....
ಅವಳು : ಪುಟಗಳ ನಡುವಿನ ಗರಿಯೇ ನೀನೊಮ್ಮೆ ಹಾರಿ ನೋಡು..ಪುಟಾಣಿ ದೋಣಿಯ ಮರಿಯೇ...ಮಳೆ ನೀರಿನಲ್ಲಿ ಓಡು.. ನಲುಮೆಗಿಲ್ಲಿ ಎಂದು ಬರದೆ ಇರಲಿ ಬಡತನ..ನಮ್ಮ ಗೆಳೆತನ ಇರಲಿ ಕಡೆತನ.... ಕಡೆತನ...


ನಾನು : ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ..ಹೂ ಅಂತೀಯಾ..ಉಹೂ ಅಂತೀಯಾ..
ಅವಳು : ಪ್ರೇಮ ಗೀಮ ಜಾನೆ ದೋ....ನಂಬಬಾರದೋ.... ಪ್ರೇಮಮ್ ಶರಣಮ್ ಗಚ್ಚಾಮಿ ಅನ್ನಬಾರದೋ...


ನಾನು : ನನ್ನವಳು ನನ್ನವಳು ಮುಟ್ಟಿದರೆ ನಲುಗುವಳು..ಮುಟ್ಟದಯೇ ಮುದ್ದಾಡಲೇ... ನೋಡಿದರೆ ಕರಗುವಳು... ಮನದ ಜೊತೆ ಮಾತಾಡಲೇ...ಮುಟ್ಟದಯೇ ಮುದ್ದಾಡಲೇ....
ಅವಳು : one foot distance...very very decent ....ಹೆಣ್ಣು ಗಂಡು ಇರೋವಾಗ..


ನಾನು : excuse me excuse me excuse me excuse me ನಾ ಪ್ರೇಮಿ... u loook me..u catch me...u use me....u love me.....ಬಾರಮ್ಮಿ..
ಅವಳು : ಲೋ ಚಪ್ಪರ್..ಎದ್ದ್ ಹೋಗೋ....


ನಾನು : ಅನಿಸುತಿದೆ ಯಾಕೋ ಇಂದು ನೀನೇನೇ ನನ್ನವಳೆಂದು... ಮಾಯದ ಲೋಕದಿಂದ ನನಗಾಗೇ ಬಂದವಳೆಂದು...ಅಹಾ ಎಂತ ಮಧುರ ಯಾತನೆ...ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೆ ಸುಮ್ಮನೆ..
ಅವಳು : ಅರಳುತಿರು ಜೀವದ ಗೆಳೆಯ ಸ್ನೇಹದ ಸಿಂಚನದಲ್ಲಿ.. ಬಾಡದಿರು ಸ್ನೇಹದ ಹೂವೆ..ಪ್ರೇಮದ ಬಂಧನದಲ್ಲಿ...ಮನಸಲ್ಲೇ ಇರಲಿ ಭಾವನೆ.. ಮಿಡಿಯುತಿರಲಿ ಮೌನ ವೀಣೆ ಹೀಗೆ ಸುಮ್ಮನೆ....

ನಾನು ಸುಮ್ಮನಾದೆ.... ಆದರೆ ಮನವು ಮಾತ್ರ ಕೆ.ಎಸ್.ನರಸಿಂಹಸ್ವಾಮಿಯವರ ಹಾಡು ಗುನುಗುತ್ತಲೆ ಇತ್ತು..

"ನಿನ್ನೊಲುಮೆ ಇಂದಲೆ ಬಾಳು ಬೆಳಕಾಗಿರಲು..ಚಂದ್ರಮುಖಿ ನೀನೆನಲು ತಪ್ಪೇನೆ... ನಿನ್ನ ಸೌಜನ್ಯವೇ ದಾರಿ ನೆರಳಾಗಿರಲು.........."

ನಾನು ಬ್ರಹ್ಮ ಮತ್ತು ಮುಖ್ಯಮಂತ್ರಿ - ಭಾಗ 3

ಹಾಗೆ ತನ್ನ ಉದ್ದಿಶ್ಯ ಹಾಗು ಪೂರ್ವಾಪರವನ್ನು ನನಗೆ ವರದಿ ಒಪ್ಪಿಸಿದ ನಂತರ ಬ್ರಹ್ಮ ನನ್ನ ಪ್ರತ್ಯುತ್ತರಕ್ಕಾಗಿ ಕಾಯುತ್ತಿದ್ದ.. ನಾನು ಮಂಕುಬಡಿದವಂತೆ ಸುಮ್ಮನಿದ್ದೆ ..."ಬ್ರಹ್ಮಲೋಕದಲ್ಲಿ Orkutte...ಶಿವ ಶಿವಾ... ದೇವಾನು ದೇವತೆಗಳು ಸಹ ಈಗ update ಆಗ್ಬಿಟ್ಟಿದಾರೆ... ಕೇಳಬೇಕು... ರಂಭೆ, ಊರ್ವಶಿ, ಮೇನಕೆ ಅವರ profiles Orkut ನಲ್ಲಿ ಇದ್ದೀಯ ಅಂತ..ಇದ್ದರೆ add ಮಾಡಿಕೊಳ್ಳೋಣ... ತ್ರಿಪುರ ಸುಂದರಿಗಳು ಹೇಗೆ ಇದ್ದಾರೆಂಬ ಕುತೂಹಲ ಕೂಡ ಇದೆ ನನಗೆ... Hmmm

ಬ್ರಹ್ಮ ನನ್ನ ಯೋಚನಾ ಲಹರಿಯನ್ನು ತಡೆದು "ಈಗ ವರ ಕೇಳುವ ಸರದಿ ನಿನ್ನದು..ಕೇಳು ನೀನು ಕೇಳುವ ವರ ಇಡೀ ಭೂಲೋಕದ ಮನುಷ್ಯರ ಮನೋಭಾವವನ್ನು ದೇವತೆಗಳಿಗೆ ಸೂಚಿಸುತ್ತದೆ..ಎಲ್ಲಕ್ಕಿಂತ ಹೆಚ್ಚಾಗಿ ಮನುಷ್ಯರಲ್ಲೂ ಒಳ್ಳೆತನ ಇರುತ್ತದೆ ಎಂಬುದು ನಾನು ದಾಸ್ ಗುಪ್ತನಿಗೆ ತೋರಿಸಬೇಕಾಗಿದೆ. so ಎಚ್ಚರವಿರಲಿ.."

ಬ್ರಹ್ಮ ಸ್ವಲ್ಪ ಸಮಯ ನೀಡುವೆಯಾ..ಕಾಫಿ ಕುಡ್ಯೋಣವೆ...ನಾನು ಸ್ವಲ್ಪ ಚೇತರಿಸಿಕೊಳ್ಳಬೇಕು..

ಮುಗುಳ್ನಗುತ್ತ ಬ್ರಹ್ಮ Ice Thunder ಕಾಫಿ ಆಗಬಹುದೋ... ಎಂದ.

ನನಗೆ ಆಶ್ಚರ್ಯ, ಸಂತೋಷ ಒಟ್ಟೊಟ್ಟಿಗೆ ಬಂತು.. ಇದೇನು ಹೊಸತಲ್ಲ..ಬ್ರಹ್ಮನ introduction ಇಂದ ಹಿಡಿದು ಇಲ್ಲಿ ತನಕ ಬರೀ ಆಶ್ಚರ್ಯಗಳೇ.. !!

ಕಣ್ಣು ಪಿಳುಕಿಸುವುದರಲ್ಲಿ Ice Thunder ನ ಬಿಸಿ ಬಿಸಿ ಹಬೆಯಾಡುವ ಕಾಪಿ ನಮ್ಮ ಮುಂದಿತ್ತು...ವ್ಯತ್ಯಾಸವೊಂದೇ ಅರುಣ ನನ್ನ ಜೊತೆ ಇರಲಿಲ್ಲ...

ಕಾಫಿ ಹೀರುವ ಅಷ್ಟೊತ್ತು ಯೋಚಿಸುತ್ತಿದ್ದೆ ಏನು ಕೇಳುವುದು ಎಂದು...

ಕಾಫಿ ಮುಗಿದೊಡನೆಯೆ ಕಪ್ಪನ್ನು ಪಕ್ಕಕ್ಕಿಡುತ್ತಾ.."ಸರಿ ಬ್ರಹ್ಮ ನನ್ನನ್ನು ಹಿಟ್ಲರ್ ಮಾಡಿಬಿಡು... ಅಂದು ಹಿಟ್ಲರ್ ಯಹೂದಿಗಳನ್ನು ಜೀವಂತವಾಗಿ ಸುಡುತ್ತಿದ್ದ...ನಾನು ಅದನ್ನೇ ಮಾಡುತ್ತೇನೆ..ಯಹೂದಿಗಳ ಬದಲಾಗಿ ಮುಸಲ್ಮಾನರನ್ನು ...ಅವರ ಉಪಟಳ ಹೆಚ್ಚಾಗಿ ಹೋಗಿದೆ...ಎಲ್ಲೆಲ್ಲೂ ಭಯೋತ್ಪಾದನೆ.... ಸಾಕು ಮುಗಿಸಿಬಿಡುತ್ತೇನೆ... ನನ್ನನ್ನು ಹಿಟ್ಲರ್ ಮಾಡು.." ಎಂದೆ..

ಅಷ್ಟೊತ್ತು ಶಾಂತ ಮೂರ್ತಿಯ ಅಪರಾವತಾರವಾಗಿದ್ದ ಬ್ರಹ್ಮ ಇದ್ದಕ್ಕಿದಂತೆ ಕುಪಿತನಾಗಿ ಖಾರವಾಗಿ "ನಿನ್ನ ತಿಳಿಗೇಡಿ ತನಕ್ಕೆ ನಾ ಏನೆಂದು ಹೇಳಲಿ... ಎಲ್ಲ ಮುಸಲ್ಮಾನರನ್ನು ಸಾಯಿಸುತ್ತೀಯ.. ನಿನ್ನ ಹೆಸರು ಮಾನವ ಸಂಕುಲ ವಿರುವವರೆಗು ಇರುತ್ತದೆ.."ಮಹಾರಾಕ್ಷಸ" ನೆಂಬ ಬರಹದಡಿಯಲ್ಲಿ.. ನೆನಪಿಟ್ಟುಕೊ.. ನಿನ್ನ ಮಾನವ ಸಹಜ ರಾಗ ದ್ವೇಷಗಳನ್ನ ನನ್ನ ಮುಂದಿಡಬೇಡ... ನಿನ್ನ ಹೆಸರು ಹಾಳದರೆ ಹಾಳಗಲಿ.. ನನಗೆ ಕೆಟ್ಟ ಹೆಸರು ತಗಲಿಕೊಳ್ಳುತ್ತದೆ..ಒಬ್ಬ ಹುಚ್ಚನಿಗೆ ವರ ನೀಡಿದೆ ಎಂದು.. ಉದ್ದಾರ ವಾಗುವಂತಹ ಕೆಲಸಗಳನ್ನು ಮಾಡುವೆಯಾದರೆ ಕೇಳು ಇಲ್ಲವಾದರೆ ನಾ ಹೊರಡುತ್ತೇನೆ...ದಾಸ್ ಗುಪ್ತನೇ ಜಯಶಾಲಿ ಎಂದು ನನ್ನ ಸೋಲೊಪ್ಪಿಕೊಳ್ಳುತ್ತೇನೆ.."

ನಾನು ಕೇಳಿದ್ದು ತಪ್ಪೆನೆಸಿ.."ಸ್ಸಾರಿ..ಬ್ರಹ್ಮ...ಏನೋ ತಿಳಿಯದೆ ಕೇಳಿಬಿಟ್ಟೆ... ಕ್ಷಮಿಸಿಬಿಡು.. "

"ನೋಡು ನಿನಗೆ ಕ್ರೈಸ್ತ, ಮುಸಲ್ಮಾನ, ಹಿಂದೂ ಎಂದು ಜನರನ್ನು ವರ್ಗೀಕರಿಸುತ್ತೀಯ...ನನಗೆ ಹಾಗಿಲ್ಲ.. ಭೂಲೋಕದ ಮಾನವರೆಲ್ಲರೂ ನನಗೊಂದೇ...ತಿಳಿದುಕೋ..."

"ಸರಿ ಹಾಗದರೆ ನನ್ನ ಅಲೆಗ್ಸ್ಯಾಂಡರ್ ಮಾಡು.."

"ಇಡೀ ಭೂಲೋಕ ನಿನ್ನದಾಗುವ ಆಸೆಯನ್ನು ಬಿಟ್ಟುಬಿಡು...ನಿನ್ನ ಸಾಮರ್ಥ್ಯಕ್ಕೆ ಹೊಂದುವಂತಹ ವರ ಕೇಳಿದರೊಳಿತು..."

"ಹಾಗದರೆ ನೆಪೋಲಿಯನ್ ನಂತೆ ಧೈರ್ಯಶಾಲಿ ಮಾಡುವೆಯಾ.." ಎಂದೆ..

"ನಿನಗೆ ನಿನ್ನ ಸ್ವಾರ್ಥಸಾಧನೆಯೆ ಹೆಚ್ಚಾಗಿದೆ, ಮಾನವರೆಲ್ಲಾ ಒಂದೇ...ದಾಸ್ ಗುಪ್ತನೇ ಸರಿ..ನನಗೆಲ್ಲೊ ಭ್ರಾಂತು.., ಒಂದು ನೆನಪಿನಲ್ಲಿಟ್ಟುಕೊ.ನೀನು ಇತರರಂತೆ ಆಗಬಾರದು ನಿನ್ನತನವನ್ನು ನೀನು ಬೆಳೆಸಿಕೋಬೇಕು, ಹಾಗೆ ಅದನ್ನು ಉಳಿಸಿಕೋಬೇಕು.. ಅರ್ಥವಾಯಿತೆ?? "..

"ನಿನಗೆ ಹಿಟ್ಲರ್, ಮುಸ್ಸೊಲೊನಿ, ಅಲೆಗ್ಯಾಸಂಡರ್ ಆದರ್ಶಪ್ರಾಯವಾಗಿದ್ದಾರೆ ಅದೊಂದು ದೊಡ್ಡ ವಿಪರ್ಯಾಸ..ನೀನು ಇತಿಹಾಸದಿಂದ ಪಾಟ ಕಲಿತಿಲ್ಲ"... ಎಂದು ಬ್ರಹ್ಮ ತನ್ನ ಮುಖವನ್ನು ಸಪ್ಪೆ ಮಾಡಿಕೊಂಡ..

ಪಟ್ಟನೆ ನನಗೆ ಏನೋ ಹೊಳೆದಂತಾಗಿ..."ಸರಿ ಬ್ರಹ್ಮ ನಾನು ಜನರಿಗೆ ಒಂದಷ್ಟು ಕಲ್ಯಾಣ ಕೆಲಸಗಳನ್ನು ಮಾಡಬೇಕೆಂದಿದ್ದೆ, ಅದಕ್ಕಾಗಿ ದೊಡ್ಡ ಅಧಿಕಾರವನ್ನು ಬಯಸಿದೆ..ಅಷ್ಟೆ.. ನನ್ನನ್ನು ಈ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡು..." ಎಂದೆ ಒಂದೇ ಉಸಿರಿನಲ್ಲಿ..

ಬ್ರಹ್ಮ ಮತ್ತೆ ಪೇಚಿಗೆ ಸಿಕ್ಕಿ ಹತಾಶ ಮುಖದಿಂದ... "ಏನಪ್ಪಾ ಮಾಡುವೆ ನೀನು ಮುಖ್ಯಮಂತ್ರಿಯಾಗಿ...ನೀನು ಆರಿಸಿಕೊಂಡ ವ್ಯಾಪ್ತಿಯೇನೋ ಚೆನ್ನಾಗಿದೆ...ಆದರೆ ಅಧಿಕಾರಕ್ಕೆ, ಕುರ್ಚಿಗಾಗಿ ಗುದ್ದಾಟ ನಡೆಸುವೆಯಾ.. ಏನು ಮಾಡುವೆ ನೀನು ಮುಖ್ಯಮಂತ್ರಿಯಾಗಿ ??? ಮತ್ತೆ ನಿನ್ನ ಸ್ವಾರ್ಥವೆ ಇಣುಕಾಡುತ್ತಿದೆ ಎಂದನಿಸುತ್ತಿದೆ ನನಗೆ ..ಸರಿಯಾಗಿ ಹೇಳು ಏನು ಮಾಡುವೆ ಮುಖ್ಯಮಂತ್ರಿಯಾಗಿ?? "

"ನಾನು ಏನು ಮಾಡ್ತೀನಿ ಅಂತ ಹೇಳಿದಮೇಲೆ ವರ ಕೊಡುವೆಯೋ...ಇರಲಿ ಇರಲಿ... ಇಗೋ ನನ್ನ ಪ್ರಣಾಳಿಕೆಯನ್ನು ನಿನ್ನ ಮುಂದಿಡುತ್ತೇನೆ... ನನಗೆ ಇಂದಿನ ಯುಗದಲ್ಲಿ ಜಗತ್ತಿಗೆ ಕಲ್ಯಾಣ ;-) ಮಾಡಬೇಕಾದರೆ.. ಒಂದು ಅಧಿಕಾರ ಅಥವ ಹಣ ಇರಬೇಕು..ಇವೆರರೊಡನೆ.. ಹಣವನ್ನು ಅಧಿಕಾರವನ್ನು ಉಪಯೋಗಿಸುವ ವಿವೇಕ.., ಅದು ನನ್ನಲ್ಲಿದೆ ಎಂಭ ಭಾವ ನನ್ನದು
:-) ಅಧಿಕಾರ ಕೊಡುವ ಕೆಲಸ ನಿನ್ನದು..ವರ ಕೊಡ್ತೀನಿ ಅಂತ ನೀನೇ ಹುಡುಕಿಕೊಂಡು ಬಂದಿರುವೆ...ಇನ್ನು ಹಣ
ಅದನ್ನು ನೀನು ಕುಬೇರನಿಂದ ನನಗೆ ಕೊಡಿಸಬೇಕು.. ಆಗುವುದೆ??"


"ಒಹ್!..... ಹಣ ಅಧಿಕಾರ ಕೊಡುವ ವಿಷಯ ತಕ್ಶಣಕ್ಕೆ ಪಕ್ಕಕ್ಕಿಡು...ನೀನು ಮುಖ್ಯಮಂತ್ರಿಯೆಂದ ಅಧಿಕಾರವನ್ನು ಹೇಗೆ ಉಪಯೋಗಿಸುತ್ತೀಯ..?? "

"ಬ್ರಹ್ಮ....ಹೇಳುವೆ...ಇನ್ನೊಂದು ಕಾಫಿ ತರ್ಸಿದ್ರೆ ಚೆನ್ನಾಗಿರುತ್ತಿತ್ತು..." ಎಂದೆ ಹಲ್ಲುಕಿರಿಯುತ್ತ..

ಬ್ರಹ್ಮ ಪ್ರಸನ್ನವದನನಾಗಿ ಮತ್ತೆ ಎರಡು ಕಪ್ ಕಾಫಿ ತರಿಸಿದ.. ನನ್ನ ಮುಂದೆ ಕಾಫಿ ಲೋಟದಿಂದ ಭುಗಿಲೇಳುತ್ತಿದ್ದ ಹಬೆಯು ನನ್ನ ಮೂಗಿಗೆ ಬಡಿದು ಕಾಫಿ ಕಂಪನ್ನು ನನ್ನ ಮೂಗಿಗೆ ಸಿಂಪಡಿಸುತ್ತಿದ್ದವು... ಇಳಿಸಂಜೆಯ ಗಾಂಧಿ ಬಜ಼ಾರ್ ನನ್ನ ಮನದಾಳದಲ್ಲಿ ಮೂಡುತ್ತಿತ್ತು... ಕಾಫಿ ಹಬೆಯಂತೆ ನನ್ನ ಮುಖ್ಯಮಂತ್ರಿಯ ಪ್ರಣಾಳಿಕೆಯಲ್ಲಿ ಮೂಡ ಬೇಕಾದ ವಿವರಗಳು ನನ್ನ ಮನ:ಪಟಲದಲ್ಲಿ ಕ್ಷಣ ಕ್ಷಣಕ್ಕೂ ವಿವಿಧ ರೂಪಗಳನ್ನು ಪಡೆಯುತ್ತಿದವು...ಅದನ್ನು ಬ್ರಹ್ಮನಿಗೆ ಒಪ್ಪಿಗೆಯಾಗುವಂತೆ ತಿಳಿಸಬೇಕಾಗಿತ್ತು..ಹೀಗೆ ಯೋಚಿಸುತ್ತ ಕಾಪಿ ಕಪ್ಪನ್ನು ನನ್ನ ತುಟಿಗೆ ಹಿಡಿದು ಹೀರಲನುವಾದೆ.... ಕಾಫಿ ಗುಟುಕುಗಳು ಇಳಿದೊಡನೆಯೆ ನನ್ನ ವಿಚಾರಗಳು, ಅದಕ್ಕೆ ಬೇಕಾದ ರೂಪು ರೇಷೆಗಳು ಅಚ್ಚುಕಟ್ಟಾಗಿ ಮೂಡತೊಡಗಿದವು... ನಿಜಕ್ಕೊ ಕಾಫಿ ಒಂದು ದಿವ್ಯ ಅಮೃತವೇ ಸರಿ ಎಂದು ಮತ್ತೆ ಮತ್ತೆ ಹೀರಿದೆ... :-)




....(ಸಶೇಷ)




ಯಶ್ವಂತ್.....

Saturday, September 15, 2007

ನಾನಾಗ ಬೆಂಗಳೂರಿಗೆ ಬಂದ ಹೊಸತು...ನಮ್ಮ ತಂದೆಗೆ ಗೌರಿಬಿದನೂರಿನಿಂದ ವರ್ಗವಾಗಿತ್ತು... ಏಳನೆ ಇಯತ್ತೆಗೆ SGPTA ಶಾಲೆಗೆ ಸೇರಿದ್ದೆ...ನಾನು ಬೆಂಗಳೂರು ಬಿಡುವಾಗ ಸಹ ಅದೇ ಶಾಲೆಯಲ್ಲೆ ಓದುತ್ತಿದ್ದೆ..ಆಗ ಎರಡನೆ ಇಯತ್ತೆ... ಮಧ್ಯ ಐದು ವರ್ಷದ ಗ್ಯಾಪ್.. !! ಪ್ರಪಂಚದ ಯಾವುದೇ ಊರಿನಲ್ಲಿ ಇದ್ದರೂ ಸಹ ನಾನು ಗೌರಿಬಿದನೂರನ್ನು ಮರೆಯುವ ಹಾಗಿಲ್ಲ... ಅದಕ್ಕೆಂದೆ ಬೇರೆ ಲೇಖನವನ್ನು ಬರೆಯುತ್ತೇನೆ.... :-) ಮರಳಿ ಶಾಲೆಗೆ ಹೋದಾಗ ನಾನು ಹಳೆ ವಿಧ್ಯಾರ್ಥಿ ಎಂದು ಗುರುತಿಸದರು.. ಒಹ್! ಶ್ರೀಧರ್ ರಾಜು ಎಂದು !! ಎಲ್ಲರು ಮುಖ ನೋಡಿಕೊಳ್ಳುತ್ತಿದ್ದರು..ನಾನು ಎರಡನೆ ತರಗತಿಯನ್ನು ಬಿಡುವ ವೇಳೆಯಲ್ಲಿ ಇದ್ದವರು, ಸಾಕಷ್ಟು ಗೆಳೆಯರು ಅಲ್ಲೇಅ ಎಂದರೆ ಅದೇ ಶಾಲೆಯಲ್ಲಿ ಇದ್ದರು...

ಊರಿಗೆ ಬಂದೊಡನೆಯೆ ನನ್ನನ್ನು ಮನೆಪಾಠಕ್ಕೆ ಹಾಕಿದ್ದರು...ಓದಿ ಉದ್ದಾರವಾಗಲಿ ಎಂದು !!ಸಾಧರಣವಾಗಿ ಮನೆಪಾಠಕ್ಕೆ ಬರುವವರು ಪಾಠದ ಮನೆಯ ಸುತ್ತ ಮುತ್ತಲಿನವರೆ ಆಗಿರುತ್ತಾರೆ... ನನಗೊಬ್ಬ ಗೆಳೆಯ ದೊರೆತಿದ್ದ, ನಮ್ಮನೆಗೆ eggjactly opposite... ಯಶ್ವಂತ್... ಅವನು ಸಹ ಏಳನೆ ತರಗತಿ... NMKRV ಸ್ಕೂಲ್...

ಮನೆಗೆ ಹತ್ತಿರವಿದ್ದುದರ ಕಾರಣವೇನೋ ಬಹಳ ಬೇಗ ಹತ್ತಿರವಾದೆವು... ಶಾಲೆ ಮುಗಿದ ಕೂಡಲೇ ಮನೆಪಾಠಕ್ಕೆ ಓಡುತ್ತಿದ್ದೆ... ಅದು ಮುಗಿದ ಕೂಡಲೇ ಅವನ ಜೊತೆ ತಿರುಗುವುದು... ಒಂದೋ ಅವನು ನಮ್ಮನೇಲಿ ಇರುತ್ತಿದ್ದ ಅಥವಾ ನಾನು ಅವನ ಮನೇಲಿ ಇರುತ್ತಿದ್ದೆ....ಒಟ್ಟಿನಲ್ಲಿ ಯಾವಗಲೂ ಒಟ್ಟಿಗೆ ಇರುತ್ತಿದ್ದೆವು... ಅವನ ಮನೆಗೆ ಹೊಗಿ ಅವನ ಜೊತೆ ಹರಟುತ್ತಾ ಅವರ ಮನೇಲೆ ಟೀವಿ ನೋಡುತ್ತಿದ್ದ ದಿನಗಳಿಗೆ ಲೆಕ್ಕವೇ ಇಲ್ಲ...ಅವರ ಮನೆಯವರು ನನ್ನನ್ನು ಅವನ ಮನೆಯವರೇ ಎಂದು ಭಾವಿಸಿದ್ದರು..

ರಾತ್ರೆ ಸುಮಾರು 8:30 - 9:30 ಹೊತ್ತೆಲ್ಲಾ ಕ್ರಿಕೆಟ್, ಬಾಡ್ಮಿಂಟನ್ ಆಡುತ್ತಿದ್ದೆವು, ನಟ್ಟ ನಡು ಬೀದಿಯಲ್ಲಿ ಇಬ್ಬರೇ... !!!ಸಮಯದ ಅರಿವೇ ಇರುತ್ತಿರಲಿಲ್ಲ...ಶಾಲೇಲಿ ಅಂದು ನಡೆದ ಘಟನಾವಳಿಗಳನ್ನು ನಾನು ವರದಿ ಒಪ್ಪಿಸುತ್ತಿದ್ದೆ..ಅವನೂ ಸಹ..

ಏಳನೆ ತರಗತಿಯ ಪರೀಕ್ಶೆಗಳು ಶುರುವಾದವು.... ಮುಗಿಯಿತೂ ಕೂಡ.. ರಜದಲ್ಲಿ ಸಿಕ್ಕಪಟ್ಟೆ ಮಜಾ ಮಾಡಿದ್ದೆವು.. ಪ್ರತಿದಿನವೂ ಕೃಷ್ಣ ರಾವ್ ಪಾರ್ಕಿನಲ್ಲಿ ಆಡುತ್ತಿದೆವು ಬೇರೆ ಗೆಳೆಯರೊಡಗೂಡಿ....

ರಿಸಲ್ಟು ಬಂತು..ಅವನಿಗೆ ಎಷ್ಟು ಬಂದಿದೆಯೆಂದು ವಿಚಾರಿಸಲು ಅವನ ಮನೆಗೆ ರಿಸಲ್ಟ್ ಬಂದ ಸಂಜೆ ಅವರ ಮನೆಗೆ ಹೋದೆ.
ಅವರ ತಾಯಿ ಸಿಕ್ಕರು... ಕೇಳಿದೆ.. "ಆಂಟಿ ಎಷ್ಟ್ ಬಂತು ಅವನಿಗೆ ಮಾರ್ಕ್ಸು" ಎಂದೆ...

ಅವರ ತಾಯಿ ಎನನಿಸಿತ್ತೋ ಏನೋ.. "ಹೋಗಪ್ಪಾ ಹೋಗು.. ನೀನ್ ಪಾಸ್ ಆಗ್ಬಿಟ್ಟೆ..ಅವನು fail ಆಗಿದ್ದಾನೆ...ನಿನಗೆ ಸಂತೋಷ ತಾನೆ..ಹೋಗು !!..ಜೊತೇಲೆ ಇದ್ದೆ..ನಿಂಗೆ ಏನು ಮಾಡಕ್ಕೇ ಆಗ್ಲಿಲ್ಲ... ಇವಾಗ್ ಬಂದಿದ್ಯ ರಿಸಲ್ಟ್ ಕೇಳ್ಕೊಂಡು.." ಎಂದುಬಿಟ್ಟರು...

ಸರಿಯಾಗಿ ಮೇಲಿನ ಮಾತುಗಳನ್ನು ಹೇಳಿದರೋ ಇಲ್ಲವೊ ಮರೆತು ಹೋಗಿದೆ.. ಆದರೆ ನನ್ನಿಂದಲೆ ಅವನು ನಪಾಸಗಿದ್ದನೆ ಎನ್ನುವಾ ದಾಟಿಯಲ್ಲೇ ಮಾತನಾಡಿದ್ದರು ಅಂದು... ನಾನು ದಂಗಾಗಿಬಿಟ್ಟೆ... ನಾನೇನು ಮಾಡಿದೆ ಎಂದು ನನಗೆ ತೋಚಲಿಲ್ಲ..
ಸುಮ್ಮನಾಗಿಬಿಟ್ಟೆ..ಅದಾದ ನಂತರ ಅವರು ಅಲ್ಲಿಂದ shift ಆದರು... ಮತ್ತೆ ಅವನೆಂದು ನನ್ನನ್ನು ಮಾತನಾಡಿಸಲಿಲ್ಲ..ನಾನೂ ಸಹ.... ಸುಮ್ಮನಾಗಿಬಿಟ್ಟೆ.. ಅಷ್ಟು ಒಟ್ಟಿಗೆ ಇದ್ದವರು ಮುಖ ನೋಡಿದರೂ ಸಹ ಮಾತನಾಡದೆ ಇರುವ ಸ್ಥಿತಿಗೆ ಬಂದಿದ್ದೆವು.. ಇದಾಗಿ ಹತ್ತು ವರ್ಷಗಳೇ ಆಗಿದೆ ಇಂದಿಗೆ..

ಅವರ ನೆಂಟರ ನಮ್ಮನೆ ಎದುರುಗಡೆಯೇ ಮನೆ ಕಟ್ಟಿಕೊಂಡು ವಾಸವಾಗಿದ್ದಾರೆ...ಅವನು ಸಹ ಆಗಾಗ ಬರುತ್ತಿರುತ್ತಾನೆ... ನೋಡಿದರೂ ಸಹ ನೋಡಿಲ್ಲವಂತೆ ನನ್ನ ಮುಂದೆಯೇ ನಡೆದು ಹೋಗುತ್ತಾನೆ..ನಾನೂ ಅಷ್ಟೆ... ಸೇರಿಗೆ ಸವ್ವಾಸೇರು.. :-
ಈಗ ಅವನು ಏನು ಮಾಡುತ್ತಿದ್ದಾನೆ ಎಂದೂ ಸಹ ಗೊತ್ತಿಲ್ಲ...ಒಂದು ಪ್ರಿಂಟಿಂಗ್ ಪ್ರೆಸ್ ಮಾಲೀಕ ಎಂದು ಕೇಳ್ಪಟ್ಟೆ...

ಏಕೋ ಏನೋ ಅವನ ಬಗ್ಗೆ ಬರೀಬೇಕು ಎಂದೆನಿಸಿತು...ಬರೆದೆ...ಇದು ಅವನಿಗೆ ಅರ್ಪಿತ.....

ನಾನು ಬ್ರಹ್ಮ ಮತ್ತು ಮುಖ್ಯಮಂತ್ರಿ -- ಭಾಗ - 2

Monday, September 10, 2007

ಹಾಗೆ ಮುಂದಕ್ಕೆ ಬಾಗಿದ ಬ್ರಹ್ಮ ನನ್ನ ತಲೆ ನೇವರಿಸುತ್ತಾ "ಮಗೂ.. ನಿನಗೆ ನಾನು ಹೇಳಲು ಆಗುವುದಿಲ್ಲ, ಹೇಳಿದರೂ ನಿನಗೆ ಅರ್ಥವಾಗುವಿದಿಲ್ಲ, ಅದೆಲ್ಲ ನಿನ್ನ ವಯಸ್ಸಿಗೆ ಮತ್ತು ನಿನ್ನ ಬುದ್ದಿ ವ್ಯಾಪ್ತಿಗೆ ಮೀರಿದ ಉತ್ತರಗಳು, ವೃಥಾ ಕಾಲಹಾರಣ ಅಷ್ಟೇ.... ನಿನಗೆ ವರ ಕೊಡಲು ಬಂದಿದ್ದೇನೆ... ಕೇಳು..." ಎಂದನು..

"ಹಾ!! ನನ್ನ ಬುದ್ದಿವ್ಯಾಪ್ತಿಗೆ ಮೀರಿದ್ದೇ..?? ಸರಿ ನನಗೇ ಏಕೆ ವರ ನೀಡಲು ಬಂದಿರುವೆ...ನನಗೆ ಸಮಂಜಸವಾದ ಉತ್ತರನನ್ನು ನೀಡಿದರೆ ಮಾತ್ರ ವರವೋ ಶಾಪವೋ ಅದರ ಬಗ್ಗೆ ಮಾತಾಡುವ... "...

"hmmm....ನಿನಗೆ ಏಕೆ ವರವೆಂದರೆ..ಅದೆಲ್ಲ ನಮ್ಮ ಚಿತ್ರಗುಪ್ತರ ಮಗನಾದ ದಾಸ್ ಗುಪ್ತನ ಕೈಚಳಕ..."

"ಏನೆಂದಿರಿ...ದಾಸ್ ಗುಪ್ತನೇ..ಚಿತ್ರಗುಪ್ತನ ಮಗ...??? "..

"ಹೌದು..ದಾಸ್ ಗುಪ್ತ.. ನಮ್ಮ ದೇವಲೋಕದ ಮಂದಿಗೆ ಕಂಪ್ಯೂಟರ್ ಪರಿಕರಗಳನ್ನು ಪರಿಚಯಿಸಿದಾತ.. ದಾಸ್ ಗುಪ್ತ..
ಈ ದಾಸ್ ಗುಪ್ತಾ ಭೂಲೋಕದ ಅದರಲ್ಲೋ ಬೆಂಗಳೂರಿನ ಮಾಹಿತಿ ತಂತ್ರಗ್ನಾನದ ಒಟವನ್ನು ಕಂಡು ತನ್ನ ಸ್ವಪರಿಶ್ರಮದಿಂದಲೇ ಕಲಿತ..... ಅಪ್ಪ ಚಿತ್ರಗುಪ್ತನ ಪಡಿಪಾಟಲು ನೋಡಲಾಗದೆ ಅಪ್ಪನ ಕೆಲಸದಲ್ಲಿ ಸಹಭಾಗಿಯಾದ..... ಚಿತ್ರಗುಪ್ತರ ಕೆಲಸ ನಿನಗೆ ತಿಳಿದೇ ಇದೆಯಲ್ಲವೆ... ಯಮಲೋಕಕ್ಕೆ ಬರುವರೆಲ್ಲರ ಪೂರ್ವಾಪರವನ್ನು ಓದಿ ಅವನ ಪಾಪ ಪುಣ್ಯಗಳ ವರದಿ ಯನ್ನು ಯಮಧರ್ಮರಾಯನಿಗೆ ಒಪ್ಪಿಸುವುದು..ಇಷ್ಟು ಕಾಲವು ಇದೆಲ್ಲ ತನ್ನ ಸ್ವಹಸ್ತದಿಂದ ಚಿತ್ರಗುಪ್ತರು ಮಾಡುತ್ತಿದ್ದರು.... ಆ ಮಾಹಿತಿಯೆಲ್ಲವನ್ನು ಈಗ database ರೂಪದಲ್ಲಿ ಕಂಪ್ಯೂಟರ್ ನಲ್ಲಿ ವ್ಯವಸ್ಥೆ ಮಾಡಿದ್ದಾನೆ ನಮ್ಮ ದಾಸ್ ಗುಪ್ತ... ಚಿತ್ರಗುಪ್ತರ ಕೆಲಸ ಈಗ ಸಲೀಸಾಗಿದೆ... ಕೇಸುಗಳ ವಿಲೇವಾರಿ ತುಂಬ ತ್ವರಿತಗತಿಯಲ್ಲಿ ಸಾಗುತ್ತಿದೆ.."

ಮಧ್ಯಕ್ಕೆ ನಿಲ್ಲಿಸಿ ನಾನು.. "ಅಯ್ಯಾ ಬ್ರಹ್ಮದೇವ...ನಾನು ಕೇಳಿದ್ದಕ್ಕೂ ನೀನು ಹೇಳುತ್ತಿರುವುದಕ್ಕೂ ಎತ್ತಣದಿಂತ್ತೆಣ ಸಂಭಂದವಯ್ಯ... ನನಗೊಂದೂ ತಿಳಿಯದಾಗಿದೆ..."

"ಹಹ್ಹಹ್ಹ..ಮಗೂ ನಾನು ಸಂಪೂರ್ಣ ವಿಷಯ ಹೇಳುವವರೆಗಿನ ತಾಳ್ಮೆ ನಿನ್ನದಾಗಬೇಕು... ತಾಳ್ಮೆ...ತಾಳ್ಮೆ..ಜಗತ್ತಿನ ಸಾಕಷ್ತು ಮಹೋನ್ನತ ಕಾರ್ಯಗಳು ತಾಳ್ಮೆಯಿಂದಲೇ ಆದುದ್ದಾಗಿದೆ... ತಾಳ್ಮೆ ಬೆಳೆಸಿಕೋ..."

ಬ್ರಹ್ಮನ ತಾಳ್ಮೆಯ ವಿಷಯ ಮನಮುಟ್ಟಿತು...ಸ್ತಬ್ದನಾಗಿಬಿಟ್ಟೆ... full lecture ಕೊಡಕ್ಕೆ ready ಆಗಿ ಬಂದಿದ್ದಾನೆ ಬ್ರಹ್ಮ..." ಸರಿ ಸ್ವಾಮಿ ನೀವು continue ಮಾಡಿ...ನಿಮ್ಮ ಲಹರಿಗೆ ಅಡ್ಡಿ ಪಡಿಸುವುದಿಲ್ಲ... ಮುಂದುವರೆಸಿ.." ಎಂದೆ


ಹೀಗೆ ದಾಸ್ ಗುಪ್ತನು ಕಂಪ್ಯೂಟರಿನಿಂದ ದೇವಲೋಕದಲ್ಲಿ, ಯಮಲೋಕದಲ್ಲಿ ಕ್ರಾಂತಿಯನ್ನು ಉಂಟು ಮಾಡಿದ..ಹೀಗೆ ಸಾಗುತ್ತಿರಲು ಒಂದು ದಿನ ನನಗೂ ಹಾಗೂ ದಾಸ್ ಗುಪ್ತನಿಗೆ ವಾಗ್ವಾದ ಉಂಟಾಯಿತು....

ಆತನ ವಾದ ಇಷ್ಟೆ..."ಬ್ರಹ್ಮ ದೇವ ಭೂಲೋಕ ಬಹಳ ಹದೆಗೆಟ್ಟು ಹೋಗಿದೆ...ಎಲ್ಲೆಲ್ಲೂ ಆರಾಜಕತೆ, ಭ್ರಷ್ಟಾಚಾರ, ಅನೀತಿ, ಸುಲಿಗೆ, ಮೋಸ, ಧಗಾ, ವಂಚನೆಗಳು ಸರ್ವೇಸಾಮನ್ಯವಾಗಿಬಿಟ್ಟಿದೆ... ಇದನ್ನು ತಹಬಹದಿ ತರುವ ಮಾತಂತೂ ದುಸ್ಸಾಧ್ಯ, ಸತ್ಯವೆಂಬುದು ಭೂಲೋಕದಲ್ಲಿ ಅಸ್ತಿತ್ವದಲ್ಲೇ ಇಲ್ಲ, ಧರ್ಮ ತನ್ನ ಕಾಲುಗಳನ್ನು ಕಳೆದು ಕೊಂಡು ಬೀದಿ ಬದಿಯಲ್ಲಿ ಬಿದ್ದಿದೆ ಎನ್ನುವುದು ನನ್ನ ವಾದ.."

"ದಾಸ್ ಗುಪ್ತನೇ ..ನೀನು ಭೂಲೋಕದ ಕೇವಲ ಒಂದು ಮುಖವನ್ನು ಮಾತ್ರವೇ ನೋಡಿದ್ದೀಯ, ಬಹುಶ: ನಿನಗೆ ಬರಿ ದುಷ್ಟರೇ ಕಾಣಿಸಿರಬಹುದು, ಸತ್ಯವೆಂಬುವುದು ಎಲ್ಲ ಕಾಲಗಳಲ್ಲಿಯು ನಿತ್ಯ ಸೂರ್ಯನಂತೆ ಹೊಳೆಯುತ್ತಿರುತ್ತದೆ... ಸೂರ್ಯನನ್ನು ಮೋಡ ಮರೆಮಾಚಿದುದಕ್ಕೆ ಸೂರ್ಯನೇ ಇಲ್ಲವೆಂಬುದು ನಿಮ್ಮ ತಪ್ಪು ಗ್ರಹಿಕೆ.... ಸತ್ಯವೆಂಬುದು ದಟ್ಟ ಕಾನನದಲ್ಲಿ ಬೇಸಿಗೆಯ ಮಾಸದಲ್ಲಿ ಹರಿಯುವ ನಿರ್ಮಲವಾದ ಪುಟ್ಟ ಝರಿಯಂತೆ...ಹುಡುಕುವ ತಾಳ್ಮೆಯಿರಬೇಕು...ಅದರೆಡೆಗೆ ಹೋಗುವ ಪ್ರಯತ್ನ ನಮ್ಮದಾಗಬೇಕು..."


ಇದರಿಂದ ಸ್ವಲ್ಪ ಮುಂಗೋಪಿಯಾದ ದಾಸ್ ಗುಪ್ತನು ಕ್ರುದ್ದನಾದ... "ಸರಿ ಹಾಗಿದ್ದರೆ ನಿಮ್ಮ ಈ ಭೂಲೋಕದಲ್ಲಿ ಆ ಥರದ ವ್ಯಕ್ತಿಯನ್ನು ತೋರಿಸಿಬಿಡಿ.... ನನ್ನ ಸೋಲನ್ನು ನಾನು ಒಪ್ಪುವೆ..."

"ನೋಡು ದಾಸ್ ಗುಪ್ತ.. ನೀನು ಒಡ್ಡಿರುವ ಸವಾಲನ್ನು ನಾನು ಸ್ವೀಕರಿಸಿದ್ದೇನೆ... ಹಾಗೆಂದ ಮಾತ್ರಕ್ಕೆ ಇಡೀ ಭೂಮಂಡಲದಲ್ಲಿ ಒಬ್ಬ ಆ ರತ್ನವನ್ನು ಹುಡುಕುವುದು ದುಸ್ಸಾಧ್ಯವೇ ಸರಿ... ನನ್ನ ಪ್ರಕಾರ ಪ್ರತಿಯೊಬ್ಬ ಮನುಜನಲ್ಲೂ
ಆ ವಸ್ತುನಿಷ್ಟ ಗುಣ, ಸತ್ಯಪರತೆ, ಎಲ್ಲವೂ ಇರುತ್ತದೆ, ಕೆದಕಿ ತೆಗಯಬೇಕು, ಅವನ ಪ್ರಕೃತಿದತ್ತವಾದ ಪರಿಸರದಲ್ಲಿ ಬೆಳೆದುದರ ಕಾರಣದಿಂದ ಆತ ಕೆಟ್ಟವನೆನಿಸಬಹುದು..."

ಹಾಗೆಂದ ಕೂಡಲೇ ದಾಸ್ ಗುಪ್ತನು ಗುಡುಗತೊಡಗಿದ...

"ಎಲೈ ಬ್ರಹ್ಮನೇ, ನಿಮ್ಮ ಉತ್ಪ್ರೇಕ್ಷೆಯು ತನ್ನ ಪರಮಾವಧಿಯನ್ನು ತಲುಪಿದೆ...., ನಾನು ನನ್ನ ಕಂಪ್ಯೂಟರಿನ ಸಹಾಯದಿಂದ ನಿಮಗೆ ಒಬ್ಬನನ್ನು ಹುಡುಕಿಕೊಡುತ್ತೇನೆ, ಅವನ ಬಳಿ ನೀವು ತೆರಳಿ ಅವನಿಗೆ ವರ ನೀಡಿ, ಅವನು ತನ್ನ ಕೊಟ್ಟ ವರವನ್ನು ಹೇಗೆ ಉಪಯೋಗಿಸಿಕೊಳ್ಳುತ್ತಾನೆ ಎಂಬುದರ ಮೇಲೆ ಮಾನವನ ಗುಣ ನಿಮ್ಮ ಅರಿವಿಗೆ ಬರುತ್ತದೆ..."


ಹೀಗೆಂದು ಹೇಳಿದ ದಾಸ್ ಗುಪ್ತನು ಒಂದಷ್ಟು algorithms run ಮಾಡಿ, ಒಬ್ಬ ವ್ಯಕ್ತಿಯನ್ನು ಕೇವಲ ಕೆಲ ಕ್ಷಣಗಳಲ್ಲಿ ನನಗೆ ಒಬ್ಬ ಮುಖವನ್ನು ತೋರಿಸಿದ.....


ನಾನು ಮಧ್ಯ ತಡೆದು.... "ಆ ದುರಾದೃಷ್ಟಶಾಲಿ ನಾನೇ????????" ಎಂದು ಅವಾಕ್ಕಾದೆ...
ಬ್ರಹ್ಮನು ಮುಗುಳ್ನಗುತ್ತಾ.. "ಹೌದು.." ಎಂದ..
ಅಲ್ಲೆ ಕುಸಿದು ಬೀಳುವ ಭಾವ ನನ್ನಲುಂಟಾಯಿತು.....

ಈ processನಲ್ಲಿ bejaan fitting ಇದೆ ಎಂದು ಭಾವಿಸಿ..."ಅಲ್ಲ ಬ್ರಹ್ಮ..ನಿನಗೆ ನಮ್ಮ ಭೂಮಂಡಲ ಮನುಷ್ಯರ ಮಾಹಿತಿ ನಿಮಗೆ ಹೇಗೆ ದೊರೆಯಿತು ಎನ್ನುವುದೇ ನನ್ನ ಯಕ್ಷಪ್ರಶ್ನೆಯಾಗಿದೆ.... ಹೇಗೆ ಸಿಕ್ಕಿತು ನಮ್ಮೆಲ್ಲರ ವಿವರಗಳು??"

ಬ್ರಹ್ಮ ನಸು ನಗುತ್ತ, ನನ್ನ ತಲೆ ನೇವರಿಸುತ್ತಾ ನಾವು Orkut ನಿಂದ ನಿಮ್ಮೆಲ್ಲರ ಮಾಹಿತಿಯನ್ನು ಪಡೆದೆವು...

ನಾನು ಮತ್ತೆ ಗಿಲ್ಲಿಕೊಂಡೆ....ನೋವಾಗಲಿಲ್ಲ...ನನ್ನ ಸ್ಪರ್ಶೇಂದ್ರಿಯಗಳು ತಮ್ಮ ಕಾರ್ಯವನ್ನು ನಿಲ್ಲಿಸಿದವೆಂದು ತೋರುತ್ತದೆ...

(ಸಶೇಷ).......

ನಾನು ಬ್ರಹ್ಮ ಮತ್ತು ಮುಖ್ಯಮಂತ್ರಿ ....ಭಾಗ - 1

Thursday, September 6, 2007

phoooooooooooooooooooosssssssssssshhhhhhhhhhhhhh...........flash...flash...flash....flash...


ಒಮ್ಮೆಲೆ ಬೆಚ್ಚಿಬಿದ್ದೆ....ಕಣ್ಣುಜ್ಜಿ ನೋಡಿಕೊಂಡೆ.....ಉಹೂ..ಸಾಧ್ಯವೇ.... ಕಲಿಯುಗದಲ್ಲಿ ಸಾಧ್ಯವೇ.... ಮೆಲ್ಲಗೆ ನನ್ನ ಎಡಕೈ ಗಿಲ್ಲಿಕೊಂಡೆ...ನೋವಾಗದಂತೆ ನೋವಾಯಿತು...ಇಲ್ಲ..ಇದು ವಾಸ್ತವ........................

ಎದುರಿಗೆ ನಿಂತಿದ್ದ ಮಂದಸ್ಮಿತ ಪ್ರಕಾಶಮಾನವಾದ ವ್ಯಕ್ತಿಯನ್ನು ನೋಡಿ ನನಗೆ ಹೀಗೆನ್ನಿಸಿತು..... ನಾಲ್ಕು ತಲೆಗಳು ಇದ್ದವು... ನಾಲ್ಕು ಕೈಗಳು... ಎರಡು ಕಾಲುಗಳು.. ಇಲ್ಲ ಕಾಲುಗಳು ನೆಟ್ಟಗೆ ಇದ್ದವು..ಉಲ್ಟಾ ಪಲ್ಟಾ ಇರಲಿಲ್ಲ..ಇದ್ದುದ್ದೆ ಆಗಿದ್ದರೆ ಎದ್ದೆನೋ ಬಿದ್ದೆನೋ ಕೆಟ್ಟೆನೋ ಎಂದು ಹಿಂದೆ ತಿರುಗದೆ ಉಟ್ಟ ಬಟ್ಟೆಯಲ್ಲಿ ನಿಂತ ಕಾಲಲ್ಲಿ ಒಡುತ್ತಿದ್ದೆ.... ಎದುರಿದ್ದ "ಅದ"ನ್ನೆ ದಿಟ್ಟಿಸುತ್ತಿದ್ದೆ... ಅಲ್ಲಿಂದ ದೃಷ್ಟಿ ತೆಗೆಯಲು ಮನಸಾಗುತ್ತಿರಲಿಲ್ಲ..

ನನ್ನ ಸುತ್ತಲು ಗಾಢವಾದ ಕತ್ತಲು....ಎಲ್ಲೋ ನಭೋಮಂಡಲದಲ್ಲಿದ್ದ ಭಾವನೆ.... ತಾರೆಗಳು ಸಹ ಇರಲಿಲ್ಲ..ವಿಶ್ವವು ಮುಗಿದೇಹೋಯಿತೇ??
ನನ್ನ ತಾಯಿ ಎಲ್ಲಿ??
ನನ್ನ ತಂಗಿ??
ನನ್ನ ಗೆಳೆಯರೆಲ್ಲ ಏನಾದರು??
ಕಾಫಿ...??
ಒಮ್ಮೆಲೆ ದುಖ ಮಡುಗಟ್ಟತೊಡಗಿತು...
ಮತ್ತೆ ನಾನಿಲ್ಲಿ ಏನು ಮಾಡುತ್ತಿದ್ದೇನೆ??... ಉತ್ತರ ಸಿಗದ ಸಾಕಷ್ಟು ಪ್ರಶ್ನೆಗಳು ಮನಸ್ಸಿನಲ್ಲಿ ಸುಳಿದಾಡುತ್ತಲೇ ಇದ್ದವು... ಒಮ್ಮೆ ತಲೆ ಕೊಡವಿಕೊಂಡೆ..

ಕೊಂಚ ಧೈರ್ಯ ಮಾಡಿ ಕೇಳಿದೆ ಆ ಆಕೃತಿಗೆ... "ನೀನಾರು" ??

ಕನ್ನಡ ಬರುತ್ತದೋ ಇಲ್ಲವೋ ಇದಕ್ಕೆ.. ಅಂತಹ ಸ್ಥಿತಿಯಲ್ಲಿ ಎದೆ ಬಗಿದರೂ ಕನ್ನಡ ಬಿಟ್ಟು ಬೆರೆ ಭಾಷೆ ಹೊರಬರುತ್ತಿರಲ್ಲಿಲ್ಲ...

ಮತ್ತದೇ ಮಂದಸ್ಮಿತ ವದನ.. ಏನೋ ಒಂದು ಆಕರ್ಷಣೆ ಆ ಮುಖದಲ್ಲಿ ಎದ್ದು ಕಾಣುತ್ತಿತ್ತು...

ಮೆಲ್ಲಗೆ ಉತ್ತರಿಸಿತು..

"ನಾನು ಸೃಷ್ಟಿಕರ್ತ ಬ್ರಹ್ಮ...." ಎಂದು ಹೇಳಿ ಸುಮ್ಮನಾಯಿತು.

ಬ್ರಹ್ಮನೇ...ಇಲ್ಲೇನು ಕೆಲಸ.... ಇಲ್ಲೇಕೆ ಬಂದಿದ್ದಾನೆ... ಇನ್ನು ನಾನು ಕಥೆ,ಕಾದಂಬರಿಗಳನ್ನು ಹೆಚ್ಚಾಗಿ ಓದುವುದನ್ನು ನಿಲ್ಲಿಸಬೇಕು.. ಇಲ್ಲವಾದರೆ ಹೀಗೆ ಆಗುವುದು.. ಮತ್ತೊಮ್ಮೆ ಗಿಲ್ಲಿಕೊಂಡೆ..ಅಷ್ಟರಲ್ಲಿ...

"ಇಲ್ಲ ಮಗೂ...ಇದು ಕನಸಲ್ಲ ವಾಸ್ತವ...ನಾನು ಬ್ರಹ್ಮ.. ನಿನಗೆ ಬೇರಾವ ಸಂದೇಹವೂ ಬೇಡ.."

ಈ ಬ್ರಹ್ಮ ನ ಬಗ್ಗೆ ನನಗೆ ಗೊತ್ತಿರೋ ಶ್ಲೋಕಗಳೇ ಇರಲಿಲ್ಲ..ಇದ್ದುದ್ದೆ ಆಗಿದ್ದರೆ... ಅಣ್ಣಾವ್ರು "ಕವಿರತ್ನ ಕಾಳಿದಾಸ" ಚಿತ್ರದಲ್ಲಿ ಕಾಳಿಯನ್ನು ನೋಡಿ ಶ್ಲೋಕ ಹೇಳುತ್ತಾರಲ್ಲ..ಆ scene create ಮಾಡುತ್ತಲಿದ್ದೆ..ಚೆ ಚೆ....


ಮನಸ್ಸಿಗೆ ಸ್ವಲ್ಪ ಧೈರ್ಯ ಬಂದಿತ್ತು.... ಸ್ವಲ್ಪ comfortable ಆಗಿ ಬ್ರಹ್ಮನೊಡನೆ ಮಾತಾಡೋಣವೆಂದೆನಿಸಿತು...


"ಬ್ರಹ್ಮದೇವ ನಿನಗೆ ನಮೋ ನಮಹ.. ಇಲ್ಲಿಗೆ ತಾವು ದಯಪಾಲಿಸಿದ್ದುದ್ದರ ಕಾರಣ.."??

"ನಿನಗೆ ವರ ಕೊಡಲು ಬಂದಿದ್ದೇನೆ...ಏನು ಬೇಕೋ ಕೇಳು ಮಗೂ.."....

ನನಗೆ ಸಿಡಿಲು ಹೊಡೆದಂತಾಯಿತು...ವರವೆ ನನಗೆ....ಮಾಡಿರೋದೆಲ್ಲ ಹಲ್ಕಾ ಕೆಲಸಗಳೇ...ನನಗೆ ವರ... ಏನು ಬ್ರಹ್ಮ ವರ ಕೆಟ್ಟೋದನೇ ಎಂದುಕೊಳ್ಳುತ್ತಿದ್ದೆ..

"ನನಗೇಕೆ ವರ.. ನಾನೇನು... ತಪಗೈದೆನೆ.. ನಿನ್ನ ನೆನೆಸಿಕೊಳ್ಳುವುದೇ ಅಪರೂಪ... ನಿನ್ನ ಹೆಸರಿನಲ್ಲಿ ಒಂದು ದೇವಸ್ಥಾನವೂ ಸಹ ಇಲ್ಲ ಬೆಂಗಳೂರಿನಲ್ಲಿ... ಇದ್ದರೂ ಹೋಗುವ ಮಾತು ದೂರ..ನಿನಗ್ಯಾರು ಇಲ್ಲಿ ಪೂಜೆ ಮಾಡುವವರೇ ಇಲ್ಲವಲ್ಲ... ನೆನೆವುದಂತೂ ದೂರದ ಮಾತು... ಜನ-ಜೀವ-ಸಂಕುಲದ concept ಮಾತನಾಡುವಾಗ ನಿನ್ನ ಹೆಸರು ಸುಳಿದಾಡುತ್ತದೆ..ಅಷ್ಟೆ....ನನಗೇಕೆ ವರ..."??

ನನಗೆ ನಿಜಕ್ಕೊ ದಿಗಿಲಾಗತೊಡಗಿತು...ಏನೋ ಅನಾಹುತ ಆಗಬಹುದೆಂಬ ಭಾವನೆ...ವರ ಗಿರ ಅಂತೆಲ್ಲ ಮಾತಾಡ್ತಿದಾನಲ್ಲಪ್ಪ ಬ್ರಹ್ಮ... ಕೆಟ್ಟು ಕೆರ ಹಿಡಿದಿರೋ ಕಲಿಯುಗದಲ್ಲಿ ಇದೆಲ್ಲಾ ಸಾಧ್ಯವೇ???...

"ಮಗೂ.." ಅಮ್ಮ ಪ್ರೀತಿಯಿಂದ ಕರೆಯುವ ಹಾಗೆ ಕರೆದ ಬ್ರಹ್ಮ..

"ನಿನ್ನ ಮನಸ್ಸಿನಿಂದ ಯುಗಗಳ ಪರಿಕಲ್ಪನೆ ತೆಗೆದುಹಾಕು.. ಸೃಷ್ಟಿಕರ್ತನು ಎಲ್ಲ ಕಾಲಗಳಲ್ಲಿಯು ಇರುವ..ಇರುವವ..
ತ್ರೇತಾಯುಗದಲ್ಲಿ, ದ್ವಾಪರಯುಗದಲ್ಲಿ ನಾವು ಸಹ ಇಲ್ಲೇ ಒಡಾಡಿಕೊಂಡಿರುತ್ತಿದ್ದೆವು... frequent visits -u...


ಮೊಘಲರ, ಬ್ರಿಟೀಷರ ದಬ್ಬಾಳಿಕೆ ಶುರುವಾದನಂತರ ಪಾಪಿಗಳು ಪಾಪಕಾರ್ಯಗಳು ಹೆಚ್ಚಾಗತೊಡಗಿದವು..ನಮಗೆ ಇಲ್ಲಿರುವುದು ಅಸಹನೀಯವಾಗತೊಡಗಿತು... ಗುಳೆ ಹೋಗಿಬಿಟ್ಟೆವು...


ಇಷ್ಟೇನಾ ನಿಮ್ಮ ಬಲ, ಶಕ್ತಿ..ಬರೀ ಕಮಲದ ಹೂವಿನ ಮೇಲೆ ಕೂತು ಸರಸ್ವತಿ ಮೇಡಮ್ ವೀಣೆ ನುಡಿಸೋದು time time ಗೆ ಕೇಳಕ್ಕೆ ಲಾಯಕ್ಕು ನೀನು... ಎಂದು ಫಕ್ಕನೆ ಮನಸ್ಸಿನಲ್ಲಿ ಸುಳಿದುಹೋಯಿತು...
ಸರಸ್ವತಿ ಮೇಡಮ್

ಬ್ರಹ್ಮ ನಗತೊಡಗಿದ್ದ...

"ಏಕೆ ಈ ನಗು" ?? ಎಂದೆ.

ನನ್ನ ಪ್ರಶ್ನೆಗೆ ಉತ್ತರ ನೀಡಲು ಮುಂದೆ ಬಾಗತೊಡಗಿದ....

ನಾನು ಸ್ವಲ್ಪ ಹಿಂದಕ್ಕೆ ಸರಿದೆ... ಕಪಾಳಮೋಕ್ಷ ಆಗಿಬಿಟ್ಟರೆ???


ಬೆವರುಹನಿಗಳು ಒಂದುಗೂಡಿ ಕಿವಿಯ ಸನಿಹದಲ್ಲಿ ಇಳಿಯಲನುವಾಗಿದ್ದವು......



(ಸಶೇಷ)...